Wednesday, August 19, 2009

ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ...?

ಉತ್ತರ ಪ್ರದೇಶ ಮಂತ್ರಿ ಮಾಯಾವತಿ ಯಾವಾಗಲೂ ಏನಾದರೊಂದು ವಿವಾದ, ರಾಜಕೀಯ ನಿರ್ಣಯ, ಗಲಾಟೆ ಮಾಡಿಕೊಂಡು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಾನೆ ಬಾಷಣವೊಂದರಲ್ಲಿ ತನ್ನನ್ನು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಜೋಶಿ ಕೆಟ್ಟದಾಗಿ ಟೀಕಿಸಿದಳು ಅನ್ನೊ ಕಾರಣಕ್ಕೆ ಅವರ ಮೇಲೆ ಅಟ್ರಾಸಿಟಿ ಕೇಸು ಹಾಕಿ ಜೈಲಿಗೆ ಅಟ್ಟಿದ್ದರು. ಈಗ ಮತ್ತೆ ಸುದ್ದಿಯಾರುತ್ತಿರೋದು ಲಕ್ನೋದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆನೆಗಳ ಪಾರ್ಕ್ ಮಾಡುತ್ತಿರುವುದಕ್ಕಾಗಿ. ಸದ್ಯಕ್ಕೆ ಈ ಪ್ರಕರಣ ಸುಪ್ರಿಂಕೋರ್ಟ್ ನ ಕೆಂಗಣ್ಣಿಗೆ ಗುರಿಯಾಗಿದೆ ಕೂಡ.

ಈ ಮಾಯಾವತಿ ಎಂತ ಹುಚ್ಚಿನ ಹೆಣ್ಣು ಅಂದರೆ, ತಾನು ಬದುಕಿದ್ದಾಗಲೇ ಆಕೆಗೆ ತನ್ನನ್ನು ತಾನೆ ಅಜರಾಮರ ಮಾಡಿಕೊಂಡು ಬಿಡುವ ಉಮ್ಮೇದಿ. ಅದಕ್ಕಂತಲೆ ತನ್ನ ಗುರು ಕಾನ್ಕ್ಷಿರಾಮ್, ತನ್ನ ಪಕ್ಷದ ಗುರುತು ಆನೆ, ಮತ್ತು ಸ್ವತ ತನ್ನದೆ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಈಗ ಎಲ್ಲೆಡೆಯಿಂದ ಟೀಕೆ ಎದುರಿಸಬೇಕಾಗಿದೆ.

ಆಕೆ ಮಾಡುತ್ತಿರುವುದು ಸರಿಯೋ ತಪ್ಪೋ ಅನ್ನೊದು ಬೇರೆಯದೇ ಚರ್ಚೆ, ಈಗ ಸುಪ್ರಿಂ ಕೋರ್ಟ್ ನಲ್ಲಿ ಮಾಯಾವತಿಯ ಪರವಾಗಿ ರಕ್ಷಾಬಂಧನದಂತೆ ಕಾಯಬಹುದಾದ ಐಡಿಯಾ ಸಿಕ್ಕಿದೆ ಅಂತಹ ಸೂಪರ್ ಐಡಿಯಾದ ಜನಕ ಒಬ್ಬ ಕನ್ನಡಿಗ ಅನ್ನೊಂದು ವಿಶೇಷ. ದೆಹಲಿಯ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರುಮಾಡಿರುವ, ಸರಿಸುಮಾರು 30 ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ, ಹಾಸನ ಜಿಲ್ಲೆಯವರಾದ, ಅರಕಲಗೂಡು ಸೂರ್ಯಪ್ರಕಾಶ್.


ಕಳೆದ ಲೋಕಸಭಾ ಚುನಾವಣೆಗಳಿಗೂ ಮುಂಚೆ ಎ.ಸೂರ್ಯಪ್ರಕಾಶ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟು ದೇಶದಲ್ಲಿರೋ ಕಾನೂನಿನ ಪ್ರಕಾರ ಚುನಾವಣೆ ನಡೆಸಲು ಎಲ್ಲಾ ಪಕ್ಷಗಳಿಗೂ ಲೆವೆಲ್ ಪ್ಲೆಯಿಂಗ್ ಗ್ರೌಂಡ್ ಇರಬೇಕು. ಆದರೆ ಕಾಂಗ್ರೆಸ್ ಪಕ್ಷದ ಕಾರಣದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವಪಕ್ಷಕ್ಕೂ ಆ ರೀತಿಯ ಪರಿಸ್ಥಿತಿ ಇಲ್ಲ, ಯಾಕಂದರೆ ದೇಶವನ್ನು ಬಹಳ ವರ್ಷ ಆಳಿದ ಕಾಂಗ್ರೆಸ್ ಪಕ್ಷ ತುಂಬಾ ವ್ಯವಸ್ಥಿತವಾಗಿ ಕಾಂಗ್ರೆಸ್ ಮತ್ತು ಗಾಂಧಿ ಪ್ಯಾಮಿಲಿ 'ಬ್ರಾಂಡ್' ಅನ್ನು ಜನರ ಮೇಲೆ ಹೇರಿದೆ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು, ವಿವಿಧ ರಾಜ್ಯಗಳಲ್ಲಿ ನೂರಾರು ಯೋಜನೆಗಳನ್ನು ಗಾಂಧಿ ಕುಟುಂಬದವರ ಹೆಸರಿನಲ್ಲಿ ಆರಂಭಿಸಿದ್ದಾರೆ. ಸರಿಸುಮಾರು 450 ಯೋಜನೆಗಳಿಗೆ ರಾಜೀವ್, ಇಂದಿರಾ, ಜವಹರ್ ಲಾಲ್ ನೆಹರು ಅವರ ಹೆಸರನ್ನ ಇಡಲಾಗಿದೆ. ಆ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣವನ್ನು ಈ ಯೋಜನೆಗಳ ಮೂಲಕ ವೆಚ್ಚ ಮಾಡಿ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಭವನ್ನು ಪ್ರಮೋಟ್ ಮಾಡಲಾಗಿದೆ ಇದೆಲ್ಲಾ ಯಾಕೆ ಅಂಥ ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು.

ಕುಡಿಯುವ ನೀರಿಗೆ, ರಾಷ್ಟ್ರೀಯ ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಅನ್ನೊ ಹೆಸರು.
ವಿದ್ಯುತ್ ಸರಬರಾಜಿಗೆ, ರಾಜೀವ್ ಗಾಂಧಿ ವಿದ್ಯದ್ದೀಕರಣ ಯೋಜನೆ,
ಮನೆ ಕಟ್ಟಲು ಇಂದಿರಾ ಆವಾಸ್ ಯೋಜನೆ.
ಜವಹರ್ ಲಾಲ್ ರೋಜಗಾರ್ ಯೋಜನೆ.
ಇವೆ ಅಲ್ಲ . ಕಾಲೇಜು, ಪಾರ್ಕು, ಆಸ್ಪತ್ರೆ, ಮೈದಾನ, ರಸ್ತೆ, ಪದಕ, ಪಂದ್ಯಾವಳಿ, ಸ್ಕಾಲರ್ ಶಿಪ್ಪು ಸೇರಿದಂತೆ ನೂರಾರು ಕಾರ್ಯಕ್ರಮಗಳು ಇವರ ಹೆಸರಲ್ಲೇ ಏಕೆ ಇರಬೇಕು ಗಾಂಧಿ ಕುಂಟುಂಬದವರೂ ದಿನಾ ನೋಟು ಪ್ರಿಂಟು ಮಾಡಿ ಇವನ್ನೆಲ್ಲಾ ಮಾಡಿಸಿದರಾ, ರಾಷ್ಠ್ರದ ಹಣವನ್ನೇ ಅದರ ಪ್ರಜೆಗಳಿಗಾಗಿ ಕೊಟ್ಟಿದ್ದಾರೆ.
ಕೇಂದ್ರದ ಸರ್ಕಾರದ ಇಂತಹ ಯೋಜನೆಗಳಿಗೆ ನ್ಯೂಟ್ರಲ್ ಆದ ಹೆಸರುಗಳನ್ನು ಇಡಬೇಕು, ಉದಾಹಣೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಯೋಜನೆ, ರಾಷ್ಟ್ರೀಯ ಜಲ ಯೋಜನೆ, ಅನ್ನೊಥರದ ಹೆಸರುಗಳನ್ನು ಇಡಲಿ
ಅನ್ನೊದು ಸೂರ್ಯಪ್ರಕಾಶ್ ವಾಧ.

ಇದೇ ವಿಶಯವನ್ನಿಟ್ಟುಕೊಂಡು ಸೂರ್ಯಪ್ರಕಾಶ್ ಕಳೆದ ಎರಡು ಮೂರು ವರ್ಷಗಳಿಂದ ಇದನ್ನ ಇನ್ವೆಸ್ಟಿಗೇಟ್ ಮಾಡುತ್ತಿದ್ದಾರೆ, ದೇಶದ ಪ್ರತಿ ರಾಜ್ಯದಿಂದ ಮಾಹಿತಿ ಕಲೆಹಾಕಿದ್ದಾರೆ, ಎಷ್ಟು ಹಣ ಈ ಯೋಜನೆಗಳ ಹೆಸರಲ್ಲಿ ವೆಚ್ಚವಾಗಿದೆ ಅನ್ನೊ ಮಾಹಿತಿ ಪಡೆದು ಚುನಾವಣಾ ಆಯೋಗದ ಮುಂದೆ ಕಂಪ್ಲೇಂಟು ಕೊಟ್ಟು ಕಾಯುತ್ತಿದ್ದಾರೆ. ಚುನಾವಣೆ ಮುಗಿದರೂ ಚುನಾವಣಾ ಆಯೋಗದಿಂದ ಉತ್ತರ ಬಂದಿಲ್ಲ.

ಯಾಕಂದರೆ ಅದು ಗಾಂಧಿ ಪ್ಯಾಮಿಲಿ. ಅದೇ ಮಾಯಾವತಿ ಕೇಸು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಾಧ ವಿವಾದ ನಡೆಯುತ್ತಿದೆ, ಕೇಸು ಸುಪ್ರಿಂಕೋರ್ಟಿನಲ್ಲಿದೆ. ಆದರೆ ಮಾಯಾವತಿ ಪರ ವಾಧ ಮಾಡುತ್ತಿರುವ ಸತೀಶ್ ಮಿಶ್ರಾ, ಈಗ ಕನ್ನಡಿಗ ಸೂರ್ಯಪ್ರಕಾಶ್ ಅವರ ಅದ್ಯಯನವನ್ನು ತಮ್ಮ ಕೇಸಿನಲ್ಲಿ ಬಳಸಿಕೊಂಡಿದ್ದಾರೆ. ಮೊದಲು ಗಾಂಧಿ ಪ್ಯಾಮಿಲಿ ಕೂಡ ಸರ್ಕಾರದ ಹಣವನ್ನ ಗಾಂಧಿ ಪ್ಯಾಮಿಲಿ ಹೆಸರಿಗೆ ಬಳಸಿಕೊಂಡಿದೆ. ಮೊದಲು ಅವರ ಹೆಸರಿನ ಯೋಜನೆಗಳಿಂದ ಅವರ ಹೆಸರು ಕಿತ್ತು ಹಾಕಿ ಅಂತ ಕೇಳುತ್ತಿದ್ದಾರೆ. ಕೋರ್ಟು ಏನು ಮಾಡುತ್ತೋ ಗೊತ್ತಿಲ್ಲ.

ಅಂದ ಹಾಗೆ, ಅರಕಲಗೂಡು ಸೂರ್ಯಪ್ರಕಾಶ್ ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿ ವರದಿಗಾರರಾಗಿದ್ದವರು. ನಂತರ ದೆಹಲಿಗೆ ಬಂದು ಇಂಡಿಯನ್ ಎಕ್ಸಪ್ರೆಸ್ಸಿನ ಬ್ಯೂರೋ ಚೀಫ್, ಈ ನಾಡು ಪತ್ರಿಕೆಯ ಪೊಲಟಿಕಲ್ ಎಡಿಟರ್, ಪಯನೀರ್ ಪತ್ರಿಕೆ ಸಂಪಾದಕ, ಪಯನೀರ್ ಜರ್ನಲಿಸಂ ಸ್ಕೂಲಿನ ಪೌಂಡರ್ ಸೇರಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದವರು. ಅಡ್ವಾಣಿಯವರ ಆತ್ಮಕಥನ ಮೈಕಂಟ್ರಿ ಮೈ ಲೈಪ್ ಪುಸ್ತಕ ಬರೆಯುವಾಗ ಅಡ್ವಾಣಿಗೆ ನೆರವಾಗಿದ್ದವರು. ಸರಿಸುಮಾರು ನಲವತ್ತು ವರ್ಷಗಳನ್ನು ಪತ್ರಿಕೊದ್ಯಮದ ಗರಡಿ ಮನೆಯಲ್ಲಿ ಸವೆಸಿದವರು.
ಮೊನ್ನೆ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಹೊಸ ತಲೆಮಾರಿನ ಪತ್ರಕರ್ತರೊಂದಿಗೆ ಅವರು ಮಾತಿಗೆ ಸಿಕ್ಕಿ ತಮ್ಮ ಕೆಲವು ಅನುಭವಗಳನ್ನು ಹಂಚಿಕೊಂಡರು. ಮಾತೆಲ್ಲ ಮುಗಿದ ಮೇಲೆ 'ಸಾರ್ ನಿಮ್ಮ ಬಗ್ಗೆ ನನ್ನ ಖಾಸಗಿ ಡೈರಿ ಬ್ಲಾಗ್ ನಲ್ಲಿ ಬರೀಲಾ, ಅಂದೆ. ಅದಕ್ಕವರು 'ಖಂಡಿತವಾಗಿಯೂ ಬರೆಯಪ್ಪ ಜೊತೆಗೆ ನನ್ನ ವೆಬ್ ಸೈಟಿನ ಲಿಂಕ್ ಕೊಡು ಆಸಕ್ತಿ ಇದ್ದವರೆಲ್ಲಾ ಓದಲಿ' ಅಂದರು.
ಲಿಂಕ್ ಇಲ್ಲಿವೆ.
http://www.asuryaprakash.com/Wednesday, August 12, 2009

'ಡಾನ್ ಆಪ್ ಪಾವರ್ಟಿ’


ನೋಡಿ ಈ ಪತ್ರಕರ್ತರಿಂದಾಗಿ ಕಳೆದ ಹತ್ತು ದಿನಗಳಿಂದ ನನ್ನ ಶಾಂತಿ ಕಳೆದು ಹೋಗಿದೆ ಅಂದರು ದೀಪ್ ಜೋಶಿ. ನಾವೂ ಹೌದು ಬಿಡಿ ಸಾರ್ ಅದೆಲ್ಲಾ ಸಾಮಾನ್ಯ, ಪ್ರಶಸ್ತಿ ಬಂದಾಗ ಜನ ಜಾಸ್ತಿ ಮುತ್ತಿಕೊಳ್ತಾರೆ ಅಂತ ಹೇಳಿ ಅವರಿಗೆ ಸಾಥ್ ಆದೆವು. ಯಾಕ್ರೀ ಹಾಗಂತೀರಿ ನಿಮಗೆ ಪ್ರಚಾರ ಕೊಡೋಕೆ ನಾವು ಐವತ್ತು ಕಿಲೋ ಮೀಟರ್ ಸುತ್ತಿ ಬಂದೆವು. ಇಲ್ಲೆಲ್ಲೋ ಮೂಲೆಯಲ್ಲಿರುವ ನಿಮ್ಮ ಮನೆ ತಡಕಿ, ತಡಕಿ ಸಾಕಾಗಿ ಬಂದ್ದಿದ್ದೇವೆ ಅಂತ ಹೇಳೋ ಧೈರ್ಯ ಆಗಲಿ, ಮನಸಾಗಲಿ ಇರಲಿಲ್ಲ. ಬೇರೆ ಯಾರಾದರೂ ರಾಜಕಾರಣಿ ಆಗಿದ್ದಿದ್ದರೆ ಅನ್ನಬಹುದಿತ್ತೇನೋ..!

ಯಾಕಂದರೆ ದೀಪಕ್ ಜೋಶಿ ಮೊನ್ನೆ ಮೊನ್ನೆ ತಾನೆ ಏಷ್ಯಾದ ನೊಬೆಲ್ ಅಂತ ಕರೆಸಿಕೊಳ್ಳುವ ರೋಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಭಾಜನರಾದವರು. ಉತ್ತರ ಭಾರತದ 7 ರಾಜ್ಯಗಳಲ್ಲಿ ತಮ್ಮ ಪರಿಧಿಗೆ ಬಂದ ಬಡವರನ್ನೆಲ್ಲಾ ಆತ್ಮಗೌರವದಿಂದ, ಸ್ವಂತ ಶಕ್ತಿಯಿಂದ ಬದುಕುವುದು ಹೇಗೆ ಅಂತ ಕಲಿಸಿಕೊಟ್ಟವರು. ತಾವು ಕಟ್ಟಿದ ಸಂಸ್ಥೆ 'ಪ್ರದಾನ್' ಮೂಲಕ ಈಗಲೂ ಸರಿಸುಮಾರು 1 ಲಕ್ಷ ಎಪ್ಪತ್ತು ಸಾವಿರ ಕುಟುಂಬಗಳಿಗೆ ನೆರವಾದವರು. ಇಂತಹ ದೀಪ್ ಜೋಶಿ ಅವರನ್ನು ಭೇಟಿ ಮಾಡಬೇಕೆಂಬ ನನ್ನ ಹಂಬಲಕ್ಕೆ ಜೊತೆಯಾದ ನನ್ನ ಸಹೋದ್ಯೋಗಿ ದೀಪಕ್ ಪ್ರಯತ್ನದಿಂದ ಅವರ ಸಂದರ್ಶನ ಲಭ್ಯವಾಯಿತು. ಅವರ ಸಂದರ್ಶನವನ್ನ ಇಲ್ಲಿ ಹಾಕಿಲ್ಲ. ಆಸಕ್ತಿ ಹುಟ್ಟಿಸುವ ಮಾಹಿತಿ ಅಷ್ಟೇ ಬರೆದಿದ್ದೇನೆ.

ದೀಪಕ್ ಜೋಶಿ ಕೂಡ ನಮ್ಮಂತೆ ಹಳ್ಳಿಯಿಂದ ಬಂದವರೇ, ಹಿಮಾಲಯಕ್ಕೆ ಹೊಂದಿಕೊಂಡಂತಿರುವ ಜಾರ್ಖಂಡಿನ ಗಡಿತಿರ್ ಎಂಬ ಹಳ್ಳಿಯೊದರಿಂದ ಬಂದವರು. ಕಲಿತಿದ್ದು ಇಂಜಿನಿಯರಿಂಗ್, ವಿದೇಶದಲ್ಲಿ ಮಾಸ್ಟರ್ ಡಿಗ್ರಿ ಮಾಡಿ ವಾಪಸ್ಸು ಬಂದಮೇಲೆ ಅಲ್ಲಿ ಇಲ್ಲಿ ಕೆಲಸಮಾಡಿ ಆದ ಮೇಲೆ, ಆಯ್ಕೆ ಮಾಡಿಕೊಂಡದ್ದು ಬಡ ಹಳ್ಳಿಗಳನ್ನು ಉದ್ದಾರ ಮಾಡುವ ಕೆಲಸ..! ಕೇಳಲಿಕ್ಕೆ ಅಷ್ಟೇನೂ ರುಚಿಸದ ಕಾರ್ಯಕ್ಕೆ ಕೈ ಹಾಕಿದ ದೀಪ್ ಅವರದು ಈಗ ದೊಡ್ಡ ಸಕ್ಸಸ್ಸು.. ಕಡಿಮೆ ಅಲ್ಲ ಕನಿಷ್ಠ 1 ಲಕ್ಷ ಕುಟುಂಬಗಳಿದೆ ಸ್ವಾವಲಂಭನೆ ಒದಗಿಸಿದ ಸಾರ್ಥಕ ಕೆಲಸ.

ನೀವು ಬಡವರಿಗೆ ಅದು ಹೇಗೆ ಕೊಟ್ಟರು ಸ್ವಾವಲಂಬನೆ ಅಂತ ಕೇಳಿದರೂ ಉತ್ತರಕೊಡುವುದು ಸುಲಭವಲ್ಲ ಬಿಡಿ. ಅದೂ ಕೂಡ ಬೇರೆಯದೇ ತರದ್ದು ಅನ್ನಬೇಕು. ಅದಕ್ಕೆ ದೀಪ್ ಅವರಿಗೆ ಸಂದ ಪ್ರಶಸ್ತಿಯ ಸೈಟೇಷನ್ನಿನಲ್ಲಿ ಹೀಗೆ ಹೇಳಲಾಗಿದೆ. ಅದು ಅವರ ಹೊಸ ತರದ ಐಡಿಯಾಗೆ, ನಾಯಕತ್ವಕ್ಕೆ ಸಿಕ್ಕದ್ದು. 'For his vision and leadership in bringing professionalism to the NGO movement in India, by effectively combining ‘head’ and ‘heart’ in the transformative development of rural communities.
' ಅಂತ.
ದೀಪ್ ಅವರ 'ಪ್ರದಾನ್ 'ನಲ್ಲಿ ಯಾರೂ ಸ್ವಯಂ ಸೇವಕರಲ್ಲ. ಅಲ್ಲಿ ಎಲ್ಲರೂ ನೌಕರರೇ... ಯೂನಿವರ್ಸಿಟಿಗಳಲ್ಲಿ ಕಲಿತ ಪ್ರತಿಭಾವಂತರನ್ನ ಪ್ರದಾನ್ ಕ್ಯಾಂಪಸ್ ಸೆಲಕ್ಷನ್ ಮಾಡಿಕೊಳ್ಳುತ್ತದೆ. ಐಐಎಂ ಮತ್ತು ಐಐಟಿಗಳಲ್ಲಿ ಕಲಿತ ಮಂದಿ ಹಳ್ಳಿಗರ ಬಡತನವನ್ನು ನಿರ್ಮೂಲನೆ ಮಾಡಲಿಕ್ಕೆ ಮತ್ತು ಅದಕ್ಕಾಗಿ ಹೊಸ ಹೊಸ ಐಡಿಯಾ ಕಂಡುಹಿಡಿಯಲು ನೇಮಿಸಿಕೊಳ್ಳುತ್ತದೆ. ಸದ್ಯಕ್ಕೆ ಒಂದು ಸಾವಿರ ಮಂದಿಯನ್ನು ಇಂತಹ ಕೆಲಸದಲ್ಲಿ ತೊಡಗಿಸಿದ್ದಾರೆ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡುತ್ತಾರೆ
ಅಂದರೆ ನಂಬಲಾಗುತ್ತಿದೆಯೇ...?

ನಂಬಬೇಕು, ಯಾಕಂದರೆ ದೀಪ್ ಅವರ ಪ್ರದಾನ್ ಸಂಸ್ಥೆ 1983 ರಿಂದ ಅದನ್ನೇ ಮಾಡಿಕೊಂಡು ಬಂದಿದೆ. ಉತ್ತರ ಭಾರತದ ಜಾರ್ಖಂಡ್,ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳಲ್ಲಿ ಇವರ ಕಾರ್ಯ ಚಟುವಟಿಕೆಗಳಿವೆ. ಇದೆಲ್ಲ ಹೇಳಿದ ಮೇಲೆ ಪ್ರದಾನ ಮಾಡೋ ಕೆಲಸ ಅಂತ ಹೇಳಿದರೆ ಸುಲಭವಾಗಬಹುದು. ಹಳ್ಳಿಗರು ಮಾಡುವ ಕೆಲಸವನ್ನೇ ಸೈಟಿಪಿಕ್ ಆಗಿ ಮಾಡಿಸುವುದು ಅದರ ಕೆಲಸ. ಕೋಳಿ ಸಾಕಣೆ ಇರಬಹುದು, ಕುರಿ ಸಾಕಣೆ, ಹೈನುಗಾರಿಕೆ,ರೇಷ್ಮೆ ಸಾಕಣೆ ಇರಬಹುದು, ಕಾಡಿನ ವಸ್ತುಗಳ ಸಂಗ್ರಹಣೆ ಇರಬಹುದು ಇಂತವೇ ಸಣ್ಣ ಸಣ್ಣ ಬಡವರ ಕೆಲಸಗಳಿಗೆ ದೀಪ್ ಕೈಜೋಡಿಸಿದ್ದಾರೆ. ಅವರಿಗೆ ಬೇಕಾದ ಮಾಹಿತಿ, ಮಾರುಕಟ್ಟೆ, ಹೊಸ ತಂತ್ರಜ್ಞಾನ. ಔಷಧಿ, ಸಣ್ಣ ಸಾಲ, ರೈತರು ಇಡಬೇಕಾದ ಲೆಕ್ಕ ಪತ್ರ, ಸಾಮೂಹಿಕ ಕೃಷಿ. ಸ್ವಸಹಾಯ ಗುಂಪುಗಳ ರಚನೆ ಎಲ್ಲಕ್ಕೂ ಪ್ರಧಾನ್ ನೇಮಿಸಿರುವ ಕಲಿತ ಯುವಕರು ಸಹಾಯ ಮಾಡುತ್ತಾರೆ. ಬಿಸಿನೆಸ್ ಸ್ಕೂಲ್ ಮತ್ತು ಲ್ಯಾಬೋರೇಟರಿಗಳಲ್ಲಿ ಕಲಿತದ್ದನ್ನು ವಾಸ್ತವಿಕವಾಗಿ ಉಪಯೋಗಿಸುತ್ತಾರೆ.

ಪ್ರದಾನ್ ಕೂಡ ಸ್ವಯಂ ಸೇವಾಸಂಸ್ಥೆ. ತನ್ನೆಲ್ಲಾ ಕಾರ್ಯಚಟುವಟಿಕೆಗಳಿಗೆ ಅವಲಂಭಿಸಿದ್ದು ದಾನಿಗಳನ್ನೆ, ಆದರೆ ಇಂಡಿಯಾದ ಬಡತನದ ಹೆಸರಲ್ಲಿ ವಿದೇಶಗಳಲ್ಲಿ ಭಿಕ್ಷೆ ಎತ್ತೊದನ್ನ ಜೋಶಿ ವಿರೋದಿಸುತ್ತಾರೆ. ನಿಜವಾದ ಸಹಾಯ ಮಾಡಲು ಬಯಸಿದವರಿಂದ ಹಣ ಸಂಗ್ರಹಿಸುತ್ತದೆ. ಪ್ರದಾನ್ ನ ಕೆಲಸವನ್ನು ಮೆಚ್ಚಿರುವ ಟಾಟಾ. ರತನ್ ಟಾಟ ಟ್ರಸ್ಟ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ. ಪೋರ್ಡ್, ಐಸಿಐಸಿಐ ಯಂತ ಅನೇಕ ಸಂಸ್ಥೆಗೆಳು ದಾರಾಳ ಹಣ ನೀಡುತ್ತಿವೆ ಪ್ರದಾನ್ ಸಂಸ್ಥೆ ಸೂಚಿಸಿದವರಿಗೆ ಸಾಲ ನೀಡುತ್ತಿವೆ. ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತದೆ. ದೀಪ್ ಹೇಳುವಂತೆ ಪ್ರದಾನ್ ಸದ್ಯ 100 ಕೋಟಿ ರೂಪಾಯಿಯ ಗ್ರಾಮೀಣ ವ್ಯವಹಾರ ನಡೆಸುತ್ತಿದೆ.

ಪ್ರಶಸ್ತಿ ಬಂದ ನಿಮಿಶಕ್ಕೆ ಅದನ್ನು ಪಡೆದವರನ್ನು ಸಿಕ್ಕಾಪಟ್ಟೆ ಹೊಗಳುವುದು ನಮ್ಮ ಸಾಮಾನ್ಯ ಸ್ವಭಾವ. ಆದರೂ ಜೋಶಿ ಅವರ ಹತ್ತಿರ ಮಾತಾಡಿದಾಗ ಅವರ ಬಗ್ಗೆ ಜಾಹೀರು ಮಾಡೋದು ನಮ್ಮ ಜವಾಬ್ಧಾರಿ ಅಂತ ನನಗೂ ಅನ್ನಿಸಿತ್ತು. ಯಾಕಂದರೆ ಜೋಶಿ ಎಷ್ಟು ಪ್ರೊಫೆಷನಲ್ ಆಗಿ ಸಂಸ್ಥೆ ಬೆಳೆಸಿ ಈಗ ಕೈಬಿಟ್ಟಿದ್ದಾರೆ ಅಂದರೆ. ಅವರು ಪ್ರದಾನ್ ಸಂಸ್ಥೆಯಿಂದ ನಿವೃತ್ತಿಯಾಗಿ ಆಗಲೇ 2 ವರ್ಷ ಕಳೆದಿದೆ. ಯಾಕಂದರೆ ಎಲ್ಲರೂ ಸರಿಯಾದ ವಯಸ್ಸಿಗೆ ನಿವೃತ್ತಿ ಪಡೆದು ಹೊಸ ಮನಸುಗಳಿಗೆ, ಯುವಕರಿಗೆ ಅವಕಾಶಕೊಡಬೇಕೆನ್ನುವುದು ಅವರದೇ ನಿಯಮ ಅಂತೆ. ಈಗ ಪ್ರದಾನ್ ಸಂಸ್ಥೆಗೆ ಜೋಶಿ ಸಲಹೆಗಾರರು ಮಾತ್ರ.

ದೀಪ್ ಜೋಶಿ ಅವರ ಬಳಿ ಮಾತಾಡುವಾಗ ಅವರು ಹೇಳಿದ ಮಾತೊಂದು ಮೀಡಿಯಾಗೆ ಸಂಭಂದಿಸಿತ್ತು , ಒಂದೆರಡು ನಿಮಿಷ ಯೋಚನೆಗೂ ಈಡು ಮಾಡಬುಹುದು.
ನಮ್ಮ ಸಂದರ್ಶನ ಎಲ್ಲಾ ಮುಗಿದ ಮೇಲೆ ಅವರು ಹೇಳಿದರು
ನೋಡಿ ನಾವು ಮಾಡಿದ ಕೆಲಸವನ್ನ ಇಲ್ಲಿನ ಸರ್ಕಾರ ಆಗಲಿ, ಮೀಡಿಯಾದವರಾಗಲಿ ಗುರುತಿಸೋದೇ ಇಲ್ಲ ನನ್ನ ಪ್ರಕರಣದಲ್ಲೇ ನೋಡಿ, ನಾವು ಮಾಡಿದ ಕೆಲಸವನ್ನು ಬೇರೆ ದೇಶದ ಮಂದಿ ಇಲ್ಲಿಗೆ ಬಂದು ಅಭ್ಯಾಸ ಮಾಡಿ ಗುರುತಿಸುತ್ತಾರೆ. ಆದರೆ ನಮ್ಮ ಮೀಡಿಯಾದ ಮಂದಿ ಬೇರೆ ಬೇರೆ ಇಶ್ಯುಗಳ ನಡುವೆ ಸದಾ ಬ್ಯುಸಿ ಇರುತ್ತಾರೆ ಅಂತ ನಕ್ಕರು..ನನಗೆ ಅವರ ನಗುವಿನಲ್ಲಿ ಏನೇನೂ ಅರ್ಥಗಳು ಕಾಣಿಸಿದವು..

ನನಗೂ ಹಾಗೆ ಅನ್ನಿಸಿತು ಮೊನ್ನೆ ಆಗಸ್ಟ್ 3 ರಂದು ಅವರಿಗೆ ಪ್ರಶಸ್ತಿ ಬಂದಾಗ ಯಾವ ಪತ್ರಿಕೆಯಲ್ಲಾಗಲಿ ಟಿವಿಯಲ್ಲಾಗಲಿ ಅವರ ಬಗ್ಗೆ ಸಮಗ್ರ ಮಾಹಿತಿ ಉಳ್ಳ ಲೇಖನಗಳು ಬರದೇ ಹೋದವು. ಇಂಟರ್ನೆಟ್ ನಲ್ಲಿ ಹುಡುಕಾಡಿದೆ, ಅಲ್ಲೂ ಮಾಹಿತಿ ಇರಲಿಲ್ಲ. ಕೌಲಲಾಂಪುರದಿಂದ ಬಂದ ಒಂದೇ ಸುದ್ದಿಯನ್ನ ಎಲ್ಲಾ ಪತ್ರಿಕೆಗಳು ತಿರುಗಾಮುರುಗಾ ಬರೆದಿದ್ದವು.
ಕಡೆಗೆ ವೈಕೀಪೀಡಿಯೂದವರೂ ಅವರಿಗೆ ರೋಮನ್ ಮ್ಯಾಗ್ಸೆಸೆ ಬಂದ ಮೇಲೆ ಪತ್ರಿಕೆಗಳಲ್ಲಿ ಬಂದಿದ್ದ ಮಾಹಿತಿಯನ್ನೇ ಅಪ್ ಡೇಟ್ ಮಾಡಿದ್ದರು. ಎಲ್ಲೂ ಅವರ ಬಗ್ಗೆ ಪ್ರಚಾರ ಆದಂತೆ ಕಾಣಲಿಲ್ಲ. ಅಷ್ಟೇ ಏಕೆ ಅವರಿಗೆ ಪ್ರಶಸ್ತಿ ಬಂದ ಮೇಲೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಠ್ರಪತಿ ಪ್ರತಿಭಾ ಪಾಟೀಲ್ ಒಂದೆರಡು ಸರ್ಕಾರಿ ಹೇಳಿಕೆ ಕೊಟ್ಟರು ಶಹಬಾಶ್ ಅಂದರು ಅಷ್ಟೇ ಮತ್ತೇನಿಲ್ಲ.

ಕಟ್ಟ ಕಡೆಗೆ ನಾನು ಸಂದರ್ಶನದಲ್ಲಿ ಕೇಳಲು ಆಗದೇ ಹೋಗಿದ್ದ, ಮತ್ತು ನನ್ನನ್ನು ಯಾವತ್ತೂ ಕಾಡುತ್ತಿದ್ದ ಪ್ರಶ್ನೆಯೊಂದನ್ನ ಅವರಿಗೂ ಕೇಳಿದೆ. 'ಅಲ್ಲಾ ಸಾರ್ ಈ ರೋಮನ್ ಮ್ಯಾಗ್ಸಸೆ, ನೋಬಲ್,ಅಂತ ಪ್ರಶಸ್ತಿ ತಗೋಳೋ ಮಂದಿ ಎಲ್ಲಾ ನಿಮ್ಮದೇ ರೀತಿ ಬೆಳ್ಳಗೆ ಗಡ್ಡ ಬಿಟ್ಟಿರುತ್ತಾರಲ್ಲಾ ಯಾಕೆ...?' ಅಂದೆ. ಅಲ್ಲಾರಿ ನನ್ನ ಗಡ್ಡ ನೋಡಿದರೆ ಒಳ್ಳೆ ಚಂಬಲ್ ಕಣಿವೆ ಡಾನ್ ತರಾ ಕಾಣ್ತೀನಿ ಅಂದ್ರು. ನಾನು ತಕ್ಷಣ ಪ್ರತಿಕ್ರಿಯಿಸಿ, ಅಲ್ಲಾಲ್ಲಾ ನೀವು ' ಡಾನ್ ಆಪ್ ಪಾವರ್ಟಿ’ ಅಂದೆ. ಅವರು ನಕ್ಕರು.


ನಿಮಗೆ ಜೋಶಿ ಮತ್ತು ಪ್ರದಾನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅನಿಸಿದರೆ ಇಲ್ಲಿಗೆ ಭೇಟಿಕೊಡಿ. www.pradan.net ಮತ್ತು
http://www.rmaf.org.ph/pdf/2-2009-Magsaysay-Awardees.pdf

Saturday, August 8, 2009

ಬಿಡಿ ಬಿಡಿ ಚಿತ್ರಗಳು.


ಮಹಾರಾಜ ಕಾಲೇಜು ಕ್ಯಾಂಟೀನಿನ ಟೆಂಡರನ್ನ ಆ ವರ್ಷ ಕನ್ನೇಗೌಡನ ಕೊಪ್ಪಲಿನ ಗಣೇಶ್ ಎಂಬುವವರೊಬ್ಬರು ಪಡೆದು ಆರಂಭಿಸಿದ್ದರು. ಕ್ಲಾಸಿಗಿಂತಲೂ ರೌಂಡ್ ಟೇಬಲ್ ಕ್ಯಾಂಟೀನಿನನ್ನೇ ಅಡ್ಡಾ ಮಾಡಿಕೊಂಡಿದ್ದ ನಾವು, ದಿನದ ಬಹುತೇಕ ಸಮಯ ಅಲ್ಲೇ ಇರುತ್ತಿದ್ದೆವು.ಕಾಲೇಜಿಗೆ ರಜಾ ಇದ್ದರೂ ಕ್ಯಾಂಟೀನಿನ ಕಡೆ ಹೋಗದೆ ಇದ್ದರೆ ಆ ದಿನ ಯಾಕೋ ಖಾಲಿ ಖಾಲಿ ಅನ್ನಿಸುತ್ತಿತ್ತು. ನಾವು ಅಲ್ಲೇ ಸಾಹಿತ್ಯದ ಚಟ ಹತ್ತಿಸಿಕೊಂಡಿದ್ದು, ಬೇರೆ ಬೇರೆ ಸಬ್ಜೆಕ್ಟ್ ಕಲಿಯುತ್ತಿದ್ದ ಸುನೀಲ್ ಬಾದ್ರಿ, ಸತೀಶ ಶಿಲೆ, ನಂದೀಶ್ ಅಂಚೆ, ವಿನಯ್ ಅವರೆಲ್ಲ ತಾವು ಓದಿಕೊಂಡು ಬಂದಿದ್ದನ್ನೆಲ್ಲಾ ನಾವೆಲ್ಲಾ ಬೆರಗಾಗುವಂತೆ ಹೇಳುತ್ತಿದ್ದರು. ನಾವು ಹುಬ್ಬೇರಿಸಿ ಕೇಳಿಸಿಕೊಳ್ಳುತ್ತಿದ್ದೆವು.

ನಾವಾದರೂ ಓದಿದ್ದಕಿಂತ ಅವರಿವರು ಹೇಳಿದ್ದನ್ನ ಕೇಳಿಯೇ ಪುಸ್ತಕ ಓದಿದ್ದೇವೆ ಅಂತ ತಿಳಿದುಕೊಳ್ಳುತ್ತಿದ್ದೆವು. ಅವರು ಕೋಟ್ ಮಾಡಿದ ವಿಶಯಗಳನ್ನೇ ಕಾಫಿ ಮಾಡಿ, ನಮಗಿಂತ ದಡ್ಡ ಶಿಕಾಮಣಿಗಳಾಗಿದ್ದ ಹಾಸ್ಟೆಲ್ ಹುಡುಗರಿಗೆ ಹೇಳಿ ಗಾಭರಿ ಹುಟ್ಟಿಸುತ್ತಿದ್ದೆವು. ನಾವು ಪ್ರಕಾಂಡ ಪಂಡಿತರೆಂಬಂತೆ ಬೀಗುತ್ತಿದ್ದೆವು.
ನಾನಂತೂ ಕ್ಯಾಂಟೀನ್ ನಡೆಸುತ್ತಿದ್ದ ಗಣೇಶ್ ಗೆ ನಮ್ಮ ಗ್ಯಾಂಗ್ ಕಾಲೇಜಿನಲ್ಲಿ ತುಂಬಾ ನಟೋರಿಯಸ್ ಜೊತೆಗೆ ನಮ್ಮ ಪ್ಯಾಮಿಲಿಯೇ ನಟೋರಿಯಸ್ ಅಂತ ನಂಬಿಸಿ, ಇಲ್ಲಸಲ್ಲದ ಕಥೆಗಳನ್ನೆಲ್ಲಾ ಹೇಳಿದ್ದೆ.. ಅವನು ನಮಗೆ ವಿಪರೀತ ಗೌರವಿಸುತ್ತಿದ್ದ . ದಿನಾಪೂರ್ತಿ ಅವನ ಕ್ಯಾಂಟೀನಿನಲ್ಲಿ ಬೇಕಾದ್ದನ್ನೆಲ್ಲಾ ತಿಂದು, ಕುಡಿದು ಇಪ್ಪತ್ತೋ ಮೂವತ್ತೊ ರೂಪಾಯಿ ಕೊಟ್ಟು ಯಾಮಾರಿಸುತ್ತಿದ್ದೆ.

ಮಹಾರಾಜ ಹಾಸ್ಟೆಲ್ ನಲ್ಲಿ ಕಿಟ್ಟಿ ಎಂಬ ಪೈಲ್ವಾನ್ ಒಬ್ಬ ಮೆಸ್ ನಡೆಸುತ್ತಿದ್ದ. ಹಾಸ್ಟೆಲ್ ನಲ್ಲಿರುತ್ತಿದ್ದ 450 ಹೆಚ್ಚು ಮಂದಿ ಹುಡುಗರನ್ನು ಸಂಬಾಳಿಸೋದು ತೀರಾ ಪ್ರಯಾಸದ ಕೆಲಸವಾಗಿತ್ತು. ಆಗಿನ ಕಾಲಕ್ಕೆ 650 ರೂಪಾಯಿ ಮೆಸ್ ಹಣ ಕಟ್ಚಬೇಕಿತ್ತು ನಾನು ಸೇರಿದಂತೆ ಬಹುತೇಕರು 300 ಅಥವಾ 350 ರೂಪಾಯಿ ಕೊಡುತ್ತಿದ್ದೆವು. ನಮ್ಮ ನಮ್ಮ ಮದ್ಯೆ ಅಗ್ರಿಮೆಂಟ್ ಏನೆಂದರೆ ಊಟ ಚೆನ್ನಾಗಿಲ್ಲಾ ಅಂತ ಗಲಾಟೆ ಎಬ್ಬಿಸಬಾರದು. ಅನ್ನ, ಸಾರು, ಪಲ್ಯಗಳನ್ನ ಚೆಲ್ಲಬಾರದು ಅನ್ನೊದು.
ಆತನ ಊಟ ಎಷ್ಟು ಭಯಾನಕ ಆಗಿರುತ್ತಿತ್ತು ಅಂದರೆ ಅನ್ನ, ಸಾರು, ಪಲ್ಯ ಉಪ್ಪಿನಕಾಯಿ, ಮಜ್ಜಿಗೆ, ಉಪ್ಪು ಎಲ್ಲವನ್ನ ಮಿಕ್ಸ್ ಮಾಡಿಕೊಂಡರೂ ಒಂಚೂರು ರುಚಿ ಇರುತ್ತಿರಲಿಲ್ಲ. ಆಕಸ್ಮಿಕವಾಗಿ ಯಾವತ್ತಾದರೂ ರುಚಿಯಾಗಿ ಸಾಂಬಾರ್ ಮಾಡಿದ್ದರೆ ಅಡಿಗೆ ಇನ್ ಚಾರ್ಜ್ ಹನುಮಂತನಿಗೆ ಕಿಟ್ಟಿ ಸಿಕ್ಕಾಪಟ್ಟೆ ಭೈಯುತ್ತಿದ್ದ. ಯಾಕಂದರೆ ಅವತ್ತು ಅಕ್ಕಿ ಸಿಕ್ಕಾಪಟ್ಟೆ ಖರ್ಚಾಗಿರುತ್ತಿತ್ತು.

ನಮಗೆ ಪರಿಚಯವಿದ್ದ ಗೆಳೆಯರ ಒತ್ತಾಯ ಮತ್ತು ಆಮಿಶಕ್ಕೆ ಬಿದ್ದು ಮೈಸೂರಿನ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ದೃವನಾರಾಯಣ್ ಎಂಬುವರ ಪರ ಪ್ರಾಕ್ಸಿ ಓಟ್ ಹಾಕಲು ಹೋಗಿದ್ದೆವು. ರಾತ್ರಿಯೆಲ್ಲಾ ಪಾರ್ಟಿ ಮಾಡಿದ್ದ ನಮಗೆ ಬೆಳಿಗ್ಗೆ ಕಳ್ಳ ಓಟು ಹಾಕಲು ಸಿಕ್ಕಾಪಟ್ಟೆ ದಿಗಿಲಾಗಿತ್ತು. ಕರೆದುಕೊಂಡು ಹೋಗಿದ್ದ ನಾನೇ ದೈರ್ಯ ಮಾಡಿ ಯಾರೋ ನಾರಾಯಣ ಶಾಸ್ತ್ರಿ ಎಂಬುವರ ಹೆಸರಿನಲ್ಲಿ ಓಟು ಹಾಕಲು ಹೋಗಿದ್ದೆ. ನನ್ನ ಬೆರಳಿಗೆ ಇಂಕು ಹಾಕುವಾಗ ನನ್ನ ಅವರಿಗೆ ಕಾಣುವಂತೆ ಕೈಗಳು ಗಡ ಗಡ ಅಂತ ನಡುಗುತ್ತಿದ್ದವು.ಆದರೂ ಅವರು ಏನೂ ಕೇಳಲಿಲ್ಲ. ನನ್ನ ಗೆಳಯರಿಗೆಲ್ಲಾ ವಾಪಸ್ಸು ಬಂದು ಹೇಳಿದೆ 'ಯಾರೂ ಕೇಳಲ್ಲಾ, ಏನೂ ಆಗಲ್ಲಾ ತುಂಬಾ ಈಸಿ ಕಣ್ರೋ, ನೀವು ಹೋಗ್ರಿ' ಅಂತ. ಎಲ್ಲಾರು ಓಟು ಮಾಡಿ ಬಂದರು. ಅವತ್ತಿನ ಗಡಿಬಿಡಿ ಮತ್ತು ಆತಂಕದಲ್ಲಿ ಸ್ಪಲ್ಪ ದುಡ್ಡು ಕಳೆದುಕೊಂಡಿದ್ದೆ.

ಡಿಗ್ರಿಯ ಮೊದಲ
ವರ್ಷ ನಾನಿದ್ದ ರೂಂ ನಂಬರ್ 105 ರ ಪಕ್ಕ ಮಣಿಪುರದಿಂದ ಬಂದ ನಾಲ್ಕೈದು ಮಂದಿ ಸ್ನೇಹಿತರಿದ್ದರು, ಅವರ ಆಹಾರ ಪದ್ದತಿಯೇ ವಿಚಿತ್ರವಾಗಿತ್ತು, ದಿನದ ಮುಕ್ಕಾಲು ಬಾಗ ಅಡಿಗೆ ಸಿದ್ದಮಾಡಿ ತಿನ್ನೊದರಲ್ಲಿಯೇ ಕಳೆಯುತ್ತಿದ್ದರು. ಮಾಂಸಹಾರ ಅವರಿಗೆ ಸಿಕ್ಕಾಪಟ್ಟೆ ಪ್ರಿಯವಾಗಿತ್ತು. ಮಣಿಪುರಕ್ಕೆ ಹೊಗಿ ಬಂದವರು ಅದೇನೇನೂ ಹುಳಿ ಹುಳಿ ಚೀಪುವ ಕಡ್ಡಿಗಳನ್ನು ತರುತ್ತಿದ್ದರು. ನನಗೂ ಆಗಾಗ ಕೊಡುತ್ತಿದ್ದರು. ನಮ್ಮ ಹಾಸ್ಟೆಲ್ ನಲ್ಲಿರುತ್ತಿದ್ದ ಹತ್ತಾರು ನಾಯಿಮರಿಗಳಲ್ಲಿ ಕೆಲವು ಆಗಾಗ ಕಾಣೆಯಾಗುತ್ತಿದ್ದವು. ಅವು ರಾತ್ರೋರಾತ್ರಿ ಇವರ ಹೊಟ್ಟೆ ಸೇರಿದ್ದವು ಅನ್ನೊ ಗುಸು ಗುಸು ಹಬ್ಬಿತ್ತು.

ಹಾಸ್ಟೆಲ್ಲಿನ ರೂಮುಗಳಲ್ಲಿ ಸೋಪು, ಪೌಡರು, ಪೆನ್ನು, ನೋಟ್ ಬುಕ್ಕು, ಪೇಸ್ಟು ಇಂತಹ ವಸ್ತುಗಳ ಯಾವಾಗಲೂ ಕಾಣೆಯಾಗುತ್ತಿದ್ದವು. ಅವರ ಬಗ್ಗೆ ಇವರು ಇವರ ಬಗ್ಗೆ ಅವರಿಗೆ ಡೌಟು ಬರುವಂತಾಗಿತ್ತು. ರೂಮಿನ ಸಹಬಾಗಿಗಳೇ ಅನುಮಾನ ಪಡುವಂತಾಗಿತ್ತು. ಕಡೆಗೆ ಸೈಕಾಲಜಿ, ಕ್ರಿಮಿನಾಲಜಿ ಓದುತ್ತಿದ್ದ ಸುದಾಕರ್ ಎಂಬ ಹುಡುಗನ ಸೂಟ್ ಕೇಸ್ ನಲ್ಲಿ ಎಲ್ಲಾ ವಸ್ತುಗಳು ಪತ್ತೆಯಾದವು. ಆತ ಅವನ್ನೆಲ್ಲಾ ಊರಿಗೆ ಹೋದಾಗ ತೆಗೆದುಕೊಂಡು ಹೊಗುತ್ತಿದ್ದನಂತೆ. ಒಂದು ಬಾರಿ ಸಿಕ್ಕಿಕೊಂಡಮೇಲೂ ಸುಮ್ಮನಾಗದ ಅವನು ಮತ್ತೊಮ್ಮೆ ಹಾಗೆ ಕದ್ದು ಸಿಕ್ಕಿಕೊಂಡಿದ್ದ.

ಮಹಾರಾಜ ಕಾಲೇಜಿನಲ್ಲಿ ಹುಡುಗಿಯರ ಸಂಖ್ಯೆ ತುಂಬಾ ಕಮ್ಮಿ ಇತ್ತು 3000 ಹುಡುಗರು 20 ಹುಡುಗಿಯರು ಇರಬೇಕೇನೋ ಕೆಲವೇ ಕೆಲವು ವಿಶಯಗಳಿಗೆ ಮಾತ್ರ ಅಡ್ಮೀಷನ್ ಕೊಡುತ್ತಿದ್ದರು. ಪಾಪ ಆ ಹುಡುಗಿಯರ ಮೇಲೆ ಕಾಲೇಜಿನ ಹುಡುಗರು ಸಿಕ್ಕಾಪಚಟ್ಟೆ ರೂಮರುಗಳನ್ನು ಹಬ್ಬಿಸೋರು, ಗೋಡೆಗಳ ಮೇಲೆ ಏನೇನೋ ಬರೆಯುತ್ತಿದ್ದರು. ಒಬ್ಬೆ ಒಬ್ಬ ಹುಡುಗಿಯನ್ನ ನೂರಾರು ಜನ ಪ್ರೀತಿಸೋರು, ಒನ್ ಸೈಡ್. ಆ ಹುಡುಗಿಯರೆಲ್ಲ ಕಾಲೇಜು ಬಿಡುವಹೊತ್ತಿಗೆ ಮಾನಸಿಕವಾಗಿ ಸಿಕ್ಕಾಪಟ್ಟೆ ಗಟ್ಟಿ ಆಗಿರುತ್ತಿದ್ದರು ಅಂತ ನಂಗೆ ಈಗಲೂ ಅನಿಸುತ್ತೆ.

ಯುವರಾಜ ಕಾಲೇಜಿನಲ್ಲಿ ಓದುತ್ತಿದ್ದ ರಘು ಎಂಬ ಗೆಳೆಯನೊಬ್ಬ ಗಣಿತ ಮತ್ತು ಕೆಮಿಸ್ಟ್ರಿಯಲ್ಲಿ ಯಾವಾಗಲೂ 90 ಕ್ಕೂ ಕಡಿಮೆ ಅಂಕ ಪಡೆಯುತ್ತಿರಲಿಲ್ಲ. ಆದ ದಿನಪೂರ್ತಿ ಓದುತ್ತಲೇ ಇರುತ್ತಿದ್ದ. ಆ ವರ್ಷದ ಬೇಸಿಗೆ ರಜಕ್ಕೆ ಆತ ಊರಿಗೇ ಹೋಗಿರಲ್ಲ. ನಾನು ವಾಪಸ್ಸು ಬಂದ ಮೇಲೆ ಆತನನ್ನ ಊಟಕ್ಕೆ ಏನು ಮಾಡ್ತಾ ಇದ್ದೆಯೋ ಅಂತ
ಕೇಳಿದೆ, ಅದಕ್ಕೆ ಅವನು ಹೆಚ್ಚು ಮಾತನಾಡದೇ ಅವನ ಮಂಚದ ಕೆಳಗೆ ನೋಡು ಅಂತ ಸನ್ನೆ ಮಾಡಿದ. ಬಗ್ಗಿ ನೋಡಿದಾಗ ಅಲ್ಲಿ ತಾಂಬೂಲಕ್ಕೆ ಕೊಡುವ ತೆಂಗಿನಕಾಯಿಗಳಿದ್ದವು. ನನಗೆ ಅರ್ಥ ಆಗಲಿಲ್ಲ. ಕಡೆಗೆ ಗೊತ್ತಾಯಿತು, ಅತ ಹುಡುಕಿ ಹುಡುಕಿ ಮದುವೇ ಛತ್ರಗಳಿಗೆ ಹೋಗ್ತಾ ಇದ್ದನಂತೆ... 'ಯಾರಿಗೂ ಸಿಕ್ಕಕೊಳ್ಳಲಿಲ್ಲವೇನೋ. ಅಂದೆ ಅದಕ್ಕೆ ಅವನು 'ಇಲ್ಲ ಕಣಮ್ಮಾ ಗಂಡಿನ ಕಡೆಯವನೂ ಅಂಥ ಹೆಣ್ಣಿನ ಕಡೆಯವರು. ಹೆಣ್ಣಿನ ಕಡೆಯವರು ಗಂಡಿನಕಡೆಯವರೂ ಅಂಥ ಸುಮ್ಮನೇ ಇರ್ತಾರೆ ಯಾರನ್ನೂ ಕೇಳಲ್ಲಾ' ಅಂದ. ನಾನು 'ಯಲಾ ಇವನಾ' ಅಂದು ಕೊಂಡೆ.
ಹೀಗೆ ಮಹಾರಾಜ ಕಾಲೇಜೆಂಬುದು ನನ್ನ ನೆನಪಿನ ಪುಟಗಳಲ್ಲಿ ಹಲವು ಬಿಡಿ ಬಿಡಿ ದಾಖಲಾಗಿ ಹೋಗಿವೆ. ಅವನ್ನ ಆಗಾಗ ಬರೆಯೋಣ ಅಂತ.

Tuesday, August 4, 2009

ಶಿವರಾಜ್ ಪಾಟೀಲ್ ಇನ್ ಮೇಕಿಂಗ್..ಇವತ್ತು ಡಿಫೆನ್ಸ್ ಮಿನಿಸ್ಟ್ರಿಯಲ್ಲಿ ಯುವ ಎಂಪಿ ಗಳಿಗಾಗಿ ಪ್ರಯೋಜಿಸಿದ್ದ ಟೆರಿಟೋರಿಯಲ್ ಆರ್ಮಿಗೆ ಸಂಭಂದಿಸಿದ ಕಾರ್ಯಾಗಾರಕ್ಕೆ ಸೌಥ್ ಬ್ಲಾಕ್ ಗೆ ಹೋಗಿದ್ದೆ, ನಿಮಗೆ ತಿಳಿದಿದೆಯೋ ಇಲ್ಲವೋ ಕೇಂದ್ರ ಸರ್ಕಾರದ ಅತ್ಯಂತ ಪ್ರಮುಖ ಇಲಾಖೆಗಳಾದ, ಪ್ರೈಂ ಮಿನಿಸ್ಟರ್ ಆಫೀಸ್(ಪಿಎಂಓ), ಡಿಪೆನ್ಸ್, ಮತ್ತು ವಿದೇಶಾಂಗ ಖಾತೆ ಸೌಥ್ ಬ್ಲಾಕ್ ನಲ್ಲಿವೆ. ನಾರ್ಥ್ ಬ್ಲಾಕ್ ನಲ್ಲಿ ಅರ್ಥ ಸಚಿವಾಲಯ ಮತ್ತು ಗೃಹ ಖಾತೆಗಳ ಕಚೇರಿಗಳಿವೆ. ಇವು ಕೇಂದ್ರ ಸರ್ಕಾರದ ಅತ್ಯಂತ ಸೂಕ್ಷ್ಮ, ಜವಾಬ್ದಾರಿಯುತ, ಘನತೆ ಉಳ್ಳ ಇಲಾಖೆಗಳು.. ರಾಷ್ಠ್ರಪತಿ ಭವನದ ಎದುರು ಕಾಣುವ ಉದ್ದನೆಯ ರಸ್ತೆಯ ಆಜುಬಾಜಿನಲ್ಲಿ ಹರಡಿರುವ ಸುಂದರ ಕಟ್ಟಡಗಳಲ್ಲಿ ಈ ಇಲಾಖೆಗಳು ಇವೆ. ಸಾಮಾನ್ಯವಾಗಿ ಟಿವಿಯಲ್ಲಿ ದೆಹಲಿ ಸುದ್ದಿಗಳು ಬಂದಾಗ ಇವನ್ನ ನೋಡಿರುತ್ತೀರಿ.

ಈ ಇಲಾಖೆಗಳನ್ನ ನಿಭಾಯಿಸೋದು, ಅಥವಾ ಈ ಇಲಾಖೆಗಳ ಮಂತ್ರಿಗಳಾಗೋದು ಅಷ್ಟೇನು ಸುಲಭದ ವಿಚಾರವಂತೂ ಅಲ್ಲ. ದೇಶವನ್ನು ಮುನ್ನಡೆಸುವ, ಅಥವಾ ಹಿನ್ನಡೆಸುವ ಶಕ್ತಿ ಈ ಇಲಾಖೆಗಳ ಮೇಲಿದೆ. ಆಡಳಿತದಲ್ಲಿ ನಿಪುಣರು, ಅನುಭವಿಗಳು, ಚಾಣಾಕ್ಷ ಮಂದಿ ಇಂತಹ ಇಲಾಖೆಗಳ ಮಂತ್ರಿಯಾಗಿ ಆಯ್ಕೆಯಾಗುವುದು ಹಿಂದಿನಿಂದ ನಡೆದುಕೊಂಡು ಬಂದಿದೆ.

ಗಮನಿಸಿ ನೋಡಿ, ಈ ಬಾರಿ ಇಂತಹ ಪ್ರಮುಖ ಮೂರು ಖಾತೆಗಳನ್ನು ನಿಭಾಯಿಸುತ್ತಿರುವ ಮೂರು ಮಂದಿ ದಕ್ಷಿಣ ಬಾರತೀಯರು, ಇನ್ನೊಬ್ಬರು ಬಂಗಾಳಿ.
ಗೃಹ ಇಲಾಖೆ ತಮಿಳುನಾಡಿನ ಚಿದಂಬರಂ, ಭದ್ರತಾ ಇಲಾಖೆ ಕೇರಳದ ಎ.ಕೆ. ಆಂಟನಿ. ವಿದೇಶಾಂಗ ಖಾತೆ ಕನ್ನಡಿಗ ಎಸ್.ಎಂ.ಕೃಷ್ಣ. ಉಳಿದದ್ದು ಹಣಕಾಸು ಬಂಗಾಳಿ ಪಂಡಿತ ಪ್ರಣಬ್ ಮುಖರ್ಜಿ ಕೈಯಲ್ಲಿದೆ.
ಇಲ್ಲಿ ಉತ್ತರ ಬಾರತದವರು ಯಾರೂ ಇಲ್ಲ ಅನ್ನೊದು ಚರ್ಚೆಯ ವಿಷಯ ಕೂಡ. ಅದೇ ವಿಚಾರಕ್ಕೆ ಉತ್ತರ ಭಾರತದ ಹಲವು ಕಾಂಗ್ರೆಸ್ ನಾಯಕರ ಹೊಟ್ಟೆ ಕೆಂಪಾಗಿರೋದರಲ್ಲಿ ಅಚ್ಚರಿಪಡುವುದೇನೂ ಇಲ್ಲ .

ನಾನು ಹೇಳಬೇಕಾಗಿರುವ ಗುಟ್ಟು ದೆಹಲಿ ರಾಜಕೀಯದ ಕಾರಿಡಾರುಗಳಲ್ಲಿ ಹೊರಳಾಡುತ್ತಿರುವ, ಪತ್ರಕರ್ತ ಸಮೂಹದಲ್ಲಿ ಚರ್ಚೆಗೆ ಒಳಗಾಗಿರುವ ವಿಶಯ ನಮ್ಮವರೊಬ್ಬರಿಗೆ ಸಂಭದಿಸಿದ್ದು. ದೆಹಲಿಯ ಬಿರುಬಿಸಿನಲ್ಲಿ ಆರಂಭವಾದ ಮೊದಲ ಅಧಿವೇಶನ ಇನ್ನೇನು ಮುಗಿಯುತ್ತಾ ಬಂದಿದೆ. ಹೊಸ ಹೊಸ ಮಂತ್ರಿಗಳು ಹೊಸ ಹೊಸ ಬಿಲ್ಲು, ಚರ್ಚೆ. ಅಂತೆಲ್ಲಾ ಮಿಂಚಿದ್ದಾರೆ, ಕೆಲವರು ತಮ್ಮ ಶಕ್ತಿಯನ್ನ, ಬುದ್ದಿವಂತೆಕೆಯನ್ನ ಪ್ರದರ್ಶನ ಇಟ್ಟಿದ್ದಾರೆ. ಕೆಲವರು ಗುಡ್ ಅನಿಸಿಕೊಂಡರೇ ಕೆಲವರೂ ಇನ್ನೂ ವೀಕ್ ಅನ್ನಿಸಿಕೊಂಡಿದ್ದಾರೆ.

ಈ ಮದ್ಯೆ ಎಸ್.ಎಂ. ಕೃಷ್ಣ ಅವರ ಬಗ್ಗೆ ರಾಜಕೀಯದ ಕಾರಿಡಾರುಗಳಲ್ಲಿ ಗುಸು ಗುಸು ಆರಂಭವಾಗಿದೆ, ಅವರನ್ನ ಮುಖ್ಯಮಂತ್ರಿಯಾಗಿ ನೋಡಿದ್ದವರಿಗೆ ಅರ್ಥವೇ ಆಗದಷ್ಟು ಎಸ್.ಎಂ.ಕೃಷ್ಣ ಪೇಲವವಾಗಿ ಕಾಣುತ್ತಾ ಇದ್ದಾರೆ, ಅವರು ಓಥ್ ತೆಗೆದುಕೊಂಡ ದಿನದ ಉತ್ಸಾಹ ಯಾಕೋ ಕಾಣುತ್ತಾ ಇಲ್ಲ. ರಾಜಕೀಯದಲ್ಲಿನ ಅವರ ಅಗಾಧ ಅನುಭವ ಅವರ ನೆರವಿಗೆ ಬಂದಂತೆ ಕಾಣುತ್ತಾ ಇಲ್ಲಾ ಅನ್ನೊದು ಅವರನ್ನು ಬಹಳ ವರ್ಷಗಳಿಂದ ಬಲ್ಲವರ ಅಭಿಪ್ರಾಯ.

ಅದರೇ ಅವರ ವಿರೋಧಿಗಳು, ಅವರನ್ನ ಕಳೆದ ಲೋಕಸಭೆಯಲ್ಲಿ ಗೃಹ ಮಂತ್ರಿಯಾಗಿ ಮುಂಬೈ ದಾಳಿಯ ನಂತರ ರಾಜೀನಾಮೆ ಕೊಟ್ಟ ಶಿವರಾಜ ಪಾಟೀಲರಿಗೆ ಕೃಷ್ಣರನ್ನು ಹೋಲಿಸುತ್ತಿದ್ದಾರ . He is not impressive , he is Shivraaj patil in making ಅಂಥ ಮಾತಾಡಿಕೊಳ್ಳುತ್ತಾ ಇದ್ದಾರೆ.

ಶಿವರಾಜ್ ಪಾಟೀಲರು ಮುಂಬೈ ದಾಳಿ ಆದ ದಿನವೂ ನಾಲ್ಕು ಬಾರಿ ಡ್ರೆಸ್ ಚೇಂಜ್ ಮಾಡಿಕೊಂಡು ಮಾದ್ಯಮದವರೊಂದಿಗೆ ಮಾತನಾಡಿದ್ದರಂತೆ. ಸದಾ ಸುಮಂಗಲಿ ತರಹ ನೀಟಾಗಿ ಡ್ರೆಸ್ ಮಾಡುತ್ತಿದ್ದ ಅವರು ಶೋಕಿವಾಲ. ಮುಂಬೈ ದಾಳಿ ಆದ ದಿನ ಶಿವರಾಜ್ ಪಾಟೀಲರೂ ನಾಲ್ಕು ಬಾರಿ ಬಟ್ಟೆ ಬದಲಾಯಿಸಿದ್ದನ್ನೇ ಸೂಕ್ಷ್ಮ ಗ್ರಹಿಕೆಯ ಪತ್ರಕರ್ತನೊಬ್ಬ ವರದಿ ಮಾಡಿದ್ದ. ಅದೇ ಶಿವರಾಜ್ ಪಾಟೀಲರಿಂದ ಕಾಂಗ್ರೇಸ್ ರಾಜೀನಾಮೆ ಕೇಳಲಿಕ್ಕೆ ಕಾರಣ ಅಂಥ ಕೂಡ ಹೇಳುತ್ತಾರೆ.

ಈಗ ತಾನೆ ಎಸ್.ಎಂ.ಕೃಷ್ಣ ವಿರುದ್ದ ದೆಹಲಿಯಲ್ಲಿ ಅಭಿಪ್ರಾಯ ರೂಪುಗೊಳ್ಳುತ್ತಾ ಇದೆ, ವಿದೇಶಾಂಗ ಖಾತೆಯನ್ನು ಪಡೆದಿರುವ ಅವರು ಈವರೆಗೆ ಒಂದೇ ಒಂದು ಸಾರಿ ಇಂಪ್ರೆಸ್ ಮಾಡುವ ರೀತಿ ಮಾತಾಡಿಲ್ಲ, ಅಹಾ ಕೃಷ್ಣ ಎಷ್ಟು ಚಾಲಾಕು ಗುರು ಅಂತ ಹೇಳುವಂತೆಯೂ ಇಲ್ಲ, ಅನುಭವ ಎಲ್ಲಿ ಹೋಯಿತೋ ಗೊತ್ತಾಗುತ್ತಾ ಇಲ್ಲ.
ಎಲ್ಲಾಪ್ಪಾ ಮಾಯವಾಯಿತು ಇವರ ಅನುಭವ, ಚಾಲಾಕು ತನ ಅನ್ನೊ ಅನುಮಾನ ಬರುವಂತೆ ಆಗಿದೆ.


ಅವರು ಅಧಿಕಾರಕ್ಕೆ ಬಂದ ದಿನ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಮೊದಲ ದಿನ ಇಲಾಖೆ ಅಧಿಕಾರಿಗಳು ಬರೆದುಕೊಟ್ಟಿದ್ದನ್ನ ಓದಿ, ನಾನು ಈ ಇಲಾಖೆಗೆ ಹೊಸಬ ಮುಂದೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಅಂದಾಗ ಪತ್ರಕರ್ತರಿಗೂ ಖುಷಿಯಾಗಿತ್ತು. ನಾವು ಅಂದುಕೊಂಡಿದ್ದೆವು ಕೃಷ್ಣ ಅವರಿಗೆ ತಕ್ಕ ಇಲಾಖೆ ಸಿಕ್ಕಿದೆ ಅಂತ, ಆದರೆ ಈಗ ಏನಾಗಿದೆ ನೋಡಿ ಕೃಷ್ಣ ಇನ್ನೂ ಅಧಿಕಾರಿಗಳು ಬರೆದುದ್ದನ್ನೇ ಓದುತ್ತಾ ಇದ್ದಾರೆ, ಪಾರ್ಲಿಮೆಂಟಿನಲ್ಲಿ ಪದೇ ಪದೇ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾ ಇದ್ದಾರೆ ಕನಿಷ್ಠ ಹತ್ತು ನಿಮಿಶವೂ ಸ್ವಂತಕ್ಕೆ ಸ್ಪಾಂಟೇನಿಯಸ್ ಆಗಿ ಮಾತಾಡೋಕೆ ಆಗಿಲ್ಲ.

ಬಿಜೆಪಿಯ ಘಟಾನು ಗಟಿಗಳು ಈಗ ಕೃಷ್ಣಾ ಅವರ ಮೇಲೆ ಕಣ್ಣಿಟ್ಟಿದ್ದಾರಂತೆ. ಅವರ ತಂತ್ರಕ್ಕೆ ಮೊದಲ ಬಲಿ ಇವರನ್ನೇ ಮಾಡೋಕೆ ತಂತ್ರ ಹೆಣೆದಿದ್ದಾರೆ.

ಹಿಲರಿ ಕ್ಲಿಂಟನ್ ಬಂದಾಗ ಅವರಿಗೆ ಸರಿಸಾಟಿಯಾಗಿ ಕೃಷ್ಣ ಮಿಂಚಲಿಲ್ಲ, ಕಂಡಲೆಲ್ಲ ನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಹಿಲರಿಯ ಡಿಪ್ಲೋಮಸಿ ಕೃಷ್ಣ ನಡುವಳಿಕೆಯಲ್ಲಿ ಕಾಣಲಿಲ್ಲ ಅಂತ ಪರ್ತಕರ್ತರೂ ಮಾತಾಡಿಕೊಳ್ಳುತ್ತಾ ಇದ್ದಾರೆ. ಯಾವಾಗಲೂ ಕೃಷ್ಣ ಗೆಲುವಿನಿಂದ ಕಾಣಿಸಲೇ ಇಲ್ಲ, ಬಲೂಚಿಸ್ಥಾನದ ಪ್ರಕರಣವನ್ನು ನಿಭಾಯಿಸಲು ಕೃಷ್ಣ ಹೆಣಗುತ್ತಿದ್ದಾರೆ, ಪ್ರಣಬ್ ಈಗ ಕೃಷ್ಣ ನೆರವಿಗೆ ಬರಬೇಕಾಗಿದೆ. ಅಧಿಕಾರಿಗಳು ಬರೆದುಕೊಟ್ಟಿದ್ದನೇ ಬಗ್ಗಿ ಬಗ್ಗಿ ಓದೋಕೆ ಕೃಷ್ಣಾ ಬೇಕಿಲ್ಲ ಅಲ್ಲವಾ..

ವಿದೇಶಾಂಗ ಇಲಾಖೆಯನ್ನ ಅತ್ಯಂತ ಕಠಿಣ ಸಂದರ್ಭದಲ್ಲಿ ನಿಭಾಯಿಸಿದ ಪ್ರಣಬ್ ನಡವಳಿಕೆ ನೋಡಿರಬೇಕು, ಆ ಬಂಗಾಳಿ ಮುದುಕ ಬಾರಿ ಚಾಲಾಕು. ಅಗ್ರೆಸೀವ್, ಮತ್ತು ಅನುಭವಿ . ಮುಂಬೈ ಧಾಳಿ ನಡೆದಾಗ ಪಾಕಿಸ್ತಾನದ ಬಗ್ಗೆ ಪದೇ ಪದೇ ಹೇಳಿಕೆ ನೀಡಿದ್ದನ್ನು ನೀವು ನೋಡಿರಬಹುದು, ಆದರೆ ಅಂತಹದೇ ಸಂದರ್ಭ ಬಂದರೆ ಕೃಷ್ಣ ಹೇಗೆ ನಿಭಾಯಿಸುತ್ತಾರೋ ನೋಡಬೇಕು.

ಅದೇ ಮಲ್ಲಿಕಾರ್ಜುನ ಖರ್ಗೆ ಪಾರ್ಲಿಮೆಂಟಿನಲ್ಲಿ ಮಿಂಚಿದ್ದಾರೆ, ಅವರು ಪಾರ್ಲಿಮೆಂಟಿನಲ್ಲಿ ಸಿಪಿಎಂ ನ ಗುರುದಾಸ್ ಗುಪ್ತಾ ಅವರಿಗೆ ನೀಡಿದ ಉತ್ತರ ಮತ್ತು ಮಾತಾಡಿದ ಪರಿಗೆ ಸೋನಿಯಾಗಾಂದಿ ಕಣ್ಣು ಮಿಟುಕಿಸಿ ಚೆನ್ನಾಗಿದೆ ಅಂದರಂತೆ, ಅದೇ ಅಲ್ಲ ಮನಮೋಹನ ಸಿಂಗ್ ಖರ್ಗೆ ಅವರಿಗೆ ಕರೆ ಮಾಡಿ ಭೇಷ್ ಅಂದರಂತೆ.

ಸದ್ಯಕ್ಕೆ ಅತೀ ಸೂಕ್ಷ್ಮ ವಿಷಯಗಳಾದ ಪಾಕಿಸ್ಥಾನ, ಚೀನಾ. ಅಮೇರಿಕಾ. ಆಸ್ಟ್ರೇಲಿಯಾ ಕುರಿತು ತರೋ ಆಗಿ ತಿಳಿದುಕೊಳ್ಳೊಕೆ ಕೃಷ್ಣ ಅವರಿಗೆ ಎಷ್ಠು ದಿನಬೇಕಾಗಿದೆಯೋ ಗೊತ್ತಿಲ್ಲ.
ಮೀಡಿಯಾಗಳಿಗೆ ಮಾತಾಡುವ ಅವರ ಕಲೆ ಅವರಿಗೆ ಮರೆತುಹೊಯಿತಾ ಗೊತ್ತಿಲ್ಲಾ..

ವಿದೇಶಾಂಗ ಖಾತೆಯನ್ನು ದಿನವೂ ಕವರ್ ಮಾಡುವ ಹಿಂದಿ ಚಾನಲ್ಲಿನ ಗೆಳಯನೊಬ್ಬ ಇವತ್ತು ನನ್ನ ಕೇಳಿದ 'ವಾಟ್ ಹ್ಯಾಪನ್ಡ್ ಟು ಯುವರ್ ಕೃಷ್ಣ, ವೈ ಹಿ ಈಸ್ ಸೋ ಅನ್ ಇಂಪ್ರಸೀವ್, ಹಿ ಈಸ್ ಶಿವರಾಜ್ ಪಾಟೀಲ್ ಇನ್ ಮೇಕಿಂಗ್, ಹಿ ಈಸ್ ಗೋಯಿಂಗ್ ಲೂಸ್ ಇಸ್ ಮಿನಿಷ್ಟ್ರೀ ಶಾರ್ಟಲಿ'. ಅಂದ.

ನಾನು 'ಯಾಕಪ್ಪ' ಅಂದೆ. 'ಅದಕ್ಕೆ ಅವನು ನಾನೇಳೋದನ್ನ ಬರೆದಿಟ್ಟುಕೋ. ಕೃಷ್ಣ ಹಿಂಗೆ ಮುಂದುವರೆದರೆ ನಾಲ್ಕು ತಿಂಗಳಲ್ಲಿ ಮನೆಗೆ ಹೋಗ್ತಾರೆ' ಅಂದ. 'ಇಲಾಖೆಯಲ್ಲಿ ಪಳಗಿರೋ ಅಧಿಕಾರಿಗಳಿಗೇ ಉತ್ಸಾಹ ಹೋಗಿದೆ, ಕೃಷ್ಣ ಅವರ ಬಗ್ಗೆ ಅವರು ಬಂದಾಗ ಇದ್ದ ಒಪಿನಿಯನ್ ಈಗ ಇಲ್ಲವಾಗಿದೆ. ಅವರು ಪಾರಿನ್ ಅಲ್ಲಿ ಕಲಿತದ್ದು ಎಲ್ಲಾ ಎಲ್ಲಿಹೋಯಿತು ಅಂಥ ಅಧಿಕಾರಿಗಳಿಗೆ ತಿಳಿತಾ ಇಲ್ಲಾ' ಅಂದ.

ಕಡೆಗೆ 'ಅದ್ಯಾರೋ ಕೃಷ್ಣಾ ಅವರಿಗೆ ಅಡ್ವೈಸರ್ ಆಗಿ ರಾಘವೇಂದ್ರ ಶಾಸ್ತ್ರಿ ಇದಾರಲ್ಲ ಅವರಿಂದಲೇ ಇದೆಲ್ಲ ಆಗಿರೋದು, ಇಲಾಖೆಯಲ್ಲಿ ಪಳಗಿರೋ ಮಹಾನ್ ಬುದ್ದಿವಂತ ಅಧಿಕಾರಿಗಳನ್ನೇ ಆತ ಕೃಷ್ಣರಿಂದ ದೂರ ಇಟ್ಟಿದ್ದಾನೆ. ಯಾರನ್ನೂ ಕೃಷ್ಣ ಅವರ ಹತ್ತಿರ ಸುಳಿಯೋಕು ಬಿಡುತ್ತಾ ಇಲ್ಲ. ಎಲ್ಲೋ ಪೇಜಸ್ ನಲ್ಲಿದ್ದವ ವಿದೇಶಾಂಗ ಖಾತೆ ನೋಡಿಕೊಂಡ್ರೇ ಏನುಗುತ್ತೇ ಹೇಳಿ. ಆತ ಕೃಷ್ಣ ಅವರ ಒಂದು ಕಿವಿಯನ್ನ ಆತ ಹೈಜಾಕ್ ಮಾಡಿದ್ದಾನೆ. ಇನ್ನೊಂದು ಕಿವಿ ಸರಿಯಾಗಿ ಕೇಳೋಲ್ಲ' ಅಂತ ಹೇಳಿ ನಕ್ಕ. ಜೊತೆಗೆ ರಾಘವೇಂದ್ರ ಶಾಸ್ತ್ರಿ ಯ ಕಾರಣಕ್ಕೆ ಕೃಷ್ಣ ವೈಪಲ್ಯ ಆದರೂ ಅಚ್ಚರಿ ಇಲ್ಲಾ ನೋಡಿ, ಅಂಥ ಹೇಳಿ ಕಡೆಗೆ
ನನ್ನನ್ನೇ ಪ್ರಶ್ನಿಸಿದ ವಾಟ್ ಯ್ಯಾಪನ್ಡ್ ಟು ಕೃಷ್ಣಾ ಅಂತ. ನನಗೂ ಏನು ಹೇಳಬೇಕೋ ತಿಳಿಯದೇ ಐ ಡೋಂಟ್ ನೋ ಅಂದೆ.