Thursday, April 30, 2009
ಏನೂ ಕೆಲಸವೇ ಇಲ್ಲದೆ ಸುಮ್ಮನೆ ಇರೋವಾಗ ಕಿವಿಯೊಳಗೆ ಹತ್ತಿಯ ಬಡ್ ಇಟ್ಟುಕೊಂಡು, ಒಂದೇ ಕಣ್ಣನ್ನು ಮುಚಿಕೊಂಡು, ಆಹಾ ಅಂತ ಕಿವಿಯೊಳಗೆ ತಿರುಚಿಕೊಂಡರೆ ಸಿಗುತ್ತಲ್ಲ ಅವ್ಯಕ್ತ ಮಜಾ...ಅಂತವೇ ಮಜಾಗಳು ಸಾಕಷ್ಟಿವೆ ಅವನ್ನ ಡಿಸ್ಕವರ್ ಮಾಡಬೇಕಷ್ಟೇ...ಅಂತದ್ದೆ ಅನುಭವವನ್ನ ಇಲ್ಲಿ ಹಂಚಿಕೊಂಡಿದ್ದೇನೆ.
ಬ್ಲಾಕ್ ಬಸ್ಟರ್ ನಾಗಾರಾಜ ಎಂದು ಖ್ಯಾತಿ ಎತ್ತಿರುವ ಹಾಸನ ಜಿಲ್ಲೆ ಗಂಡಸಿ ಸಬ್ಇನ್ಸ್ಪೆಕ್ಟರ್ ನಾಗರಾಜ ಹೊನ್ನೂರ್ ಅವ್ರಿಗೆ ಮದ್ವೆ ದಿನ ಫಿಕ್ಸ್ ಆಗಿದ್ದರಿಂದ ನಾವೆಲ್ಲಾ ಹೋಗಬೇಕಾಯಿತು, ನಾವೆಲ್ಲಾ ಕಾಲೇಜಿನಲ್ಲೇ ಪರಿಚಯದವರಾದ್ದರಿಂದ, ಅವಾಗಿನಿಂದ ನಮ್ಮೆಲ್ಲ ಕ್ರಿಮಿನಲ್ ಅಫರಾದಗಳ ಬಗ್ಗೆ ಅರಿವಿದ್ದ ಅವನು ಯಾವಾಗ್ಲಾದ್ರು ಒದ್ದು ಒಳಗೆ ಹಾಕಿಬಿಡುತ್ತಾನೆ ಎಂಭ ಭಯ ಇತ್ತು ಅಂತ ಕಾಣುತ್ತೆ ಎಲ್ಲಾರು ಚಿತ್ರದುರ್ಗದ ಮದುವೆಗೆ ತಪ್ಪದೆ ಬಂದಿದ್ದಿದ್ದರು.
ನಾನು ಧರಣಿ, ಈಶ, ಗೋವಿಂದ, ಭೂಮ, ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಪ್ರವಾಸಿ ತಾಣಗಳನ್ನೂ ನೋಡುತ್ತಾ ದುರ್ಗ ತಲುಪಲು ಸಿದ್ಧತೆ ಮಾಡಿಕೊಂಡು ಹೊರಟೆವು, ಬೆಂಗಳೂರಿನ ಕರಾಳ ಟ್ರಾಫಿಕ್ ನಲ್ಲಿ ಕಾರು ನುಗ್ಗಿಸಿಕೊಂಡು ಬೆಳಿಗ್ಗೆಯೇ ಹೊರೆಟೆವು, ನನ್ನ ಅಪಾಯಕಾರಿ ಡ್ರೈವಿಂಗ್, ಕಿವಿ ತೂತು ಬೀಳುವ ಮ್ಯೂಸಿಕ್ ನ ಸಹವಾಸದಲ್ಲಿ ಅವರೆಲ್ಲ ಕುಳಿತಿದ್ದರು.
ಅವಾಗ ತಾನೇ ಬಿಡುಗಡೆಯಾಗಿದ್ದ ಕಾಮಿಡಿ ಟೈಮ್ ಗಣೇಶನ ಅರಮನೆ ಚಿತ್ರದ ಕೊಲ್ಲೇ ನನ್ನನೆ ಅಂತ ನೂರಾರು ಬಾರಿ ವಿಚಿತ್ರವಾಗಿ ಹಾಡಲಾಗಿರುವ ಸಾಂಗ್ ಅನ್ನು ಕೇಳಲು ಶುರು ಹಚ್ಚಿಕೊಂಡೆವು. ಸಿ.ಡಿ.ಪ್ಲೇಯರ್ ನಲ್ಲಿ ರಿಪೀಟ್ ಅಂತ ಬಟ್ಟನ್ ಒತ್ತಿದ್ದರಿಂದ ಮತ್ತೆ ಮತ್ತೆ ಅದೇ ಹಾಡು ಬರತೊಡಗಿತು ಹೊಸ ಟ್ರೆಂಡಿನ ಹಾಡಾಗಿದ್ದರಿಂದ ಅರ್ಥದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಕೊಲ್ಲಿಸಿಕೊಳ್ಳುತ್ತಾ ಮುಂದುವರೆದೆವು...
ಏನೋ ಅವ್ಯಕ್ತ ಭಾವನೆಗಳನ್ನು ಉಕ್ಕಿಸುತ್ತಿದ್ದ ಹಾಡನ್ನು ಕೇಳುತ್ತಾ.. ಕೇಳುತ್ತಾ... ಕೊಲ್ಲಿಸಿ ಕೊಳ್ಳೋದರಲ್ಲಿ ಏನೋ ಒಂತರಾ ಮಜಾ ಇರೋದನ್ನು ಗುರುತಿಸಿದ ನಾನು ಇಡೀ ದಿನ ಒಂದೇ ಹಾಡನ್ನ ಕೇಳಿದ್ರೆ ಹೇಗೆ ಅಂತ ನಂಗೆ ಹೊಳೆದಿದ್ದನ ಹೇಳಿದೆ, ಹಾಡಿನಲ್ಲಿ ಮುಳುಗಿದ್ದ ಅವರೂ ಗೋಣು ಅಲ್ಲಾಡಿಸಿದರು.
ಬೆಂಗಳೂರು ಬಿಟ್ಟು, ತುಮಕೂರ್ ಮಾರ್ಗ ವಾಗಿ ದೇವರಾಯನ ದುರ್ಗ, ವಾಣಿವಿಲಾಸ ಸಾಗರ ನೋಡುತ್ತಾ ಸಾಗಿದೆವು ಆದ್ರೆ ಹಾಡು ಮಾತ್ರ ನಮ್ಮನ್ನ ಮತ್ತೆ ಮತ್ತೆ ಕೊಲ್ಲತೊಡಗಿತು....
ತೆಲುಗು ಸಿನೆಮಾಗಳ ಡಿಗಿ. ಜಿಗಿ, ಹಾಡು ಕೇಳುವ ಹುಚ್ಚಿರುವ ನನ್ನ ತಮ್ಮ ಜಗ ಹಾಕಿಸಿದ್ದ ಭಾರಿ ಬೆಲೆಯ ಮ್ಯೂಸಿಕ್ ಪ್ಲೇಯರ್ ಕಿವಿಗೆ ತೂತು ಬೀಳುವಂತೆ ಕೊಲ್ಲೇ ನನ್ನನ್ನೇ, ಚುಂಬಿಸಿ ಕೊಲ್ಲು, ಅಪ್ಪಿಕೊಂಡು ಕೊಲ್ಲು, ತಬ್ಬಿಕೊಂಡು ಕೊಲ್ಲು,ಪೀಡಿಸಿ ಕೊಲ್ಲು, ಕಣ್ಣಲ್ಲಿ ಕೊಲ್ಲು ಅಂತ ಚಿತ್ರ ವಿಚಿತ್ರವಾಗಿ ಕೊಲ್ಲುತ್ತಿತ್ತು..
ನನ್ನ ಜೊತೆಯಲ್ಲಿದ್ದ ನನ್ನ ಗೆಳೆಯರ ಎದೆಯಲ್ಲಿ ಯಾವ ಸುಂದರಿಯರು ಕೊಲ್ಲುತ್ತಿದ್ದರೋ ಗೊತ್ತಿಲ್ಲ. ಏನು ಮಾಡಿದ್ರು ಅರ್ಥಕ್ಕೆ ನಿಲುಕದ ಅವ್ಯಕ್ತ ಭಾವಗಳು ಅವತರಿಸ ತೊಡಗಿದವು.... ನಾವು ಕೊಲೆ ಆಗುತ್ತಿದ್ದಕೆ ಯಾರ ಮುಖದಲ್ಲೂ ಬೇಸರ ಕಾಣಲಿಲ್ಲ...
ಚುಂಬಿಸಿ ಚುಂಬಿಸಿ ಕೊಲ್ಲೋದು, ತೋಳುಗಳಲ್ಲಿ ಬಿಗಿದಪ್ಪಿ ಕೊಲ್ಲೋದು...ಕಪ್ಪು ಕಪ್ಪು ಕಣ್ಣಲ್ಲೇ ಕೊಲ್ಲೋದು, ಕ್ಷಣಕೊಮ್ಮೆ ಅಷ್ಟೇ ಅಲ್ಲ ಕಣಕೊಮ್ಮೆ ಕೊಲೆಯಾಗೋದು... ಆಹಾ.....ಎಂತಾ ಮರ್ಡರ್, ಮರ್ಡರ್ ಆದ್ರೆ ಹೀಗೆ ಮರ್ಡರ್ ಆಗಬೇಕು ಅಂತ ತೀವ್ರವಾಗಿ ಅನ್ನಿಸತೊಡಗಿತ್ತು.
....ಈಗಲೂ.....!!
ಆ ಹಾಡಿನ ಸಾಲುಗಳು ಹೀಗಿವೆ. "ಕೊಲ್ಲೇ ನನ್ನನೇ ಕಡು ಕಪ್ಪು ಕಣ್ಣಲ್ಲೇ ಕೊಲ್ಲು,ಮುದ್ದಾದ ಮಾತಲ್ಲೇ ಕೊಲ್ಲು ಬಾ ನನ್ನ ಪ್ರೀತಿಲೆ ಕೊಲ್ಲು ಕ್ಷಣಕೊಮ್ಮೆ ಕೊಲ್ಲು,ಕಣಕೊಮ್ಮೆ ಕೊಲ್ಲು ಕಾಡಿಸಿ ಪೀಡಿಸಿ ಮುದ್ದಿಸಿ ಚುಂಬಿಸಿ ಕೊಲ್ಲೆ ನನ್ನನು...
ಹಾಡಿನ ಸಾಹಿತ್ಯದ ಬಗ್ಗೆ ಅಗಲಿ, ಸಂಗೀತದ ಬಗ್ಗೆ ಆಗಲಿ ತಲೆಗೆ ಹಚ್ಚಿಕೊಳ್ಳದ ನಾವು.. ಕಾರು ಹತ್ತಿದ ಒಡನೆ ಕೊಲೆಯಾಗಲು ಕಾತರಿಸುತ್ತಿದ್ದೆವು...
ನಾಗರಾಜ ನ ಮದುವೆಗೆ ಬಂದ್ದಿದ್ದ ನಿರಂಜನ ಕೊಟ್ಟೂರು,ಆನಂದ್ ಋಗ್ವೇಧಿಗೂ ನಾವು ಕೊಲೆಯಾಗುತ್ತಿರುವ ವಿಧಾನಗಳನ್ನು ಹೇಳಿಕೊಟ್ಟೆವು...
ನಾವು ಹತ್ತಿಸಿದ ಚಟಕೆ ಅವರು ಬಿದ್ದರು...ಟಿಪಿಕಲ್ ಕೊಟ್ಟೂರು ಶೈಲಿಯಲ್ಲಿ ನಿರಂಜನ್ ಇನ್ನೂ ಹೆಂಗೆಗೆಲ್ಲ ಕೊಲ್ತಾನೋ ಮಾರಯಾ ಅಂತ ಉದ್ಗಾರ ತೆಗೆದಿದ್ದ...
ಈ ಘಟನೆ ನಡೆದು ಒಂದು ವರ್ಷವೇ ಆಗಿ ಹೋಗಿದೆ ನಾಗನಿಗೆ ಈಗ ಒಂದು ಗಂಡು ಮಗೂ ಕೂಡ ಆಗಿದೆ, ಆದ್ರೆ ಅವನನ್ನು ನೆನೆಸಿಕೊಂಡಾಗಲೆಲ್ಲ ನಂಗೆ ಅದೇ ಹಾಡು ನೆನಪಾಗುತ್ತೆ...ಅವ್ಯಕ್ತ ಪೀಲಿಂಗು ಸುಳಿದು ಹೋಗುತ್ತೆ.
ನಾವು ಪ್ರಯೋಗ ಮಾಡಿದ ಇನ್ನೊದು ಹಾಡು ದೀಪೋತ್ಸವ ಎಂಬ ಭಾವಗೀತೆ ಸಂಕಲನದ ಪರಮೇಶ್ವರ ಭಟ್ಟರು ಬರೆದಿರುವ "ಪೀತಿಯ ಕರೆ ಕೇಳಿ, ಆತ್ಮನ ಮೊರೆ ಕೇಳಿ ನೀ ಬಂದು ನಿಂತಿಲ್ಲಿ ದೀಪ ಹಚ್ಚಾ..." ಅನ್ನೋ ಭಾವ ಗೀತೆ ಎಷ್ಟು ಭಾರಿ ಕೇಳಿದ್ರು ಮತ್ತಷ್ಟು ಹುಚ್ಚು ಹಿಡಿಸುವ ಹಾಡು...
ನಾನಂತು ಇದೆ ಹಾಡನ್ನ ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ,
ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ,
ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ಕೇಳಿ, ನನಗೆ ಇನ್ನೂ ಬೇಜಾರಗಿಲ್ಲ..
ನೀವು ಟ್ರೈ ಮಾಡಿ.
Wednesday, April 29, 2009
ಬಹುತೇಕ ಮದುವೆ ವಯಸ್ಸಿಗೆ ಬಂದಿರುವ, ಇಲ್ಲ ಮದ್ವೆ ವಯಸ್ಸನ್ನು ಮೀರುತ್ತಿರುವ ನನ್ನ ಕೆಲವು ಮೈಸೂರು, ಬೆಂಗಳೂರಿನ ಗೆಳೆಯರು ಮಚ್ಚಾ ಡೆಲ್ಲಿ ಹುಡುಗಿಯರ ಬಗ್ಗೆ ಬರೆಯೋ ಅಂತ ಸಿಕ್ಕಾಪಟ್ಟೆ ಒತ್ತಡ ತರುತ್ತಿದ್ದಾರೆ, ಯಾರಿಗೂ ಏನನ್ನು ಇಲ್ಲ ಎನ್ನಲು ಆಗದ ನಾನು ಪ್ರಾಯದ ನನ್ನ ಗೆಳೆಯರ ಆಸೆಯನ್ನ ನಿರಾಸೆಗೊಳಿಸುವುದು ಅಕ್ಷಮ್ಯ ಅಪರಾಧ ಎಂದು ಬಗೆದು ಡೆಲ್ಲಿಯಲ್ಲಿ ಕಂಡ ನೀಲೂಗಳ ಬಗ್ಗೆ ನನ್ನ ಟಿಪ್ಪಣಿಯನ್ನ ಇಲ್ಲಿ ಹಾಕಿದ್ದೇನೆ ಓದಿ.
ನಾನು ನೆವೆಂಬರಿನ ಚುಮು ಚುಮು ಚಳಿಯಲ್ಲಿ ಡೆಲ್ಲಿಗೆ ಬಂದಾಗ ಏಕಾಂಗಿಯಾಗಿದ್ದೆ, ಹೊಸ ಊರಿಗೆ ಬಂದಾಗೆ ಎಲ್ಲಾರಿಗೂ ಹುಟ್ಟಿಕೊಳ್ಳುವ ಕುತೂಹಲ ನನಗೂ ಇತ್ತು, ಈ ಊರಿನ ವಿಶೇಷ ಏನು ಎಂಬ ಕುತೂಹಲಿ ಹುಡುಕಾಟದಲ್ಲಿದ್ದೆ, ಆಗ ನನ್ನ ಕಣ್ಣಿಗೆ ಬಿದ್ದಿದ್ದು ಎತ್ತರದ ನಿಲುವಿನ, ಕೆಂಪು ಬಣ್ಣದ ನೀಳ ಕಾಯದ, ಕೆಂಪು ಕೆಂಪು ಬಣ್ಣದ ಬೆಡಗಿಯರು.
ಮೆಟ್ರೋ ರೈಲು ನಿಲ್ದಾಣಗಳಲ್ಲಿ , ಬ್ಲೂಲೈನ್ ಬಸ್ಸುಗಳಲ್ಲಿ, ಶಾಪಿಂಗ್ ಮಾಲಗಳಲ್ಲಿ, ಕಾರುಗಳಲ್ಲಿ, ನಿಂತಲ್ಲಿ, ಕುಂತಲ್ಲಿ ಎಲ್ಲಿ ಕಂಡರಲ್ಲಿ ಅಬ್ಬಾ ಹುಡುಗೀರು....
ನಾನು ನೋಡಿದ್ದನ್ನು ನಾನೊಬ್ಬನೇ ಸವಿದರೆ ಹೇಗೆ ಅದಕ್ಕೆ ನನ್ನ ಗೆಳೆಯರಿಗೆ ಕಾಲ್ ಮಾಡಿ ಲೈವ್ ಕಾಮೆಂಟರಿ ಕೊಡುತ್ತಿದ್ದೆ, ಸೀರಿಯಸ್ಸಾಗಿ ಏನಾದ್ರೂ ಪೋನಿನಲ್ಲಿ ಹೇಳಿದರೆ ಪಾಪಿ ನನ್ಮಗ ಗೌಡ ತಲೆ ತಿಂತಾನೆ ಅನ್ನುತ್ತಿದ್ದ ಗೆಳೆಯರು ಹೌದಾ... ಹಂಗಾ... ಅಯ್ಯೋ ನಾವು ಬರ್ತಿವಿ, ಇಗೋ ಟಿಕೆಟ್ ಬುಕ್ ಮಾಡಿದ್ವಿ, ಅಂತ ಹೇಳೋರು ಆದ್ರೆ ಯಾರು ಬರಲೇ ಇಲ್ಲ. ನಾನಾದರು ನೋಡಿದವನ ರೋಮಾಂಚನಕ್ಕು ಕೇಳಿದವನ ಪುಳಕಕ್ಕು ವ್ಯತ್ಯಾಸ ಇಲ್ಲವಾ.... ಅಂತ ಸುಮ್ಮನಾದೆ.
ದೆಹಲಿ ಇದೆಯಲ್ಲ ಅದು ವಲಸಿಗರ ನಗರ, ದೇಶದ ನಾನಾ ಭಾಗಗಳಿಂದ ಬಂದವರು ಒಂದೆಡೆ ಕಲೆತು, ಅವರೆಲ್ಲ ಮತ್ತೆ ಮತ್ತೆ ಕಲೆತು, ಏನೇನೋ ರಾಡಿ ಆಗಿ ಇದೀಗ ಸುಂದರ ಲೋಕ ನಿರ್ಮಾಣ ಆಗಿದೆ...!
ಕಾಶ್ಮೀರದ ಆಪಲ್ ಬಣ್ಣದ ಬೆಡಗಿಯರು, ತುಂಬು ದೇಹದ, ಗೋಲಿ ಗೋಲಿ ಕಣ್ಣಿನ ಬೆಂಗಾಲಿಗಳು, ಮಣಿಪುರದ ಶರ್ಮಿಳೆಯರೂ, ಅಸ್ಸಾಮಿನ ಚಿಂಕಿಗಳು, ಕುಳ್ಳಗೆ ಗುಂಡು ಗುಂಡಾಗಿರುವ ಬಿಹಾರಿಗಳು, ಜಿಲೇಬಿ ಬಣ್ಣದ ಪಂಜಾಬಿಗಳು...ಎತ್ತರಕ್ಕೆ ಬಿಗಿ ಬಿಗಿ ನಿಲುವಿನ ದೆಹಲಿ ಮೂಲದವರು ಅಹಾ.... ಹಬ್ಬ.
ಡಿಸೆಂಬರ್, ಹಾಗು ಜನವರಿಯ ಚಳಿಗೆ ದೆಹಲಿ ಜನರ ಉಡುಗೆಗಳೇ ಬೇರೆ, ಹಿಮಾಲಯಕ್ಕೆ ಹಿರೋ ಮತ್ತು ಹಿರೋಯಿನ್ನು ಹನಿಮೂನಿಗೆ ಹೋದ ಸೀನಿನಲ್ಲಿ ಕಾಣುವ ಉಡುಗೆ ಚಳಿಗಾಲದಲ್ಲಿ ಹಾಕಿಕೊಳ್ಳುತ್ತಾರೆ, ಹಳ್ಳಿ ಕಡೆಯಿಂದ ಬಂದ ನನಗಂತೂ ಅಹಾ ರೋಮಾಂಚನ.
ಮೇ, ಎಪ್ರಿಲ್ , ಜೂನ್ ತಿಂಗಳ ಸೆಕೆಗೆ ಉಡುಗೆಗಳೇ ಬೇಡಪ್ಪ ಅನ್ನೋ ಪರಿಸ್ಥಿತಿ. ಎಲ್ಲಾ ತುಂಡು, ತುಂಡು, ಮೈಮೇಲೆ ಬಟ್ಟೆಯೇ ಬೇಡ ಅನ್ನೋ ಸೆಕೆಯಲ್ಲಿ ಹೆಂಗಸರ ಡ್ರೆಸ್ಸು ಹಾಗೆ.. ಇರತ್ತೆ.
ಬರೆ ಬಟ್ಟೆ ಅಲ್ಲ ಇಲ್ಲಿನ ಹೆಂಗಳೆಯರ ಸೌಂದರ್ಯ ಪ್ರಜ್ಞೆ ಕೂಡ ಚೆಂದ, ಬೆಳ್ಳಗೆ ಎತ್ತರದ ಹೆಂಗಳೆಯರು ಅವರು ವಿಶೇಷ ವೈಯಾರಗಳಿಂದ ಗಮನ ಸೆಳೆಯುತ್ತಾರೆ.
ಬಾಲಿವುಡ್ಡಿನ ಹಿರೋಯಿನ್ನುಗಳು ನೇರವಾಗಿ ನಿಮ್ಮ ಹೆಗಲ ಮೇಲೆ ಕೈ ಹಾಕಿದರೆ ಹೇಗೆ ಆಗಬೇಡ ಹಾಗೆ... ಎತ್ತರಕ್ಕಿರುವ ನೀಳಕಾಯದ ನೀಲೂಗಳಂತೂ ನಿಮ್ಮ ಹೊಟ್ಟೆ ಚರುಕ್ ಅನ್ನಿಸಿಬಿಡ್ತಾರೆ ತಿಳ್ಕೊಳ್ಳಿ.
ಕರ್ನಾಟಕದಲ್ಲಿ ಸುಂದರಿಯರು ಇಲ್ಲ ಅನ್ನೋದು ನನ್ನ ವಿಚಾರವಲ್ಲ... ನೋಡುವ ಕಣ್ಣಿಗೆ, ಮತ್ತು ಆಸಕ್ತಿಗೆ ಇಲ್ಲಿ ಹಬ್ಬ, ಇಂಟರೆಸ್ಟ್ ಇರುವ ಗೆಳೆಯರಿಗೆ ನನ್ನ ಸಲಹೆ ಚಳಿಗಾಲದಲ್ಲಿ ಇಲ್ಲಿಗೆ ಬನ್ನಿ, ಬಹು ಸಂಸ್ಕ್ರತಿ ದೇಶದ ಮೂಲೆ, ಮೂಲೆಯ ತರಾವರಿ ತಳಿ ಹಾಗು ಮಿಶ್ರ ತಳಿಗಳು, ಬಣ್ಣ ಬಣ್ಣ ಜನರನ್ನ ನೋಡೋಕೆ ಚೆನ್ನ....ಉಳಿದ ವಿಚಾರ ನನಗೆ ಗೊತ್ತಿಲ್ಲ....
ಈ ಎಲ್ಲದರ ಮದ್ಯೆ ನಂಗೆ ವಿಚಿತ್ರ ಅನ್ನಿಸಿದ್ದು, ಉತ್ತರಪ್ರದೇಶ, ಹರಿಯಾಣ, ಜಾರ್ಕಂಡನ ಹೆಂಗಸರಿಗೆ ಇರುವ ಲಿಪ್ಸ್ಟಿಕ್ ಶೋಕಿ, ಮತ್ತು ಗಾಡ ಬಣ್ಣದ ಸೀರೆಗಳ ಸೆಳೆತ.
ಕಡು ಕೆಂಪು ಬಣ್ಣ, ಕಾಪಿಬಣ್ಣ, ಗುಲಾಭಿ ಬಣ್ಣ, ನೀಲಿ ಬಣ್ಣದ ಲಿಪ್ಸ್ಟಿಕ್ ಗಳ ನ್ನು ಹಚ್ಚಿಕೊಂಡಿರುತ್ತಿದ್ದ ಹೆಂಗಸರು ನಂಗೆ ಯಾಕೋ ಅಸಹನೆ ಹುಟ್ಟಿಸುತ್ತಿದ್ದರು, ಇಂತಹ ಗಾಡ ಬಣ್ಣದ ಹುಚ್ಚು ಯಾಕೋ ನನಗೆ ಅರ್ಥ ಆಗಲ್ಲ.
ವಿಶೇಷ ಅಂದರೆ ನಾನು ವಾಸ ಮಾಡೋ ರಾಜೇಂದ್ರ ನಗರ ಭಾರತ, ಪಾಕಿಸ್ತಾನ ವಿಭಜನೆ ಆದಾಗ ಸಿಕ್ಕರ ಪುನರ್ವಸತಿಗೆ ಕಟ್ಟಿದ ಏರಿಯಾ.
ಹೆಜ್ಜೆ , ಹೆಜ್ಜೆಗೂ ಪಂಜಾಬಿಗಳು...ದುಂಡಗೆ ಸಂಪಾಗಿರುವ ಅವರನ್ನು ನೋಡುವುದೇ ಖುಷಿ. ಆದರೆ ಈ ಪಂಜಾಬಿಗಳ ಬಗ್ಗೆ ಇಲ್ಲಿನ ಕಾಲೇಜು ಹುಡುಗರು ಹೇಳೋ ಜೋಕ್ ಬೇರೆ ತರದ್ದು " ಸರ್ದಾರ್ ಜಿ ಕಾ ಬಚ್ಚಾ..ಔರ್ ಗಧೆ ಕೀ ಬಚ್ಚಾ ಜಬ್ ಚೋಟಾ ಹೋ ತಾಹೆ ಜಬ್ ಅಚ್ಚಾ ರೆಹ್ತಾಹೆ..." ಇದನ್ನು ಕೇಳಿ ನಾನು ಹೆದರಿ ಹೋದೆ. ನಾನು ಮತ್ತು ನನ್ನಂತೆ ಬ್ಯಾಚುಲರ್ ಆಗಿರುವ ನನ್ನ ಜೋತೆಗಾರನೂಬ್ಬನಿಗೆ ಹಿರಿಯ ಪತ್ರಕರ್ತ ಒಬ್ಬರು ಕೊಟ್ಟ ಸಲಹೆ ಹಾಗೆ ಇತ್ತು ಬೆಳ್ಳಗೆ ಅವ್ರೆ ಅಂತ ಬಿದ್ರಿ ಮಕ್ಳಾ ಕೆಟ್ರಿ....ಅಂತ.
ಹುಡುಗೀರ ಬಗ್ಗೆ ಬರೆದು ಇಲ್ಲಿನ ಸಾರ್ವಜನಿಕ ಪಾರ್ಕುಗಳ ಬಗ್ಗೆ, ಪ್ರೇಮಿಗಳ ಹಾಟ್ ಸ್ಪಾಟ್ ಗಳ ಬಗ್ಗೆ ಹೇಳದೆ ಹೋದ್ರೆ ಮೋಸ ಮಾಡಿದಂತೆ ಸರಿ.
ಇಲ್ಲಿನ ಇಂದ್ರಪ್ರಸ್ತ ಪಾರ್ಕ್, ಬುದ್ಧ ಗಾರ್ಡನ್, ನೆಹರು ಪಾರ್ಕ್, ಡಿಯರ್ ಪಾರ್ಕ್ . ಸಂಜಯ್ ಪಾರ್ಕ್, ಸಂಜೆಯಾದ ಮೇಲೆ ಇಂಡಿಯಾಗೇಟ್ ಗಳಿಗೆ ಬಂದರೆ ಅಬ್ಬಾ ನಂಗೆ ಏನು ಹೇಳಕ್ಕೆ ಆಗಲ್ಲ, ಇಲ್ಲಿನ ಪೊಲೀಸರು ಬುದ್ಧ ಗಾರ್ಡನ್ನಿನ ಬುದ್ಧರಂತೆ... ಅಕಸ್ಮಿಕವಾಗೆನಾದರು ಶ್ರೀರಾಮಸೇನೆ ಮುತಾಲಿಕ ಏನಾದ್ರೂ ಇಲ್ಲಿಗೆ ಬಂದ್ರೆ ಆತ್ಮಹತ್ಯೆ....!
ನಾನು ಮೊದ್ಲೇ ಹೇಳಿದಂತೆ ನಾನು ಕಂಡಿದ್ದನೆಲ್ಲ ನನ್ನ ಗೆಳೆಯರಾದ ಈಶ, ಗೋವಿಂದ, ಗಿರಿ, ಅರುಣ್, ರಾಗು, ಸುಬ್ಬು, ವಿಜಿ, ಬನವಾಸೆ ಮಂಜು ಇವರಿಗೆಲ್ಲ ಲೈವ್ ಕಾಮೆಂಟರಿ ಕೊಟ್ಟಿದ್ದಕೆ ನಾನು ತೆತ್ತ ಬೆಲೆ ಒಂದೇ ತಿಂಗಳಿಗೆ ೪೫೦೦ ರುಪಾಯಿ ಮೊಬೈಲ್ ಬಿಲ್ಲು...
Tuesday, April 28, 2009
ನಾವು ಹೇಳುವ ಏನೇ ಕೆಲಸಗಳಿಗೆ ರೈಟ್ ಬಿಡಿ ಅಣ್ಣ ಮಾಡಿ ಬಿಸಾಕೋಣ ನಡ್ರಿ ಅಂತ ಸಿದ್ದ ಆಗ್ತಿದ್ದವ ನಮ್ಮ ಮನೆಯ ಅವಿಬಾಜ್ಯ ಅಂಗವಾಗಿದ್ದ ಮುನಿರಾಜ್, ನಮ್ಮೆಲ್ಲ ವ್ಯವಸಾಯದ
ಕೆಲಸಗಳಿಗೆ ಬರುತ್ತಿದ್ದ ಮುನಿರಾಜ್ ನಮ್ಮ ವ್ಯವಸಾಯದ ಮೇಲುಸ್ತುವಾರಿ ನೋಡಿಕೊಳ್ತಾ ಇದ್ದ,
ನಾವು ಮತ್ತು ನಮ್ಮೂರಿನ ಜನ ಅವನನ್ನ "ಪಾಟ" ಅನ್ನೋ ಹೆಸರಿನಿಂದ ಕರೀತಿದ್ದೆವು. .
ನಮ್ಮ ಮನೆಯಲ್ಲಿ ಟ್ರಾ ಕ್ಟರ್ ಇತ್ತು ಬಿಟ್ಟರೆ ಜಮೀನು ಸಮ ಮಾಡಕ್ಕೆ ಬೇಕಾದ ಉಪಕರಣ ಇರ್ಲಿಲ್ಲ ಅದಕ್ಕೊಂದು ಐಡಿಯಾ ಮಾಡಿದೆವು ಟ್ರಾ ಕ್ಟರ್ ಗೆ ಅಗಲವಾದ, ಚಪ್ಪಟೆಯಾದ ಕಲ್ಲೊಂದನ್ನು
ಟ್ರಾಕ್ಟ ರ್ ಗೆ ಕಟ್ಟಿ ತೋಟದಲ್ಲಿ ಅಡ್ಡಾಡಿಸಿದ್ರೆ ಎಲ್ಲ ಸರಿ ಆಗ್ತದೆ ಅಂದುಕೊಂಡು ಭಾರಿ ತೂಕದ ಕಲ್ಲೊಂದನ್ನು ಹುಡುಕಿ ಹಗ್ಗದಿಂದ ಕಟ್ಟಿ ಎಳೆಯಲು ಯತ್ನಿಸಿದೆವು. ನಿಜಕ್ಕೂ ತುಂಬಾ ಬಾರವಾಗಿದ್ದ ಕಲ್ಲನ್ನು ಎಳೆಯಲು ಟ್ರಾ ಕ್ಟರ್ ಪ್ರಾಯಾಸ ಪಡ್ತಾ ಇತ್ತು. ನಾವು ಕೆಲಸ ಮಾಡಿದ ಕೆಲವೇ ಹೊತ್ತಿನಲ್ಲಿ ನಾವು ಕಟ್ಟಿದ್ದ ಹಗ್ಗ ಚಿಂದಿಯಾಗಿ ಕೆಲಸ ಕೈಕೊಟ್ಟಿತು.
ನನ್ನ ಮಾವ ಮತ್ತೆ ರಿಪೇರಿ ಮಾಡಲು ಪ್ರಯತ್ನಿಸಿದರಾದರೂ ಪ್ರಯತ್ನ ವಿಫಲವಾಯಿತು,
ವ್ಯವಸಾಯದಲ್ಲಿ ಇಂತಹ ಪರಿಸ್ಥಿತಿ ಎದುರಾದಾಗಲೆಲ್ಲ ಎನಾದರೋನು ಪರಿಹಾರ ಕೊಡುತ್ತಾ ಇದ್ದ ಪಾಟ ಸುಮ್ಮನಿರದೆ ವೆಂಕಟೇಶಣ್ಣ ಇಳಿ ಕೆಳಕ್ಕೆ ಅಂದವನೇ ಕಟ್ಟಿಂಗ್ ಪ್ಲೇಯರ್ ಹಿಡಿದು ಪಕ್ಕದಲ್ಲೇ ಇದ್ದ ನಮ್ಮ ಊರಿನ ಕೆರೆ ಅಂಗಳದ ವಿದ್ಯತ್ ಕಂಬದ ಬಳಿ ನಡೆದು ವಿದ್ಯತ್ ಕಂಭ ಕೆಳಗೆ ಬೀಳದಂತೆ ಎರಡು ಕಡೆ ಇದ್ದ ಕಂಬಿಯನ್ನು ಕತ್ತರಿಸಿ ನಮ್ಮ ಕೆಲಸಕ್ಕೆ ಬಳಸಿಕೊಳ್ಳೋದು ಅವನ ಘನ ಉದ್ದೇಶವಾಗಿತ್ತು,
ವಿದುತ್ ಕಂಭ ಸರ್ಕಾರದ್ದಾದ್ದರಿಂದ ನಮ್ಮದೇನು ತಕರಾರು ಇರಲಿಲ್ಲ, ಕಂಭ ಹತ್ತಾರು ಯಾರು ಎಂಬ ಯೋಚನೆ ಬರುವ ಮೊದಲೇ ಪೀಚಲು ದೇಹದವನಾಗಿದ್ದ ಪಾಟ ಕಂಭ ಹತ್ತ ತೊಡಗಿದ್ದ, ವಿದ್ಯತ್ ಹರಿಯುತ್ತಿದ್ದರೂ ಹುಷಾರಾಗಿ ಕಂಭಿ ಕತ್ತರಿಸಿಬಿಡೋದು ಅವನ ಉದ್ದೇಶವಾಗಿತ್ತು,
ನಮ್ಮ ಉರಿನ ಜನಕ್ಕೆ ಕರೆಂಟು ಸಂಭಂದಿಸಿದ ಪ್ರಾಬ್ಲಮ್ ಅದಾಗಲೆಲ್ಲ ಇವನೇ ರಿಪೇರಿ ಮಾಡುತ್ತಿದ್ದರಿಂದ ನಮಗೂ ಏನೋ ಭಯ ಅಗಲಿಲ್ಲ, ಇಂತ ಕಂಬಿ ಕತ್ತರಿಸುವ ಕೆಲಸಗಳಲ್ಲಿ ಅವನಿಗೆ ಅನುಭವ ಇತ್ತು ಮೇಲಕ್ಕೆ ಹತ್ತಿದವನೇ ವಿದ್ಯತ್ ಹರಿಯುತ್ತಿದ್ದ ಲೈನ್ ಟಚ್ ಮಾಡದೆ ಕಂಬಿ ಕತ್ತರಿಸಿ ಇನ್ನೇನು ಇಳಿಯಬೇಕು ಅಷ್ಟರಲ್ಲಿ ಅವನ ಯಾವ ಅಂಗ ಲೈನಿಗೆ ತಾಗಿತೋ ಗೊತ್ತಿಲ್ಲ ಪಾಟ ಸಡನ್ನಾಗಿ ಎತ್ತರದಿಂದ್ದ ಕೆಳಗೆ ಬಿದ್ದುಬಿಟ್ಟ. ಈ ರೀತಿ ಅಪಾಯವನ್ನು ನಿರೀಕ್ಷಿಸದಿದ್ದ ನಾವು ಅವನು ಬಿದ್ದೊಡನೆ ಗಾಭರಿಯಾದೆವು, ಇನ್ನೇನು ಸತ್ತೆ ಹೋದನಲ್ಲ ಅಂದುಕೊಳ್ಳುತ್ತಲ್ಲೇ ಕೆರೆಯ ನೀರನ್ನು ಕುಡಿಸಿ ಉಪಚರಿಸಲು ಯತ್ನಿಸಿದೆವು. ಆದ್ರೆ ಪಾಟ ಮಾತ್ರ ಉಸಿರೇ ನಿಂತವನತೆ ಕಂಡ. ನಮಗೋ ಮುಂದೆ ಬರುವ ಸಮಸ್ಯೆಗಳೆಲ್ಲ ಕಣ್ಣ ಮುಂದೆ ಬಂದು ಭಯವಾಗತೊಡಗಿತು.
ಆದರೆ ಒಂದೆರಡು ನಿಮಿಷಗಳ ನಂತರ ಅವನ ದೇಹ ಕೊಂಚ ಅಲುಗಾಡಿದ್ದನ್ನು ಕಂಡು, ತಡ ಮಾಡದೆ ಆಸ್ಪತ್ರೆ ಸೇರಿಸೋಣ ಎಂದು ತಿರ್ಮಾನಿಸಿ ಹತ್ತಿರದ ತಾವರೆಕೆರೆ ಮೋಟು ಡಾಕ್ಟ್ರು ಬಳಿ ಟ್ರಾ ಕ್ಟರ್ ನಲ್ಲೆ ಕರೆದುಕೊಂಡು ಓಡಿದೆವು.
ನಮಗೆ ಚೆನ್ನಾಗೇ ಪರಿಚವಿದ್ದ ಡಾಕ್ಟರ್ ಅವನನ್ನ ನೋಡಿದವರೇ ಏನು ಆಗಲ್ಲ ಬಿಡಿ ಸರಿ ಆಗ್ತಾನೆ ಅಂತ ಹೇಳಿ ಒಂದು ಗ್ಲುಕೋಸ್ ಬಾಟಲ್ ನೇತು ಹಾಕಿ ಚಿಕಿತ್ಸೆ ಕೊಡತೊಡಗಿದರು.
ನನಗೆ ಬುದ್ದಿ ಬಂದಾಗಿನಿದ ಆ ದಾಕ್ತ್ರನ್ನ ನಾನು ನೋಡಿದ್ದೇನೆ, ವಿಷ ಕುಡಿದು ಬಂದವನಿಗೂ ಅವರು ಕೊಡುತ್ತಿದ್ದ ಚಿಕಿತ್ಸೆ ಗ್ಲೂಕೋಸ್.....!
ಅಚ್ಚರಿಯೆಂಬಂತೆ ಪಾಟ ಸುಲ್ಪ ಹೊತ್ತಿಗೆಲ್ಲಾ ಚೇತರಿಸಿಕೊಂಡು ಕಣ್ಣು ಬಿಡತೊಡಗಿದ ಅಷ್ಟರಲ್ಲಿ ಸುದ್ದಿ ಉರಾಲೆಲ್ಲ ಹಬ್ಬಿ ಅವನ ಹೆಂಡತಿ ಮಕ್ಕಳು ಗೋಳಿದತೊಡಗಿದರಂತೆ ಇನ್ನೇನು ಶವ ಬಂದುಬಿಡುತ್ತೆ ಅಂತ ಉರಿನೋರೆಲ್ಲ ಮಾತಾದಿಕೊದ್ದಿದರಂತೆ.
ದಿನಕ್ಕೆ ೬ ರಿಂದ ೮ ಪಾಕೆಟ್ಟು ಸಾರಾಯಿ ಕುಡಿಯುತ್ತಿದ ಪಾಟ ನಿಗೆ ವಿದ್ಯತ್ ಶಾಕ್ ಹೊಡೆದರೆ ಅವನು ಬದುಕುವ ಸಾದ್ಯತೆಯೇ ಇಲ್ಲ ಅಂತ ನಮ್ಮ ಹಳ್ಳಿಯ ಜನ ಅವನು ಬದುಕುವ ಸಾದ್ಯತೆಯನ್ನ ಸಾರಾಸಗಟಾಗಿ ತಳ್ಳಿಹಾಕಿದ್ದರು,
ಸ್ವಲ್ಪ ಚೇತರಿಸಿಕೊಂಡ ಅವನನ್ನು ಮನೆಗೆ ಕರೆತಂದಿದ್ದನ್ನು ಕದ ಜನ ಅಚ್ಹರಿ ವ್ಯಕ್ತಪಡಿಸಿದರು ಅವ್ನು ಬದುಕಿದ್ದು ವಿಪರ್ಯಾಸವೇನೋ ಅಂತ ಮಾತನಾಡುತ್ತಿದ್ರು.
ಡಾಕ್ಟರು ಹೇಳಿದ್ದ ಔಷದಿಗಳನ್ನ ೧೫ ದಿನ ಕೊಟ್ಟರೆ ಸರಿಯಾಗ್ತಾನೆ ಎಂದುಕೊದಿದ್ದ ನಮಗೆ ದಿನಕಳೆದಂತೆ ಅವ್ನು ಮತ್ತಷ್ಟು ಸೊರಗುತ್ತಿದ್ದನ್ನು ಕಂಡು ಭಯವಾಗತೊಡಗಿತು. ಬಡ ಪಾಟ ನನ್ನ ಲೈಟು ಕಂಭ ಹತ್ತಿಸಿದ್ದಕ್ಕೆ ನಮ್ಮನ್ನು ಶಪಿಸುತ್ತಿದ್ದವರ್ಗೆ ಏನು ಕಡಿಮೆ ಇರಲಿಲ್ಲ.
ವಾಸ್ತವ ಏನ್ನೆಂದರೆ ನಮ್ಮ ಮನೆ ಅವಿಭಾಜ್ಯ ಅಂಗವಾಗಿದ್ದ ಅವನನ್ನ ಕಳೆದುಕೊಳ್ಳುವುದೆಂದರೆ ನಮಗೂ ನೋವಿನ ಸಂಗತಿಯಾಗಿತ್ತು. ಆದರೆ ಜನ ಮಾತ್ರ ಬಚ್ಚೇಗೌಡರ ಮನೆಯವರು ಅವ್ನ ಕು ಟುಂಭಕ್ಕೆ ಎಷ್ಟು ಹಣ ಕೊಟ್ಟರೆ ನ್ಯಾಯ ಸಿಗುತ್ತೆ ಅಂತ ಲೆಕ್ಕ ಹಾಕ್ತಾ ಇದ್ರು.
ಈ ಮದ್ಯೆ ಅವನಿಗೆ ಪ್ರಿಯವಾಗಿದ್ದ ಕೋಳಿ ಸಾರು, ತಲೆ ಮಾಂಸ, ಸಾರಾಯಿ ಸಿಗದೇ ಇರೋದೆ ಅವನು ಮತ್ತೆ ಸೊರಗಲು ಕಾರಣ ಅಂತ ಬಗೆದ ನನ್ನ ತಮ್ಮ ಜಗದೀಶ ಯಾರಿಗೂ ತಿಳಿಯದಂತೆ ಅವ್ನಿಗೆ ದಾರಾಳವಾಗಿ ಕೋಳಿ ಸಾರು, ತಲೆ ಮಾಂಸ, ಸಾರಾಯಿ ದೊರೆಯುವಂತೆ ವ್ಯವಸ್ತೆ ಮಾಡಿದ್ದ,
ಹದಿನೈದು ದಿನಕ್ಕೆ ಸತ್ತೆ ಹೋದ ಅಂದುಕೊಳ್ಳುತ್ತಿದ್ದ ಪಾಟ ಅಚ್ಚರಿಯಾಗುವಂತೆ ಒಂದೇ ವಾರಕ್ಕೆ ಮೇಲಕ್ಕೆದ್ದು ನಮ್ಮ ಮನೆ ಹತ್ರ ಬರತೊಡಗಿದ. ತನಗಾಗಿದ್ದ ನೋವೆಲ್ಲ ಮರೆತು ಲವಲವವಿಕೆಯಿಂದ ನಗುತ್ತಿದ್ದ.
ಅದೇ ಅಲ್ಲದೆ ಗೌಡ್ರೆ ಇನ್ನೊಂದು ವಾರಕ್ಕೆ ನಾನು ರೆಡಿ ಆಗ್ತೀನಿ ಮತ್ತೆ ಕೆಲಸ ಶುರು ಮಾಡೋಣ ಅಂತಾ ಹೇಳ್ತಿದ್ದ ಇನ್ನೇನು ಸತ್ತೆ ಹೋದ ಅಂತ ತಿಳಿದಿದ್ದ ನಾನೋ ಈ ಮನುಷ್ಯ ಹೇಗೆ ಬದುಕಿದ ಎಂಬ ರಹಸ್ಯ ತಿಳಿಯದೆ ಗೊಂದಲದಲ್ಲಿದ್ದೆ.
ವಿಷಯ ಗೊತ್ತಾದ ಮೇಲೆ ಅವನ ಸಾರಾಯಿ ಚಟದ ಬಗ್ಗೆ ಅಸಹನೆ ಇದ್ದ ನಾವು ಅವನು ಕುಡಿದ್ರೇನೆ ಬದುಕೋದು ಅಂತ ತೀರ್ಮಾನಕ್ಕೆ ಬಂದೆವು.
ಒಂದೆರಡು ವರ್ಷ ಕಳೆದ ನಂತರ ದಿಡೀರ್ ನಾನು ಅಯ್ಯಪ್ಪ ಸ್ವಾಮಿ ಮಾಲೆ ಹಾಕ್ತೀನಿ, ಮಾಲೆ ಹಾಕಿದ ಮೇಲೆ ಕುಡಿಯೋದನ್ನು ಬಿಟ್ಟು ಬಿಡ್ತೀನಿ ಅನ್ನೋಕೆ ಶುರು ಮಾಡಿದ ನಂಬಲಿಕ್ಕೆ ಕಷ್ಟವಾದರೂ ಅವನ ಮಾತನ್ನು ನಂಬಿದ ನನ್ನ ಅಮ್ಮ , ನನ್ನ ತಂಗಿ ಲಲಿತ ಅವ್ನಿಗೆ ಅಯ್ಯಪ್ಪ ಸ್ವಾಮಿಗೆ ಹೋಗಲು ಹಣ ಕೊಡುವ ಭರವಸೆ ನೀಡಿ ಹಣ ಕೊಟ್ಟರು.
ಭಯಂಕರ ಚಳಿಗಾಲದಲ್ಲಿ ಚಳಿ ಲೆಕ್ಕಿಸದೆ ವ್ರತ ಮಾಡತೊಡಗಿದ ಅವನನ್ನ ಕಂಡ ಜನ ಹುಬ್ಬೆರಿಸತೊದಗಿದರು, ಅಯ್ಯಪ್ಪ ಮಾಲೆ ದರಿಸಿ ವಿಚಿತ್ರವಾಗಿ ಕಾಣತೊಡಗಿದ್ದ, ದಿನವು ನಡೆಯುತ್ತಿದ್ದ ಭಜನೆಗಳಲ್ಲಿ ಅವನ ಕಾಲಿಗೆ ಕೆಲವರು ಬಿದ್ದಿದ್ದರಂತೆ....
ಭಜನೆಯಲ್ಲಿ ಮುಳುಗುತ್ತಿದ್ದ ಅವನನ್ನ ಹತ್ತಿರದಿಂದ ಗಮನಿಸಿದ ಸ್ವಾಮಿಯೊಬ್ಬ ಅಣ್ಣ ಎಣ್ಣೆ ಹಾಕಿಕೊಂಡೆ ಭಜನೆ ಮಾಡುತ್ತಿದ್ದನ್ನು ಕಂಡುಹಿಡಿದುಬಿಟ್ಟಿದ್ದ.
ಅವನ ಕಾಲಿಗೆ ಬಿದ್ದವರೆಲ್ಲ ಸ್ವಾಮಿಯನ್ನು ಶಪಿಸತೊದಗಿದರು.....
Monday, April 27, 2009
ಅಕ್ಕ ಮಾಯಾವತಿಯ ಬೆವರಿನ ವಾಸನೆ
ನೇರವಾಗಿ ವಿಷಯಕ್ಕೆ ಬಂದುಬಿಡುತ್ತೇನೆ ಮಾಯಾವತಿ ಗೊತ್ತಲ್ಲ ಅಖಂಡ ಭಾರತದ ಅತೀ ದೊಡ್ಡ ರಾಜ್ಯ ಉತ್ತರಪ್ರದೇಶದ ಅನಬಿಷಿಕ್ತ ರಾಣಿ, ನನ್ನ ಪ್ರಕಾರ ಮಾಯಾವತಿ ನಿಜವಾದ ರಾಣಿಯೇ ಸರಿ ಪಾದಯಾತ್ರೆ ಮಾಡಿ, ಸೈಕಲ್ ಹೊಡೆದು ಬೆವರು ಸುರಿಸಿ ಆನೆಯೇರಿ ಹಾಗೆ ಲಕ್ನೂದ ಸಿಂಹಾಸನ ಏರಿದ ದಲಿತ ಮಹಿಳೆ, ಭಾರತದಂತ ದೇಶದಲ್ಲಿ ಬಡವರಿಗೆ ಜನಸಾಮಾನ್ಯರಿಗೆ ನಿಲುಕದ ರಾಜಕೀಯದಲ್ಲಿ ಸೈ ಎನಿಸಿಕೊಂಡಾಕೆ. ಅದರಲ್ಲಿ ಜಾತಿ ವ್ಯವಸ್ಥೆಯಿಂದ ಹೊರಬರದ, ಸವರ್ಣೀಯ, ಅಸವರ್ಣಿಯ, ಅಸ್ಪರ್ಶ ಎಂಬ ಧರಿದ್ರಗಳಿಂದ ಕೂಡಿದ ಜಾಜಕಾರಣ ಮದ್ಯೆ ಎದ್ದು ಬಂದು ರಾಜಕೀಯಕ್ಕಿಳಿದ just school teacher.....!
ಮಾಯಾವತಿಯ ರಾಜಕೀಯ ಗುರು ಕಾನ್ಕ್ಷಿ ರಾಮ್ ಇರಬಹುದು ಆದರೆ ಮಾಯಾವತಿಯ ಶಕ್ತಿಗೆ ಅವಳೊಬ್ಬಳೆ ಸಾಟಿ ಅಂತ ಗುರುವೇ ಒಪ್ಪಿಕೊಂಡಿದ್ದರು, ಇಲ್ಲಿ ನಡೆಯುವ ದಟ್ಟ ದರಿದ್ರ ರಾಜಕಾರಣದ ನಡುವೆಯೂ ರಾಜಕ್ಕೀಯಕ್ಕಿಳಿದು ನೊಂದು ಬೆಂದು ನಾಲಕ್ಕು ಬಾರಿ ಸೋತು ಸುಣ್ಣವಾದರು ತಲೆಬಾಗದೆ ತನ್ನ ೩೩ ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಅಜಂಗಢದಿಂದ 1989 ರಲ್ಲಿ ಲೋಕಸಭೆಗೆ ಆಯ್ಕೆಯಾಗುತ್ತಾಳೆ.
ಯಾವ ಶ್ರೀಮಂತನ ಮಗಳೂ ಅಲ್ಲದ, ರಾಜವಂಶದ ಕುಡಿಯಲ್ಲದ, ರಾಜಕಾರಣಿಯೊಬ್ಬನ ವಿಧವೆ ಅಲ್ಲದ, ಶೋಕಿಲಾಲನ ಗೆಳತಿಯಲ್ಲದ ಕೇವಲ ಧಲಿತ ಮಹಿಳೆ.
ಇಂಥ ಮಾಯಾವತಿ ಲೋಕಸಭೆಗೆ ಬಂದರೆ ಸುಮ್ಮನಿರುತ್ತಾಳ ಅಕ್ಕ, ತನ್ನ ದಲಿತ ಬಂದುಗಳಿಗೆ ಅನ್ಯಾಯವಾದಾಗಲೆಲ್ಲ ಎದ್ದು ನಿಂತು ಅರಚುತ್ತಿದ್ದಳು, ತಾನು ಮೊದಲ ಬಾರಿಗೆ ಲೋಕಸಭೆಗೆ ಬಂದೆ ಎಂಬುದನ್ನೇ ಮರೆತು ಲೋಕಸಭೆಯ ಹಿರಿಯರು ಹುಬ್ಬೇರಿಸುವಂತೆ ಮಾಡಿದಾಕೆ. ಆಗ ತಾನೇ ರಾಜ್ಯ ರೈಲ್ವೆ ಸಚಿವನಾಗಿದ್ದ ಅಜಯ್ ಸಿಂಗ್ ಜೈಪುರದಲ್ಲಿ 26 ಧಲಿತ ಮಹಿಳೆಯರನ್ನ ರೇಪ್ ಮಾಡಿದ್ದಾನೆ, ಆತನನ್ನ ಸಂಪುಟದಿಂದ ಕಿತ್ತು ಹಾಕಿ ಎಂದು ದಲಿತ್ ಕಿ ಬೇಟಿ ಮಹಿಳೆಯರಿಗೆ ಧನಿಯಾಗುತಾಳೆ ಆದರೆ ಲೋಕಸಬೆಯಲ್ಲಿ ಇರುಸುಮುರಿಸಿಗೆ ಸಿಕ್ಕ ಮಂತ್ರಿ ಕೊಟ್ಟ ಉತ್ತರ ಏನು ಗೊತ್ತ,
"ನೋಡಿ ಮಾಯಾ ನನಗೆ ಒಬ್ಬಳೇ ಹೆಂಡತಿ ಅವಳನ್ನು ಸಂಬಾಳಿಸೋದೆ ಕಷ್ಟ ಅಂತದರಲ್ಲಿ ಎರಡು ಡಜನ್ ಮಹಿಳೆಯರನ್ನು ನಾ ಹೇಗೆ ರೇಪ್ ಮಾಡಲಿ ನೀವೇ ಹೇಳಿ" ಅಂತ.
ಈ ದೇಶದಲ್ಲಿ ಕೈಲಾಗದವ್ರ ಮೇಲೆ ಶಕ್ತಿ ವಂತರು ಮಾಡೋ ಜೋಕ್ ಗಳೇ ಹಾಗಿರುತ್ತವೆ....., ಹೌದಲ್ಲ..
ತಲೆಗೆ ಎಣ್ಣೆ ಹಚ್ಹಿಕೊಂಡು, ಹಳೆ ಬಟ್ಟೆ ಉಟ್ಟುಕೊಂಡು, ಸುಗಂಧದ್ರವ್ಯದ ಬಗ್ಗೆ ಗೊತಿಲ್ಲದ ಮಾಯಾವತಿಯನ್ನ ಅದೇ ಲೋಕಸಭೆಯ ಮಹಿಳಾ ಮಣಿಯರು ಮಾಯಾವತಿ ಸಕ್ಕತ್ ಬೆವರುತ್ತಾಳೆ, ಅವಳ ಹತ್ರ ನಿಂತುಕೊಳ್ಳಕು ಆಗಲ್ಲ ಅಂತ ಮೂಗು ಮುರಿತಿದ್ರಂತೆ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾಯಾವತಿ ಬೆವರಿನ ವಾಸನೆ ತಡೆಯಕ್ಕೆ ಆಗಲ್ಲ ಅವಳಿಗೆ ಹೇಳಿ ಒಳ್ಳೆ ಬಾಡಿ ಸ್ಪ್ರೇ ಮಾಡಿಕೊಳ್ಳೋಕೆ ಅಂತ ಹಿರಿಯ ರಾಜಕಾರಣಿಯೊಬ್ಬನ ಮೂಲಕ ಸಲಹೆ ನೀಡಿದರಂತೆ ರಾಯಲ್ ಫ್ಯಾಮಿಲಿಯಿಂದ ಬಂದಿದ್ದ ಮಹಿಳಾಮಣಿಗಳು.
1989 ರ ಮೊದಲ ಲೋಕಸಭೆಯ ನಂತರ, 1995 ರಲ್ಲಿ 132 ದಿನ, 1997 ರಲ್ಲಿ 6 ತಿಂಗಳು 2002 ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ
2007 ರಲ್ಲಿ ವಿಧಾನಸಭೆಯ 272 ಸೀಟುಗಳಲ್ಲಿ 206 ಸೀಟು ಗೆದ್ದು ಯಾವ ರಾಷ್ಟ್ರೀಯ ಪಕ್ಷದ ಹಂಗ್ಗಿಲ್ಲದ ಉತ್ತರ ಪ್ರದೇಶದ ಅನಭಿಷಿಕ್ತ ರಾಣಿಯಾದಳು,
ಲಕ್ನೋದ ಗದ್ದುಗೆ ಏರಿದ ಕೆಲವೇ ತಿಂಗಳಲ್ಲಿ ಉತ್ತರ ಪ್ರದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಗೂಂಡಾಗಳು, ಡಾಕುಗಳು, ಡಾನ್ ಗಳು, ಕಳ್ಳಕಾಕರನು ಊರೇ ಬಿಟ್ಟು ಹೋಗುವಂತೆ ಮಾಡಿದವಳು ಅಕ್ಕ ಮಾಯಾವತಿ.
ಮಾಯಾವತಿಯ ಬೆವರಿನ ವಾಸನೆ ಹಿಡಿದು ಕುಹಕದ ಮಾತಾಡಿದ್ದ ರಾಯಲ್ ಫ್ಯಾಮಿಲಿಯ ಮಹಿಳೆಯರು ಈಗ ಎಲ್ಲಿದಾರೋ ಗೊತ್ತಿಲ್ಲ ಆದರೆ ಮಾಯಾವತಿಯ ಆನೆ ದೆಹಲಿ ಗದ್ದುಗೆ ಎದೆಗೆ ಮುಖ ಮಾಡಿ ನಿಂತಿದೆ.
ದಲಿತ್ ಕಿ ಬೇಟಿ ಮಾಯಾವತಿ ಬಳಿ ಈಗ ಬೆವರಿನ ವಾಸನೆ ಬರಲ್ಲ ಅಧಿಕಾರದ ವಾಸನೆ ಬರುತ್ತೆ....ಅಲ್ಲವಾ ಗೆಳೆಯರೇ...!!
Sunday, April 26, 2009
ಅಣ್ಣ ಎದ್ದು ನಿಂತೊಡಂ ಎದುರಿಗಿದ್ದವರ್ ಗಡಗಡ...
ಅವಳು ಕರ್ರಗಿರಬಹುದು
ಮೋಳೆ ಚಕ್ಕಳಗಳ ಗೂಡಾಗಿರಬಹುದು
ಆದರೆ ಅವಳೆಷ್ಟು ಸುಖ ಕೊಡುತ್ತಾಳೆ...
ಮೈಥುನಕ್ಕೆ ಇಳಿದ ನಾಯಿಮರಿಗಳಂತೆ
ಕೊಚ್ಚೆಯಿಂದ ಎದ್ದು ಬರುತ್ತಿರುವ
ಹಂದಿಮರಿಗಳ ಹಿಂಡಿನಂತೆ...
ಈ ಹಾದಿಯಲ್ಲಿದ್ದ ಪದ್ಯವನ್ನು ದಿವ್ಯ ಧ್ಯಾನದಲ್ಲಿ ಓದಿದ ನಂದೀಶ್ ಎರಡು ಮೂರು ನಿಮಿಷ ತಡೆದು ಶುರುಮಾಡಿದ...
"ನೋಡು ಈ ಪದ್ಯವನ್ನು ನೋಡೋ ದೃಷ್ಠೀನೆ ಬೇರೆತರ. ವಿಮರ್ಶೆಯ ಪರಿಭಾಷೆಯಲ್ಲಿ ಹೇಳುವುದಾದರೆ ಇಲ್ಲಿ ಎರಡು ಆಯಾಮ ಇದೆ. ಜಗತ್ತಿನ ಶ್ರೇಷ್ಠ ಸಾಹಿತ್ಯವನ್ನು ಓದಿ ಗ್ರಹಿಸಿದ್ದೇ ಆದ್ರೆ, ಈ ಪದ್ಯದ ಗ್ರಹಿಕೆ ಸುಲಭ. ಈ ಪದ್ಯದ ಗತಿ ಇದೆಯಲ್ಲಾ, ಅದನ್ನು ಲಂಕೇಶರು ಮಾತ್ರ ಹೀಗೆ ಬರೆಯಬಲ್ಲರು. ಅವರೊಬ್ಬರೇ ಕನ್ನಡದ ಮೋದಿಲೇರ್. ಹೀಗೆ ಶುರುಮಾಡಿದ ನಂದೀಶ್ ನಾಲ್ಕೈದು ಸಾಲಿನ ಆ ಪದ್ಯವನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ವಿಮರ್ಶೆ ಮಾಡಿದ್ಧೇ ಮಾಡಿದ್ದು... ನಾನು ಮತ್ತು ಅಭಿನಂದ ಒಳಗೊಳಗೇ ಕಳ್ಳ ನಗು ನಗುತ್ತಾ ಆಹಾ... ಆಹಾ... ಅಂತಾ ಕೇಳಿದ್ವಿ...
ಮಹಾರಾಜ ಕಾಲೇಜಿನ ಬಹುತೇಕ ಯುವ ಸಾಹಿತಿಗಳ ಆರಾಧ್ಯ ದೈವವಾಗಿದ್ದ ನಂದೀಶ್ ಅವರ ಬುದ್ಧಿಮತ್ತೆಗೆ ಸಾಟಿಯೇ ಇರ್ತಾ ಇರ್ಲಿಲ್ಲ. ಚರ್ಚೆಗೆ ನಿಂತರೆ ಸೂರ್ಯನ ಕೆಳಗೆ, ಸೂರ್ಯನ ಆಚೆಗೆ ನಡೆಯೋ ಸಂಗತಿಗಳನ್ನೆಲ್ಲಾ ನಂದೀಶ್ ವಿವರಿಸುತ್ತಿದ್ದ ರೀತಿಗೆ ತಲೆ ಬಾಗದವರೇ ಇರಲಿಲ್ಲ.
ಕಾಲೇಜು ಕ್ಯಾಂಟೀನಿನ ಮಗ್ಗುಲಲ್ಲಿ ದಿನವೂ ನಂದೀಶ್ ಅಂಚೆಯ ಚರ್ಚೆಗಳಲ್ಲಿ ಪಾಲ್ಗೊಂಡಿದ್ದ ನಮ್ಮ ಗೆಳೆಯರೆಲ್ಲಾ ಅವನಿಗಿದ್ದ ಅಪಾರ ಸಾಹಿತ್ಯ ಜ್ಞಾನ, ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ, ಪಂಪ, ರನ್ನ, ಪೊನ್ನ, ಜನ್ನ, ಆದಿ ಪುರಾಣ, ಅಂತ್ಯ ಪುರಾಣ, ಯಾವ್ಯಾವುದೋ ಪುಠದ ಸಾಲುಗಳನ್ನೆಲ್ಲಾ ತನ್ನ ಚರ್ಚೆಯಲ್ಲಿ ಬಳಸುತ್ತಾ ಹರಳು ಉದುರಿದಂತೆ ಬಸವಣ್ಣನ ವಚನ ಹೇಳುತ್ತಾ ಎಂತೆಂತದೋ ಜಠಿಲ ಸಾಹಿತ್ಯ ಸಂಘರ್ಷಗಳನ್ನೆಲ್ಲಾ ವಿವರಿಸುತ್ತಿದ್ದ.
ನಾನೋ ಆವರೆಗೆ ಓದಿದ್ದು ಬರೀ ನಾಲ್ಕೈದು ಪುಸ್ತಕ ಮಾತ್ರ. ನಂದೀಶನ ಜ್ಞಾನ ಬಂಡಾರ ಕೇಳಿ ಸಾಹಿತ್ಯದ ಸಹವಾಸವೇ ಬೇಡ... ಸಮುದ್ರದಲ್ಲಿ ಈಜೋ ಉದ್ದೇಶ ನಮಗಿಲ್ಲಾ ಅಂದುಕೊಳ್ಳುತ್ತಾ ನಂದೀಶನ ಜೊತೆಗಿರ್ತಿದ್ವಿ. ಆ ಕಾಲಕ್ಕೆ ಬುದ್ದಿಜೀವಿ ಬಳಗದಲ್ಲಿ ಕುಖ್ಯಾತರಾಗಿದ್ದ ಸುನೀಲ್ ಬಾದ್ರಿ ಕೇಶವಾಚಾರ್ಯ ನಾವು ಹುಟ್ಟಿದಾಗಲಿಂದ ಯಾವತ್ತೂ ಕೇಳಿಯೇ ಇಲ್ಲದ ಇಂಗ್ಲೀಷ್ ಸಾಹಿತಿಗಳ ಹೆಸರನ್ನ ಹೇಳುತ್ತಾ ಅವರ ಪದ್ಯದ ಸಾಲುಗಳನ್ನ ಕೋಟ್ ಮಾಡುತ್ತಾ ವಾಸ್ತವದ ಘಟನೆಗಳಿಗೆ ರಿಲೇಟ್ ಮಾಡ್ತಿದ್ದ. ನಂದೀಶ್ ಅಂಚೆ, ಸುನೀಲ್ ಬಾದ್ರಿ ಕೇಶವಾಚಾರ್ಯ ನಾವು ಓದುತ್ತಿದ್ದ ಕಾಲಕ್ಕೆ ಮಹರಾಜಾ ಕಾಲೇಜಿನ ಉಪನ್ಯಾಸಕರಿಗಿಂತ ದೊಡ್ಡ ಹೀರೋಗಳೆಂಬುದು ನಮ್ಮಂತ ಹಲವು ಅಮಾಯಕರ ತೀರ್ಮಾನವಾಗಿತ್ತು.
ಯಾವ ಕ್ಷಣದಲ್ಲಿ ನನಗೆ ಅಂತಹ ಕುತಂತ್ರಿ ಯೋಚನೆ ಬಂತೋ ಗೊತ್ತಿಲ್ಲ. ಲಂಕೇಶರ ಪಾಪದ ಹೂಗಳು ಪುಸ್ತಕ ಓದುತ್ತಿದ್ದ ನಾನು ಅದರಲ್ಲಿದ್ದ ಬೋದಿಲೇರನ ದಾಟಿಯ ಪದ್ಯವೊಂದನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಗೀಚಿದ್ದೆ. ಅಚಾನಕ್ಕಾಗಿ ನಮ್ಮ ಹಾಸ್ಟೆಲ್ ರೂಮಿಗೆ ಬಂದ ವಿಮರ್ಶಕ ನಂದೀಶ್ ಅಂಚೆಗೆ ತೋರಿಸಿ ಇದು ಬೋದಿಲೇರನ ಪದ್ಯ. ನನಗ್ಯಾಕೋ ಅರ್ಥ ಆಗ್ತಾ ಇಲ್ಲಾ. ಸ್ವಲ್ಪ ಹೇಳು ಮಾರಾಯ ಅಂಥ ಕೇಳಿದೆ. ನಮ್ಮನ್ನು ಅಮಾಯಕರೆಂದು ಬಗೆದ ನಂದೀಶ್ ಹಿಂದೂ ಮುಂದೂ ನೋಡದೆ ಬಾರೀ ವಿಮರ್ಶೆಗೆ ಸಿದ್ಧವಾಗಿ ಅರ್ಧ ಗಂಟೆ ಭಾಷಣ ಬಿಗಿದ. ನಾನೇ ಬರೆದ ಪದ್ಯದ ಬಗ್ಗೆ ನನಗೇ ಅನುಮಾನ ಬರುವಷ್ಟು ಪ್ರಬುದ್ಧವಾಗಿತ್ತು ಅವನ ಭಾಷಣ.
ಕೆಲ ದಿನಗಳ ನಂತರ, ಕ್ಯಾಂಟೀನ್ ನಲ್ಲಿ ಬಾರೀ ಚರ್ಚೆ ನಡೆಯುತ್ತಿರುವಾಗ ನಾನು ಮತ್ತು ಅಭಿ ಮಾಡಿದ್ದ ಕುತಂತ್ರಿ ಘಟನೆಯನ್ನು ಹೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ವಿ. ನಮ್ಮಿಂದ ಇಂತದ್ದೊಂದು ಸಂದರ್ಭವನ್ನು ನಿರೀಕ್ಷಿಸದಿದ್ದ ನಂದೀಶ್ ನಾವು ಕಣ್ಣಿಗೆ ಬಿದ್ದಾಗಲೆಲ್ಲಾ, "ಮಕ್ಕಳಾ... ನನ್ನನ್ನೇ ಟ್ರ್ಯಾಪ್ ಮಾಡ್ತೀರಾ... ನೋಡ್ಕೋತೀನಿ... ನೋಡ್ಕೋತೀನೀ..." ಅಂತಾ ಹೇಳ್ತಿದ್ದ. ನಮಗೆ ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲಾ.
ಈಗಲೂ ನಮ್ಮ ಸ್ನೇಹಿತರ ಬಳಗದಲ್ಲೇ ಇರುವ ನಂದೀಶ್ ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕ. ಪ್ರಖಾಂಡ ಮಾತುಗಾರ, ಎದ್ದು ನಿಂತೊಡಂ, ಎದುರು ನಿಂತವರ್ ಗಡಗಡ!!!
Saturday, April 25, 2009
ಇವನ ಬಗ್ಗೆ ಬ್ಲಾಗ್‌ನಲ್ಲಿ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಬ್ಲಾಗ್‌ನ ಲಿಮಿಟೇಷನ್ ಮೀರಿದ ಅಷ್ಟೇಕೆ ಸ್ವತಃ ಅವನೇ ತನ್ನ ಲಿಮಿಟೇಷನ್‌ನ್ನು ಮೀರಿಸಿದ್ದ ವ್ಯಕ್ತಿ. ನನ್ನ ಮೈಸೂರಿನ ಕಾಲೇಜಿನ ದಿನಗಳಲ್ಲಿ ನನ್ನ ನೆರಳಿನಂತೆ ಸದಾ ನನ್ನ ಜೊತೆಗಿದ್ದವದನು. ಕ್ಷಣಕ್ಷಣಕ್ಕೂ ಏನಾದರೊಂದು ಅಪಾಯ ಸೃಷ್ಟಿಸುತ್ತಾ, ಅನಾಹುತ ಮಾಡುತ್ತಾ ಇದ್ದ ‘ಡೋಂಟ್ ಕೇರ್’ ಥರದ ಆಸಾಮಿ ಆತ. ಇವನ ಬಗ್ಗೆ ಬರೆಯಲಿಕ್ಕೆ ನನ್ನ ಬಳಿ ನೂರಾರು ಘಟನೆಗಳಿವೆ. ಅದರಲ್ಲಿ ಒಂದೆರಡಷ್ಟನ್ನೇ ಇಲ್ಲಿ ದಾಖಲಿಸಿದ್ದೇನೆ. ಮಹಾರಾಜ ಕಾಲೇಜಿನಲ್ಲಿ ನನ್ನದು ಮತ್ತು ಡಿಂಗನದು ಒಂದೇ ವಿಷಯ. ಕ್ರಿಮಿನಾಲಜಿ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ. ವರ್ಷ ಪೂರ್ತಿ ಕಾಲೇಜಿಗೆ ಚಕ್ಕರ್ ಹೊಡೆಯುತ್ತಿದ್ದರೂ ಕಾಲೇಜಿನ ಕ್ಯಾಂಟೀನಿಗೆ ಮಾತ್ರ ಚಕ್ಕರ್ ಹೊಡೆದಿದ್ದ ದಿನ ಮಾತ್ರ ನೆನಪಾಗುವುದಿಲ್ಲ. ದಿನದ ಆದಿ ಮತ್ತು ಅಂತ್ಯ ಅಲ್ಲೆ ಆಗಿರುತ್ತಿತ್ತು. ಆದರೆ ಪರೀಕ್ಷೆಗಳು ಶುರುವಾಗುವ ಕನಿಷ್ಠ ೧೫ ದಿನಕ್ಕೆ ಮುಂಚೆ ನನ್ನ ಮಿತಿಯಲ್ಲೇ ಸೀರಿಯಸ್ ಆಗಿ ಓದೊಕ್ಕೆ ಶುರು ಮಾಡ್ತಿದ್ದೆ. ಆದರೆ ಡಿಂಗ ಮಾತ್ರ ಯಾವತ್ತು ಓದಿದ್ದನ್ನೇ ನೋಡಿಲ್ಲ. ಎಲ್ಲರ ರೂಂಗಳಿಗೆ ಎಡತಾಕುತ್ತಾ ಏನಾದರೂ ಕೀಟಲೇ ಮಾಡುತ್ತಾ ಡಿಂಗ ಕಾಲಾಹರಣ ಮಾಡುತ್ತಿದ್ದ. ಓದೋ ಡಿಂಗ ಪರೀಕ್ಷೆ ಬರ್ತಾ ಇದೆ ಅಂತ ಮರುಕದಿಂದ ಹೇಳಿದ್ರೆ, ‘ಇಲ್ಲ ಮಗಾ ನಾನು ಓದೋಕೆ ಕುಂತ್ರೆ ನನಗೆ ಇರೋ ಓರೆ ಕಣ್ಣಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತೆ" ಅಂತ ಅವನಪ್ಪನ ಬಳಿ ಇದ್ದ ಹಣವನ್ನ ಡಬಲ್ ಮಾಡುವುದು ಹೇಗೆ ಅಂಥ ಚಿಂತಿಸುತ್ತಿದ್ದ.
ವಿಶೇಷ ಏನಂದ್ರೆ; ಅವನು ಯಾವ ಪರೀಕ್ಷೆಯಲ್ಲೂ ಫೈಲ್ ಆಗಲೇ ಇಲ್ಲ. ಅವನೊಬ್ಬನಿಗೇ ತಿಳಿದಿದ್ದ ಫಾರ್ಮುಲಾ ಒಂದು ಅವನ ರಕ್ಷಣೆಗಿತ್ತು. ಅವನ ಫಾರ್ಮುಲಾ ಯಾವ ರೀತಿಯಾಗಿ ಕ್ಲಿಕ್ ಆಗಿತ್ತು ಎಂದರೆ ನನ್ನ ಬಳಿಯೇ ಹೇಳಿಸಿಕೊಂಡಿದ್ದ ವಿಷಯವೊಂದರಲ್ಲಿ ನನ್ನನ್ನೇ ಮೀರಿಸಿ ಹೆಚ್ಚು ಅಂಕ ಗಳಿಸಿ ಕಿಚಾಯಿಸಿದ್ದ. ಪರೀಕ್ಷೆಯ ಹಿಂದಿನ ದಿನವೂ ಚಿಂತೆ ಇಲ್ಲದೆ ಇರ್ತಿದ್ದ ಡಿಂಗ ಪರೀಕ್ಷೆಗೆ ೧ ಗಂಟೆ ಮುಂಚೆ ನಾನು ಮಾಡಿಕೊಂಡಿರ್‍ತಿದ್ದ ಪಾಯಿಂಟ್ ಬುಕ್ಕನ್ನ ಓದಿಕೊಂಡು ಬಿಡ್ತಿದ್ದ. ಯಾವ ಪಾಯಿಂಟ್‌ಗೆ ಯಾವ ಉತ್ತರ ಬರೆಯಬೇಕೆಂಬ ಕಾಳಜಿ ಅವನಿಗಿರಲಿಲ್ಲ. ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದಕ್ಕೆ ಯಾವತ್ತು ಯತ್ನಿಸದ ಡಿಂಗ ಆ ಮೂಲಕ ತನಗಿದ್ದ ಕಣ್ಣಿನ ದೋಷವನ್ನ ಮರೆಮಾಚುತ್ತಿದ್ದ. ಜಗತ್ತಿನ ಕ್ಲಿಷ್ಟಕರ ಪ್ರಶ್ನೆಗೂ ಎನಾದರೊಂದು ಉತ್ತರ ಬರೆದು ಬರುವುದು ಅವನ ಶೈಲಿ. ಪ್ರತಿ ಪರೀಕ್ಷೆಯಲ್ಲೂ ನನಗಿಂತ ಹತ್ತು ಹನ್ನೆರಡು ಮಾರ್ಕ್‌ಗಳು ಕಡಿಮೆ ತೆಗೆದುಕೊಳ್ಳುತ್ತಿದ್ದ. ಫೇಲ್ ಅನ್ನೋದು ಅವ ಡಿಕ್ಷ್ನರಿನಲ್ಲೇ ಇರ್‍ಲಿಲ್ಲ. ಇನ್ನೇನು ಡಿಗ್ರಿ ಪಾಸ್ ಮಾಡಿ ಮಾಸ್ಟರ್ ಡಿಗ್ರಿ ಎಂಟ್ರಾನ್ಸ್ ಎಕ್ಸಾಮ್‌ಗೆ ನಾನು ತಯಾರು ಮಾಡುತ್ತಿದ್ದೆ. ಊರಿಗೆ ಹೋಗಿದ್ದ ಡಿಂಗ ಮತ್ತೆ ಹಾಜರಾದ. ಲೋ ಮಗಾ ಎಂಟ್ರೆನ್ಸ್‌ನಲ್ಲಿ ಏನು ಪ್ರಶ್ನೆ ಕೇಳ್ತಾರೋ ನಾನು ಮಾಸ್ಟರ್ ಡಿಗ್ರಿ ಸೇರ್‍ಬೇಕು ಅಂತ ನನ್ ಬಳಿ ತರ್‍ಲೆ ತಗೆದ. ನಾಲ್ಕೈದು ನಾರಿ ಸುಮ್ನೆ ಕೇಳಿಸಿಕೊಂಡ ನಾನು ರೋಸಿ ಹೋಗಿ ಕುರುಡ ನನ್ನ ಮಗನೇ ಹೋಗಿ ನಿನ್ನ ಕಣ್ಣು ಡಾಕ್ಟ್‌ರಿಗೆ ತೋರ್‍ಸು, ಹ್ಯಾಂಡಿಕ್ಯಾಪ್ ಕೋಟಾ ಕೊಡ್ತಾರೆ ಅಂದೆ. ನನ್ನ ಮಾತಿನ ಹಿಂದೆ ನನಗೇನೂ ಉದ್ದೇಶ ಇರಿಲ್ಲ. ನಂತರ ಕೆಲ ದಿನ ಕಾಣೆಯಾಗಿದ್ದ ಡಿಂಗ ಎಂಟ್ರೆನ್ಸ್ ಪರೀಕ್ಷೆ ದಿನ ದಿಢೀರ್ ಹಾಜರಾದ. ಎಲ್ಲರಿಗೂ ಅಚ್ಚರಿಯಾಗುವಂತೆ ಡಿಂಗನ ಹೆಸರು ಮೂರು ನಾಲ್ಕು ಡಿಪಾರ್ಟ್‌ಮೆಂಟ್‌ಗಳಲ್ಲಿ ಆಯ್ಕೆಯಾಗಿತ್ತು. ಕಾರಣ ಏನಪ್ಪಾ ಅಂದರೆ ನನ್ನ ಬೈಗುಳ್ಳಗಳನ್ನೇ ಪಾಸಿಟಿವ್ ಆಗಿ ತೆಗೆದುಕೊಂಡು ನೇರವಾಗಿ ಊರು ಚನ್ನರಾಯಪಟ್ನಕ್ಕೇ ಹೋದವನು ಡಾಕ್ಟರೊಬ್ಬರನ್ನು ಹಿಡಿದು, ೭೦% ಹ್ಯಾಂಡಿಕ್ಯಾಪ್ ಕೋಟಾದೊಂದಿಗೆ ವಾಪಸಾಗಿದ್ದ.
ಬಡ್ಡಿ ವ್ಯವಹಾರಗಳಲ್ಲಿ ಪಳಗಿದ್ದ ಅವರಪ್ಪ ತುಂಬಾ ಚಾಲಾಕು. ಇವನಿಗೆ ದುಡ್ಡು ಕೊಡುವಾಗಲೆಲ್ಲ ಯಾಕೇ, ಏನು, ಎಂಬ ಪ್ರಶ್ನೆಯೆಲ್ಲಾ ಹಾಕಿ ರಶೀದಿ ತೋರಿಸು ಎಂದು ರಗಳೆ ಮಾಡ್ತಿದ್ದ. ಅವರಪ್ಪನಿಗಿಂತ ಕಿಲಾಡಿಯಾಗಿದ್ದ ಡಿಂಗ ಇವನೇ ಎಂತದೋ ರಸೀದಿ ತಯಾರು ಮಾಡಿ ಇಂಗ್ಲೀಷಿನಲ್ಲಿ ವಾಕಿಂಗ್ ಫೀಸ್, ಟಾಕಿಂಗ್ ಫೀಸ್, ಡ್ರಿಂಕಿಂಗ್ ಫೀಸ್, ಕಾರಿಡಾರ್ ಫೀಸ್, ಅಂತೆಲ್ಲಾ ಏನೇನೊ ಬರೆದು ಅವರಪ್ಪನನ್ನ ನಂಬಿಸಿಬಿಟ್ಟಿದ್ದ.
ಮಾಸ್ಟರ್ ಡಿಗ್ರಿಯಲ್ಲಿ ಎಲ್ಲರ ಬಳಿಯೂ ಬೈಕ್ ಇದ್ದುದ್ದನ್ನು ಕಂಡು ರೊಚ್ಚಿಗೆದ್ದ ಡಿಂಗ ಏನಾದರೂ ಮಾಡಿ ಬೈಕ್ ತರಬೇಕೆಂದು ಊರಿಗೆ ಹೋದವನು ಪೂರ್ತಿ ಲಡಾಸ್ ಎದ್ದು ಹೋಗಿದ್ದ ಚಾಸಿ ಮತ್ತು ಬಿಡಿ ಬಿಡಿ ಭಾಗಗಗಳನ್ನು ರೈಲಿನಲ್ಲಿ ಹೊತ್ತು ತಂದಿದ್ದ. ನಾನು ಮತ್ತು ಡಿಂಗ ಸೇರಿ ಪರಿಚಯದವರ ಗ್ಯಾರೇಜ್‌ವೊಂದರಲ್ಲಿ ಹಾಕಿ ಮೈಸೂರಿನ ಗುಜುರಿಗಳಲ್ಲೆಲ್ಲಾ ತಡಕಾಡಿ ಅಗತ್ಯ ಪಾರ್ಟ್‌ಗಳನ್ನ ಜೋಡಿಸಿ ಕಡು ಕಪ್ಪು ಬಣ್ಣದ ಬೈಕೊಂದನ್ನು ರೂಪಿಸುವಲ್ಲಿ ಯಶಸ್ವಿಯಾದೆವು. ಇಂತದ್ದೇ ಕಂಪನಿ ಎಂದು ಹೇಳಲಿಕ್ಕೆ ಆಗದ ಆ ಬೈಕ್ ಬಾರೀ ಶಬ್ದ ಮಾಡುತ್ತಿತ್ತು. ಒಂದು ಲೀಟರ್ ಪೆಟ್ರೋಲ್ ತುಂಬಿದರೆ ೧೫ ಕಿಮಿ ದೂರ ಹೋಗಬಹುದಿತ್ತು. ಮಾನಸಗಂಗೋತ್ರಿಯಲ್ಲಿ ಡಿಂಗನ ಬೈಕ್‌ಗೆ ವಿಶಿಷ್ಟ ಸ್ಥಾನಮಾನಗಳು ಲಭ್ಯವಾಗಿದ್ದವು. ಬೈಕಿನ ಶಬ್ದ ಕೇಳಿದ ಹುಡುಗರು ರಸ್ತೆ ಬದಿಯಲ್ಲಿ ನಿಂತು ಜಾಗ ಬಿಡುತ್ತಿದ್ದರು. ಅವನ ಬೈಕಿಗೆ ಹೆಸರೇ ಇಲ್ಲದ್ದನ್ನು ಕಂಡ ನಾವೆಲ್ಲಾ ಸುನಾಮಿ ಅಂತ ಹೆಸರಿಟ್ಟಿದ್ದೆವು.
ಕಳೆದ ಒಂದು ವರ್ಷದ ಹಿಂದೆ ತಾನು ಮದುವೆಯಾಗಲೇಬೇಕೆಂದು ತೀರ್ಮಾನಿಸಿದ ಡಿಂಗ ಹತ್ತಾರು ಬಯಲುಸೀಮೆಯ ಹೆಣ್ಣುಗಳನ್ನು ನೋಡಿದ್ದ. ಒಂದೊಮ್ಮೆ ನನಗೆ ಕರೆ ಮಾಡಿ ತಾನು ಮೆಚ್ಚ್ಚಿಕೊಂಡ ಹುಡುಗಿಯೊಬ್ಬಳನ್ನ ಅವನದೇ ಶೈಲಿಯಲ್ಲಿ ವರ್ಣಿಸಿದ. ಒಂದೇ ವಾಕ್ಯದ ಆ ವರ್ಣನೆಯನ್ನ ನಾನು ಯಾವತ್ತೂ ಕೇಳಿರಲಿಲ್ಲ. ಒಳ್ಳೇ ಬನ್ನೂರು ಕುರಿ ಇದ್ದಂಗೆ ಅವ್ಳೆ ಮಗಾ...
Friday, April 24, 2009
ನಂಗಾನಾಚ್ ಶಿವರಾಮೇಗೌಡ ಮತ್ತು ತತ್ವ ಜ್ಞಾನಿ.
"ನೋಡಿ ಗೌಡ್ರೆ ಈ ಡೆಲ್ಲಿ ಐತಲ್ಲ ಇದು ದಿಲ್ ಮಾಡಕ್ಕೆ ಅಂತ ಕಟ್ಟಿರೋ ಊರು, ಈ ಊರಲ್ಲಿ ಬರಿ ಮಜಾ ಮಾಡೋ ಜನ ಇದಾರೆ ಬಿಟ್ರೆ ಇಲ್ಲಿ ಯಾವನೂ ತಿಕ ಬಗ್ಗಿಸಿ ಕೆಲಸ ಮಾಡಲ್ಲ" ಅಂತ ಇದ್ದಕ್ಕಿದಂತೆ ತಮ್ಮ ಟಿಪಿಕಲ್ ಮಂಡ್ಯ ಸ್ಟೈಲ್ ನಲ್ಲಿ ತಮ್ಮ ಮೂತಿ ಮುಂದು ಮಾಡುತ್ತಾ ಹೇಳಿದರು ಶಿವರಾಮೇ ಗೌಡ.
Thursday, April 23, 2009
ಜಾನಿ ಅಂದ್ರೆ ಸುಮ್ನೆ ಅಲ್ಲ, ಮಾಸ್ಟ್ರು ಗುರು ಮಾಸ್ಟ್ರು
ಈಗ ಬಂದ ಸುದ್ದಿ: ಹುಡುಗಿಯೊಬ್ಬಳನ್ನು ಹಾರಿಸಿಕೊಂಡು ಹೋದ ಕಾರಣಕ್ಕಾಗಿ .....ಅಲಿಯಾಸ್ ಕಾಮ್ಫ್ರೋ ಜಾನಿ ಯನ್ನು ಹಾಸನ ಪೊಲೀಸರು ಭಂದಿಸಿ , ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವನನ್ನ ಚೆನ್ನಾಗಿ ಥಳಿಸಿ ಚಿತ್ರಾನ್ನ ಮಾಡಿ ಜೈಲಿಗೂ ಕಳಿಸಿದರಂತೆ. ಯಾಕಂದ್ರೆ ಸ್ಟ್ರಿಕ್ಟ್ ಪೋಲಿಸ್ ಆಪಿಸರ್ರ್ ಒಬ್ಬನ ಮುಂದೆ ನನಗೆ SP , IG, DIG ಎಲ್ಲ ಗೊತ್ತು ಏನು ಕಿತ್ಕಳಕೆ ಆಗಲ್ಲ ಅಂದಂತೆ ಅದಕ್ಕೆ .
ಉಕ್ತಿ: ಯಾರನ್ನಾದರೂ ನಂಬು ನಿಮ್ಮಪ್ಪ ಪೋಲಿಸಾದರು ನಂಬಬೇಡ.
ಗೂಸಾ ಪ್ರಕರಣ
ಅಲ್ಲಿ ಓದುತ್ತಿದ್ದ ಮೂರೂ ವರ್ಷವೂ ನನ್ನ ವಾಸ್ತವ್ಯ ಮಹಾರಾಜ ಹಾಸ್ಟೆಲ್. ಅಲ್ಲಿ ನಾವು ಗೆಳೆಯರು ಮಾಡಿದ ಕೀಟಲೆಗಳಿಗೆ ಲೆಕ್ಕವೇ ಇಲ್ಲ ಅನ್ನಬೇಕು ಅಂದೊಂದು ದಿನ ನಾನು, ರಮೇಶ , ಅಭಿ, ಕಲ್ಲ, ದ್ಯಾಮಪ್ಪ ಸೇರಿ ರಾಮಸ್ವಾಮಿ ಸರ್ಕಲ್ ಕಡೆಗೆ ಹೋಗ್ತಾ ಇದ್ವಿ ಹಿಂದಿನ ದಿನ ನೋಡಿದ್ದ ಸಿನೆಮಾದ ಫೈಟ್ ಸೀನ್ ವಿವರಿಸುತ್ತಿದ್ದ ದ್ಯಾಮಪ್ಪ ಈಗ ಯಾವನಾದ್ರು ಸಿಕ್ಕರೆ, ಹಂಗೆ ಒದ್ದು ಬಿಸಾಕ್ಬಿಡ್ತ್ಹಿನಿ ಅಂತ ವಿವಿಧ ಬಂಗಿ ತೋರಿಸ್ತಾ ನಡೀತ್ತಿದ್ದ ನಾವು ಕೂಡ ಅವನಿಗೆ ಸಹಮತಿಸುತ್ತ ನಡಿತಿದ್ವಿ ಅಷ್ಟರಲ್ಲಿ ನಮ್ಮ ಗುಂಪಿನಲ್ಲಿ ವಿಚಿತ್ರ ಸ್ಟಂಟ್ ಗಳಿಗೆ, ಡೈಲಾಗ್ ಡಿಲೆವರಿಗೆ ಹೆಸರುವಾಸಿಯಾಗಿದ್ದ ರಮೇಶ ಸುಮ್ಮನಿರದೆ ಅದೇ ರಸ್ತೆ ಯಲ್ಲಿ ಹೋಗ್ತಿದ್ದ ಆಟೋ ಡ್ರೈವರ್ ಒಬ್ಬನಿಗೆ ಏನೋ ಸನ್ನೆ ಮಾಡಿಬಿಟ್ಟಿದ್ದ, ಅದನ್ನು ಕಂಡ ಆಟೋದವನು ಕೊಂಚವೂ ತಡವರಿಸದೆ ನಮ್ಮ ಕಡೆ ಬರಲಿಕ್ಕೆ ಗಾಡಿ ತಿರುಗಿಸಿದ ನಮ್ಮ ಟೀಂ ಜೋರಾಗಿರೋದನ್ನು ಅರಿತ ನಾನು ದೈರ್ಯದಿಂದ ಯಾಕೋ ಮಗನೆ ಅಂಥ ಕಿಚಾಯಿಸಿದೆ ಮೊದಲೇ ಮಾತುಕತೆಯಲ್ಲಿ ರಂಗಾಗಿದ್ದ ನಮ್ಮ ಟೀಂ ಏನಯ್ಯಾ ನಿಂದು ಅಂತ ಜಗಳಕ್ಕೆ ಇಳಿದೆ ಬಿಟ್ಟಿತ್ತು ಆಟೋ ಡ್ರೈವರ್ ಯಾಕ್ರೋ ಮಕ್ಕಳ ಗಾಂಚಾಲಿ ಮಾಡ್ತಿರಿ ಅಂಥ ಬಂದವನೆ ನೇರ ನನ್ನನೇ ಹಿಡುಕೊಂದು ತದಕತೊಡಗಿದ ತಕ್ಸಣಕ್ಕೆಗಾಬರಿಯಾದ ನಾನು ಅವನಿಗೆ ಏನೋ ಮಾಡ್ತಿಯ ಅಂಥ ಸಮರ್ತನೆ ಮಾಡ್ಕೋತ ನಮ್ಮ ಫೈಟರ್ ಗಳೆಲ್ಲ ಎಲ್ಲಿ ಹೋದ್ರು ಅಂಥ ನೋಡಿದರೆ ಧಡಿಯರಾಗಿದ್ದ ದ್ಯಾಮಪ್ಪ ಡೈಲಾಗ್ ಕಿಂಗ್ ರಮೇಶ್ ಎಲ್ಲ ಪರಾರಿ ಯಾಗಿಬಿಟ್ಟಿದ್ರು ಚಿತ್ರದುರ್ಗದ ಕಲ್ಲೇಶ ಅಲ್ಲೇ ಹತ್ತಿರವೇ ಇದ್ದ ಮರದ ಬದಿ ನಿಂತು ತಮಾಷೆ ನೋಡ್ತಿದ್ದ. ನಮ್ಮೆಲ್ಲ ಫೈಟರ್ ಗಳ ಮದ್ಯೆ ಕಂಪ್ರೋಮೈಸ್ ಸ್ಪೆಷಲಿಸ್ಟ್ ಆಗಿದ್ದ ಅಭಿನಂದ ಮಾತ್ರ , ಬಿಟ್ಬಿಡಿ ಸಾರ್ ಏನೋ ಹಾಸ್ಟೆಲ್ ಹುಡುಗ್ರು ತಪ್ಪು ಮಾಡವ್ರೆ ಅಂತ ಅವನು ಹಾಸ್ಟೆಲ್ ನವನಲ್ಲ ಯಾರೋ ಬೇರೆಯವನು ಅಂತ ನಂಬಿಸುತ್ತಾ ಅವ್ನಿಗೆ ಮಾತ್ರ ಒಂದೇ ಒದೆ ಬೀಳದಂತೆ ಜಾಗ್ರತೆ ವಹಿಸಿ ನನ್ನ ಮೇಲೆ ಬೀಳುತ್ತಿದ್ದ ಗೂಸ ತಪ್ಪಿಸಲು ಯತ್ನಿಸುತ್ತಿದ್ದ.
ಅಸ್ಟರಲ್ಲೇ ಆ ಅಸಾಮಿ ನನ್ನ ಬಟ್ಟೆ ಎಲ್ಲ ಹರಿದಿದ್ದ, ಅಭಿ ಮಾತ್ರ ಕಷ್ಟ ಪಟ್ಟು ನನ್ನನ್ನ ಅವನ ತೆಕ್ಕೆಯಿಂದ ಬಿಡಿಸಿದ. ಅದು ಇದು ಹೇಳಿ ಕಾಂಪ್ರೂ ಮಾಡಿಸಿದ. ಅಷ್ಟರಲ್ಲಿ ಎಲ್ಲೆಲೋ ಓಡಿಹೋಗಿದ್ದ ಫೈಟರ್ ಗಳೆಲ್ಲ ಹತ್ತಿರಕ್ಕೆ ಬಂದು ಅಯ್ಯೋ ಬಿಟ್ಬಿಡಿ ಸಾರ್ ನಿಮ್ಮಂತ ಡಾನ್ ಗಳೆಲ್ಲ ಸ್ಟುಡೆಂಟ್ ಮೇಲೆ ಕೈ ಮಾಡಬಾರದು ಏನೋ ಹುಡುಗ ತಪ್ಪು ಮಾಡವ್ನೆ ಅಂತ ನಾನು ಮಾಡದ ತಪ್ಪನ್ನ ನನ್ನ ತಲೆಗೆ ಕಟ್ಟಿದರು. ಅರೆ ನನ್ಮಕ್ಳ ಅಂತ ನಾನು ಅಲ್ಲಿಂದ ತಪ್ಪಿಸಿಕೊಂಡರೆ ಸಾಕಪ್ಪ ಅಂತ ಸುಮ್ಮನಾದೆ ಆಟೋದವನು ಯಾವನಾದ್ರು ಈ ಏರಿಯದಲ್ಲಿ ತಲೆ ಎತ್ತಿದರೆ ತಗದ್ ಬಿಡ್ತೀನಿ ಅಂತ ಅವಾಜ್ ಹಾಕ್ತ ಜಾಗ ಖಾಲಿ ಮಾಡಿದ ಕಳ್ಳರಂತೆ ನಿಂತ ನನ್ನ ಗೆಳೆಯರು ಮಗ ಹಾಗೆಲ್ಲ ಆಟೋ ಡ್ರೈವರ್ ಗಳನ್ನ ಟಚ್ ಮಾಡಬಾರದು ಅವರೆಲ್ಲ ಅಶೋಕ ಪುರಂ ಏರಿಯಾದೊರು ಅಂತ ಹೇಳಿದ್ರು ಮೊದಲೇ ಕಷ್ಟ ದಲ್ಲಿದ್ದ ನಾನು ತಪ್ಪಿಸಿ ಕೊಂಡರೆ ಸಾಕು ಅಂತ ಅನಿಸಿ ಹಾಸ್ಟೆಲ್ ಹುಡುಗರ ಯಾರೋ ನಮ್ಮ ಮೇಲೆ ಅದ ಹಲ್ಲೆ ನೋಡಿಲ್ಲ ಅಂತ ಖಾತರಿಪಡಿಸಿಕೊಂಡು ವಾಪಸ್ಸು ಬಂದೆವು .