Sunday, May 8, 2011

ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್




Dp Satish

Thanks God! Finally, Peepli live at Jantar Mantar is over!! Anna Hazare is an absolete man running a comic 'revolution' assisted by many dubious characters.


Snv Sudhir, Brijesh Kalappa, Anil Das and 8 others like this.

Rohan Gideon, hey DP, this is the first "comic" comment i have come across about AH. Enlighten us why you think so!



Dp Satish these people want power without any responsibility. let them fight elections and change the system.

.

Dp Satish this sathyagraha is a blackmail by some self styled 'activists'.

.

Anil Das The TRUTH is during the elections not even half of the crowd, which gathered across the country in support of this campaign will turnout to cast vote and elect a suitable representative.


Srinivasa Gowda ಡಿ.ಪಿ. ಪೀಪ್ಲೀ ಲೈವೇ ಬಿಡಿ, ನಾವು ಹಿಂಗೆ ಮಾತಾಡಿದ್ರೆ ನಮ್ಮನ್ನ ಸಿನಿಕರು ಅಂತ ಕರೆದುಬಿಡುವ
ಅಪಾಯ ಕೂಡ ಇದೆಯಪ್ಪಾ...

Raynuka Nidagundi I dont think whole issue was in greed of Power Dp, But sure Jan Lok pal Bill .. a bill that will make country free from Kalmadi, 2G scam, and all other corruptions hopefully..


Dp Satish What nonsense? Typical middle class thinking

Rohan Gideon
DP, in a democracy bringing a change only through electoral process is not the only modus operandi. Even the elected powers can be checked at any stage in any form. Therefore, one just cannot rule out mass movements as secondary to election...s especially when the electoral process itself is corrupt. The support AH could mobilise proves it. Our leaders are representatives voicing a common sentiment and not an individualistic, self- centred motives. I do not negate that some of them present in this movement would have gained mileage for their vested interests. This movement gave time and space for common masses to voice out their protest. The fact that the govt gave in speaks for itself. I am also a lil surprised by you "Typical Middle Class Thinking" comment!See more

Dp Satish Don't talk shit. Who are these people? All self styled 'activists'.

Dp Satish Both father and son (Bhushans) are on the panel. Worse than dynastic rule

Shehzad Poonawalla One simple question.. how do we demand accountability of those who claim to be our representatives at Jantar Mantar? They want the power without subjecting themselves to an election? I call it the Hazare Hazard!!! And now that they claim the entire country is with them they should contest an election and get all of us to vote for them!! Are they willing to? Or was this a publicity stunt?


Shehzad Poonawalla i agree with my best friend DP on this one completely. He has put the most stinging post on FB and has exposed the Bhushans and Kejrivals of the World. Satish I admire how you refuse to fall prey to this frenzy. Remind the


Shehzad Poonawalla, world that the Great Robespierre ended up on the same spike as King Louis XVI and Lenin and Mao were the organizers-in-chief of similar anarchist movements. We know what they ended up doing to their countries!!

Dp Satish. It tremble with fear and contempt.

Dp Satish Sorry. I tremble with fear and contempt.

Shehzad Poonawalla i agree buddy

Dp Satish Thank God! I don't belong to middle class and never had that middle class upbringing!!

ಮೇಲಿನ ಸಾಲುಗಳನ್ನು ಗಮನವಿಟ್ಟು ಓದಿದ್ದೀರ ಅಂತ ನಾನು ಭಾವಿಸಿ ಮುಂದುವರೆಯುತ್ತೇನೆ, ಸಿಎನ್ಎನ್ ಚಾನಲ್ಲಿನ ದಕ್ಷಿಣ ಭಾರತ ಬ್ಯೂರೋ ಮುಖ್ಯಸ್ಥ ಡಿ.ಪಿ ಸತೀಶ್ ತನ್ನ ಫೇಸ್ ಬುಕ್ ಅಕೌಂಟಿನಲ್ಲಿ ಹಾಕಿದ್ದ ಸ್ಟೇಟಸ್ ಮತ್ತು ಅದಕ್ಕೆ ಬಂದ ಕಾಮೆಂಟುಗಳನ್ನು ಡಿ.ಪಿ. ಸತೀಶ್ ನ ಅಪ್ಪಣೆ ಪಡೆಯದೇ ಎತ್ತಿಕೊಂಡಿದ್ದೇನೆ. ಅವತ್ತು ಅಣ್ಣಾ ಹಜಾರೆ ಅವರ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮುಗಿದಿತ್ತು, ಕೇಂದ್ರ ಸರ್ಕಾರ ಲೋಕಪಾಲ್ ಬಿಲ್ ರಚಿಸಲು ಕಮಿಟಿ ರಚನೆಗೂ ಒಪ್ಪಿಗೆ ಕೊಟ್ಟಿತ್ತು. ದೇಶದ ಪ್ರತಿ ಚಾನಲ್ಲು, ಪ್ರತಿ ಪತ್ರಿಕೆಯಲ್ಲೂ ಅಣ್ಣಾ ಹಜಾರೆಯದೇ ದ್ಯಾನ, ಮತ್ತೊಂದು ಸ್ವತಂತ್ರ ಹೋರಾಟ ಎನ್ನುವಂತ ಮಾತುಗಳು ಕೇಳಿಬರುತ್ತಿದ್ದವು, ಭಾರತದಲ್ಲಿ ಕ್ರಾಂತಿ ಸಂಭವಿಸುವ ಸೂಚನೆಗಳು ಕಾಣಿತ್ತಿವೆಯೇನೋ ಎಂಬಂತೆ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ, ವಿಡಿಯೋಗಳು, ಪ್ರತಿಕ್ರಿಯೆಗಳು, ಹೋರಾಟಕ್ಕೆ ಬೆಂಬಲ ಸಿಗುತ್ತಿತ್ತು. ಆಗತಾನೆ ಸಂಭವಿಸಿದ್ದ ಈಜಿಪ್ಟ್ ಕ್ರಾಂತಿಯ ಗುಂಗು ಹಜಾರೆ ಹೋರಾಟಕ್ಕೂ ಅಂಟಿಕೊಂಡತೆ ಭಾಸವಾಗುತ್ತಿತ್ತು.

ಅದೇ ಹೊತ್ತಿಗೆ ಡಿ.ಪಿ. ಸತೀಶ್ ನಿಟ್ಟುಸಿರು ಬಿಟ್ಟವರಂತೆ Thanks God! Finally, Peepli live at Jantar Mantar is over!! Anna Hazare is an absolete man running a comic 'revolution' assisted by many dubious characters. ಅಂತ ಬರೆದುಬಿಡೋದೆ, ಆ ಕ್ಷಣ ನಾನು ದಂಗಾದೆ. ಇದೇನಪ್ಪಾ ಇಡೀ ದೇಶ ಉಘೇ ಉಘೇ ಅಂತ ಊಳಿಡುತ್ತಿದ್ದರೆ ಸತೀಶ್ ಹೀಗೆ ಬರೆದನಲ್ಲಾ ಅಂತ. ಯಾಕಂದರೆ ಮೂರುದಿನಗಳಲ್ಲಿ ಜಂತರ್ ಮಂತರ್ ನಲ್ಲಿ ನಡೆದಿದ್ದೆಲ್ಲ ಒಂದು ಪ್ರಹಸನ ಅದು ರಿಯಲ್ ಅಲ್ಲ ಅಂತ ಸತೀಶ್ ಗೆ ಅನ್ನಿಸಿದೆ, ಹಾಗಂತ ನನ್ನಂತ ಕೆಲವರಿಗೂ ಅನ್ನಿಸಿದ್ದರು ಅದನ್ನ ಹೇಳಲಿಕ್ಕೆ ಆಗದೆ ನಾವು ಬಾಯಿಮುಚ್ಚಿಕೊಂಡೇ ಇದ್ದೆವು. ಆದರೆ ಸತೀಶ್ ಯಾವಾಗ ಇಡೀ ಪ್ರಕರಣವನ್ನು ಪೀಪ್ಲಿ ಲೈವ್ ಅಂತ ಕರೆದರೋ ಅಹಾ ಎಂತಾ ದೈರ್ಯ ಈ ಮನುಷ್ಯನಿಗೆ ಅಂತ ಅನ್ನಿಸಿತು.

ಅಣ್ಣಾ ಹಜಾರೆಯವರಿಗೆ ಸಿಕ್ಕಪ್ರೋತ್ಸಾಹ ಹೇಗಿತ್ತು ಅಂದರೆ ಉಪವಾಸ ಮುಗಿಸಿ ಎದ್ದ ಕೂಡಲೆ ಭಾರತದಿಂದ ಭ್ರಷ್ಟಾಚಾರ ಪರಾರಿಯಾಗುತ್ತದೆ ಅನ್ನುವ ಸ್ವರೂಪದಲ್ಲಿತ್ತು, ಅಣ್ಣಾಹಜಾರೆ ಯಾರು ಅಂತ ತಿಳಿದುಕೊಳ್ಳದ ಮಂದಿಯೆಲ್ಲ ಹಾಜಾರೆ ಹಜಾರೆ ಅನ್ನತೊಡಗಿದರು, ಯುವಕರಂತೂ ಬಾರಿಸಂಖ್ಯೆಯಲ್ಲಿ ಮನೆಯಲ್ಲೇ ಕುಳಿತು 'I Support anna hazare' ಎಂಬ ಕಡೆ like ಬಟನ್ ಒತ್ತುತ್ತಿದ್ದರು.

ಅಣ್ಣಾ ಹಜಾರೆ ಅವರು ಉಪವಾಸ ಕುಳಿತಿದ್ದ ಜಂತರ್ ಮಂತರ್ ನಲ್ಲಿ ಇಂತ ಎಷ್ಠು ಚಳುವಳಿಗಳು ನಡೆದಿವೆಯೋ ಗೊತ್ತಿಲ್ಲ, ದೆಹಲಿಯನ್ನು ಬಲ್ಲ ಮಂದಿಗೆ ಮಾತ್ರ ಗೊತ್ತು ಅಂದೊಂದು ಸ್ಟ್ರೈಕ್ ಮಾಡಲಿಕ್ಕೆ ಇರುವ ಜಾಗ ಅಂತ. ದಿನವೊಂದಕ್ಕೆ ನೂರಾರು ಪ್ರತಿಭಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ ಎಷ್ಠಕ್ಕೆ ಫಲ ಸಿಕ್ಕಿದೆಯೋ ಗೊತ್ತಿಲ್ಲ. ಕೇವಲ ಲೋಕಪಾಲ್ ಬಿಲ್ ಬಂದ ಮಾತ್ರಕ್ಕೆ ದೇಶದಲ್ಲಿ ಭ್ರಷ್ಟಾಚಾರ ತೊಲಗುತ್ತದೆ ಎಂಬುದನ್ನು ನಂಬಲಿಕ್ಕೆ ಸಾದ್ಯವಿಲ್ಲ. ಭ್ರಷ್ಟವಾಗಿರುವುದು ನಮ್ಮ ಮನಸುಗಳು ಎಂಬ ಸತ್ಯ ಯಾಕೆ ನಮಗೆ ಅರ್ಥವಾಗೋಲ್ಲ ಅಂತ.
ಹಾಗೆ ನೋಡಿದರೆ ಲೋಕಪಾಲ್ ಬಿಲ್ ಸಿದ್ದವಾದರೂ ಅದು ಪಾರ್ಲಿಮೆಂಟಿನಲ್ಲಿ ಪಾಸಾಗುತ್ತದೆ ಎಂಬ ಬಗ್ಗೆ ನನಗೆ ನಂಬಿಕೆ ಬರುತ್ತಿಲ್ಲ ಯಾಕಂದರೆ ತಮ್ಮ ಮೇಲೆಯೇ ಭ್ರಹ್ಮಾಸ್ತ್ರ ಬಿಟ್ಟುಕೊಳ್ಳುವುದಕ್ಕೆ ನಮ್ಮ ರಾಜಕಾರಣಿಗಳಿಗೆ ಹುಚ್ಚುಹಿಡಿದಿಲ್ಲ. ನೀವೇ ಆಯ್ಕೆ ಮಾಡಿದ ಮಂದಿ ಅಲ್ಲವಾ ಎಂಪಿಗಳು. ಹಾಗಾದರೆ ಅವರನ್ನು ಆಯ್ಕೆಮಾಡಿದ ನೀಮ್ಮದೂ ತಪ್ಪಿದೆ ಅಲ್ಲವೇ.

ಡೆಮಾಕ್ರಸಿಯಲ್ಲಿ ಎಲ್ಲ ಸಾದ್ಯತೆಗಳೂ ಸಾದ್ಯ ಎಲ್ಲಿವರೆಗೆ ಜನರ ಮದ್ಯದಿಂದ ಅಭಿಪ್ರಾಯ ಹೊರಡುವುದಿಲ್ಲವೋ ಅಲ್ಲಿವರೆಗೆ ಯಾವುದಪ ಸಾದ್ಯವೇ ಇಲ್ಲ, ಇದೇ ಸತ್ಯಾಗ್ರಹಿಗಳು ಯಾಕೆ ಭಾರತದಲ್ಲಿ ಅಣ್ಣಾ ಹಜಾರೆ ಪಾರ್ಟಿ ಕಟ್ಟಬಾರದು. ಇಡೀ ದೇಶವೆ ಅವರಿಗೆ ಬೆಂಬಲಿಸುವುದಾದರೆ ಬೆಂಬಲಿಸಲಿ ಬಿಡಿ. ಬಾಬಾ ರಾಮದೇವ್ ದೇ ಒಂದು ಪಾರ್ಟಿ ಇದೆಯಲ್ಲ ದೇಶಪೂರ್ತಿ ಚುನಾವಣೆಗೆ ನಿಲ್ಲಲಿ ಬಿಡಿ.

ಭ್ರಷ್ಟಾಚಾರದ ವಿರುದ್ದ ಮಾತಾಡುವುದು ಯಾವರೀತಿ ಸಿನಿಕತನವೂ ಅದರ ಪರವಾಗಿ ಮಾತಾಡುವುದು ಸಿನಿಕತನವೇ, ಬಾರತಲ್ಲಿ ಯಾವ ಗಳಿಗೆಯಲ್ಲಿ ಗ್ಲೋಬಲೈಸೇಶನ್ನಿಗೆ ಒಪ್ಪಿಗೆಕೊಟ್ಟೆವೋ ಅವತ್ತಿಂದಲೇ ಶುರುವಾದ ಮಟೀರಿಯಲಿಸಂ ಇದಕ್ಕೆಲ್ಲ ಕಾರಣ, ಎಲ್ಲಿವರೆಗೆ ಸಾಮಾನ್ಯ ಜನರ ಆಸೆಗಳಿಗೆ ಕಡಿವಾಣ ಇಲ್ಲವೋ ಅಲ್ಲಿವರೆಗೆ ಭ್ರಷ್ಟತೆ ಇದ್ದೇ ಇರುತ್ತೆ.
ಈಗ ಹೇಳಿ ಅಣ್ಣಾ ಹಜಾರೆ ಪ್ರತಿಭಟನೆಯನ್ನು ಎಷ್ಟು ಮಂದಿ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸರ್ಕಾರಗಳ ಉನ್ನತ ಅಧಿಕಾರಿಗಳು ಬೆಂಬಲಿಸಿದರು. ಟಿವಿ ಚಾನಲ್ಲುಗಳು ಪೀಪ್ಲಿ ಲೈವ್ ಮಾಡಿದ ಮಾತ್ರಕ್ಕೆ ಬದಲಾವಣೆ ಸದ್ಯವಾಗುತ್ತದೆ ಅನ್ನೊದು ಖಂಡಿತಾ ಸುಳ್ಳು. ಕೇವಲ ಕಾನೂನು ಭ್ರಷ್ಟಾಚಾರ ನಿಯಂತ್ರಸುತ್ತದೆ ಅನ್ನೊದಾರದೆ ನಮ್ಮಲ್ಲಿ ಕೊಲೆಗಳು, ಅತ್ಯಾಚಾರಗಳು ನಿಂತುಹೊಗಬೇಕಿತ್ತಲ್ಲವೇ..

ಅದೆಲ್ಲ ಇರಲಿ ಅಣ್ಣಾ ಹಜಾರೆಯನ್ನು ಟೀಕಿಸುವುದು ನನ್ನ ಗುರಿಯಲ್ಲ ಅವರ ಉದ್ದೇಶ ಸರಿಯಾಗಿದೆ ಆದೇ ಉದ್ದೇಶ ಸರ್ಕಾರಗಳಿಗೂ ಮನವರಿಗೆ ಮಾಡಿಸುವ ಜನಾಂದೋಲನ ರೂಪಿಸಬೇಕೆ ಹೊರತು ಬ್ಲಾಕ್ ಮೇಲ್ ಮಾಡುವುದು ನನಗಂತೂ ಸರಿಕಾಣಲಲಿಲ್ಲ.

ಡಿ.ಪಿ. ಸತೀಶ್ ಅಂತವರಿಂತ ನನ್ನಂತವರು ಕಲಿಯಬೇಕಾದ್ದು ಬಹಳಷ್ಟು ಇದೆ, ಪತ್ರಕರ್ತರಾದವರು ಜನಾಭಿಪ್ರಾಯದ ಅಲೆಯಲ್ಲಿ ಕೊಚ್ಚಿಹೋಗಬಾರದು ಪ್ರತಿಯೊಂದು ಘಟನೆಗೂ ಬಿನ್ನನೆಲೆಯಲ್ಲಿ ಸತ್ವಗಳಿರುತ್ತವೆ ಅವುಗಳನ್ನು ಅರಿಯುವ ಕೆಲಸ ನಮ್ಮದು, ನನ್ನಂತೆ ಹಲವು ಪತ್ರಕರ್ತರು ಹೇಳಲಾಗದ್ದನ್ನು ಡಿ.ಪಿ.ಸತೀಶ್ ಹೇಳಿದ್ದ ಹರಿಯುವ ನೀರಿಗೆ ಎದುರಾಗಿ ಈಜೀದಷ್ಟು ಕಷ್ಟ. ಆದರೆ ತನ್ನ ಅಭಿಪ್ರಾಯ ಹೇಳಲು ಯಾರ ಹಂಗೇಕೆ ಎಂಬುದು ಸತೀಶ್ ನಿಲುವು.

ಅಂದಹಾಗೆ ಡಿ.ಪಿ.ಸತೀಶ್ ನಮ್ಮವರೇ ಶಿವಮೊಗ್ಗದವರು, ಸಿಎನ್ಎನ್ ಐಬಿಎನ್ ಚಾನಲ್ಲಿಗೆ ಇಡೀ ದಕ್ಷಿಣ ಭಾರತದ ಪ್ರತಿಯೊಂದು ಘಟನೆಯನ್ನು ರಾಷ್ಟ್ರಕ್ಕೆಲ್ಲ ಹೇಳಬೇಕಾದ ಕಾಯಕ ಅವರದು, ರಾಜದೀಪ್ ಸರ್ದೇಸಾಯಿಗೆ ಗೆ ಆತ್ಮಿಯ, ಕಬ್ಬಿಣದ ಕಂಠದ ಸತೀಶ್ ಜೊತೆ ಮಾತಾಡೋದೆ ಚೆಂದ.

Friday, October 1, 2010

ಡಿಸ್ನಿ ಲ್ಯಾಂಡ್, ವಂಡರ್ ಲ್ಯಾಂಡ್ ಎಲ್ಲಾ ಇಲ್ಲೇ ಐತಲ್ಲಾ..




ಶಂಕರಲಿಂಗೇಗೌಡರಿಗೆ ನಕಶಿಕಾಂತ ಕೋಪ ಬಂದಾಗ ಇಲ್ಲಾ ನಕಶಿಕಾಂತ ಮೂಡಿನಲ್ಲಿದ್ದಾಗ ಸಂಸ್ಕೃತ ಬಾಷೆ ಹೊರಡುತ್ತದೆ ಅಂತ ಶಂಕರಲಿಂಗೇಗೌಡರನ್ನು ಬಲ್ಲವರಿಗೆಲ್ಲಾ ಗೊತ್ತು, ಮೊನ್ನೆ ತಮಗೆ ಸಚಿವ ಸ್ಥಾನ ಸಿಕ್ಕದೇ ಹೋದಾಗ ಮಾತನಾಡಿದರಲ್ಲ ಅದು ಆದುನಿಕ ಸಂಸ್ಕೃತ.
ಕಳ್ಳರು, ಸುಳ್ಳರು ಲೋಪರ್ ಗಳಿಗೆ ಇದು ಕಾಲ ನನ್ನ ಬಳಿ ಸೂಟ್ ಕೇಸ್ ಇಲ್ಲ, ಅದಕ್ಕೆ ನನಗೆ ಮಂತ್ರಿಗಿರಿ ಸಿಕ್ಕಿಲ್ಲ. ಅಂತ ಒಳ್ಳೇ ಸಂಸ್ಕೃತ ಶ್ಲೋಕದ ಧಾಟಿಯಲ್ಲಿ ಶಂಕರಲಿಂಗೇಗೌಡರು ತಮ್ಮ ಆಕ್ರೋಶ ಹೊರಹಾಕಿದ್ದು ಟಿವಿಯಲ್ಲಿ ಕಂಡೊಡನೆ ಎಲ್ಲರಿಗೂ ಅಹುದಹುದು ಅಂತ ಅನ್ನಿಸಿರಲಿಕ್ಕೆ ಸಾಕು.

ಹಾಗೆ ನೋಡಿದರೆ ಎಲ್ಲಾ ಕಾಲದಲ್ಲೂ ಕರ್ನಾಟಕದ ರಾಜಕಾರಣಿಗಳು ಭ್ರಷ್ಠಾಚಾರವನ್ನು ಅವರವರ ಯೋಗ್ಯತೆಗೆ ತಕ್ಕಂತೆ ಮಾಡಿಕೊಂಡು ಬಂದವರೇ ಇಲ್ಲಿ.. ಯಾರೂ ಸಾಚಾಗಳಲ್ಲ ಅಥವಾ ಅಂತ ಶೀಲವಂತ ರಾಜಕಾರಣ ಜಗತ್ತಿನಲ್ಲಿ ಎಲ್ಲಿಯಾದರೂ ಇದೆ ಅಂತಲೂ ಅನಿಸುವುದಿಲ್ಲ,

ಆದರೆ ರಾಜ್ಯದಲ್ಲಿ ಆಡಳಿತದಲ್ಲಿರುವ ಈಗಿನ ಸರ್ಕಾರ ಅದ್ಯಾವ ರೀತಿಯಲ್ಲಿ ಜನರ ಮದ್ಯೆ ನಗ್ನವಾಗುತ್ತಿದೆ ಅನ್ನೊದು ಕುತೂಹಲ ಹುಟ್ಟಿಸುತ್ತಿರುವ ಸಂಗತಿ.

ಮೊನ್ನೆ ಶಾಸಕರ ಭವನದಲ್ಲಿ ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತನೊಬ್ಬ ತೀರಾ ತಮಾಶಿ ದನಿಯಲ್ಲಿ ಹೇಳುತ್ತಿದ್ದ ಸಾರ್ ದೇವರಾಣೆಗೂ ಮುಂದೆ ಬರೋ ಇನ್ನು ಮೂರು ಸರ್ಕಾರಗಳಿಗೂ ಒಂದೇ ಒಂದು ಕೆಲಸ ಅಂತ ಉಳಿಸ್ತಾ ಇಲ್ಲಾ ಸಾರ್ ಎಲ್ಲಾ ಬಳಿದು ಬಾಯ್ಗೆ ಹಾಕ್ಕೊಂತಾವರೆ, ಯಾವ ಸರ್ಕಾರಿ ಕಚೇರಿಯನ್ನು ರಿನೋವೇಟ್ ಮಾಡದೆ ಬಿಡ್ತಾ ಇಲ್ಲಾ ಸಾರ್, ಕಾಸು ಕಸದಲ್ಲಿ ಇದೆ ಅಂದ್ರೂ ಬಿಡದೇ ಬಾಯಿ ಹಾಕ್ತಾ ಇದಾರೆ. ಕಾಸು ಕೊಟ್ರೆ ಸಿಎಂ ಮನೇಲಿ ನಡೀದಿರೋ ಕೆಲಸನೇ ಇಲ್ಲ.
ನಿಮ್ಗೆ ಯಾವ ಜಾಗ ಬೇಕು ಹೇಳಿ ಡೀ ನೋಟಿಪೈ ಮಾಡಿಸಿಕೊಡ್ತಾರೇ ಅಂದ, ನಾನು ಹೌದಾ ಹಾಗಾದ್ರೆ ವಿಧಾನಸೌದ ಡೀ ನೋಟಿಪೈ ಮಾಡಿಕೊಡಪ್ಪಾ ರಾಜ್ಯಕ್ಕಾದರೂ ಒಳ್ಳೇದಾಗುತ್ತೆ ಅಂದೆ ಆತ ಸುಮ್ಮನಾದ.

ಸಾಮಾನ್ಯ ಜನರಿಗೆ ಯಾವ ಸರ್ಕಾರದ ಬಗ್ಗೆ ಆದರೂ ಸಣ್ಣ ಕೋಪ, ಅಕ್ರೋಶ ಯಾವಾಗಲೂ ಚಾಲ್ತಿಯಲ್ಲಿರುವುದು ಸಹಜ ಆದರೆ ಈಗಿನ ಸರ್ಕಾರದ ಬಗ್ಗೆ ಸಣ್ಣ ಅಕ್ರೋಶಕ್ಕಿಂತಲೂ ಅಸಹನೆ ಮೂಡುತ್ತ್ರಿದೆ, ಮುಖ್ಯಮಂತ್ರಿಯಾದಿಯಾಗಿ ಕ್ಯಾಬಿನೆಟ್ ನಲ್ಲಿ ಕಳಂಕ ಇಲ್ಲದವರೇ ಇಲ್ಲ ಅನ್ನಬೇಕು ಕಳಂಕ ಹೊತ್ತುಕೊಳ್ಳದೇ ಹೋದವರು ಯೂಸ್ ಲೆಸ್ ಎಂಬ ಪಟ್ಟವನ್ನು ಭದ್ರವಾಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ಅವರ ಸಹೋದ್ಯೋಗಿಗಳ ಬಗ್ಗೆ ಇರುವ ಸಹನೆ ಕಂಡರೆ ಮುಖ್ಯಮಂತ್ರಿಗಳೂ ಎಲ್ಲದರಲ್ಲೂ ಪಾಲುದಾರರೇ ಇದ್ದಾರೆ ಅಂತ ಡಾಳಾಗಿ ಕಾಣುತ್ತಿದೆ, ಮುಖ್ಯಮಂತ್ರಿಗಳ ಇಬ್ಬರು ಗಂಡು ಮಕ್ಕಳು ಗಾಂಧಿನಗರ, ಕುಮಾರಪಾರ್ಕ್ ನ ಕೆಲವು ಹೋಟೆಲ್ ಗಳಲ್ಲಿ ಟಿಕಾಣಿ ಹೂಡಿ ಸಂಪೂರ್ಣ ಡೀಲಿಂಗ್ ಗಳಲ್ಲಿ ಬಾಗಿಯಾಗಿದ್ದಾರೆ ಎಂಬುದು ರಾಜಕಾರಣಿಗಳ ವಲಯದಲ್ಲಿ ಬಾಯಿಮಾತಿನ ವಸ್ತುವಾಗಿದೆ, ಪಕ್ಷಾತೀತವಾಗಿ ಯಾವ ಪಕ್ಷದವರ ಕೆಲಸಗಳಾದರು ದುಡ್ಡುಕೊಟ್ಟರೆ ಸರಾಗ ಎಂಬುದು ರಾಜಕೀಯದಲ್ಲಿರುವರಿಗೆ ನಿರಾಳ ತರಿಸುತ್ತಿರುವ ವಿಶಯ.

ರಾಜಕಾರಣಿಗೆ ಎಮ್ಮೆ ಚರ್ಮ ಇರುತ್ತೆ ನಿಜ ಆದರೆ ಲೋಕಾಯುಕ್ತರ ಕೈಗೆ ಸಿಕ್ಕಿಕೊಂಡರೂ ನೈತಿಕ ಹೊಣೆ ಅಂತ ಒಂದು ಇದೆ ಎಂಬುದು ಬಿಜೆಪಿಯ ಜನಕ್ಕೆ ಅರ್ಥ ಆಗುವುದಿಲ್ಲ ಅಂದರೆ ಅಚ್ಚರಿಯ ಸಂಗತಿ, ಬಹುಷ ಆರಂಭದಿದಲೂ ಗಣಿ ರೆಡ್ಡಿಗಳಿಂದ ಪ್ರಭಾವಿತರಾಗಿರುವ ಯಡಿಯೂರಪ್ಪ ಸರ್ಕಾರದ ಶಾಸಕರು ಹಣವಿದ್ದರೆ ನಮ್ಮನ್ನು ಯಾರೂ ಏನೂ ಮಾಡುವುದಕ್ಕೆ ಸಾದ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದ್ದಾರೆ, ಅಧಿಕಾರ ಇರುವಷ್ಠು ದಿನ ಆದಷ್ಟು ಲಪಟಾಯಿಸಿ ನಂತರ ಅದೇ ಹಣದಲ್ಲಿ ಚುನಾವಣೆ ಗೆದ್ದರೆ ಆಯಿತಲ್ಲ ಎಂಬ ನಿರ್ದಾರಕ್ಕೆ ಬಂದಂತೆ ಕಾಣುತ್ತೇ, ಯಾಕಂದರೆ ಮಾರ್ಗದರ್ಶನ ಮಾಡಬೇಕಾದವರೇ ಮಾರ್ಗ ಬಿಟ್ಟರೆ ಆಗುವ ಅಪಾಯ ಇಂದು ನಮ್ಮ ಕಣ್ಣ ಮುಂದೇ ಇದೆ. ಕಟ್ಟಾಸುಬ್ರಮಣ್ಯ ನಾಯ್ಡು ಮತ್ತು ಅವರ ಮಗ ನೇರಾ ನೇರಾ ಸಿಕ್ಕಿಕೊಂಡರೂ ಮರ್ಯಾದೆ ಬಿಟ್ಟಂತೆ ಓಡಾಡುತ್ತಿದ್ದಾರೆ.

ಮುಖ್ಯಮಂತ್ರಿಗಳ ಮಗ ಬಿ.ವೈ.ರಾಘವೇಂದ್ರ ಡಿನೋಟಿಪಿಕೇಷನ್ ಹಗರಣದಲ್ಲಿ ಸಿಕ್ಕಿಕೊಂಡರೇ ಅದು ಮುಖ್ಯಮಂತ್ರಿಗಳಿಗೆ ಒಡ್ಡಿರುವ ಅಗ್ನಿ ಪರೀಕ್ಷೆಯಂತೆ, ಇಂತಾ ಅಗ್ನಿ ಪರೀಕ್ಷೆಗಳನ್ನು ಎದುರಿಸೋದು ಅವರಿಗೆ ವಾಡಿಕೆ ಆಗಿರೋದರಿಂದ ಈ ಪರೀಕ್ಷೆಯಿಂದ ಜಯಬೇರಿ ಬಾರಿಸಿಕೊಂಡೇ ಬರತ್ತಾರಂತೆ.ಅಬ್ಬಾಬ್ಬಾ ಕಳೆದ ಮೂರು ವರ್ಷಗಳಿಂದ ನಡೆದ ಸರ್ಕಾರದ ಡ್ರಾಮಾಗಳನ್ನೆಲ್ಲಾ ಯಥಾವತ್ತಾಗಿ ದಾಖಲು ಮಾಡಿದರೆ. ಕೆಲ ವರ್ಷಗಳನಂತರ ಕಾರ್ಟೂನ್ ನೆಟ್ ವರ್ಕ್ಗ್ ಗಳಿಗೆ ಸಕ್ಕತ್ ವಸ್ತುಗಳು,

ಸರ್ಕಾರದಲ್ಲಿ ಯಾರಿಲ್ಲ ಹೇಳಿ, ಮುತ್ತು ಕೊಟ್ಟರೂ ಮಂತ್ರಿಗಳಾದವರು, ರೇಪು ಮಾಡಿದರೂ ಆಸ್ಪತ್ರ್ಯೆಲ್ಲಿ ಇರುವವರು, ಕೈ ಕತ್ತರಿಸುವವರು, ರೌಡಿಗಳು, ಡಾನ್ ಗಳು, ಡೋಂಗಿಗಳು, ಸುಳ್ಳರು, ಸಂಸ್ಕೃತ ಪಂಡಿತರು,ಸಾದ್ವಿಗಳು, ಪುತ್ರ ವ್ಯಾಮೋಹಿಗಳು, ಪರಸ್ತ್ರಿ ಪೀಡಕರು, ಕಳ್ಳರು, ಲೂಟಿಕೋರರು ಎಲ್ಲಾ ಕಲೆಗಳಲ್ಲಿ ಪಾರಂಗತ ರಾದ ಮಂದಿಯ ಒಟ್ಟು ಮೊತ್ತವೇ ಬಿಜೆಪಿ ಸರ್ಕಾರ.

ಆಳುವ ಮಂದಿಯಲ್ಲಿ ಇದ್ದವರೆಲ್ಲ ಬಂಢರಾದರೆ ಪರಿಸ್ಥಿತಿ ಹೇಗಿರುತ್ತೆ ಅನ್ನೊದಕ್ಕೆ ಈ ಸರ್ಕಾರವೇ ಹಸಿ ಹಸಿ ಉದಾಹರಣೆ ವಂಡರ್ ಲ್ಯಾಂಡ್ ಡಿಸ್ನಿಲ್ಯಾಂಡ್ ಎಲ್ಲಾ ಲ್ಯಾಂಡ್ ಇಲ್ಲೇ ಇದೆಯಲ್ಲಾ.

Wednesday, June 9, 2010

ಆರ್ಥಿಕ ತಜ್ಞ ಆರ್.ವಿ.ದೇಶಪಾಂಡೆಗೆ ಪ್ರಧಾನಿ ಹುದ್ದೆ




ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರನ್ನ ಕಾಂಗ್ರೇಸ್ ಅಧಿನಾಯಕಿ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಬದಲಿಗೆ ರಾಷ್ಠ್ರದ ಪ್ರಧಾನ ಮಂತ್ರಿಯಾಗಿ
ನೇಮಿಸಬೇಕೆಂದು ನಾನು ಈ ಮೂಲಕ ಒತ್ತಾಯ ಪಡಿಸುತ್ತೇನೆ. ಯಾಕೆಂದರೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಲ್ಲಬೇಕಾಗಿದ್ದ ಸುಮಾರು ಎಪ್ಪತ್ತೈದು ಲಕ್ಷ ರೂ ಹಣವನ್ನು


ಕೆನರಾ ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ಸಂಪಾದಿಸುತ್ತಿದ್ದಾರೆ. ಆ ಮೂಲಕ ನೆರೆ ಸಂತ್ರಸ್ತರ ಪಾಲಿನ ಆರಾದ್ಯ ದೈವವಾಗಿ ಹೊರ ಹೊಮ್ಮಿದ್ದಾರೆ.
ಇದೇ ಆದ ವಿಚಾರವನ್ನು ಮುಂದಿಕ್ಕಿಕೊಂಡು, ದೇಶದ ಆರ್ಥಿಕ ಪ್ರಗತಿ ಮತ್ತು ಜನತೆಯ ಭವಿಷ್ಯದ ಭದ್ರತೆ ಹಿತ-ದೃಷ್ಠಿಯಿಂದ ಆರ್ .ವಿ. ದೇಶಪಾಂಡೆ ಅವರನ್ನು ಪ್ರಧಾನಿ ಮಾಡಿ ಪ್ರತಿವರ್ಷ ಬಜೆಟ್
ಮಾಡುವ ಬದಲು ಸರ್ಕಾರದ ಸಾವಿರಾರು ಕೋಟಿ ಹಣವನ್ನು ಬಡ್ಡಿಗೆ ಬಿಟ್ಟು ದೇಶದ ಭವಿಷ್ಯ ರೂಪಿಸುವ ಕನಸುಗಾರ ನಾಯಕ ಅವರಾಗಿದ್ದಾರೆ.

ಆದೂ ಅಲ್ಲದೆ ತಿನ್ನಲು, ಉಡಲು ಬಟ್ಟೆ ಬರೆ ಇಲ್ಲದ ಕಾಂಗ್ರೆಸ್ ಕಾರ್ಯಕರ್ತರಿಗೆ ಅತ್ಯಂತ ಮುತುವರ್ಜಿಯಿಂದ ನೆರೆ ಪರಿಹಾರ ನಿಧಿಯಿಂದ ಹಣ ತೆಗೆದು ಟೀಶರ್ಟ್ ಗಳನ್ನು ನೀಡಿ
ಬಡ ಕಾಂಗ್ರೇಸ್ ಸಂಸ್ತ್ರಸ್ತರಿಗೆ ನೆರವಾಗಿದ್ದಾರೆ ಆ ಮೂಲಕ ಕಾಂಗ್ರೇಸ್ ಕಾರ್ಯಕರ್ತರ ಪಾಲಿನ ಆಶಾಕಿರಣ ಆಗಿದ್ದಾರೆ.
ಅಲ್ಲದೆ ದೇಶದಲ್ಲೇ ಅತ್ಯಂತ ಹಳೆಯ ಮತ್ತು ಬಡ ಪಾರ್ಟಿಯಾದರೂ ಸ್ವಾಬಿಮಾನ ಬಿಡದೇ ಪಾರ್ಟಿ ಕಚೇರಿಯ
ನೌಕರರ ತಿಂಗಳ ಸಂಬಳ ಮತ್ತು ಇತರ ಬಾಬ್ತುಗಳನ್ನು ಪರಿಹಾರ ಸಂಗ್ರಹಿಸಿ ನಿಭಾಯಿಸಿ ಸ್ವಾಭಿಮಾನ ಮೆರೆದಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ನಡೆದು ಪಾರ್ಟಿ ಚೆನ್ನಾಗಿದ್ದರೆ ತಾನೆ ನಾವು ಚೆಂದ, ಪಾರ್ಟಿ ಕಚೇರಿ ಚಂದ್ದಾಗಿದ್ದರೆ ತಾನೆ ಅಂದ, ಅನ್ನುವ ನಿಷ್ಕಲ್ಮಶ ಭಾವನೆಯಿಂದ ಪಾರ್ಟಿ ಕಚೇರಿಗೆ ಟೈಲ್ಸಗಳನ್ನು ಪರಿಹಾರ ನಿಧಿಯಿಂದ
ಹಾಕಿಸಿದ್ದಾರೆ.

ಕಾಂಗ್ರೇಸ ಲೀಡರುಗಳು ಉತ್ತರ ಕರ್ನಾಟಕದ ನೆರೆ ಪೀಡಿತರನ್ನು,ಹಸಿದವರನ್ನು ಖುದ್ದು ಭೇಟಿ ಮಾಡಿ ಅವರನ್ನು ತಮ್ಮ ಅಮೃತ ಹಸ್ತದಿಂದ ನೇವರಿಸಿ ಸಾಂತ್ವನ ಹೇಳಲಿಕ್ಕಾಗಿ ದಶ ದಿಕ್ಕುಗಳಲ್ಲಿ ಪ್ರಯಾಣ ಮಾಡಿದ್ದಾರೆ
ವಿಮಾನ, ಕಾರು ಇತ್ಯಾದಿಗಳಲ್ಲಿ ಸಂಚರಿಸಿದ್ದಾರೆ. ತಮ್ಮ ಪಕ್ಷದ ನಾಯಕರನ್ನು ದೆಹಲಿಗೆ ಕರೆದೊಯ್ದು ಹಸಿದವರ ಪರವಾಗಿ ಲಾಭಿ ಮಾಡಿಸಿದ್ದಾರೆ.

ಖರ್ಚಿಗೆ ಕಾಸಿಲ್ಲದ ಕಾಂಗ್ರೆಸ್ ನಾಯಕರ ಕಿಸೆಗೆ ಭಾರ ಬೀಳಲೇ ಬಾರದು ಅಂಬೋ ಕಾರಣಕ್ಕಾಗಿ ತಾವು ಹಾಗು ತಮ್ಮ ಬಡ ಕಾರ್ಯಕರ್ತರು ಬೀದಿ ಬೀದಿಗಳಲ್ಲಿ ತೆರಳಿ ಸಂಗ್ರಹಿಸಿದ್ದ ಹಣವನ್ನು ಉತ್ತಮ
ಮನಸಿನಿಂದ ಬಳಸಿದ್ದಾರೆ.

ಬಿಜೆಪಿ ಸರ್ಕಾರದ ವೈಪಲ್ಯಗಳು ಏನು ಎಂಬುದನ್ನು ಯಡಿಯೂರಪ್ಪ ಅವರಿಗೆ ಹೇಳಲು ಭಯ ಪಡುವ ಸಂಸ್ತಸ್ತರಿಗೆ ವಾಕ್ ಸ್ವಾತಂತ್ರ ಇಲ್ಲವೇ ಇಲ್ಲಾ ಎಂಬುದನ್ನು ಅರಿತು ಅವರ ಧನಿಯಾಗಿ ನಿಲ್ಲಲು ತೀರ್ಮಾನಿಸಿ ರಾಜ್ಯದ
ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಿ ಧನಿ ಇಲ್ಲದ ಸಂಸ್ತ್ರಸ್ತರ ಧನಿಯಾಗಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದುವರೆದು ಪರಿಹಾರ ನಿಧಿಯಿಂದ ತಾವೂ ಪರಿಹಾರ ಪಡೆದುಕೊಂಡಾಗ ಮಾತ್ರ ಪರಿಹಾರದ ಬೆಲೆ ಏನೆಂಬುದು ಅರಿವಾಗುತ್ತದೆ ಎಂಬುದನ್ನು ಮನಗಂಡು ಪರಿಹಾರದ
ಹಣವನ್ನು ತಾವೂ ಕೊಂಚ ಬಳಸಿಕೊಂಡು ತಮಗಿರುವ ಶ್ರೀಮಂತಿಕೆಯನ್ನು ಶಿಕ್ಷಿಸಿಕೊಂಡಿದ್ದಾರೆ. ಶ್ರೀಮಂತರಾಗಿದ್ದೂ ಬಡವರ ಹಣ ಬಳಸಿ ಗಾಂಧಿ ಮಾರ್ಗ ಅನುಸುರಿದ್ದಾರೆ.

ಈ ಮೇಲಿನ ಎಲ್ಲಾ ಸಾಧನೆಗಳನ್ನು ಮಾಡಿರುವ ಆರ್,ವಿ.ದೇಶಪಾಂಡೆ ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೇ ರಾಷ್ಠ್ರ ರಾಜಕಾರಣದಲ್ಲೂ ತಮ್ಮ ಚಾಪನ್ನು ಮೂಡಿಸಬೇಕುಆ ಮೂಲಕ ದೇಶವನ್ನು ಅಭಿವೃದ್ದಿಯತ್ತ
ಕೊಂಡೌಯ್ಯಬೇಕು ಎಂಬುದು ನನ್ನ ಸ್ಪಷ್ಠವಾದ ಅಭಿಪ್ರಾಯ.

ಪಾಪ ಅವರನ್ನು ಕಂಡರಾಗದ ಕಿಡಿಗೇಡಿಗಳು ದೇಶಪಾಂಡೆ ಕಾಂಗ್ರೇಸ್ ಪಾರ್ಟಿಗೆ ಸಲ್ಲಿಸಿರುವ ಸೇವೆಯನ್ನು ಬಹಿರಂಗ ಗೊಳಿಸಿ ರಾಷ್ಠ್ರದ್ರೋಹ ಮಾಡಿದ್ದಾರೆ, ಯಾಕಂದರೆ ಆರ್.ವಿ, ದೇಶಪಾಂಡೆ ತಾವು ನಿಸ್ವಾರ್ಥವಾಗಿ
ಮಾಡಿರುವ ಸೇವೆಯನ್ನು ಸಮಾಜಕ್ಕೆ ತಿಳಿಯಬಾರದು, ಎಡಗೈಯಲಿ ಮಾಡಿದ ಪುಣ್ಯ ಬಲಗೈಗೆ ಗೊತ್ತಾಗಬಾರದು ಅಂತ ಯಾರಿಗೂ ತಿಳಿಯದಂತೆ ಸೇವೆ ಮಾಡಿದ್ದಾರೆ.

ಈ ಮದ್ಯೆ ತಮ್ಮ ಸೇವೆಯನ್ನೆಲ್ಲಾ ಹೊಗಳಿ ಕೊಂಡಾಡಿದ ಮಾದ್ಯಮಗಳ ಮೇಲೂ ಮುನಿಸಿಕೊಂಡಿದ್ದೂ ಅಲ್ಲದೆ, ನಾವು 10 ಸಾವಿರ. 15 ಸಾವಿರದಂತಹ ಕಾಂಜಿ, ಪೀಂಜಿ ಸೇವೆ ಮಾಡಿದ್ದಕ್ಕೆ ಹಿಂಗೆ ಆಡ್ತಾ ಇದ್ದೀರಿ ಮಾಡಿದರೆ
2 ಲಕ್ಷ 3 ಲಕ್ಷ ಸೇವೆ ಮಾಡಬೇಕೆಂದು ನನ್ನ ಮನದಾಳದ ಆಸೆ ಎಂದು ತಮಗಾದ ನೋವನ್ನು ತೋಡಿಕೊಂಡಿದ್ದಾರೆ.

ಅದೂ ಅಲ್ಲದೆ ತಮ್ಮ ಇಂತಹ ಸಣ್ಣ ಸಮಾಜ ಸೇವೆಯನ್ನು ಲೀಕ್ ಮಾಡಿದ್ದು ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಭೇದಿಸಲು ಸದ್ಯಕ್ಕೆ ಬಳ್ಳಾರಿಯಿಂದ ಸೋತು ಕೆಲಸವಿಲ್ಲದೆ ಖಾಲಿ ಇರುವ ಇನ್ನೊಬ್ಬ
ಕಾರ್ಯಕರ್ತ ಎನ್, ವೈ, ಹನುಮಂತಪ್ಪ ಅವರನ್ನು ನೇಮಿಸಿದ್ದು ಉತ್ತರ ಕರ್ನಾಟಕದವರಾದ ಅವರಿಗೂ ನೆರವಾಗಿದ್ದಾರೆ. ಅಲ್ಲದೆ ನೆರೆಪರಿಹಾರ ಅಕೌಂಟಿನಲ್ಲಿ ಇನ್ನೂ ನಾಲ್ಕು ಲಕ್ಷ ಹಣ ಬಾಕಿ ಉಳಿದಿದೆ ಆದರಿಂದ ಎನ್,ವೈ, ಹನುಮಂತಪ್ಪ ಅವರು ತಮ್ಮ
ತನಿಕೆಯ ವೆಚ್ಚಕ್ಕಾಗಲೀ,ಓಡಾಟದ ವೆಚ್ಚಕ್ಕಾಗಲಿ ಚಿಂತಿಸಬೇಕಿಲ್ಲ ಎಂದು ದೇಶಪಾಂಡೆ ಅವರು ಭರವಸೆ ನೀಡಿದ್ದಾರೆ. ಅದೂ ಅಲ್ಲದೆ ತಾವೆ ಮಾಡಿದ ಸಮಾಜಸೇವೆಯನ್ನು ತಮ್ಮದೇ ಪಾರ್ಟಿಯ ಕಾರ್ಯಕರ್ತರಿಂದ ತನಿಗೆ
ಮಾಡಿಸುವ ನಿಷ್ಪಕ್ಷಪಾತ ನಿಲುವನ್ನು ತಳೆದ ಸತ್ಯಸಂದರ ಪಾಲಿಗೆ ಸೇರಿಹೊಗಿದ್ದಾರೆ.

ಆರ್, ವಿ, ದೇಶಪಾಂಡೆ ಅವರಿಗಿರುವ ಆರ್ಥಿಕ ಚಿಂತನೆ, ಪ್ರಾಮಾಣಿಕತೆ, ದೇಶದ ಭವಿಷ್ಯತ್ತಿನ ಕುರಿತ ದೂರದೃಷ್ಠಿ, ಮತ್ತು ವಿಕೋಪ ಪರಿಸ್ಥಿತಿಗಳನ್ನು ನಿಭಾಯಿಸುವ ನೈಪುಣ್ಯತೆ ಇತ್ಯಾದಿಗಳ ಆದಾರದ ಮೇಲೆ ಅವರನ್ನು
ಪ್ರಧಾನಿಯನ್ನಾಗೆ ಮಾಡಬೇಕು ಎಂಬುದು ಕನ್ನಡಿಗರ ಒಕ್ಕೊರಲಿನ ದ್ವನಿಯಾಗಿದೆ

ದೇಶ ಸಂಕಷ್ಠದಲ್ಲಿರು ಸಂದರ್ಭದಲ್ಲೂ ದೇಶಪಾಂಡೆ ಅವರ ಕುಟುಂಬ ಪ್ರತಿ ವರ್ಷ ಶೇಕಡಾ 100 ಜಿಡಿಪಿ ಕಾಯ್ದುಕೊಂಡಿದೆ ಎಂಬ ಮತ್ತೊಂದು ಸಾಧನೆಯನ್ನು ಗಮನಿಸಿ,
ಅವರು ದೇಶವನ್ನು ಅಷ್ಟೇ ಪ್ರಗತಿಯಲ್ಲಿ ಮುಂದುವರೆಸಲಿದ್ದಾರೆ ಎಂಬುದು ಗಾಂಧಿ ಕುಟುಂಬದ ಗಮನ ಸೆಳೆದಿದೆ.
ಮುಂದೆ ಕೂಡ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿ ನಂತರ ಪ್ರಧಾನಿ ಹುದ್ದೆ ಅಲಂಕರಿಸಿ ಎಂಬ ಮನವಿ ನೀಡಬೇಕು ಎಂಬುದು ಕನ್ನಡಿಗರ ಹಕ್ಕೊತ್ತಾಯವಾಗಿದೆ.
ತಮ್ಮ ಸೇವೆಯನ್ನು ಮೆಚ್ಚಿ ಕಾಂಗ್ರೆಸ್ ಹೈಕಮಾಂಡ್ ಕೂಡ ಶುಭಕಾಮನೆಗಳನ್ನು ರವಾನಿಸಿರುವುದರಿಂದ ದೇಶಪಾಂಡೆ ರೋಮಾಂಚನಕ್ಕೆ ಒಳಗಾಗಿದ್ದಾರೆ.

Sunday, April 11, 2010

ಸುಡಲಿ ಬಿಡು


ನೀನು ಹಚ್ಚಿದ ಕಿಚ್ಚು
ಎದೆಯ ಒಡಲೊಳಗೆ ಸುಡುತಿರುವ
ನೋವು.

ನೀನು ಹುಟ್ಟಿಸಿದ ಮೋಹಕ್ಕೆ ಸಿಕ್ಕ
ಒಡಲಿಗೆ ನಿಟ್ಟುಸಿರ
ಭಾಗ್ಯ.

ನೀನು ಕೊಟ್ಟ ಮುತ್ತು
ಎದೆಯ ಕಾವಲಿ ಒಳಗೆ
ಹೂತಿಟ್ಟ ರಕ್ತದ
ಬೀಜ.

ನಿನ್ನ ನೆನಪುಗಳೆಲ್ಲ
ಬರದ ಭಾಗ್ಯವ ನೆನೆದು
ಮರುಗುವ
ಮುಳ್ಳು.

ನಿನ್ನ ಮಾಯದ ಮೋಡಿಗೆ
ಸಿಕ್ಕ ಜೀವಕ್ಕೆ, ನದಿಯ ಸುಳಿಗೆ
ಸಿಕ್ಕು ನಾಶವಾದ
ಭಾವ.

ನಿನ್ನ ನೆನಪುಗಳೆಲ್ಲ
ಎದೆಯೊಳಗೆ
ಕೆಂಪು ಕೆಂಪಾಗಿ
ರಕ್ತ ಸ್ತ್ರಾವ.

ನೀನೆ ಕಳಿಸಿದ್ದ ಪ್ರೀತಿಯ ಹಾಡಿಗೆ
ಯಾಕೆ ಬರಲಿಲ್ಲ
ಹೂ ಬಿಡುವ
ಕಾಲ.

ನಾವು ನಿಲ್ಲುತ್ತಿದ್ದ
ಕಾನನದ ಮರ ಕೂಡ
ಸತ್ತು ಹೋದ ಸುದ್ದಿ
ನಿನ್ನವರೆಗೂ
ಬಂತಾ.

ಇರಲಿ ಇರಲಿ ಬಿಡು
ಸುಡಲಿ ಸುಡಲಿ ಬಿಡು
ನನ್ನ ಬದುಕ ದಾರಿಯ ಗುಂಟಾ
ಕೆಂಡ.




Saturday, January 23, 2010

ಮನೆಗಳೂ ಮುರಿದಿವೆ, ಮನಗಳೂ ಮುರಿದಿವೆ.

ಲೇದನ್ನಾ ಮಾಕಿ ಚಾಲಾ ನಪ್ಪಿ ಉಂದಿ, ಮಮ್ಮಲನ್ನಿ ಈ ಆಂಧ್ರವಾಳ್ಳು ಚಾಲಾ ಚಾಂಡಲಂಗ ನಡಿಪಿಚ್ಚಿಕೊನ್ಯಾರು, ಸಿನಿಮಾಲೋ ಮಾ ತೆಲಂಗಾಣಾ ಭಾಷಾನ್ನಿ ವಿಲನ್ಸ್ ಕಿ ಇಸ್ತಾರು, ತೆಲಂಗಾಣ ಏಮನ್ನಾ ಇಸ್ತೆ ಇಪ್ಪಡೇ ಇವ್ವಾಲಿ ಲೇಕ ಪೋತೆ ಎಪ್ಪಡು ಇವ್ವರು, ಇದಿ ಪೈನಲ್ ಬ್ಯಾಟಲ್ ಅನ್ನ. ಆಂಧ್ರ ಪ್ರದೇಶದ ಎನ್.ಟಿ.ವಿ ತೆಲುಗು ಚಾನಲ್ಲಿನ ವರದಿಗಾರ ಸುರೇಶ್ ಬಾಬು ನನಗೆ ಹೇಳುತ್ತಿದ್ದ ಅವನು ಭಾವೋದ್ವೇಗಕ್ಕೆ ಒಳಗಾಗಿದ್ದನ್ನು ನಾನು ಗವನಿಸಿದೆ. ಅವನ ಮಾತಿನ ಅರ್ಥ ಏನಪ್ಪಾ ಅಂದರೆ ಇಲ್ಲಾಣ್ಣಾ ನಮಗೆ ಬಾಳಾ ನೋವಿದೆ, ನಮ್ಮನ್ನಾ ಈ ಆಂಧ್ರದವರು ಬಾಳಾ ಕೆಟ್ಟದಾಗಿ ನಡೆಸಿಕೊಂಡಿದಾರೆ, ನಾವು ತೆಲಂಗಾಣದವರು ಮಾತಾಡೋ ಭಾಷೆಯನ್ನ ಸಿನಿಮಾದಲ್ಲಿ ವಿಲನ್ ಗಳ ಬಾಯಲ್ಲಿ ಹೇಳಿಸಿ ಅವಮಾನ ಮಾಡ್ತಾರೆ, ತೆಲಂಗಾಣಾ ಏನಾದ್ರೂ ಕೊಟ್ರೇ ಈಗಲೇ ಆಗಬೇಕು, ಇಲ್ಲಾಂದ್ರೆ ಮತ್ತೆ ಯಾವತ್ತೂ ಕೊಡಲ್ಲಾ. ಅಂತ.

ಇನ್ನೊಬ್ಬ ಇದಾನೆ ಸಾಕ್ಷಿ ತೆಲುಗು ಚಾನಲ್ಲಿನ ದೆಹಲಿ ವರದಿಗಾರ ಸುಧೀರ್, ಆತ ಹೇಳುತ್ತಿದ್ದ ಡೇ ಗೌಡ ಈ ಕಾಂಗ್ರೆಸ್ ಗೌರ್ನಮೆಂಟ್ ವಾಳ್ಳನ್ನಿ ಚಪ್ಪುತೋ ಕೊಟ್ಟಾಲ್ರಾ, ತೆಲಂಗಾಣ ಇಚ್ಚೇಸ್ತಾರಂಟ. ಮಾ ರಾಜಶೇಖರ ರೆಡ್ಡಿ ಉಂಡಿ ಉಂಟೆ ವೀಳ್ಳಿನಂತಾ ದೆಂಗೇಸೇ ವಾಡು ಅಂದ. ಹಾಗಂದರೆ ಲೋ ಗೌಡ,ಈ ಕಾಂಗ್ರೆಸ್ ಗೌರ್ನಮೆಂಟ್ ನ್ನ ಚಪ್ಪಲೀಲಿ ಹೊಡಿಬೇಕು, ತೆಲಂಗಾಣ ಕೊಡ್ತಾರಂತೆ ಅದೇ ರಾಜಶೇಖರ ರೆಡ್ಡಿ ಇದ್ದಿದ್ದರೆ ಎಲ್ಲಾರ ಬಾಯಿ ಮುಚ್ಚಿಸಿಬಿಡ್ತಾ ಇದ್ದ. ಅಂತ. ಈ ಸುರೇಶ ಮತ್ತು ಸುಧೀರ್ ಇಬ್ಬರೂ ನನಗೆ ದೆಹಲಿಯಲ್ಲಿ ನನಗೆ ತೀರಾ ತಿಳಿದ ಸ್ನೇಹಿತರು ಮತ್ತು ಆ ಇಬ್ಬರೂ ಪರಸ್ಪರ ಗೆಳಯರು. ಸಾಮಾನ್ಯವಾಗಿ ನಾನು ಅವರನ್ನು ಒಟ್ಟೊಟ್ಟಿಗೆ ಇರುತ್ತಿದ್ದನ್ನು ನೋಡುತ್ತಿದ್ದೆ. ಆದರೆ ಯಾವಾಗ ಆಂಧ್ರಪ್ರದೇಶದಲ್ಲಿ ತೆಂಲಗಾಣ ವಿಷಯ ಭುಗಿಲೆದ್ದಿತೋ ಆವಾಗಲಿಂದ ಈ ಇಬ್ಬರು ಗೆಳಯರು ಪರಸ್ಪರ ಮುಖ ತಿರುಗಿಸಿಬಿಟ್ಟಿದ್ದಾರೆ. ಮಾತನಾಡುತ್ತಾರಾದರೂ ಮೊದಲಿನ ಆತ್ಮೀಯತೇ ಇಲ್ಲ ಸಹಜತೆ ಇಲ್ಲ. ಈ ಇಬ್ಬರನ್ನು ಬಲ್ಲ ನನಗೆ ತೆಲಂಗಾಣ ವಿಷಯಕ್ಕಾಗಿ ಇಬ್ಬರು ಗೆಳೆಯರಲ್ಲಿ ಉಂಟಾಗಿದ್ದ ಬಿರುಕು ನನ್ನಲ್ಲಿ ಕಳವಳಕ್ಕೆ ಕಾರಣವಾಗಿತ್ತು.

ಇದೇನಪ್ಪಾ ಆಗಿದೆ ಅಂತ ನಾನು ನನಗೆ ತಿಳಿದ ಇತರ ಸ್ನೇಹಿತರಲ್ಲಿ ವಿಚಾರಿಸಿದೆ ಆಗ ಗೊತ್ತಾಗಿದ್ದೇ ಬೇರೆ. ತೆಲಂಗಾಣ ಮತ್ತು ಸಮೈಕ್ಯ ಆಂಧ್ರಪ್ರದೇಶ ಎಂಬ ಎರಡು ಪತ್ರಕರ್ತರ ಬಣಗಳೇ ದೆಹಲಿಯಲ್ಲಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಕರ್ನಾಟಕದ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ. ಆದರೆ ತಮಿಳು ಮತ್ತು ತೆಲುಗಿನವರದು ತೀರಾ ದೊಡ್ಡ ಸಂಖ್ಯೆ, ಕಡಿಮೆ ಅಂದರೂ ನೂರು ಮಂದಿ ಇದ್ದಾರೆ. ಪ್ರತಿ ತೆಲುಗು ಚಾನಲ್ಲಿಗೂ ಇಬ್ಬರಿಂದ ಮೂರು ಮಂದಿ ವರದಿಗಾರರಿದ್ದಾರೆ. ಬಹುತೇಕ ತೆಲುಗು ಪತ್ರಿಕೆಗಳ ಎಡಿಷನ್ ಗಳು ದೆಹಲಿಯಿಂದ ಪ್ರಕಟ ಆಗುತ್ತವೆ.

ಈ ಎರಡೂ ಬಣಗಳು ತಮ್ಮ ತಮ್ಮ ಆಸಕ್ತಿಗಳ ಪರವಾಗಿ ಕೆಲಸ ಮಾಡುತ್ತವೆ. ತೆಲಂಗಾಣದ ಪರ ಇದ್ದವರು ಅದರ ಪರವಾದ ರಾಜಕಾರಣಿಗಳನ್ನು ವೈಭವೀಕರಿಸುತ್ತಾರೆ ಅದು ಇನ್ನೊಂದು ಬಣವನ್ನು ಚುಚ್ಟುತ್ತದೆ. ಇನ್ನೊಂದು ಬಣದವರು ಮಾತೆತ್ತಿದರೆ ಸಮೈಕ್ಯ ಆಂಧ್ರಪ್ರದೇಶ ಅಂತ ಬೊಬ್ಬೆಹಾಕುತ್ತಾರೆ. ಒಟ್ಟಿನಲ್ಲಿ ಎರಡೂ ಒತ್ತಡ ಗುಂಪುಗಳು ಅವುಗಳಿಗೆ ಬೇಕಾದಂತೆ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕಗಳಾದ ರೆಡ್ಡಿ, ಚೌದುರಿ, ರಾವ್, ಇತ್ಯಾದಿಗಳು ಅವರಿಗೆ ಹಿಂದಿನಷ್ಠು ಈಗ ಬೇಕಾಗಿಲ್ಲ. ಈಗ ನೀವು ಆಂಧ್ರದವರ ಜೊತೆ ಮಾತಾಡುವಾಗ ಅವರು ಯಾವ ಪ್ರದೇಶಕ್ಕೆ ಸೇರಿದವರು ಎಂಬುದನ್ನು ತಿಳಿದುಕೊಂಡೇ ಮಾತಾಡಿದರೆ ತುಂಬಾ ಒಳ್ಳೆಯದು, ಇಲ್ಲಾ ಅಂದರೆ ಅಪಾಯ ಇದೆ. ನೀವೇನಾದರೂ ಅವರ ಬಾವನೆಗಳನ್ನು ನೋಯಿಸುವಂತೆ ಅವರ ವಿರುದ್ಧವಾಗಿ ಮಾತಾಡಿದರೆ ಕಷ್ಠ. ಅದೂ ಅಲ್ಲದೇ ಈ ಆಂಧ್ರ ದ ರಾಜಕಾರಣಿಗಳು ಎಷ್ಟು ಖದೀಮರಿದ್ದಾರೆ ಅಂದರೆ ತಮ್ಮ ಪರ ಮತ್ತು ವಿರುದ್ಧ ಯಾರಿದ್ದಾರೆ ಅಂತ ಗುರುತು ಮಾಡಿಕೊಂಡು ಅವರನ್ನೇ ಕರೆದು ಬೈಟ್ ಗಳು, ಸಂದರ್ಶನಗಳನ್ನು ಕೊಡುತ್ತಿದ್ದಾರೆ. ಡಿವೈಡ್ ಮಾಡಿದರೆ ತಾನೆ ಅವರಿಗೆ ಲಾಭ.

ನ್ಯೂಸ್ ರೂಂಗಳವರೆಗೆ ಹಬ್ಬಿಹೋಗಿರುವ ಈ ಜಾಡ್ಯ ಅಲ್ಲಿನ ಮನಸುಗಳನ್ನು ಮುರಿದು ಹಾಕಿರೋದಂತೂ ಸತ್ಯ.

ಆದರೆ ಬೇಸರದ ಸಂಗತಿ ಏನಪ್ಪಾ ಅಂದರೆ ವಸ್ತುನಿಷ್ಠವಾಗಿ ವಿಚಾರಗಳನ್ನು ಜನರ ಮುಂದೆ ಇಡಬೇಕಾದವರೇ ಹೀಗೆ ಕಚ್ಚಾಡಿ ಬಣಗಳಲ್ಲಿ ಕೆಲಸ ಮಾಡಿದರೆ ಆಗುವ ಗತಿ ಏನಪ್ಪಾ ಅಂತ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಅವನ ವಿಚಾರವೇ ಸರಿಯಿಲ್ಲ ಅಂತ ಯೋಚಿಸೋದು ತಪ್ಪಾಲ್ಲವಾ…?

ಇವತ್ತು ಕೇಂದ್ರದ ಸರ್ಕಾರಕ್ಕೂ ತೆಲಂಗಾಣ ಒಂದು ಬಿಡಿಸಲಾರದ ಕಗ್ಗಂಟಾಗಿದೆ. ಸೋನಿಯಾಗಾಂಧಿ ಕೊಟ್ಟ ಮಾತನ್ನು ತಪ್ಪೊಲ್ಲ, ಈವರಗೂ ಕೊಟ್ಟ ಮಾತುಗಳನ್ನು ನಡೆಸಿಕೊಂಡಿದ್ದಾರೆ ಅಂತ ತೆಲಂಗಾಣ ವಾಧಿಗಳು ಹೇಳುತ್ತಾರೆ. ಅದೇ ಸಮೈಖ್ಯ ಆಂಧ್ರದವರು ಅದು ಇನ್ನು ಮುಗಿದ ಕತೆ. ಮುಗಿದ ಅದ್ಯಾಯ, ಹಂಗೇನಾದರೂ ಕೊಟ್ಟರೆ ಏನಾಗುತ್ತೋ ನೋಡ್ತಾ ಇರಿ ಅಂತ ಹೆದರಿಸುತ್ತಾ ಇದ್ಧಾರೆ.

.

ಹಾಗೆ ನೋಡಿದರೆ ಒಂದೇ ಭಾಷೆ ಮಾತಾಡೋ ಮಂದಿ ಯಾಕೆ ದೂರಾಗಬೇಕು ಅನ್ನೊದನ್ನು ಅರ್ಥಮಾಡಿಕೊಳ್ಳೊದೇ ಕಷ್ಠದ ವಿಚಾರ. ನಿನ್ನೆ ಮೊನ್ನೆವರೆಗೆ ಒಟ್ಟಿಗಿದ್ದವರು ಬೇರೆ ಆಗೋ ಕಾಲ ಬಂದಂತೆ ಕಾಣ್ತಾ ಇದೆ. ಅಲ್ಲಿ ಮನೆಗಳೂ ಮುರಿದಿವಂ ಮನಗಳೂ ಮುರಿದಿವೆ.

Monday, December 14, 2009

ಮಿಸ್ ಯು, ರಾಜಶೇಖರ ರೆಡ್ಡಿ.

ಆಂದ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ವಿಮಾನ ಅಫಘಾತದಲ್ಲಿ ತೀರಿಕೊಂಡ ಅಡ್ಡ ಪರಿಣಾಮಗಳು ಈಗ ಕಾಣಿಸಿಕೊಳ್ಳುತ್ತಿವೆ. ರಾಜಶೇಖರ ರೆಡ್ಡಿ ಇದ್ದ ಕಾಲಕ್ಕೆ ತಣ್ಣಗಿದ್ದ ತೆಲಂಗಾಣ ರಾಜ್ಯದ ವಿಭಜನೆ ವಿಚಾರ ಈಗ ಧಿಡೀರನೆ ಎದ್ದು ಕೂತಿದೆ. ಕಾಂಗ್ರೆಸ್ ಹೈಕಮಾಂಡ್ ಗೆ ತಾನು ನಾಯಕರನ್ನು ಸೃಷ್ಟಿಸಬಲ್ಲೇ ಎಂಬ ಅಹಮ್ಮು ಈಗಿನ ತೆಲಂಗಾಣ ವಿಭಜನೆ ಆದ ನಂತರ ಬುಗಿಲೆದ್ದ ಪ್ರತಿಭಟನೆಗಳು, ಹಿಂಸಾಚಾರದ ನಂತರ ಕಡಿಮೆ ಆಗಿದೆ ಎನ್ನಬೇಕು. ವಿಭಜನೆ ವಿರೋಧಿಸಿ ಕಾಂಗ್ರೆಸ್ , ಮತ್ತು ಟಿಡಿಪಿಯ ಸಾಲು ಸಾಲು ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೃಷ್ಠಿಸಿದ ನಾಯಕ ರೋಸಯ್ಯ ತಮ್ಮ ಅಗಾಧ ಅನುಭವದ ಮದ್ಯೆಯೂ ದಿಕ್ಕುತೋಚದಂತೆ ಕಂಗಾಲಾಗಿದ್ದಾರೆ.

ಈ ಪ್ರಕರಣ ನಂತರವಾದರೂ ತಿಳಿಯುವ ಸಂಗತಿ ಎಂದರೆ ನಾಯಕರನ್ನು ಕ್ರಿಯೇಟ್ ಮಾಡಲು ಸಾದ್ಯವಿಲ್ಲ ಅವರು ಹುಟ್ಟುತ್ತಾರೆ ಅಂತ. ನನ್ನ ಗ್ರಹಿಕೆಯಲ್ಲಿ ರಾಜಕಾರಣದಲ್ಲಿ ನಾಲ್ಕು ವರ್ಗದ ಜನ ಇರುತ್ತಾರೆ, ಅವರಲ್ಲಿ ಮೊದಲ ವರ್ಗ ರಾಜಕಾರಣಿಗಳು, ಎರಡನೇ ವರ್ಗ ಲೀಡರ್ ಗಳು ಮೂರನೆ ವರ್ಗ ಸ್ಟೇಟ್ಸ್ ಮನ್ ಗಳು ನಾಲ್ಕನೇ ವರ್ಗ ವಿಶನರಿಗಳು. ಇಂಡಿಯಾದ ರಾಜಕಾರಣದಲ್ಲಿ ಮುಕ್ಕಾಲು ಭಾಗ ರಾಜಕಾರಣಿಗಳೇ ಇದ್ದಾರೆ. ಅಲ್ಲಲ್ಲಿ ಮಾಯಾವತಿ,ರಾಜಶೇಖರರೆಡ್ಡಿ, ಅಂತ ನಾಯಕರು ಇದ್ದಾರೆ ಅವರನ್ನು ಸುಲಭವಾಗಿ ರೀಪ್ಲೇಸ್ ಮಾಡೋದಕ್ಕೆ ಸಾದ್ಯವಾಗೋಲ್ಲ, ರಾಜಕಾರಣದಿಂದ ಆಚೆಗೆ ಹೋಗಿ ರಾಷ್ಠ್ರದ ಆಸ್ತಿ ಯಂತೆ ಕಾಣಿಸಿಕೊಳ್ಳುವ ಕೆಲವರಿದ್ದಾರೆ ಮಾಜಿ ಪ್ರಧಾನಿ ವಾಜಪೇಯಿ,ನರಸಿಂಹ ರಾವ್ ಪ್ರಣಬ್ ಮುಖರ್ಜಿ,ಇಂತಹವರಿರಬಹುದು, ಇನ್ನು ವಿಶನರಿಗಳು ನಮ್ಮ ಮನಮೊಹನ್ ಸಿಂಗ್ ಅಂತಹವರಿಬಹುದು, ವಾಸ್ತವ ಅಂದರೆ ವಿಶನರಿಗಳು ಲೀಡರ್ ಆಗೋದಿಕ್ಕೆ ಸಾದ್ಯ ಇಲ್ಲ ಅದಕ್ಕೆ ಮನಮೋಹನ್ ಸಿಂಗ್ ಉದಾಹರಣೆ, ಅವರು ಈವರೆಗೆ ಯಾವ ಚುನಾವಣೆಯನ್ನೂ ಎದುರಿಸಲಿಕ್ಕೆ ಹೋಗಿಲ್ಲ. ಈ ನಾಲ್ಕು ವರ್ಗಗಳು ಒಂದಕ್ಕೊಂದು ಬಿನ್ನ ಎಲ್ಲರೂ ಎಲ್ಲರಿಗೂ ಪೂರಕವಾಗಿರುತ್ತಾರೆ, ಒಬ್ಬರಿಂದ ಸಾದ್ಯವಾದದ್ದು ಮತ್ತೊಬ್ಬರಿಂದ ಸಾದ್ಯವಾಗುವುದಿಲ್ಲ.


ಒಬ್ಬ ನಾಯಕನ ಅಗಲಿಕೆ ಏನೆಲ್ಲ ಆಗುತ್ತೆನ್ನೊದಕ್ಕೆ ಇದನ್ನ ಹೇಳಬೇಕಾಯಿತು ಒಬ್ಬ ರಾಜಶೇಕರ ರೆಡ್ಡಿ ಇದ್ದಿದ್ದರೆ ಆಂದ್ರಪ್ರದೇಶದಲ್ಲಿ ತೆಲಂಗಾಣ ಹೋರಾಟ ತೀರ್ವವಾಗುತ್ತಿರಲಿಲ್ಲ ಅದೇ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗಣಿ ರೆಡ್ಡಿಗಳು ಈಗಿನ ಸ್ಥಿತಿಗೆ ತರುತ್ತಿರಲಿಲ್ಲ ರಾಜಕಾರಣದಲ್ಲಿ ಯಾವ್ಯಾವುದಕ್ಕೊ ಯಾವುದೋ ಲಿಂಕ್ ಆಗಿರುತ್ತವೆ. ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣ ಸೃಷ್ಠಿಸುತ್ತೇವೆ ಎಂಬ ಹೇಳಿಕೆ ನಂತರ ಆಂದ್ರದಲ್ಲಿ ಉಂಟಾದ ಸಮಸ್ಯೆಗಳಿಂದ ಗಲಿಬಿಲಿಗೊಂಡ ಸೋನಿಯಾಗಾಂದಿ ತೆಲಂಗಾಣ ಬಾಗದ 11 ಮಂದಿ ಎಂಪಿಗಳನ್ನು ಕರೆದು ಹೇಳಿದರಂತೆ ನೀವು ನನ್ನ ಮಿಸ್ ಗೈಡ್ ಮಾಡಿದ್ದೀರಿ, ರಾಜಶೇಖರ ರೆಡ್ಡಿ ನನಗೆ ಒಮ್ಮೆ ಹೇಳಿದ್ದರು ನನಗೆ ಆಂದ್ರದ ಜನತೆಯ ನಾಡಿ ಮಿಡಿತ ಗೊತ್ತು, ಸದ್ಯಕ್ಕೆ ತೆಲಂಗಾಣದ ಚರ್ಚೆ ಬೇಡ ಚುನಾವಣೆಯಲ್ಲಿ ಗೆಲ್ಲೋದು ನಾವೆ ಅಂತ.

ನಾವು ಈಗ ರಾಜಶೇಖರ ರೆಡ್ಡಿ ಅವರನ್ನು ಮಿಸ್ ಮಾಡಿಕೊಳ್ತಾ ಇದ್ದೀವಿ ಅಂತ.

ರಾಜಶೇಖರ ರೆಡ್ಡಿ ಸತ್ತ ಮೇಲೆ ಅವರು ಒಳ್ಳೆಯವರಾ, ಕೆಟ್ಟವರಾ, ಬ್ರಷ್ಟರಾ ಅನ್ನೋ ನೂರಾರು ಚರ್ಚೆಗಳು ನಡೆದಿವೆ ಅದು ಬೇರೆಯದೇ ವಿಶಯ ಆದರೆ ಆಂದ್ರಪ್ರದೇಶದ ಪಾಲಿಗೆ ರಾಜಶೇಖರ ರೆಡ್ಡಿ ಒಬ್ಬ ಅನಿವಾರ್ಯ ನಾಯಕನಾಗಿದ್ದ ಅನ್ನೊದನ್ನು ಅಲ್ಲಗಳೆಯಲು ಸಾದ್ಯವಿಲ್ಲ, ನನ್ನ ಆಂದ್ರದ ಪತ್ರಕರ್ತ ಗೆಳೆಯ ಸುಧೀರ್ ಹೇಳುತ್ತಿದ್ದ, ರಾಜಶೇಖರ ರೆಡ್ಡಿ ಒಳ್ಳೆಯರ ಪಾಲಿಗೆ ಒಳ್ಳೆಯವ, ಕೆಟ್ಟವರ ಪಾಲಿಗೆ ಕೆಟ್ಟವ, ವಿರೋಧಿಗಳ ಪಾಲಿಗೆ ಕ್ರೂರಿ ಆಗಿದ್ದ ಅಂತ. ಬಹುಶ ಒಬ್ಬ ನಾಯಕ ಹುಟ್ಟೋದು ಇದೇ ಪ್ರಕ್ರಿಯೆಯಲ್ಲಿ ವಿರೋಧಿಗಳನ್ನು ಪ್ರೀತಿಸುವವನು ಸಂತ ಆಗಬೇಕಾಗುತ್ತದೆ, ರಾಜ್ಯ ಕಟ್ಟುವ ದೊರೆ ಆಳದಲ್ಲಿ ಕ್ರೂರಿ ಆಗಿರುತ್ತಾನೆ ಅದು ರಾಜಶೇಖರ ರೆಡ್ಡಿಗೆ ಇತ್ತು ಅಂತ ಕಾಣುತ್ತದೆ, ಈಗ ತೆಲಂಗಾಣ ಬೇಕು ಅನ್ನುತ್ತಿರುವ ಕಾಂಗ್ರೆಸ್ ಎಂಪಿಗಳು ಅವರಿದ್ದ ಕಾಲಕ್ಕೆ ಬಾಯಿ ಬಿಡುತ್ತಿರಲಿಲ್ಲ.

ಕರ್ನಾಟಕದಿಂದ ಕೊಡಗನ್ನೋ, ಹೈದ್ರಾಬಾದ್ ಕರ್ನಾಟಕನ್ನೋ ಒಡೆದು ಇಬ್ಬಾಗ ಮಾಡುವ ಸಂಗತಿಯನ್ನು ನೆನಸಿಕೊಳ್ಳುವುದು ಎಷ್ಟು ಕಷ್ಟವೋ ಅಂತದೇ ಕಷ್ಟ ಈಗ ಆಂದ್ರ ಪ್ರದೇಶದ ಜನ ಎದುರಿಸುತ್ತಿದ್ದಾರೆ, ಒಡೆಯುವುದು ಸುಲಭ ಒಟ್ಟಿಗೆ ಕರೆದೊಯ್ಯುವುದು ಕಷ್ಟ. ಮಿಸ್ ಯು ರಾಜಶೇಖರ ರೆಡ್ಡಿ.

ದೇವೇಗೌಡ ಮತ್ತು 'ಹಾರ್ಡ್ ಟಾಕ್'.

'ಇಲ್ಲಿ ಕೇಳ್ರಿ ಸ್ಪಲ್ಪ ನಾನೇಳೋದನ್ನ, ನೀವು ಕರ್ದಿದ್ದೀರಿ ನಾನು ಬಂದಿದ್ದೀನಿ, ಜನಕ್ಕೆ ಏನು ನಡೆದಿದೆ ಅನ್ನೋದನ್ನ ಜನಕ್ಕೆ ಹೇಳಬೇಕು ಬೇಡವೋ' ಅಂತ ದೇವೇಗೌಡರು ಅವರದೇ ವಿಶಿಷ್ಟ ಧಾಟಿಯಲ್ಲಿ ಎದುರು ಕುಳಿತಿದ್ದ ಸುವರ್ಣ ಚಾನಲ್ಲಿನ ಆ್ಯಂಕರ್ ಹಮೀದ್ ನ ಬಾಯಿ ಮುಚ್ಚಿಸುವ ಧಾಟಿಯಲ್ಲಿ ಹೇಳಿದರು.
ನೈಸ್ ಕಂಪನಿಯ ಬಗ್ಗೆ ರೊಚ್ಚಿಗೆದ್ದಿದ್ದ ದೇವೇಗೌಡರೊಂದಿಗೆ 'ಹಾರ್ಡ್ ಟಾಕ್' ಅನ್ನೊದು ಕಾರ್ಯರ್ಕಮದ ಹೆಸರು. ದೇವೇಗೌಡ ನೈಸ್ ಬಗ್ಗೆ ಕೇಳಿದ ಪ್ರಶ್ನೆಗೆ ತಾವು ಮುಖ್ಯಮಂತ್ರಿಯಾದ ದಿನಾಂಕದಿಂದ ಹಿಡಿದು ಮೊನ್ನೆಯ ಕೋರ್ಟ್ ಆದೇಶದವರೆಗೆ ದಿನಾಂಕಗಳನ್ನೂ ಬಿಡದೆ ವಿವರಿಸತೊಡಗಿದರು.ಕಾರ್ಯಕ್ರಮಕ್ಕೆ ಬರುವಾಗ ತಂದಿದ್ದ ಒಂದು ಕಂತೆ ದಾಖಲೆಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದರು. ಆದರೆ ಹಮೀದ್ ದೇವೇಗೌಡರನ್ನು ಮದ್ಯದಲ್ಲೇ ತಡೆದು ಬೇರೆ ಪ್ರಶ್ನೆ ಕೇಳಲು ಯತ್ನಿಸುತ್ತಾ ನೇರ ಪ್ರಶ್ನೆಗೆ ನೇರ ಉತ್ತರ ಪಡೆದು ಬಿಡುವ ಯತ್ನ ಮಾಡುತ್ತಿದ್ದರು. ಆದರೆ ದೇವೇಗೌಡರದು ಅದೇ ಧಾಟಿ ಆ್ಯಂಕರ್ ಮೇಲೆ ಸವಾರಿ ಮಾಡುತ್ತಾ 'ನಾನೇಳೋದನ್ನ ಕೇಳ್ರಿ ಇಲ್ಲಿ' ಅನ್ನುತ್ತಾ ಯ್ಯಾವ್ಯಾವುದೋ ದಾಖಲೆಗಳಲ್ಲಿ ಹುದುಗಿದ್ದ ಮಾಹಿತಿಗಳನ್ನ ಓದುತ್ತಾ, ಹಳೇ ಅಧಿಕಾರಿಗಳು ಜಡ್ಜ್ ಗಳ ಹೆಸರುಗಳನ್ನೆಲ್ಲಾ ಹೇಳುತ್ತಾ ಮುಂದುವರೆದರು.
ಹಮೀದ್ ಕೇಳಿದ ಮೊದಲ ಪ್ರಶ್ನೆಗೆ ದೇವೇಗೌಡರು ಕೊಟ್ಟ ಉತ್ತರದ ಸಮಯ ಬರೋಬ್ಬರಿ 40 ನಿಮಿಷ ಅದೂ ಒಂದೇ ಒಂದು ಬ್ರೇಕ್ ತೆಗೆದುಕೊಳ್ಳದೇ.ದೇವೇಗೌಡರ ಹಾರ್ಡ್ ಟಾಕ್ ನೇರ ಪ್ರಸಾರವಾಗುತ್ತಾ ಇತ್ತು.
ದೇವೇಗೌಡರೇ ಹಾಗೆ ಅವರು ನೆಡದದ್ದೇ ಹಾದಿ, ಬೇರೆಯವರ ಇಕ್ಕಳಕ್ಕೆ ಸಿಕ್ಕುವ ಆಸಾಮಿ ಅಲ್ಲ, ನಾನು ಬಹುವಾಗಿ ಮೆಚ್ಚಿಕೊಳ್ಳುವ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟು ಒಮ್ಮೆ ಹೇಳುತ್ತಿದ್ದರು ಪರ್ತಕರ್ತರ ಪಾಲಿಗೆ ನಿಜವಾದ ಸವಾಲು ಅಂದರೆ ದೇವೇಗೌಡ ಅಂತ.
ಹಮೀದರ ಹಾರ್ಡ್ ಟಾಕ್ ನೋಡಿದಾಗ ನೆನಪಾದ ಸಂಗತಿಗಳನ್ನು ಇಲ್ಲಿ ಹೇಳಿದ್ದೇನೆ.

ನಮ್ಮ ನ್ಯೂಸ್ ರೂಂ ಗಳಲ್ಲಿ ಕುಳಿತ ಮಂದಿ ದೇವೇಗೌಡರ ಬೈಟ್ ತೆಗೆದುಕೊಂಡು ಬನ್ನಿ ಅಂತ ಹೇಳಿಬಿಡುತ್ತಾರೆ ನಿಜ, ಆದರೆ ವರದಿಗಾರರಿಗೆ ತಮಗೆ ಬೇಕಾದ್ದನ್ನು ದೇವೇಗೌಡರಿಂದ ಬಾಯಿಬಿಡಿಸುವುದು ಮಾತ್ರ ತೀರಾ ತ್ರಾಸದಾಯಕ ವಿಶಯ. ದೇವೇಗೌಡರನ್ನು ಮಾತನಾಡಿಸುವ ಮೊದಲು ಅವರ ಮೂಡ್ ಹೇಗಿದೆ ಎಂಬುದನ್ನ ಅವರ ಸುತ್ತ ಇರುವವರಿಂದ ತಿಳಿದುಕೊಂಡು ಮುಂದುವರೆಯಬೇಕಾಗುತ್ತದೆ. ಇಲ್ಲಾಂದರೆ ಕಷ್ಟ.
ಒಂದು ಘಟನೆ ಹೇಳುತ್ತೇನೆ ಕೇಳಿ, ಅದು ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಾ ಬೇಡವಾ ಅನ್ನೊ ವಿಶಯಕ್ಕೆ ಜಂಗಿ ಕುಸ್ತಿ ನಡೆಯುತ್ತಿದ್ದ ಕಾಲ ನಮ್ಮ ಈಟಿವಿಯ ವರದಿಗಾರ ವಿಜಯ್ ಜೆಡಿಎಸ್ ಬೀಟ್ ನೋಡಿಕೊಳ್ಳುತ್ತಿದ್ದ, ದೇವೇಗೌಡರಿಂದ ಎಂತಾ ಸಂದರ್ಭದಲ್ಲೂ ಮಾತಾಡಿಸಿಕೊಂಡು ಬಂದುಬಿಡುವ ಚಾತಿ ಆತನಿಗಿತ್ತು.
ದೇವೇಗೌಡರ ಮನೆಗೆ ನುಗ್ಗಿ ಬೈಟ್ ತರುತ್ತಾನೆ, ಈತ ದೇವೇಗೌಡರ ದತ್ತು ಪುತ್ರ ಅಂತೆಲ್ಲಾ ಪತ್ರಕರ್ತರು ರೇಗಿಸುತ್ತಿದ್ದರು, ಅದೊಂದು ದಿನ ಬೆಳ್ಳಂಬೆಳ್ಳಿಗೆ ಗೌಡರ ಹತ್ತಿರ ಬೈಟ್ ತೆಗೆದುಕೊಳ್ಳೊಕೆ ಅಂತ ವಿಜಯ ಹೋಗಿದ್ದಾನೆ, ದೇವೇಗೌಡರು ಅದ್ಯಾವ ಮೂಡಿನಲ್ಲಿದ್ದರೋ ಏನೋ, ಇವನು ಹಾಕಿದ ಪ್ರಶ್ನೆಗೆ ಕುಪಿತಕೊಂಡ ಅವರು 'ಗೆಟ್ ಔಟ್ ಪ್ರಂಮ್ ಮೈ ಹೈಸ್ ಐ ಸೇ ಅಂದಿದ್ದಾರೆ. ಪಾಪ ವಿಜಯ್ ಕಂಗಾಲಾಗಿದ್ದಾನೆ.

ಕೆಲವೊಮ್ಮೆ ಇದೇ ದೇವೇಗೌಡರು ಪತ್ರಕರ್ತರನ್ನು ಬಹಳ ಪ್ರಿತಿಯಿಂದ ನೋಡಿಕೊಳ್ಳುತ್ತಾರೆ, ಊಟ ಮಾಡಿ ಸಾರ್ ಅಂತ ಗಂಟಲು ತನಕ ತಿನ್ನಿಸುತ್ತಾ, ತಿನ್ನಿ ಸಾರ್ ನಾನೇ ಹೇಳಿ ಮಾಡಿಸಿದ್ದು ಅಂತ ನಮ್ಮಲ್ಲಿ ಗಾಭರಿ ಹುಟ್ಟಿಸುವಷ್ಟು ಸಿಂಪಲ್ಲಾಗಿರುತ್ತಾರೆ. ಅದೇ ಕೆಲವೊಮ್ಮೆ 'ಯಾರ್ರಿ ನಿಮ್ಮನ್ನ ಇಲ್ಲಿ ಕರೆದೋರು' ಅಂತ ಹೇಳಿ ಪತ್ರಕರ್ತರನ್ನು ಜಾಗ ಖಾಲಿ ಮಾಡಿಸಿದ್ದೂ ಇದೆ.
ನಾವು ಯಾವುದೋ ಪ್ರಶ್ನೆ ಕೇಳಿದ್ರೆ ಅವರು ಯಾವುದಕ್ಕೋ ಉತ್ತರ ಕೊಡುತ್ತಾ ಇರುತ್ತಾರೆ ಒಂದು ಗಂಟೆ ಮಾತಾಡಿದರೂ ಒಂದೇ ಒಂದು ಸುದ್ದಿ ಸಿಗದ ಹಾಗೆ ಮಾತಾಡಿರುತ್ತಾರೆ. ಕೆಲಮೊಂಮ್ಮೆ ಒಂದೇ ಸಾಲಿನಲ್ಲಿ ಸಿಕ್ಕಾಪಟ್ಟೆ ಅರ್ಥ ಬರುವಂತೆ ಮಾತಾಡುತ್ತಾರೆ. ಮೊನ್ನೆ ತಾನೆ ಜನಾರ್ಧನ ರೆಡ್ಡಿಯಿಂದಾಗಿ ಬಿಜೆಪಿ ಸರ್ಕಾರ ಇಕ್ಕಟ್ಚಿಗೆ ಸಿಕ್ಕಿದ್ದಾಗ ಮೊದಲ ದಿನವೇ ದೇವೇಗೌಡರು ಹೇಳಿದ ವಾಕ್ಯ ನೆನಪಿಗೆ ಬರುತ್ತೆ, 'ನೋಡ್ರಿ ಮೊದಲು ತಿಕ್ಕಾಟ ಆಗುತ್ತೆ, ಆಮೇಲೆ ಬೆಂಕಿ ಹೊತ್ತಿಕೊಳ್ಳುತ್ತೆ, ಆಮೇಲೆ ಎಲ್ಲಾ ಹಾವಿಯಾಗಿ ಮಳೆ ಬರುತ್ತೆ ಮಳೆ ಬಂದಮೇಲೆ ಎಲ್ಲಾ ತಂಪಾಗುತ್ತೆ. ಇವೆಲ್ಲ ರಾಜಕೀಯದಲ್ಲಿ ಸಮಾನ್ಯ ರೀ, ನಾನು ಬೇರೆ ಪಕ್ಷದ ಅಂತರಿಕ ಸಮಸ್ಯೆಗಳ ಬಗ್ಗೆ ಕಾಂಮೆಂಟ್ ಮಾಡಲ್ಲಾ' ಅಂದರು. ಪತ್ರಕರ್ತರಿಗೆ ಇದಕ್ಕಿಂತ ಕಾಮೆಂಟ್ ಬೇಕಾ ಹೇಳಿ. ಮರು ಕ್ಷಣ ಎಲ್ಲಾ ಚಾನಲ್ ಗಳಲ್ಲೂ ಅದೇ ಸುದ್ದಿ.

ದೇವೇಗೌಡರದು ಒಂದು ಸಂಕೀರ್ಣ ವ್ಯಕ್ತಿತ್ವ, ಅವರನ್ನು ಅರ್ಥ ಮಾಡಿಕೊಳ್ಳಲೇಬೇಕೆಂದು ಹಠ ಹಿಡಿದು ಕೂತರೆ ಅವರು ಪತ್ರಕರ್ತನಿಗೆ ಸಹ್ಯವಾಗುತ್ತಾರೆ ಇಲ್ಲ ಅಂದರೆ ಪರ್ತಕರ್ತರು ಅವರನ್ನು ದ್ವೇಷ ಮಾಡಲು ಶುರುಮಾಡುತ್ತಾರೆ. ಇನ್ನೊಂದೆಡೆ ದೇವೇಗೌಡರನ್ನು ನಾವು ಅರ್ಥಮಾಡಿಕೊಳ್ಳುತ್ತಾ ಇರುವಂತೆ ಮತ್ತಷ್ಠು ಸಂಕೀರ್ಣವಾಗುತ್ತಾ ಇರುತ್ತಾರೆ.
ದೇವೇಗೌಡರಿಗಿವ ಅಗಾದ ನೆನಪಿನ ಶಕ್ತಿ ಅವರನ್ನು ಹಾಗೆ ಸಂಕೀರ್ಣವಾಗಿಸಿದೆ ಅಂತ ನನಗೆ ಅನ್ನಿಸಿದೆ.
ಅವರ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ದಿನಾಂಕದ ಸಮೇತ ಬಿಡಿ ಬಿಡಿಯಾಗಿ ಅವರು ನೆನಪಿಸಿಕೊಳ್ಳಬಲ್ಲರು, ಅವರ ತಲೆಯಲ್ಲಿ ನೂರಾರು ಮೊಬೈಲ್ ಮತ್ತು ಟಿಲಿಪೋನ್ ನಂಬರ್ ಗಳು ಅಚ್ಚೊತ್ತಿದಂತೆ ಇವೆ. ನಮ್ಮ ಹಾಗೆ ಕಾಂಟ್ಯಾಕ್ಟ್ ಬುಕ್ ಬಳಸದ ಅವರು ತಮ್ಮ ನೆನಪಿನಲ್ಲಿ ಬೇಕಾದರವರ ನಂಬರ್ ಗಳನ್ನೆಲ್ಲಾ ಇಟ್ಟುಕೊಂಡಿರುತ್ತಾರೆ. ಅವರ ಬಳಿ ಇರುವಷ್ಟು ದಾಖಲಾತಿಗಳು ಯಾರಹತ್ತಿರವೂ ಇರಲಿಕ್ಕೆ ಸಾದ್ಯವಿಲ್ಲ.

ಹಾಗೆ ನೋಡಿದರೆ ಕರ್ನಾಟಕಕ್ಕೆ ಅವರೇ ಪರಮನೆಂಟ್ ವಿರೋಧಿ ಪಕ್ಷದನಾಯಕ. ಸರ್ಕಾರದ ಪ್ರತಿಯೊಂದು ಆದೇಶದ ಬಗ್ಗೆಯೂ ಈಗಲೂ ತಿಳಿದುಕೊಳ್ಳುತ್ತಾರೆ ಜೀವನದಲ್ಲಿ ಎಲ್ಲಾ ಅನುಭವಿಸಿದರೂ ಇನ್ನು ಎಡೆ ಬಿಡದ ಆಸಕ್ತಿ ಅಚ್ಚರಿ ಮೂಡಿಸುವಂತದ್ದು. ಅದೇ ನೈಸ್ ವಿಶಯದಲ್ಲಿ ದೇವೇಗೌಡರ ಹಠ ನೋಡಿ. ಇಡೀ ಸರ್ಕಾರ ಖೇಣಿ ಬೆನ್ನಿಗಿದ್ದರೂ ದೇವೇಗೌಡ ಖೇಣಿ ಕಂಪನಿಗೆ ದುಸ್ವಪ್ನ ಆಗಿಬಿಟ್ಟಿದ್ದಾರೆ. ಈಗಲೂ ಸುಪ್ರಿಂ ಕೋರ್ಟ್ ನಲ್ಲಿ ನೈಸ್ ಕೇಸ್ ವಿಚಾರಣೆಗೆ ಬರುವ ಹಿಂದಿನ ದಿನ ಅವರು ದೆಹಲಿಗೆ ಬಂದೇ ಬರುತ್ತಾರೆ ಲಾಯರ್ ಗಳೊಂದಿಗೆ ಚರ್ಚೆ ಮಾಡಿ ಹೀಗೆ ವಾಧ ಮಂಡಿಸಬೇಕು ಅಂತ ತಾಕೀತು ಮಾಡುತ್ತಾರೆ.

ಜಡ್ಜ್ ಗಳಿಗೇ ಸ್ವಾಮಿ ನಿಮ್ಮಿಂದ ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸ ಇಲ್ಲ, ನಮ್ಮ ಕೇಸ್ ಅನ್ನು ಬೇರೆ ಬೆಂಚ್ ಗೆ ವರ್ಗಾಯಿಸಿ ಅನ್ನುತ್ತಾರೆ. ನಿವೃತ್ತಿಗೆ ಒಂದು ವಾರ ಬಾಕಿ ಇದ್ದ ಆ ಜಡ್ಜ್ ಕಣ್ಣೀರಾಕುತ್ತಾರೆ. ನೈಸ್ ಬಗ್ಗೆ ಪುಸ್ತಕ ಬರೆದು ಜಡ್ಜ್ ಗಳಿಗೆ ಕಳಿಸುತ್ತಾರೆ, 'ಯಾಕ್ರಿ ಕಳಿಸ್ತೀರಿ ನಮಗೆ ಪುಸ್ತಕ ಅಂತ ಜರಿದು, ಬೇಕಿದ್ರೆ ಬಂದು ಸಾಕ್ಷಿ ಹೇಳಿ' ಅಂದ ಹೈಕೋರ್ಟ್ ಜಡ್ಜ್ ದಿನಕರನ್ ಜೀವಮಾನದ ಬಂಡವಾಳನ್ನೇ ಬಯಲಿಗೆ ಎಳೆದುಹಾಕುತ್ತಾರೆ. ದೇವೇಗೌಡರು ಮನಸಿಟ್ಟರೇ ಅವರಿಗೆ ದಕ್ಕದೇ ಇದ್ದದ್ದು ಇಲ್ಲ ಅನ್ನಬೇಕು. ಯಾರನ್ನು ಯಾವಾಗ ಖೆಡ್ಡಾಕ್ಕೆ ಕೆಡವಬೇಕು ಅನ್ನೊದು ಅವರಿಗೆ ತಿಳಿದಿದೆ. ಬಹುಶ ಕರ್ನಾಟಕದ ರಾಜಕಾರಣದಲ್ಲಿ ಅತೀ ದೀರ್ಘ ಕಾಲ ರಾಜಕಾರಣದಲ್ಲಿ ಮಹತ್ವ ಉಳಿಸಿಕೊಂಡು ಬಂದಿದ್ದು ಅವರೊಬ್ಬರೇ ಇರಬೇಕು.

ದೇವೇಗೌಡರ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವ ವಿಶಯವೇ ಅಲ್ಲ, ಬಿಡಿ ಕಡೆಗೆ ದೇವೇಗೌಡರ ದೆಹಲಿ ಮನೆಯಲ್ಲಿ ನಡೆದ ಸಂದರ್ಭವೊಂದನ್ನು ಹೇಳಿ ಮುಗಿಸುತ್ತೇನೆ.
ಸುವರ್ಣ ಟಿವಿಯ ಪ್ರಶಾಂತ್ ನಾಥೂ ದೇವೇಗೌಡರೊಂದಿಗೆ ಸಂಭಾಷಣೆಯಲ್ಲಿದ್ದ. ಪಕ್ಕದಲ್ಲಿದ್ದ ಡ್ಯಾನಿಶ್ ಆಲಿ ಹೇಳಿದ 'ಎನೇ ಹೇಳಿ ಸಾರ್ ಪಾಲಿಟಿಕ್ಸ್ ಅನ್ನೊದು ಕೊಚ್ಚೆ, ಇಲ್ಲಿ ಬರೀ ಕಾಂಪ್ರೋಮೈಸ್ ಮಾಡಿಕೊಳ್ಳಬೇಕು' ಅದಕ್ಕೆ ದೇವೇಗೌಡರು ಅವನನ್ನು ತಡೆದು ಹೇಳಿದ್ದು 'ಇಲ್ಲಾರಿ ಪಾಲಿಟಿಕ್ಸ್ ಅನ್ನೊದು ನಿರಂತರವಾಗಿ ಹರಿಯೋ ನದಿ ಇದ್ದಂಗೆ ಅದು ಕೊಚ್ಚೆ ಆಗೋದೆ ಇಲ್ಲ ಹರಿದು ಹರಿದು ಶುದ್ಧ ಆಗ್ತಾನೇ ಇರ್ತದೇ' ಅಂತ.

Monday, November 9, 2009

ಗಣಿ ರೆಡ್ಡಿಗಳ ಮುಂದೆ ಹೈ ಕಮಾಂಡ್ 'ನಂಗಾ ನಾಚ್'



ಸದಾನಂದಗೌಡರು ಅವರ ಹೆಸರಿನಲ್ಲಿರುವಂತೆಯೆ ಸದಾ ನಗುತ್ತಲೇ ಇದ್ದರು, ಬಿಜೆಪಿ ಪಕ್ಷ ಇನ್ನಿಲ್ಲದ ಸಂಕಷ್ಠದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿತ್ತು. ದೆಹಲಿಯ ಮೀಡಿಯಾದವರಿಗೆ ಸದಾನಂದಗೌಡ ಯಾರೆಂದು ತಿಳಿಯದ ಕಾರಣ ವಿ.ಎಸ್. ಆಚಾರ್ಯ ಬೈಟ್ ತೆಗೆದುಕೊಳ್ಳುವ ಬರದಲ್ಲಿ ಅವರನ್ನು ಬದಿಗೆ ತಳ್ಳಿಬಿಟ್ಟರು. ತಕ್ಷಣ ಸಿಟ್ಟಿಗೆದ್ದ ಅವರು ವಾಟ್ ಈಸ್ ದಿಸ್, ಇಟ್ ಈಸ್ ವಿರಿ ಬ್ಯಾಡ್. ಐ ಯಾಮ್ ಬಿಜೆಪಿ ಪ್ರೆಸಿಡೆಂಟ್ ಸದಾನಂದ ಗೌಡ. ಯು ಆರ್ ಪೂರ್ಸಿಂಗ್ ಮಿ ಟು ಬಿಕಂಮ್ 'ಸ್ಯಾಡ್ ಆನಂದ್....! ಅಂದರು.


ನಂಬಿದವರಿಗೆ ಕೈಕೊಟ್ಟೆ, ನನ್ನ ಸ್ವಾರ್ಥಕ್ಕೆ ಅವರಿಗೆ ಅನ್ಯಾಯ ಮಾಡಿದೆ ಅಂತ ಮುಖ್ಯ ಮಂತ್ರಿಗಳು ಅವಕಾಶ ಸಿಕ್ಕಾಗಲೆಲ್ಲ ಬಿಕ್ಕುತ್ತಿದ್ದರು. ಕೆನ್ನೆಗಳು ಕೆಂಪಾಗಿದ್ದವು ಕೋಪ, ಅಸಹನೆ, ಸಿಟ್ಟಿನಿಂದ ಎದುರಿಗೆ ಸಿಕ್ಕ ಆಪ್ತ ಸಹಾಯಕರ ಮೇಲೆಲ್ಲ ಯಡಿಯೂರಪ್ಪ ರೇಗುತ್ತಿದ್ದರು, ಮೊಬೈಲ್ ಪೋನ್ ಅನ್ನು ಬಿಸಾಕುತ್ತಿದ್ದರು. ಅದೇ ಮರು ಕ್ಷಣ ನನ್ನ ಕಾರ್ಯ ಶೈಲಿ ಬದಲಿಸಿಕೊಳ್ಳುತ್ತೇನೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೊಗುತ್ತೇನೆ ಎಂದು ಮೀಡಿಯಾ ಮೂಲಕ ರಾಜ್ಯದ ಜನತೆಗೆ ತಿಳಿಸಿದರು.


ಇನ್ನೇನು ಪ್ರಕರಣ ಮುಗಿದು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸುವ ಹೊತ್ತಿಗೆ ಗೃಹ ಸಚಿವ ವಿ.ಎಸ್. ಆಚಾರ್ಯ ಕರ್ಚೀಪು ತೆಗೆದುಕೊಂಡು ಕಣ್ಣಿನಲ್ಲಿ ಮೂಡಿಬಂದ ಹನಿಗಳನ್ನು ಒರೆಸಿ ಕೊಂಡದ್ದು ಕಾಣಿಸಿತು.
ಯಾರ ಮಾತಿಗೂ ಜಗ್ಗದ, ಬಗ್ಗದ ರೆಡ್ಡಿಗಳನ್ನು ಸುಷ್ಮಾ ಸ್ವರಾಜ್ 'ನನ್ನನ್ನು ನೀವು ತಾಯಿ, ತಾಯಿ ಅಂತೀರಿ. ತಾಯಿಯ ಮಾನ ಉಳಿಸೊಲ್ಲವಾ' ಅಂತ ಗಳ ಗಳ ಅತ್ತರು,'ನನ್ನ ಮಾನ ಉಳಿಸಿ' ಅಂತ ರೆಡ್ಡಿ ಕೈಹಿಡಿದರು, ತಾಯಿಯ ಕಣ್ಣೀರಿಗೆ ಬೆಲೆಕೊಟ್ಟ ರೆಡ್ಡಿ 'ಆಯ್ತು' ಅಂದರು.
ಮುಖ ನೋಡಲ್ಲ ಅಂತಾ ಅವಮಾನಿಸಿದ್ದ ರೆಡ್ಡಿಗಳನ್ನು ಯಡ್ಡಿ, 'ಸಹೋದರರು' ಅಂದರು, ಮುಖದಲ್ಲಿ ನಗುvಸಿಕ್ಕಿಸಿಕೊಂಡು ಪಕ್ಕದಲ್ಲಿ ನಿಂತಿದ್ದ ರೆಡ್ಡಿ ಮತ್ತು ರಾಮುಲು ಕೈಗಳನ್ನು ಪ್ರಯತ್ನ ಪೂರ್ವಕವಾಗಿ ಮೇಲೆತ್ತಿ 'ನಾವೆಲ್ಲಾ ಒಂದು' ಅಂದರು.
ಆ ಕಡೆ ನಿಂತಿದ್ದ ಅನಂತ ಕುಮಾರ್ ತಮ್ಮ ಅಪೂರ್ವ ದಂತ ಪಂಕ್ತಿಯನ್ನು ವಿಶೇಷ ರೀತಿಯಲ್ಲಿ ಪ್ರದರ್ಶಿಸಿದರು.
ಬಿಜಿಪಿಯ ಕ್ರೈಸಿಸ್ ಮ್ಯಾನೇಜರ್ ಅಗಿದ್ದ ಅರುಣ್ ಜೇಟ್ಲಿ ಸದರಿ ಪ್ರಕರಣ ಯಾಕೋ ತನಗೆ ಕೈಗೆಟಕದೇ ಹೋದನ್ನು ಗಮನಿಸಿ ಕಡೆ ಕಡೆಗೆ ಕಾಣಿಸಿಕೊಳ್ಳದೇ ಮಾಯವಾಗಿದ್ದರು.
ಪ್ರಕರಣಕ್ಕೆ ಸಿಕ್ಕ ಮದ್ಯಂತರ ಪರಿಹಾರವನ್ನೇ ಬರ್ಥ್ ಡೇ ಬಾಯ್ ಆಡ್ವಾಣಿಗೆ ಕರ್ನಾಟಕ ಕೊಟ್ಟ ವಿಶೇಷ ಉಡುಗೊರೆ ಅಂತ ಕರೆಯಲಾಯಿತು. ಅದರ ನೆನಪಿಗೆ ಕತ್ತರಿಸಿದ ಕೇಕ್ ಅನ್ನು ಎಲ್ಲರಿಗೂ ತಿನ್ನಸಲಾಯಿತು. ಅದು ಜೀರ್ಣವಾಯಿತಾ... ಅಜೀರ್ಣವಾಗಿದೆಯಾ ಕಾದು ನೋಡಬೇಕು.
ಇನ್ನೊಂದು ಕಡೆ ಜಿನ್ನಾ ಬಗ್ಗೆ ಪುಸ್ತಕ ಬರೆದ ಒಂದೆ ಅಫರಾದಕ್ಕೆ ಪಕ್ಷದಿಂದ ಉಚ್ಚಾಟನೆ ಗೊಂಡ ಜಸ್ವಂತ್ ಸಿಂಗ್ ಸಿಕ್ಕ ಶಿಕ್ಷೆ ಮತ್ತು ಗಣಿ ರೆಡ್ಡಿಗಳು ಪಕ್ಷವನ್ನೇ ಹೈಜಾಕ್ ಮಾಡಿ ಹೈಕಮಾಂಡ್ ಬಂಡವಾಳ ಬಯಲಾಗಿಸಿ ನಂಗಾ ಮಾಡಿದ ಪ್ರಕರಣದಲ್ಲಿ ಸಿಕ್ಕ ಉಡುಗೊರೆ ಬಗ್ಗೆ ಯೋಚಿಸುತ್ತಾ ಏನೂ ಅರ್ಥವಾಗದೇ ನಾನು ದಂಗಾಗಿದ್ದೇನೆ.
ಜೈ ಬಿಜೆಪಿ.

Wednesday, September 23, 2009

'ಅರ್ಧ ದೆಲ್ಲಿಯ ಮಾಲೀಕ'

ಖುಷ್ವಂತ್ ಸಿಂಗ್ ಗೊತ್ತಲ್ಲಾ ಅಂತ ನಾನೇನಾದರೂ ಕೇಳಿದರೇ ನೀವು, ಯಾಕಪ್ಪಾ, ಹೇಗಿದೆ ಮೈಗೆ ಅಂತ ಕೇಳುತ್ತೀರಿ. ಆದರೆ ಅವರಪ್ಪಾ ಯಾರೂ ಗೊತ್ತಾ ಅಂತ ಕೇಳಿದರೆ ಗೊತ್ತಿಲ್ಲಾ ಬಿಡ್ರಿ, ಅದೆಲ್ಲಾ ಯಾಕೆ ಅಂತ ಅನ್ನುತ್ತೀರೇನೋ...

ಪತ್ರಕರ್ತ, ಇತಿಹಾಸಕಾರ, ಸಾಹಿತಿ ಹೀಗೆ ಏನೆಲ್ಲಾ ಆಗಿರುವ ಖುಷ್ವಂತ್ ಸಿಂಗ್ ರ ಅಪ್ಪ ಶೋಭಾ ಸಿಂಗ್ ನ್ಯೂಡೆಲ್ಲಿ ಅಂತ ಕರೆಯಲ್ಪಡುವ ದೆಹಲಿಯ ಪ್ರಮುಖ ಆಕರ್ಷಣೆಗಳಾಗಿರುವ ರಾಷ್ಠ್ರಪತಿ ಭವನ(ಕೆಲವು ಭಾಗ), ಇಂಡಿಯಾಗೇಟ್, ಕನ್ನಾಟ್ ಪ್ಲೇಸ್ , ರೆಡ್ ಕ್ರಾಸ್ ಬಿಲ್ಡಿಂಗ್, ಸೌಥ್ ಬ್ಲಾಕ್ ಸೇರಿದಂತೆ ಹತ್ತಾರು ಹಲವು ಆಕರ್ಷಣೀಯ ಸ್ಮಾರಕಗಳು ಮತ್ತು ಕಟ್ಟಡ ನಿರ್ಮಾಣಗಳ ಕಂಟ್ರಾಕ್ಟರ್ ಆಗಿದ್ದವರು.

1911 ರಲ್ಲಿ ಆಗಿನ ವೈಸ್ ರಾಯ್ ಸರ್ಕಾರ ಕಲ್ಕತ್ತಾದಿಂದ ದೆಹಲಿಗೆ ರಾಜದಾನಿ ಸ್ಥಳಾಂತರ ಮಾಡುವ ತೀರ್ಮಾನ ಕೈಗೊಂಡಾಗ ಇಂಗ್ಲೇಂಡಿನಲ್ಲಿ ಹೆಸರುವಾಸಿಯಾಗಿದ್ದ, ಎಡ್ವಿನ್ ಲೂಟಿಯಾನ್, ಮತ್ತು ಹಬ್ಬರ್ ಬೇಕರ್ ಎಂಬ ಆರ್ಕಿಟೆಕ್ಚ್ ಗಳನ್ನು ಕರೆಸಿ ಹೊಚ್ಚ ಹೊಸ, ಅದ್ಬುತ ರಾಜಧಾನಿ ಕಟ್ಟುವ ಸೂಚನೆ ನೀಡಿದರು. ಅದರ ನಿರ್ಮಾಣದ ಗುತ್ತಿಗೆ ಸಿಕ್ಕಿದ್ದು ತಂದೆ ಮಕ್ಕಳಾದ ಸುಜಾನ್ ಸಿಂಗ್ ಮತ್ತು ಶೋಭಾ ಸಿಂಗ್ ಗೆ. ಸುಜಾನ್ ಸಿಂಗ್ ಹಿಂದಿನಿಂದಲೂ ಹೆಸರುವಾಸಿ ಕಂಟ್ರಾಕ್ಟರ್ ಆಗಿದ್ದರಂತೆ.

ಈಗಿನ ರಾಷ್ಠ್ರಪತಿ ಭವನ ಕಟ್ಟಿದ್ದು ಆಗಿನ ವೈಸ್ ರಾಯ್ ವಾಸಕ್ಕಾಗಿ, ಸೌಥ್ ಬ್ಲಾಕ್ ನಾರ್ಥ್ ಬ್ಲಾಕ್, ಎಲ್ಲವೂ ನಿರ್ಮಾಣವಾಗಿದ್ದು ಬ್ರಿಟೀಷರ ಸೌಖ್ಯಕ್ಕಾಗಿಯೇ, ರಾಷ್ಠ್ರಪತಿ ಭವನ ನಿರ್ಮಾಣಕ್ಕೆ 17 ವರ್ಷ ಹಿಡಿಯಿತು, ಬಹುಶ ಆಂಗ್ಲರಿಗೆ ತಾವು ಒಂದಲ್ಲಾ ಒಂದು ದಿನ ಭಾರತವನ್ನು ಬಿಟ್ಟು ಮನೆಗೆ ನಡೆಯಬೇಕು ಎಂಬ ಕಲ್ಪನೆಯೇ ಇರಲಿಲ್ಲ. ಗುಲಾಮಿ ಬಾರತದಲ್ಲಿ ತಮ್ಮ ಅಧಿಕಾರ ನಿರಂತರ ಎಂಬ ಕಲ್ಪನೆ ಇದ್ದಿದ್ದರಿಂದಲೇ ಬ್ರಿಟೀಷರು ಇಂತಹ ನಿರ್ಮಾಣಕ್ಕೆ ಕೈ ಹಾಕಿದ್ದರು ಎನ್ನಲಾಗುತ್ತದೆ.340 ವಿವಿಧ ಹಾಲ್ ಗಳುಳ್ಳ ರಾಷ್ಠ್ರಪತಿ ಭವನ ನಿರ್ಮಾಣಕ್ಕೆ ಆಗಿನ ಕಾಲಕ್ಕೆ ರಾಷ್ಟ್ರಪತಿ ಭವನ ನಿರ್ಮಾಣಕ್ಕೆ ತಗುಲಿದ ವೆಚ್ಚ 14 ಮಿಲಿಯನ್ ಪೌಂಡ್ ಗಳು. ರಾಷ್ಠ್ರಪತಿ ಭವನದ ಕ್ಲೀನಿಂಗ್ ನಿಂದ ಹಿಡಿದು ಉಸ್ತುವಾರಿ ತನಕ ಎಲ್ಲಕ್ಕೂ 2000 ಮಂದಿ ಕೆಲಸಕ್ಕೆ ಇದ್ದರಂತೆ.

ರಾಷ್ಠ್ರಪತಿ ಭವನ ಮತ್ತು ಹೊಸ ದೆಹಲಿಯ ಪ್ರಮುಖ ಪ್ಲಾನರ್ ಆಗಿದ್ದ ಎಡ್ವಿನ್ ಲೂಟಿಯಾನ್ ಗೆ ವೈಸ್ ರಾಯ್ ಭವನ ನಿರ್ಮಾಣಕ್ಕೆ ಭಾರತೀಯ ಶೈಲಿ ಬಳಸಲು ಕೊಂಚವೂ ಇಷ್ಟ ಇರಲಿಲ್ಲವಂತೆ ಆದರೆ ಆಗಿನ ವೈಸ್ ರಾಯ್ ಹಾರ್ಡಿಂಗ್ ಕನಿಷ್ಠ ವೈಸ್ ರಾಯ್ ಮನೆಯ ಹೊರ ವಿನ್ಯಾಸವಾದರೂ ಭಾರತೀಯ ಶೈಲಿಯಲ್ಲಿರಬೇಕು ಎಂದು ಪಾರ್ಮಾನು ಹೊರಡಿಸಿದ್ದರಿಂದ ಹೊರವಿನ್ಯಾಸ ದೇಸಿ, ಒಳವಿನ್ಯಾಸ ಬ್ರಿಟಿಷ್ ಶೈಲಿಯಲ್ಲಿದೆ.

ಖುಷ್ವಂತ್ ಸಿಂಗರ ಅಪ್ಪ ಶೋಭಾ ಸಿಂಗ್ ನನ್ನ(ಆದಾ ದಿಲ್ಲಿ ಕಾ ಮಾಲಿಕ್) ಅರ್ಧ ಡೆಲ್ಲಿಯ ಓಡೆಯ ಅಂತ ಕರೆಯುತ್ತಿದ್ದರಂತೆ, ಆಗಿನ ಕಾಲಕ್ಕೆ ದೇಶದಲ್ಲೇ ಶ್ರೀಮಂತನಾಗಿದ್ದ ಆತ ಪ್ರತಿ ಅಡಿ ಜಮೀನಿಗೆ 2 ರೂಪಾಯಿ ರೇಟಿಗೆ ಅರ್ಧ ದೆಹಲಿಯನ್ನೇ ಕೊಂಡುಕೊಂಡಿದ್ದನಂತೆ.

ನಾನು ದೆಹಲಿಗೆ ಬಂದು ಇನ್ನೇನು ಒಂದು ವರ್ಷ ಆಗುತ್ತಾ ಬರುತ್ತಿದೆ, ಬಂದ ದಿನದಿಂದ ಇಲ್ಲಿಯವರೆಗೆ ದೆಹಲಿ ಎಂಬ ಬೆಡಗನ್ನು ಬೆರಗಿನಿಂದ ನೋಡುತ್ತಾ ಇದ್ದೇನೆ, ಯಾಕಪ್ಪಾ ಇದೇ ಊರನ್ನು ಕ್ಯಾಫಿಟಲ್ ಸಿಟಿ ಮಾಡಿದರು ಅನ್ನುವುದರಿಂದ ಹಿಡಿದು. 10 ಜನಪತ್ ನ ವೈಶಿಷ್ಠ ಏನು, ಚಾಂದಿನಿ ಚೌಕ್ ನಲ್ಲಿ ವಿಶೇಷವಾಗಿ ಏನು ಸಿಗುತ್ತೆ ಅನ್ನುವ ತನಕ ಕುತೂಹಲದಿಂದ ಸಿಕ್ಕ ಸಿಕ್ಕವರಲ್ಲಿ ವಿಚಾರಿಸಿಕೊಂಡಿದ್ದೇನೆ. ಕೆಲವಕ್ಕೆ ಉತ್ತರ ಸಿಕ್ಕಿವೆ ಇನ್ನು ಕೆಲವಕ್ಕೆ ಸಿಕ್ಕಿಲ್ಲ
ಇಂತಹ ಹಲವು, ವೈಶಿಷ್ಠ್ಯಗಳನ್ನು, ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರವಿದೆ.

Sunday, September 6, 2009

ಉಳ್ಳವರು ಆಗುವರೇನಯ್ಯಾ....?



ಎಂ.ಪಿ. ಪ್ರಕಾಶರ ಒಡನಾಡಿಯಾಗಿರುವ ನನ್ನ ಗೆಳೆಯ ಅನಿಲ್ ಇವತ್ತು ಬೆಳಿಗ್ಗೆ ನನಗೆ ಪೋನ್ ಮಾಡಿ ಹೇಗಿದ್ದೀರಿ ಗೌಡ್ರೇ ಅಂತ ವಿಚಾರಿಸಿದ, ನೀವೇನಪ್ಪಾ ಪತ್ರಕರ್ತರು ಜೀವಮಾನ ಪೂರ್ತಿ ಪ್ರಶ್ನೆ ಹಾಕಿಕೊಂಡೇ ಮಜವಾಗಿ ಇರ್ತಿರಿ ಅಂದ. ನಾನು ನಕ್ಕು 'ಹೌದು ಅನೀಲ್ ಪತ್ರಕರ್ತರಿಗೆ ಸಿಗೋ ಅತಿದೊಡ್ಡ ಸೌಭಾಗ್ಯವೇ ಪ್ರಶ್ನೆ ಹಾಕೋದು. ಈ ವೃತ್ತಿಯಿಂಜ ಕನಿಷ್ಟ ನಮ್ಮ 'ಇಗೋ' ನಾದರೂ ತೃಪ್ತಿಯಾಗುತ್ತೆ' ಅಂದೆ. ಅದಕ್ಕೆ ಪ್ರತಿಕ್ರಿಯಿಸಿದ ಅನಿಲ್ 'ಮೊನ್ನೆ ದೆಹಲಿಗೆ ಬಂದಿದ್ದಾಗ ನೋಡಿದೆ ಕಣಪ್ಪಾ, ನೀನು ಕ್ಯಾಬಿನೆಟ್ ಧರ್ಜೆಯ ಮಂತ್ರಿಯೊಬ್ಬನಿಗೆ ಕಾಲ ಮೇಲೆ ಕಾಲು ಹಾಕಿಕೊಂಡು ಏನ್ರೀ ಸಮಾಚಾರ ಅಂತ ಕೇಳಿದ್ದು' ಅಂದ. ಅದಕ್ಕೆ ನಾನು ಹೇಳಿದೆ. I am Journalist because I enjoy More Demacracy with in Democracy ' ಅಂಥ.

ಭಾನುವಾರದ ಮುಂಜಾನೆಯೇ ಅನಿಲ್ ನೊಂದಿಗಿನ ನನ್ನ ಸಂಭಾಷಣೆ ನನ್ನೊಳಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದವು. ಕೆಲವಕ್ಕೆ ಉತ್ತರ ಸಿಗದೆ ಗೊಂದಲಕ್ಕೆ ಬಿದ್ದೆ ಅವನ್ನ ಇಲ್ಲಿ ಹರವಿದ್ದೇನೆ.

ಯಾರಾದರೂ ಉದ್ಯಮಿಗಳ ಮಕ್ಕಳು ಪತ್ರಕರ್ತರಾಗಿದ್ದಾರಾ?
ಯಾರಾದರೂ ರಾಜಕಾರಣಿಗಳ ಮಕ್ಕಳು ಪತ್ರಕರ್ತರು ಇದ್ದಾರಾ?
ತುಂಬಾ ಹೆಸರು ಮಾಡಿದ ಸಿನೆಮಾ ನಟರ ಮಕ್ಕಳು ಪತ್ರಕರ್ತರು ಆಗಿದ್ದಾರಾ?
ಕೈತುಂಬಾ ಹಣ ದುಡಿಯುವ ವ್ಯಾಪಾರಿಗಳ ಮಕ್ಕಳು ಆಗಿದ್ದಾರಾ ?
ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿ ಇದ್ದವರ ಮಕ್ಕಳು, ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಸಂಪಾದನೆ ಇರುವ ನೌಕರಿಯಲ್ಲಿ ಇರುವವರ ಮಕ್ಕಳು ಪತ್ರಕರ್ತರು ಆಗಿದ್ದಾರ? ಕಟ್ಟಕಡೆಗೆ ಹಣವಂತರ ಮಕ್ಕಳು ಯಾರಾದರೂ ಪತ್ರಿಕಾ ನೌಕರಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರಾ ಎಂಬ ಪ್ರಶ್ನೆಯನ್ನನನಗೆ ನಾನೇ ಕೇಳಿಕೊಂಡೆ.

ಸದ್ಯದ ಪರಿಸ್ಥಿತಿಯಲ್ಲಿ ನಾನು ಬಲ್ಲ, ನನಗೆ ಗೊತ್ತಿರುವ ವಲಯದಲ್ಲಿ ಯಾರೂ ಅಂತಹವರು ಇರುವುದು ನನಗೆ ಗುರುತು ಸಿಗಲಿಲ್ಲ.
ಕಡೆಗೆ ನಾನು ಓದಿದ ಕಾಲೇಜುಗಳಲ್ಲಿ ಜರ್ನಲಿಸಂ ಅನ್ನು ನನ್ನ ಜೊತೆಗೆ ಕಲಿತವರನ್ನು, ವೃತ್ತಿಯ ಬಗ್ಗೆ ಒಂತರಾ ಪ್ಯಾಸಿನೇಟ್ ಆಗಿದ್ದವರ ಬಗ್ಗೆ ಯೋಚಿಸಿದೆ. ಬಹುತೇಕರು ಇಲ್ಲಿ ಸಿಗುವ ಅನುಭವಕ್ಕಾಗಿ ಕೆಲಕಾಲ ಕೆಲಸ ಮಾಡಿ ಬೇರೆ ಕೆಲಸ ಹುಡುಕಿಕೊಂಡರು. ಮತ್ತೆ ಕೆಲವು ಹುಡುಗಿಯರು ವಿದೇಶಗಳಲ್ಲಿ ಕೆಲಸದಲ್ಲಿರುವ ಹುಡುಗರೊಂದಿಗೆ ಮದುವೆಯಾಗಿ ಹೋದರು.

ನನ್ನ ಖಾಸಗಿ ವಲಯದಲ್ಲಿ ಅನುಭವಕ್ಕೆ ಬಂದತೆ ಉಳ್ಳವರು ಮಾದ್ಯಮದ ಉದ್ಯೋಗಗಳಲ್ಲಿ ತೊಡಗುವುದು ಕಡಿಮೆ.
ನಿಮ್ಮ ವಲಯದಲ್ಲಿ ಅಂತವರೂ ಇದ್ದರೂ ಇರಬಹುದು. ಆದರೆ ಅಂತಹ ಉದಾಹರಣೆಗಳು ತೀರಾ ಕಡಿಮೆ ಅನ್ನೊದು ನನ್ನ ನಂಬಿಕೆ.

ಯಾಕೆ ಹೀಗೆ, ಪತ್ರಕರ್ತರು ಕೇವಲ ಬಡವರು, ಮದ್ಯಮ ವರ್ಗದವರು, ರೈತರ ಮಕ್ಕಳು ಮಾಡೋ ಕೆಲಸವಾ. ವ್ಯವಸ್ಥೆಯ ಮೇಲೆ ಕೋಪ ಬೇರೆಯವರಿಗೆ ಯಾಕೆ ಬರೋದಿಲ್ಲಾ ಅಂಥ. ಈ ಸಮಾಜ ಎಲ್ಲರಿಗೂ ಸೇರಿದ್ದು ಅಲ್ಲವಾ. ರಾಜಕಾರಣಿಯ ಮಗ, ಉದ್ಯಮಿಯ ಮಗ ಯಾಕೆ ಪತ್ರಕರಾಗಿ ಅವರ ಅಪ್ಪಂದಿರನ್ನು ಪ್ರಶ್ನೆ ಮಾಡಬಾರದು,
ಆದರೆ ಇವರೇ ಶ್ರೀಮಂತರು, ಮಾದ್ಯಮದ ಉದ್ಯಮಿಗಳಾಗುತ್ತಾರೆ ಯಾಕೆ,

ಇವತ್ತು ಸಣ್ಣದೊಂದು ಮಾದ್ಯಮ ಸಂಸ್ಥೆಯನ್ನು ಹುಟ್ಟುಹಾಕುವುದೂ ನೂರಾರು ಕೋಟಿ ವಿಚಾರ. ಬಡ ಉದ್ಯೋಗಿಗಳು ಇಂತಹ ಸಾಹಸ ಮಾಡುವುದು ಸಾದ್ಯವಾ ಹೇಳಿ, ಸತ್ಯ, ನಿಷ್ಠೆ. ಪ್ರಾಮಾಣಿಕತೆ, ಇವೆಲ್ಲವೂ ಈಗ ಅಶಕ್ತರ ಸ್ವತ್ತುಗಳಾಗಿ ಬದಲಾಗಿದ್ದಾರೂ ಹೇಗೆ. ಯಾವ ಮಾದ್ಯಮದ ಒಡೆಯ ತನ್ನ ಪತ್ರಿಕೆಯ ನೌಕರ ಇಂತ ಕೆಲಸ ಮಾಡಿದ್ದಾನೆ, ಎಷ್ಟು ದೊಡ್ಡ ವ್ಯಕ್ತಿಗೆ ಪ್ರಶ್ನೆ ಕೇಳಿ ದಬಾಯಿಸಿದ್ದಾನೆ ಎಂಬ ಕಾರಣಕ್ಕಾಗಿ ಭಲೆ, ವರದಿಗಾರ ಭಲೆ ಅಂತ ಬೆನ್ನು ತಟ್ಟುತ್ತಾನೆ ಹೇಳಿ.

ಹಾಗೆ ನೋಡಿದರೆ ಮಾದ್ಯಮದಲ್ಲಿ ದುಡಿಯುವ ಮಂದಿಗೆ ಪತ್ರಿಕೋದ್ಯಮ ಆದರ್ಶವಾಗಿದ್ದರೂ, ಅದರ ಓಡೆಯರಿಗೆ ಅದೊಂದು ಲಾಭ ತರುವ ಉದ್ಯಮ ಮಾತ್ರ ಆಗಿರಲಿಕ್ಕೆ ಸಾಕು. ನಮ್ಮೆಲ್ಲ ಪತ್ರಕರ್ತರ ಸತ್ಯ ಆದರ್ಶ, ನಿಷ್ಟೆ, ಸಾಮಾಜಿಕ ಜವಾಬ್ಧಾರಿ, ಎಲ್ಲವೂ ಕೂಡ ಮಾದ್ಯಮ ಉದ್ಯಮಿಯೊಬ್ಬನ ಬಂಡವಾಳದ ಒಂದು ಬಾಗ ಆಗಿರುತ್ತದೆ, ಎಷ್ಟೊಂದು ಒಳ್ಳೆಯ, ಚುರಾಕಾದ, ಪ್ರಕಾಂಡ, ಬುಂದಿವಂತ ಪತ್ರಕರ್ತರು ಇದ್ದಾರೆ ಅನ್ನೊದು ಆಯಾ ಮಾದ್ಯಮದ ಬಂಡವಾಳದ ಪರಿದಿಯಲ್ಲೆ ಅಡಗಿದೆ ಅನಿಸುತ್ತದೆ.

ಕಾನೂನಿನ ಪ್ರಕಾರ ಯಾರೊಬ್ಬರಿಗೂ ಪತ್ರಿಕಾ ಉದ್ಯಮದಲ್ಲಿ ತೊಡಗುವ ಸ್ವಾತಂತ್ರ ಇದೆ, ಆದರೂ ಅದು ವಾಸ್ತವ ಸುಲಭದ ಸಂಗತಿ ಅಲ್ಲ ಅನ್ನೊದನ್ನ ಬಹುತೇಕರು ಒಪ್ಪುವ ಸಂಗತಿ. ಪತ್ರಿಕೊದ್ಯಮವನ್ನು ನೊಬೆಲ್ ಪ್ರೊಫೆಷನ್ ಅನ್ನುವ ಕಾಲ ಕಳೆದು ಹೊಗಿದೆ ಅಂತ ಅನಿಸುತ್ತೆ. ಗಾಂಧಿ, ಅಂಬೇಡ್ಕರರು ಪತ್ರಿಕೊದ್ಯಮವನ್ನು ಹೋರಾಟಕ್ಕೆ ಬಳಸಿಕೊಂಡ ಕಾಲ ಮತ್ತೆ ಬರುತ್ತದಾ ಅನ್ನೊ ಅನುಮಾನಗಳು ಇವೆ.

ಸಮಾಜದ ಅಶಕ್ತರು, ಬಡವರು, ಮದ್ಯಮ ವರ್ಗದವರಿಗೆ ಮಾತ್ರ ಪತ್ರಿಕೊದ್ಯಮವೊಂದು ಪ್ರಭಾವಿ ನೌಕರಿ ಅನ್ನಿಸುತ್ತಿದೆ, ಬೇರೆ ಯಾರಿಗೂ ಅಲ್ಲ ಅನ್ನೊದು ನನ್ನ ಬಲವಾದ ನಂಬಿಕೆ, ಬಹುಶ ನಿಮಗೂ ಹಾಗೆ ಅನ್ನಿಸುತ್ತೆ ಅನ್ನೊದು ನನ್ನ ಗ್ರಹಿಕೆ.
ಯಾವಾಗ ರಾಜಕಾರಣಿಯ ಮಗ, ಉದ್ಯಮಿಯ ಮಗ, ವ್ಯಾಪಾರಿಯ ಮಗ, ಶ್ರೀಮಂತನ ಮಗ ಪತ್ರಕರ್ತರಾಗಿ, ನಮ್ಮೊಂದಿಗೆ ನಿಂತು, ಪ್ರಶ್ನೆಗೆ ಉತ್ತರ ಕೇಳುವ ಪ್ರಸಂಗ ಬರುತ್ತದೋ ಅವತ್ತು ಮಾದ್ಯಮ ವೃತ್ತಿಯನ್ನ ಆದರ್ಶದ ವೃತ್ತಿ ಅಂತ ನಾವೆಲ್ಲ ಒಪ್ಪಬಹುದೇನೋ......!!

Tuesday, September 1, 2009

ಕಡೇ ಗುಳಿಗಿ.



ಲೋಕಸಭಾ ಚುನಾವಣೆಗಳು ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಹಜವಾಗೇ ಡೆಲ್ಲಿ ಬಣಗುಡುತ್ತಿದೆ. ಮಾಹಾಚುನಾವಣೆಯ ರಂಗಿಗೆ ಅಡ್ಡಾಗಿದ್ದ ಊರು ದಿಡೀರ್ ಅಂತ ಕ್ಷೋಬೆಗೆ ಒಳಗಾದಂತೆ ಅನ್ನಿಸುವ ಸಮಯಕ್ಕೆ ಮತ್ತೆ ಬಿಜೆಪಿಯಲ್ಲಿ ಎದ್ದ ಅಂತರಿಕ ಕಲಹದಿಂದ ಮತ್ತೆ ರಾಜಕೀಯ ರಂಗೇರಿತ್ತು.

ಈಗ ಎಲ್ಲೆಲ್ಲೂ ಬಿಜೆಪಿಯದೇ ಸುದ್ದಿ, ಹೇಗಿದ್ದ ಪಕ್ಷಕ್ಕೆ ಏನಾಯ್ತಪ್ಪ ಅನ್ನೋ ಚರ್ಚೆ.

ಚುನಾವಣೆಗಳಲ್ಲಿ ಸೋತ ಪಕ್ಷದಲ್ಲಿ ಇಂತ ಪ್ರಕ್ರಿಯೆಗಳು ಆಗೋದು ಸಹಜ. ಸೋತಾಗಲೇ ವಾಸ್ತವ ಗೊತ್ತಾಗೋದು ಅನ್ನೊದಕ್ಕೆ ಈಗಿನ ಬಿಜೆಪಿಯೇ ಉದಾಹರಣೆ, ಹೊಟ್ಟೆ ಒಳಗಿನ ಕ್ಯಾನ್ಸರ್ ಎಷ್ಠು ದಿನಾ ಅಂಥ ಗೊತ್ತಾಗದೇ ಇರುತ್ತೇ ಹೇಳಿ.

ಮೊದಲೇ ಮಸಾಲ ಸುದ್ದಿಯೇ ಇಲ್ಲದೆ ಬೇಜಾರಾಗಿದ್ದ ಮೀಡಿಯಾಗಳಿಗೆ ಈಗ ಬಿಜೆಪಿ ಒಳ್ಳೇ ಅಹಾರ ಒದಗಿಸುತ್ತಿದೆ. ಸ್ವೈನ್ ಪ್ಲೂ ಭೂತವನ್ನು ಸಿಕ್ಕಾಪಟ್ಟೆ ದುರುಪಯೋಗ ಮಾಡುತ್ತಿದ್ದ ಮಾದ್ಯಮಗಳ ಕಣ್ಣು, ಜಸ್ವಂತ್ ಸಿಂಗ್ ಬಿಟ್ಟ ಜಿನ್ನಾ ಭೂತದ ಕಡೆಗೆ ಹೊರಳಿದ್ದು ಒಳ್ಳೆಯದೇ ಆಯ್ತು ಅನ್ನಿ.

ಬಿಜೆಪಿ ಚುನಾವಣೆಗಳಲ್ಲಿ ಅಕರಾಳ ವಿಕರಾಳವಾಗಿ ಸೋತಾಗಲೇ, ಇನ್ನು ಮುಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯನ್ನ ಟೇಕ್ ಓವರ್ ಮಾಡುತ್ತೆ ಅನ್ನೊ ಚರ್ಚೆ ಎದ್ದಿತ್ತು. ಆದರೆ ಅದನ್ನ ಈಗ ಆರ್ ಎಸ್ ಎಸ್ ಈಗ ಮಾಡುತ್ತಿದೆ. ಹಾಗೆ ಮಾಡೋದರಲ್ಲಿ ತಪ್ಪೇನು ಇರಲಾರದು. ಆದರೆ ಎಲ್ಲವನ್ನೂ ಜಗತ್ತಿಗೆ ಗೊತ್ತಾಗುವಂತೆ ಮಾಡುತ್ತಲೇ, 'ಸಂಘಕ್ಕೊ ಬಿಜೆಪಿಗೂ ಸಂಭಂದವಿಲ್ಲ', 'ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ರಾಜಕೀಯ ಮಾಡೋಲ್ಲ' ಅಂತೆಲ್ಲಾ ಪುಂಗಿ ಊದಿದರೇ ಆಗೋ ಲಾಭ ಅದೇನೋ ನನಗೆ ತಿಳಿಯೋಲ್ಲ.

ಹಾಗೆ ನೋಡಿದರೆ ಬಿಜೆಪಿಯಲ್ಲಿ ಚುನಾವಣೆಗಳು ಮುಗಿದ ಮೂರು ತಿಂಗಳಿಗೆ ಪಕ್ಷದಲ್ಲಿ ಅಂತರಿಕ ಕಲಹ ಬೀದಿಗೆ ಬಂದಿರೋದು ಕಾಂಗ್ರೆಸ್ ಪಾಲಿಗೆ ಕೆಟ್ಟ ಬೆಳವಣಿಗೆಯೇ ಸರಿ. ಮುಂದೆ ಚುನಾವಣೆಗಳು ಬರೋದು ಐದು ವರ್ಷಕ್ಕೆ ಆದರಿಂದ ಈಗಲೇ ಅಂತರಿಕ ಬಿಕ್ಕಟ್ಟು ಶಮನವಾಗಿ ಬಿಜೆಪಿ ಪಕ್ಷ ಚೇತರಿಸಿಕೊಂಡು ಮತ್ತೆ ಪ್ರಭಲ ಆಗಬಹುದು.

ಅದೆಲ್ಲ ಒತ್ತಟ್ಟಿಗೆ ಇರಲಿ, ಬಿಜೆಪಿ ಪಕ್ಷ ಮೀಡಿಯಾ ಕ್ರಿಯೇಟೆಡ್ ಪಕ್ಷ ಅದನ್ನ ಮೀಡಿಯಾದವರೇ ಹಾಳುಮಾಡುತ್ತಾರೆ ಅಂತ ಹೇಳುತ್ತಾರೆ. ಹಿಂದೊಮ್ಮೆ ಅರುಣ್ ಶೌರಿಯೇ ಬಿಜೆಪಿ ಪಕ್ಷ ಆರು ಜನ ಪತ್ರಕರ್ತರಿಂದ ನಿಯಂತ್ರಿಸಲ್ಪಡುತ್ತಿದೆ ಅಂತ ಟೀಕೆ ಮಾಡಿದ್ದರು. ಹಾಗೆ ನೊಡಿದರೆ ಬಿಜೆಪಿಯಲ್ಲಿದ್ದಷ್ಟು ಮಾಜಿ ಪತ್ರಕರ್ತರು, ಅಥವಾ ನ್ಯೂಸ್ ರೂಂಗಳಲ್ಲಿ ಕುಳಿತೇ ಬಿಜೆಪಿಯನ್ನು ಅಂತರಸಾಕ್ಷಿಯಿಂದ ಬೆಂಬಲಿಸುವ ಪತ್ರಕರ್ತರು ದೇಶದ ಯಾವ ಪಕ್ಷಕ್ಕೂ ಇರಲಿಕ್ಕಿಲ್ಲ. ಆರ್ ಎಸ್ ಎಸ್ ಮೂಲದಿಂದ ಬಂದ ಸಾವಿರಾರು ಮಂದಿ ಸುದ್ದಿ ಮನೆಗಳಲ್ಲಿ ಕುಳಿತು ಸದ್ದಿಲ್ಲದೆ ಸುದ್ದಿ ಮಾಡುತ್ತಾರೆ.

ಅದಕ್ಕೆ ನನಗೆ ಸಿಕ್ಕ ಸಾಕ್ಷ ಏನಪ್ಪಾ ಅಂದರೆ, ಮೊನ್ನೆ ಬಿಜೆಪಿಯಲ್ಲಿ ಗದ್ದಲ ತೀರ್ವಗೊಂಡಿದ್ದಾಗ ಪತ್ರಕರ್ತ ಮಿತ್ರನೊಬ್ಬನ ಮೊಬೈಲ್ ಗೆ ಆರ್ ಎಸ್ ಎಸ್ ಕೇಂದ್ರ ಕಚೇರಿಯಿಂದ ಒಂದು ತುರ್ತು ಸಂದೇಶ ಬಂತು.
ಸಂದೇಶ ಏನಪ್ಪಾ ಅಂದರೆ. 'ಎಲ್ಲಾ ಸ್ವಯಂ ಸೇವಕ ಪತ್ರಕರ್ತರೂ ಸಂಜೆ 3 ಗಂಟೆಗೆ ಸಂಘದ ಕಚೇರಿಗೆ ಬನ್ನಿ ಬಹುಮುಖ್ಯವಾದ ವಿಷಯ ಚರ್ಚಿಸಬೇಕಿದೆ' ಅಂತ.

ನನಗಂತೂ ಸಂದೇಶ ನೋಡಿ ಅಚ್ಚರಿಯಾಯ್ತು, ಹೇಗೆ ಆರ್ ಎಸ್ ಎಸ್ ಕಬಂದಬಾಹುಗಳು ಹರಡಿವೆ ಅಂತ ಯೋಚಿಸುವಂತಾಯಿತು. 'ಸ್ವಯಂ ಸೇವಕ' ಪತ್ರಕರ್ತರಿಗೆ ಆರ್ ಎಸ್ ಎಸ್ ಪಂಡಿತರು ಏನೇನು ಹೇಳಿದರು, ಕಲಿಸಿಕೊಟ್ಟರು ಅನ್ನೊ ಕುತೂಹಲ ಈಗ ನನಗೆ ಹೆಚ್ಚಾಗಿದೆ. ಸ್ವಯಂ ಸೇವಕರು ಅದನ್ನೆಲ್ಲಾ ಬಿಚ್ಚಿ ಹೇಳುತ್ತಾರಾ ಗೊತ್ತಿಲ್ಲ.

ಕಡೇ ಗುಳಿಗಿ.
ಕೆಲವರು ಬೆಳೆಯುತ್ತಾ ಬೆಳೆಯುತ್ತಾ ಚಡ್ಡಿ ಹಾಕಿಕೊಳ್ಳುತ್ತಾರೆ, ಮತ್ತೆ ಕೆಲವರು ಹುಟ್ಟುವಾಗಲೇ ಚಡ್ಡಿ ಹಾಕಿಕೊಂಡೇ ಹುಟ್ಟಿರುತ್ತಾರೆ...!!

Wednesday, August 19, 2009

ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ...?

ಉತ್ತರ ಪ್ರದೇಶ ಮಂತ್ರಿ ಮಾಯಾವತಿ ಯಾವಾಗಲೂ ಏನಾದರೊಂದು ವಿವಾದ, ರಾಜಕೀಯ ನಿರ್ಣಯ, ಗಲಾಟೆ ಮಾಡಿಕೊಂಡು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಾನೆ ಬಾಷಣವೊಂದರಲ್ಲಿ ತನ್ನನ್ನು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಜೋಶಿ ಕೆಟ್ಟದಾಗಿ ಟೀಕಿಸಿದಳು ಅನ್ನೊ ಕಾರಣಕ್ಕೆ ಅವರ ಮೇಲೆ ಅಟ್ರಾಸಿಟಿ ಕೇಸು ಹಾಕಿ ಜೈಲಿಗೆ ಅಟ್ಟಿದ್ದರು. ಈಗ ಮತ್ತೆ ಸುದ್ದಿಯಾರುತ್ತಿರೋದು ಲಕ್ನೋದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆನೆಗಳ ಪಾರ್ಕ್ ಮಾಡುತ್ತಿರುವುದಕ್ಕಾಗಿ. ಸದ್ಯಕ್ಕೆ ಈ ಪ್ರಕರಣ ಸುಪ್ರಿಂಕೋರ್ಟ್ ನ ಕೆಂಗಣ್ಣಿಗೆ ಗುರಿಯಾಗಿದೆ ಕೂಡ.

ಈ ಮಾಯಾವತಿ ಎಂತ ಹುಚ್ಚಿನ ಹೆಣ್ಣು ಅಂದರೆ, ತಾನು ಬದುಕಿದ್ದಾಗಲೇ ಆಕೆಗೆ ತನ್ನನ್ನು ತಾನೆ ಅಜರಾಮರ ಮಾಡಿಕೊಂಡು ಬಿಡುವ ಉಮ್ಮೇದಿ. ಅದಕ್ಕಂತಲೆ ತನ್ನ ಗುರು ಕಾನ್ಕ್ಷಿರಾಮ್, ತನ್ನ ಪಕ್ಷದ ಗುರುತು ಆನೆ, ಮತ್ತು ಸ್ವತ ತನ್ನದೆ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಈಗ ಎಲ್ಲೆಡೆಯಿಂದ ಟೀಕೆ ಎದುರಿಸಬೇಕಾಗಿದೆ.

ಆಕೆ ಮಾಡುತ್ತಿರುವುದು ಸರಿಯೋ ತಪ್ಪೋ ಅನ್ನೊದು ಬೇರೆಯದೇ ಚರ್ಚೆ, ಈಗ ಸುಪ್ರಿಂ ಕೋರ್ಟ್ ನಲ್ಲಿ ಮಾಯಾವತಿಯ ಪರವಾಗಿ ರಕ್ಷಾಬಂಧನದಂತೆ ಕಾಯಬಹುದಾದ ಐಡಿಯಾ ಸಿಕ್ಕಿದೆ ಅಂತಹ ಸೂಪರ್ ಐಡಿಯಾದ ಜನಕ ಒಬ್ಬ ಕನ್ನಡಿಗ ಅನ್ನೊಂದು ವಿಶೇಷ. ದೆಹಲಿಯ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರುಮಾಡಿರುವ, ಸರಿಸುಮಾರು 30 ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ, ಹಾಸನ ಜಿಲ್ಲೆಯವರಾದ, ಅರಕಲಗೂಡು ಸೂರ್ಯಪ್ರಕಾಶ್.


ಕಳೆದ ಲೋಕಸಭಾ ಚುನಾವಣೆಗಳಿಗೂ ಮುಂಚೆ ಎ.ಸೂರ್ಯಪ್ರಕಾಶ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟು ದೇಶದಲ್ಲಿರೋ ಕಾನೂನಿನ ಪ್ರಕಾರ ಚುನಾವಣೆ ನಡೆಸಲು ಎಲ್ಲಾ ಪಕ್ಷಗಳಿಗೂ ಲೆವೆಲ್ ಪ್ಲೆಯಿಂಗ್ ಗ್ರೌಂಡ್ ಇರಬೇಕು. ಆದರೆ ಕಾಂಗ್ರೆಸ್ ಪಕ್ಷದ ಕಾರಣದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವಪಕ್ಷಕ್ಕೂ ಆ ರೀತಿಯ ಪರಿಸ್ಥಿತಿ ಇಲ್ಲ, ಯಾಕಂದರೆ ದೇಶವನ್ನು ಬಹಳ ವರ್ಷ ಆಳಿದ ಕಾಂಗ್ರೆಸ್ ಪಕ್ಷ ತುಂಬಾ ವ್ಯವಸ್ಥಿತವಾಗಿ ಕಾಂಗ್ರೆಸ್ ಮತ್ತು ಗಾಂಧಿ ಪ್ಯಾಮಿಲಿ 'ಬ್ರಾಂಡ್' ಅನ್ನು ಜನರ ಮೇಲೆ ಹೇರಿದೆ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು, ವಿವಿಧ ರಾಜ್ಯಗಳಲ್ಲಿ ನೂರಾರು ಯೋಜನೆಗಳನ್ನು ಗಾಂಧಿ ಕುಟುಂಬದವರ ಹೆಸರಿನಲ್ಲಿ ಆರಂಭಿಸಿದ್ದಾರೆ. ಸರಿಸುಮಾರು 450 ಯೋಜನೆಗಳಿಗೆ ರಾಜೀವ್, ಇಂದಿರಾ, ಜವಹರ್ ಲಾಲ್ ನೆಹರು ಅವರ ಹೆಸರನ್ನ ಇಡಲಾಗಿದೆ. ಆ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣವನ್ನು ಈ ಯೋಜನೆಗಳ ಮೂಲಕ ವೆಚ್ಚ ಮಾಡಿ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಭವನ್ನು ಪ್ರಮೋಟ್ ಮಾಡಲಾಗಿದೆ ಇದೆಲ್ಲಾ ಯಾಕೆ ಅಂಥ ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು.

ಕುಡಿಯುವ ನೀರಿಗೆ, ರಾಷ್ಟ್ರೀಯ ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಅನ್ನೊ ಹೆಸರು.
ವಿದ್ಯುತ್ ಸರಬರಾಜಿಗೆ, ರಾಜೀವ್ ಗಾಂಧಿ ವಿದ್ಯದ್ದೀಕರಣ ಯೋಜನೆ,
ಮನೆ ಕಟ್ಟಲು ಇಂದಿರಾ ಆವಾಸ್ ಯೋಜನೆ.
ಜವಹರ್ ಲಾಲ್ ರೋಜಗಾರ್ ಯೋಜನೆ.
ಇವೆ ಅಲ್ಲ . ಕಾಲೇಜು, ಪಾರ್ಕು, ಆಸ್ಪತ್ರೆ, ಮೈದಾನ, ರಸ್ತೆ, ಪದಕ, ಪಂದ್ಯಾವಳಿ, ಸ್ಕಾಲರ್ ಶಿಪ್ಪು ಸೇರಿದಂತೆ ನೂರಾರು ಕಾರ್ಯಕ್ರಮಗಳು ಇವರ ಹೆಸರಲ್ಲೇ ಏಕೆ ಇರಬೇಕು ಗಾಂಧಿ ಕುಂಟುಂಬದವರೂ ದಿನಾ ನೋಟು ಪ್ರಿಂಟು ಮಾಡಿ ಇವನ್ನೆಲ್ಲಾ ಮಾಡಿಸಿದರಾ, ರಾಷ್ಠ್ರದ ಹಣವನ್ನೇ ಅದರ ಪ್ರಜೆಗಳಿಗಾಗಿ ಕೊಟ್ಟಿದ್ದಾರೆ.
ಕೇಂದ್ರದ ಸರ್ಕಾರದ ಇಂತಹ ಯೋಜನೆಗಳಿಗೆ ನ್ಯೂಟ್ರಲ್ ಆದ ಹೆಸರುಗಳನ್ನು ಇಡಬೇಕು, ಉದಾಹಣೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಯೋಜನೆ, ರಾಷ್ಟ್ರೀಯ ಜಲ ಯೋಜನೆ, ಅನ್ನೊಥರದ ಹೆಸರುಗಳನ್ನು ಇಡಲಿ
ಅನ್ನೊದು ಸೂರ್ಯಪ್ರಕಾಶ್ ವಾಧ.

ಇದೇ ವಿಶಯವನ್ನಿಟ್ಟುಕೊಂಡು ಸೂರ್ಯಪ್ರಕಾಶ್ ಕಳೆದ ಎರಡು ಮೂರು ವರ್ಷಗಳಿಂದ ಇದನ್ನ ಇನ್ವೆಸ್ಟಿಗೇಟ್ ಮಾಡುತ್ತಿದ್ದಾರೆ, ದೇಶದ ಪ್ರತಿ ರಾಜ್ಯದಿಂದ ಮಾಹಿತಿ ಕಲೆಹಾಕಿದ್ದಾರೆ, ಎಷ್ಟು ಹಣ ಈ ಯೋಜನೆಗಳ ಹೆಸರಲ್ಲಿ ವೆಚ್ಚವಾಗಿದೆ ಅನ್ನೊ ಮಾಹಿತಿ ಪಡೆದು ಚುನಾವಣಾ ಆಯೋಗದ ಮುಂದೆ ಕಂಪ್ಲೇಂಟು ಕೊಟ್ಟು ಕಾಯುತ್ತಿದ್ದಾರೆ. ಚುನಾವಣೆ ಮುಗಿದರೂ ಚುನಾವಣಾ ಆಯೋಗದಿಂದ ಉತ್ತರ ಬಂದಿಲ್ಲ.

ಯಾಕಂದರೆ ಅದು ಗಾಂಧಿ ಪ್ಯಾಮಿಲಿ. ಅದೇ ಮಾಯಾವತಿ ಕೇಸು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಾಧ ವಿವಾದ ನಡೆಯುತ್ತಿದೆ, ಕೇಸು ಸುಪ್ರಿಂಕೋರ್ಟಿನಲ್ಲಿದೆ. ಆದರೆ ಮಾಯಾವತಿ ಪರ ವಾಧ ಮಾಡುತ್ತಿರುವ ಸತೀಶ್ ಮಿಶ್ರಾ, ಈಗ ಕನ್ನಡಿಗ ಸೂರ್ಯಪ್ರಕಾಶ್ ಅವರ ಅದ್ಯಯನವನ್ನು ತಮ್ಮ ಕೇಸಿನಲ್ಲಿ ಬಳಸಿಕೊಂಡಿದ್ದಾರೆ. ಮೊದಲು ಗಾಂಧಿ ಪ್ಯಾಮಿಲಿ ಕೂಡ ಸರ್ಕಾರದ ಹಣವನ್ನ ಗಾಂಧಿ ಪ್ಯಾಮಿಲಿ ಹೆಸರಿಗೆ ಬಳಸಿಕೊಂಡಿದೆ. ಮೊದಲು ಅವರ ಹೆಸರಿನ ಯೋಜನೆಗಳಿಂದ ಅವರ ಹೆಸರು ಕಿತ್ತು ಹಾಕಿ ಅಂತ ಕೇಳುತ್ತಿದ್ದಾರೆ. ಕೋರ್ಟು ಏನು ಮಾಡುತ್ತೋ ಗೊತ್ತಿಲ್ಲ.

ಅಂದ ಹಾಗೆ, ಅರಕಲಗೂಡು ಸೂರ್ಯಪ್ರಕಾಶ್ ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿ ವರದಿಗಾರರಾಗಿದ್ದವರು. ನಂತರ ದೆಹಲಿಗೆ ಬಂದು ಇಂಡಿಯನ್ ಎಕ್ಸಪ್ರೆಸ್ಸಿನ ಬ್ಯೂರೋ ಚೀಫ್, ಈ ನಾಡು ಪತ್ರಿಕೆಯ ಪೊಲಟಿಕಲ್ ಎಡಿಟರ್, ಪಯನೀರ್ ಪತ್ರಿಕೆ ಸಂಪಾದಕ, ಪಯನೀರ್ ಜರ್ನಲಿಸಂ ಸ್ಕೂಲಿನ ಪೌಂಡರ್ ಸೇರಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದವರು. ಅಡ್ವಾಣಿಯವರ ಆತ್ಮಕಥನ ಮೈಕಂಟ್ರಿ ಮೈ ಲೈಪ್ ಪುಸ್ತಕ ಬರೆಯುವಾಗ ಅಡ್ವಾಣಿಗೆ ನೆರವಾಗಿದ್ದವರು. ಸರಿಸುಮಾರು ನಲವತ್ತು ವರ್ಷಗಳನ್ನು ಪತ್ರಿಕೊದ್ಯಮದ ಗರಡಿ ಮನೆಯಲ್ಲಿ ಸವೆಸಿದವರು.
ಮೊನ್ನೆ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಹೊಸ ತಲೆಮಾರಿನ ಪತ್ರಕರ್ತರೊಂದಿಗೆ ಅವರು ಮಾತಿಗೆ ಸಿಕ್ಕಿ ತಮ್ಮ ಕೆಲವು ಅನುಭವಗಳನ್ನು ಹಂಚಿಕೊಂಡರು. ಮಾತೆಲ್ಲ ಮುಗಿದ ಮೇಲೆ 'ಸಾರ್ ನಿಮ್ಮ ಬಗ್ಗೆ ನನ್ನ ಖಾಸಗಿ ಡೈರಿ ಬ್ಲಾಗ್ ನಲ್ಲಿ ಬರೀಲಾ, ಅಂದೆ. ಅದಕ್ಕವರು 'ಖಂಡಿತವಾಗಿಯೂ ಬರೆಯಪ್ಪ ಜೊತೆಗೆ ನನ್ನ ವೆಬ್ ಸೈಟಿನ ಲಿಂಕ್ ಕೊಡು ಆಸಕ್ತಿ ಇದ್ದವರೆಲ್ಲಾ ಓದಲಿ' ಅಂದರು.
ಲಿಂಕ್ ಇಲ್ಲಿವೆ.
http://www.asuryaprakash.com/