Saturday, May 16, 2009



ಸಿಂಗ್ ಈಸ್ ಕಿಂಗ್....ಕಿಂಗ್ ಈಸ್ ಸಿಂಗ್...

ಚುನಾವಣೆಗಳ ಪಲಿತಾಂಶ ಬರುತ್ತಾ ಇವೆ, ಕೆಲಸದ ಒತ್ತಡ ತುಂಬಾ ಇದೆ ಆದರು ಈಗಲೇ ಇದನ್ನು ಈಗಲೇ ಬರೆಯಬೇಕು,ನಿಮಗೆ ಹೇಳಿಬಿಡಬೇಕು ಎಂಬ ಕಾತರ, ಅದಕ್ಕೆ ಅತ್ಯಂತ ಕಡಿಮೆ ಪದಗಳಲ್ಲಿ ಹೇಳಬೇಕಿದ್ದನ್ನು ಹೇಳುತ್ತೇನೆ.
ಈಗ ರಾಜೀನಾಮೆ 'ಕೊಡಬೇಕಿಲ್ಲದ' ಮನಮೋಹನ್ ಸಿಂಗ್ ಇದ್ದಾರಲ್ಲ ಅವರು ೨೦೦೪ ಕ್ಕೂ ಮುಂಚೆ ಹೇಗಿದ್ದರೂ ಏನಾಗಿದ್ದರು ಅನ್ನೋ ಬಗ್ಗೆ ಪತ್ರಕರ್ತ ಗೆಳೆಯ, ಸಹೋದ್ಯೋಗಿ ಪ್ರಶಾಂತ ಹೇಳಿದ ಕತೆಯಿದು.
ಟಿವಿ ಹಿಂದಿ ವಾಹಿನಿಗಳಲ್ಲಿ ದಿನಾ ರಾತ್ರಿ " ಸುರ್ಕಿಯೋಸೆ ಆಗೇ " ಅನ್ನೋ ಕರಂಟ್ ಅಪೇರ್ಸ್ ಕಾರ್ಯಕ್ರಮ ಬರುತ್ತೆ , ದಿನದ ಬಹುಮುಖ್ಯ ಸುದ್ದಿಯನ್ನ ಹಿಡಿದು ಅದರ ಮಹತ್ವದ ಬಗ್ಗೆ, ಹಿನ್ನೆಲೆ, ಮುನ್ನೆಲೆ ಬಗ್ಗೆ ಸಂಪೂರ್ಣ ಮಾಹಿತಿ ಕೊಡೋ ಕಾರ್ಯಕ್ರಮ, ಕನ್ನಡದಲ್ಲಿ "ಸುದ್ದಿಗಿಂತ ಆಚೆ" ಅನ್ನೋ ಕಾರ್ಯಕ್ರಮ ಅಂದುಕೊಳ್ಳಿ.
ಕಾರ್ಯಕ್ರಮದ ಪೂರ್ತಿ ಉಸ್ತುವಾರಿ ಪ್ರಶಾಂತ್ ನದು, ಎಂಥಾ ತಲೆಬಿಸಿಯ ಕೆಲಸ ಅಂದರೆ ದಿನಕ್ಕೆ ಅರ್ಧ ಗಂಟೆ ಕಾರ್ಯಕ್ರಮವನ್ನ ಇಬ್ಬರೇ ತಯಾರು ಮಾಡಬೇಕು, ದೇಶ ಅತ್ಯಂತ ಶಾಂತ ವಾಗಿ, ಸುಖವಾಗಿ ಇರೋ ಕಾಲದಲ್ಲೂ ಏನಾದ್ರೂ ಮಾಡಿ ಪ್ರೋಗ್ರಾಂ ಕೊಡಲೇ ಬೇಕು ತಪ್ಪಿಸಿಕೊಳ್ಳೋಕೆ ಸಾದ್ಯವೇ ಇಲ್ಲದ ಮಾತು ಬಿಡಿ, ಸುದ್ದಿಮನೆಗಳಲ್ಲಿ ಕೆಲವೊಂದು ದಿನ ಏನೂ ಮಹತ್ವದ ಸುದ್ದಿ ಸಿಗದೇ ಒದ್ದಾಡುವುದು ಉಂಟು, ಕಷ್ಟವಾದರೂ ಮಾಡಲೇಬೇಕಲ್ಲ, ಅಂತ ಸಂಧರ್ಭದಲ್ಲಿ ಕಿಲಾಡಿ ಪತ್ರಕರ್ತರು, ಆರ್ಥಿಕ ಹಿಂಜರಿತ, ಪಾಕಿಸ್ತಾನ, ಅಮೇರಿಕಾ ಅರ್ಥಿಕ ಪರಿಸ್ಥಿತಿ ಮತ್ತು ಭಾರತ ಅನ್ನೋ ರೀತಿ ಯಾವುದೋ ಕಿಲಾಡಿ ಐಡಿಯಾ ರೆಡಿ ಮಾಡಿ, ಅತ್ಯಂತ ಸರಳವಾಗಿ ಸಿಗೋ, ಯುನಿವೆರ್ಸಿಟಿ ಪ್ರೊಪೆಸರ್, ರಿಟೈರ್ಡ್ ಆಪಿಸರ್,
ರಿಟೈರ್ಡ್ ಪತ್ರಕರ್ತರನ್ನ ಒಟ್ಟಿನಲ್ಲಿ ಖಾಲಿ ಹೊಡೀತಾ ಕುಳಿತವರ ಬೈಟ್ ಗಳನ್ನ ಸೇರಿಸಿ ಸ್ಟೋರಿ ಒಂದನ್ನ ಕೊಟ್ಟು ಅಪ್ಪಯ್ಯಾ ಅಂತ ನಿಟ್ಟುಸಿರು ಬಿಡುತ್ತಾರೆ.
ಇಲ್ಲಿ ಆಗಿದ್ದು ಅದೇ ಅವತ್ತು ಪ್ರಶಾಂತ ಯಾವುದೋ ಸ್ಟೋರಿ ಮಾಡಬೇಕಿತ್ತು, ಬೈಟ್ ಯಾರದಪ್ಪ ಅನ್ನೋ ಯೋಚನೆ ಮಾಡಿದ ತಕ್ಷಣ ಮಾಜಿ ಅರ್ಥ ಸಚಿವ ಮನಮೋಹನ್ ಸಿಂಗ್ ಇದಾರಲ್ಲ ಅಂತ ನೇರವಾಗಿ ಅವ್ರಿಗೆ ಕರೆ ಮಾಡಿ ಮನೆಗೇ ಬರ್ತೀನಿ ಸಾರ್, ಒಂದು ಬೈಟ್ ಬೇಕು ಆರ್ಥಿಕತೆ ಬಗ್ಗೆ ಅಂದನಂತೆ, ಯಾವಾಗೂ ಖಾಲಿ ಇರುವ ಎಲ್ಲರ ಕೈಗೂ ಸಿಗುವ ಮಾಮೂಲಿಯಾಗಿ ಟಿವಿಯವರಿಗೆ ಇಲ್ಲಾ ಎನ್ನದ ಮನಮೋಹನ್ ಸಿಂಗ್ ಬನ್ನಿ ಪ್ರಶಾಂತ್ ಸಫ್ದರ್ ಜಂಗ್ ರಸ್ತೆ ಮನೆಯಲ್ಲೇ ಇರ್ತಿನಿ ಅಂದರಂತೆ. ಇವನು ಕ್ಯಾಮರಾ ಮ್ಯಾನ್ ನನ್ನ ಕರೆದುಕೊಂಡು ಅವರ ಮನಗೆ ಹೋದಾಗ ಅವರ ಮನೆಯವರು ಹೇಳಿದರಂತೆ ಸಾಹೇಬರು ಇಲ್ಲೇ ಎಲ್ಲೋ ಹೋದರು ಹತ್ತೇ ನಿಮಷದಲ್ಲಿ ಬಂದು ಬಿಡ್ತಾರಂತೆ, ನಿಮಗೆ ಸ್ವಲ್ಪ ಸಮಯ ಕಾಯಕ್ಕೆ ಹೇಳಿ ಅಂತ ಹೇಳಿದಾರೆ ಅಂದರಂತೆ, ಪ್ರಶಾಂತ ಕಾಯುತ್ತಾ ಕೂತು ಒಂದು ಗಂಟೆ ಆಗಿರಬೇಕು.
ಕಮಾಂಡೋ ಪಡೆಗಳು, ಬ್ಲಾಕ್ ಕ್ಯಾಟ್ ಗಳು ಅವರ ಮನೆ ಮುಂದೆ ಬಂದು ಇಳಿದವಂತೆ, ಮನಮೋಹನ್ ಮನೆಯನ್ನ ಸುತ್ತುವರಿದು ಕ್ಲಿಯರೆನ್ಸ್ ಮಾಡಲು ಮುಂದಾದರಂತೆ, ಮನಮೋಹನ್ ಹೆಂಡತಿಗೂ ಗಾಭರಿ ಆಯಿತಂತೆ, ಅಲ್ಲೇ ಬೈಟ್ ಗಾಗಿ ಕಾಯುತ್ತಾ ಇದ್ದ ಇವನಿಗೆ ತಲೆಬಿಸಿ ಆಗಿ ವಿಚಾರಿಸಿದರೆ ಸರ್ ಮನಮೋಹನ್ ಸಿಂಗ್ ಮುಂದಿನ ಪ್ರಧಾನ ಮಂತ್ರಿ, ಈಗ ಇಲ್ಲಿಗೆ ಬರ್ತಾ ಇದಾರೆ ಜಾಗ ಕಾಳಿ ಮಾಡಿ ಅಂದನಂತೆ ಕಮಾಂಡೋ....
ತಲೆ ಕೆಟ್ಟು ಹೋಗಿ ಚೆಕ್ ಮಾಡಿದರೆ, ಹೌದು ಮನಮೋಹನ್ ಸಿಂಗ್ ಪ್ರಧಾನಿ ಅನ್ನೋ ವಿಷಯ ಕನ್ಫರ್ಮ್ ಆಗದ್ದರಿಂದ ಅದೇ ಪ್ರಶಾಂತ ನಮ್ಮ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್ ಕೊಟ್ಟನಂತೆ, ಎಂತ ಅದೃಷ್ಟ ಅಲ್ಲವಾ, ಇಬ್ಬರದು....
ಪ್ರಶಾಂತ್ ಬೈಟ್ ಗಾಗಿ ಕಾಯದೆ ಜಾಗ ಖಾಲಿ ಮಾಡಿದಂತೆ....
ವಿದೇಶಿ ಮಹಿಳೆ, ವಿದೇಶಿ ಮಹಿಳೆ ಅಂತ ಬಿಜೆಪಿ ಎಬ್ಬಿಸಿದ ಬಿರುಗಾಳಿಯಿಂದ ರೋಸಿಹೋದ ಸೋನಿಯಾ ತನ್ನ ಇಬ್ಬರು ಮಕ್ಕಳಾದ. ಪ್ರಿಯಾಂಕ, ಮತ್ತು ರಾಹುಲ್ ಜೊತೆ ಮಾತನಾಡಿ ತನಗೆ ಯಾಕೋ ಪ್ರಧಾನಿ ಆಗೋಕೆ ಮನಸು ಒಪ್ಪುತಾ ಇಲ್ಲಾ ಅಂದರಂತೆ, ಯಾರನ್ನು ಪ್ರಧಾನಿ ಮಾಡೋದು ಅಂತ ಯೋಚಿಸಿ, ಮೂವರು ಕೂಡಿ ಮನಮೋಹನ್ ಸಿಂಗ್ ಅವರಿಗೆ ಕರೆ ಮಾಡಿ ಮನೆಗೇ ಬನ್ನಿ ಅಂತ ಕರೆದು ನೀವೇ ನಮ್ಮ ಪ್ರಧಾನಿ, ನಾಳೆಗೆ ಒಥ್ ತಗೋಳಿ ಅಂದರಂತೆ. ಯಾರು ನಿರೆಕ್ಷಿಸದ, ಸ್ವತ ಮನಮೋಹನ್ ಸಿಂಗ್ ನಿರೀಕ್ಷಿಸದ, ಮೀಡಿಯಾ ದವರಿಗೆ ಬೈಟ್ ಕೊಡುತ್ತಾ ಖಾಲಿ ಹೊಡೆಯುತ್ತಿದ್ದ ಮಾಜಿ ಅರ್ಥ ಸಚಿವ. ಆರ್. ಬಿ. ಗವರ್ನರ್ ೨೦೦೪ ರಲ್ಲಿ ಪ್ರದಾನಿಯಾದ ಕತೆ.
ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ , ವೇಸ್ಟ್
ಪ್ರೈಂ ಮಿನಿಸ್ಟರ್ ಅಂತ ರೇಗಿಸುತ್ತಿದ್ದ ಅಡ್ವಾಣಿ ಕತೆ ಈಗ ಅದ್ವಾನವಾಗಿಹೋಗಿದೆ.....ಮನಮೋಹನ ಸಿಂಗ್ ಗೆಲುವಿನ ಜಾದುಗಾರ ಆಗಿ ಹೊರ ಹೊಮ್ಮಿದ್ದಾರೆ....

ಓದಿ ಕಾಮೆಂಟ್ ಮಾಡದೆ ಹಾಗೆ ಹೋದರೆ ನಾನು ನಿಮ್ಮನ್ನ ಕ್ಷಮಿಸೋಲ್ಲ ಆಯ್ತಾ.

Thursday, May 14, 2009


ಕೆಟ್ಟ ಕಾಲೇ..ಮಂಕು ಬುದ್ದಿ.
ರಾಜ್ಯದ ಮುಖ್ಯಮಂತ್ರಿಯಾಗಿ ಸೈ ಎನಿಸಿಕೊಂಡ ಕುಮಾರಸ್ವಾಮಿ ಸೋನಿಯಾಗಾಂಧಿ ಮನೆಗೆ ಹೋಗುವಾಗ ಯಾಕಾಗಿ ಮುಖ ಮುಚ್ಚಿಕೊಂಡರೋ ಗೊತ್ತಿಲ್ಲ, ಸೋನಿಯಾಗಾಂಧಿ ಮನೆಗೆ ಹೋಗೋದು ಅಪರಾಧವೇನು ಆಗಿರಲಿಲ್ಲ ರಾಜಕೀಯದಲ್ಲಿರೋ ಮಂದಿ ರಾಜಕೀಯ ಮಾಡದೇ ಕಡಲೇಪುರಿ ತಿನ್ನುತ್ತಾ ಕುಳಿತುಕೊಳ್ಳಲೂ ಆಗೋಲ್ಲ.
ಅಷ್ಟಕ್ಕೂ ಸೋನಿಯಾಗಾಂಧಿ ಮತ್ತು ಕುಮಾರಸ್ವಾಮಿ ಚುನಾವಣೆಗೂ ಮುಂಚಿನಿಂದ ಸಂಪರ್ಕದಲ್ಲಿರುವುದು ಗೊತ್ತಿರುವ ವಿಚಾರ. ಕರ್ನಾಟದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದು ಬಹಿರಂಗವಾಗಿದೆ.
ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ನಡುವಿನ ವ್ಯತ್ಯಾಸವೇ ಬೇರೆ, ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾದರು ಚಾಲಾಕುತನ ಕಲಿತಿಲ್ಲ, ರಾಜಕೀಯ ಪ್ರಭುದ್ದತೆ ಕಲಿತಿಲ್ಲ, ಇನ್ನೂ ಹುಡುಗುತನ ಹೋಗಿಲ್ಲ ಮೊನ್ನೆ ನಡೆದ ಪ್ರಕರಣದಲ್ಲೂ ಆಗಿದ್ದು ಅದೇ...
ಕುಮಾರಸ್ವಾಮಿಗೆ ಲೆಪ್ಚ್ ಪ್ರಂಟ್ ಬಗ್ಗೆ ಮೊದಲಿಂದಲೂ ಅಷ್ಟಕ್ಕೆ ಅಷ್ಟೇ... ಕಾಂಗ್ರೇಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಹೋದರೆ ಕಷ್ಠ , ಲೆಪ್ಟು, ರೈಟು, ಪ್ರಂಟೂ ಅಂತ ಕಮ್ಯುನಿಷ್ಠರ ಜೊತೆಯಲ್ಲಿ ಹೋದರೆ ರಾಜ್ಯದಲ್ಲಿ ಏನೂ ಮಾಡಕ್ಕೆ ಆಗಲ್ಲ, ಅಧಿಕಾರದಲ್ಲಿರೋ ಬಿಜೆಪಿಯನ್ನೂ ಭೀತಿಯಲ್ಲಿ ಇಡಲಿಕ್ಕೆ ಕಾಂಗ್ರೇಸ್ ಬೇಕೆ ಬೇಕು. ಕಮ್ಯುನಿಷ್ಟ್ ಪಕ್ಷ ರಾಜ್ಯದಲ್ಲಿ ಎಲ್ಲಿದೆ ಅನ್ನೋದು ಪ್ರಶ್ನೆ, ಕುಮಾರಸ್ವಾಮಿದು ಪ್ರಾಕ್ಟಿಕಲ್ ಲೆಕ್ಕಾಚಾರ.
ಆದರೆ ದೇವೇಗೌಡರ ವಿಚಾರ ಬೇರೆ ಇದೆ ರಾಜ್ಯದಲ್ಲಿ ಜೆಡಿಎಸ್ ಗೆಲ್ಲೋದು ಅಮ್ಮಮ್ಮಾ ಅಂದ್ರೂ 6ರಿಂದ 7 ಸೀಟು, ಅದನ್ನ ಜೆಡಿಎಸ್ ಏಕಾಂಗಿಯಾಗಿಯೇ ಗೆಲ್ಲಬಹುದು, ರಾಷ್ಠ್ರ ಮಟ್ಟದಲ್ಲಿ ಲೆಪ್ಟ್ ಪ್ರಂಟ್ ಅನ್ನೋ ವೇದಿಕೆಯಲ್ಲಿದ್ದರೇ ಅವಕಾಶ ಹೆಚ್ಚು, ಬಾರ್ಗೈನ್ ಪವರ್ ಜಾಸ್ತಿ... ಹಣೆಬರ ಚೆನ್ನಾಗಿದ್ದರೆ ಏನೂ ಆಗಬಹುದು, ಕಾಂಗ್ರೆಸ್ ಅನ್ನೋ ಅಧಿಕಾರ ಧಾಹಿಗಳ ಮನೆ ಬಾಗಿಲು ಯಾವಾಗಲು ತೆರೆದೇ ಇರುತ್ತೇ ಅನ್ನೋದು ದೇವೇಗೌಡರ ಐಡಿಯಾ, ಈಗ ಲೆಪ್ಚ್ ಪ್ರಂಟ್ ಇದೆಯೋ, ಇಲ್ಲವೋ ಅನ್ನೋದು ಬೇರೆ ಪ್ರಶ್ನೆ, ಇದೆ ರೀ ಇದೆ ಅಂತ ಮಂತ್ರ ಹಾಕಿದರೆ ಲಾಭ.

ಆದರೆ heliddu ದೇವೇಗೌಡರಿಗೆ "ಇಲ್ಲದೆ ಇರೋದನ್ನು ಇದೇ" ಎಂದು ಬಿಂಬಿಸುವ ಭೂತದ ಮಂತ್ರ ಗೊತ್ತು ಅದು ಕುಮಾರಸ್ವಾಮಿಗೆ ಗೊತ್ತಿಲ್ಲ. ಅವರಿಗೆ ಗೊತ್ತಿರೋ ರಾಜಕೀಯ "ಮೊದಲೇ ಡೀಲ್ ಮಾಡಿಬಿಟ್ರೆ ಒಳ್ಳೇದು, ಆಮೇಲೆ ಹೆಂಗೋ ಏನೋ" ಅನ್ನೋ ಟಿಪಿಕಲ್ ಹುಡುಗು ಬುದ್ಧಿ.

ಸೋನಿಯಾ ಗಾಂಧಿ ಮನೆ ಹತ್ರ hodaaga ಆಗಿದ್ದು ade ಯಾರೋ ಕಾಂಗ್ರೇಸ್ ಸ್ನೇಹಿತರನ್ನ ಕರೆದುಕೊಂಡು ಯಾವತ್ತೂ ಹೋಗುವಂತೆ ಸೋನಿಯಾ ಗಾಂಧಿ ಕುಮಾರಸ್ವಾಮಿ ಮನೆಗೆ ಬಂದಿದ್ದಾರೆ, ಅವರ ಮನೆ ಬಾಗಿಲಲ್ಲಿ ಬೇರೆ ಯಾರಿಗೋ ಕಾಯುತ್ತಿದ್ದ ಕ್ಯಾಮರಾದವರು ನನಗೇ ಕಾಯುತ್ತಿದ್ದಾರೆ ಅಂತ ತಪ್ಪುತಿಳಿದುಕೊಂಡು ಇಕ್ಕಟ್ಟಿಟ್ಟಿಗೆ skkikondiddare ದೇವರೇ ನಮ್ಮಪ್ಪ ದೇವೇಗೌಡರಿಗೆ ಗೊತ್ತಾದ್ದರೆ ಏನು ಗತಿ ಅಂತ ಹೆದರಿ ಒಂದು ಕೈಯಲ್ಲಿ ಮುಖ ಮುಚ್ಚಿಕೊಂಡಿದ್ದಾರೆ, ಆ ಕ್ಷಣಕ್ಕೆ ಮುಖ ಮಚ್ಚಿಕೊಂಡವರೇ ಯಾರಿಗೂ ಕಾಣಲ್ಲ ಅನ್ನೂ ಮನುಷ್ಯ ಸಹಜ ದಿಡೀರ್ ನಿರ್ಧಾರkke bandiddaare...
ಅದು ಹೋದರೇ ಹೋಗಲಿ ಮತ್ತೆ ಹೋದ ದಾರಿಯಲ್ಲಾದರೂ ವಾಪ್ಪಸ್ಸು ಬಂದು ಮಾದ್ಯಮಗಳ ಎದುರು ಮಾತನಾಡಿ ಹೌದು ಕರ್ನಾಟಕ ರಾಜಕಾರಣದ ಬಗ್ಗೆ ಚರ್ಚೆ ಮಾಡಕ್ಕೆ ಹೋಗಿದ್ದೆ , ಬೇಟಿಗೆ ಮಹತ್ವ ಏನಿಲ್ಲ ಅಂತ ಹೇಳಬಹುದಿತ್ತು, ಆದರೆ ನಾವೆಲ್ಲಾ ಹುಡುಕುತ್ತಲೇ ಇರುವಾಗಲೇ 11 ಜನಪತ್ ನ ಹಿಂದಿನ ರಸ್ತೆಯಿಂದ ಆಸಾಮಿ ಪರಾರಿಯಾಗಿದ್ದರು, ಪ್ರಳಯಾಂತಕರಾದ ದೆಹಲಿ ಪತ್ರಕರ್ತರು ಹಿಂದಿನ ಬಾಗಿಲಿನಿಂದಲೂ ಕುಮಾರಸ್ವಾಮಿ ಅವರನ್ನು ಬೆನ್ನು ಹತ್ತಿದ್ದಾರೆ, ಮಸಾಲಾ ಸುದ್ದಿ ಸಿಕ್ಕರೆ ಮುಕ್ಕಿ ಮುಕ್ಕಿ ತಿನ್ನವ ದೆಹಲಿ ಪತ್ರಕರ್ತರು ಆಗಲೆ ದೇಶಕ್ಕೆಲ್ಲ ತೋರಿಸಿ ಆಗಿತ್ತು.
ಆ ಹೊತ್ತಿಗೆ ದೇವೇಗೌಡರಿಗೂ ಸುದ್ದಿ ಮುಟ್ಟಿ ರೊಚ್ಚಿಗೆದ್ದಾರೆ, ಅಷ್ಠರಲ್ಲಿ ಟಿ.ವಿಗಳನ್ನು ನೋಡಿ ಬೆಚ್ಚಿದ ಕುಮಾರಸ್ವಾಮಿ ಪ್ರೆಸ್ ಮೀಟ್ ಮಾಡಿ ಸಮರ್ಥನೆ ನೀಡಬೇಕಾಯಿತು..

ಅದೆಲ್ಲ ಎಲ್ಲಾರಿಗೂ ಗೊತ್ತಿರೋ ವಿಚಾರ ಬಿಡಿ, ಪ್ರೆಸ್ ಮೀಟ್ ನಲ್ಲಿ 'ಮಿಸ್ಟರ್ ಕುಮಾರ ಸ್ವಾಮಿ ವೈ ಯು ಸ್ನೀಕಡ್ ಇನ್ ಟು ಸೋನಿಯಾಸ್ ಹೌಸ್ ವಿಥ್ ಹೈಡಿಂಗ್ ಪೇಸ್...' ಅಂತ ಸಿಎನ್ಎನ್ ಐಬಿಎನ್ ನ ಪಲ್ಲವಿ ಘೋಷ್ ಪ್ರಶ್ನೆ ಕೇಳಿದಾಗ ಕುಮಾರಸ್ವಾಮಿ ಹೇಳಿದ ಉತ್ತರ ಏನು ಗೊತ್ತಾ ನನಗೆ ಸೆಕೆ ಆಗ್ತಾ ಇತ್ತು ಬೆವರಿದ್ದೆ ಅದಕ್ಕೆ ಮುಖ ಒರೆಸಿಕೊಳ್ಳಾ ಇದ್ದೆ antta...ಮತ್ತೊಮ್ಮೆ ಅವಳು ಕೇಳಿದ ಪ್ರಶ್ನೆ ಎಸಿ ಇರೋ ಕಾರಲ್ಲಿ ಸೆಕೆ ಆಗುತ್ತಾ ಕುಮಾರಸ್ವಾಮಿ....!
ಅದೇ ದೇವೇಗೌಡರನ್ನು ನೋಡಿ ಮಾರನೇ ದಿನ ಕರೆದ ಪ್ರೆಸ್ ಕಾನ್ಪರೆನ್ಸ್ ನಲ್ಲಿ ಅವರು ಮಗನ ಕೃತ್ಯ ಸಮರ್ಥಿಸಿಕೊಂಡು, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವನ್ನು ತೆಗೆಯುವುದೇ ನಮ್ಮ ಗುರಿ ಅದಕ್ಕಾಗೆ ಕುಮಾರಸ್ವಾಮಿ ಸೋನಿಯಾಗಾಂಧಿ ಅವರನ್ನು ಭೇಟಿ ಆಗಿ ಮಾತುಕತೆ ಮಾಡಿದ್ದಾರೆ ಅದರಲ್ಲಿ ಏನೂ ತಪ್ಪಿಲ್ಲ, ಪಕ್ಷವೂಂದರ ರಾಜ್ಯಾದ್ಯಕ್ಷರಿಗೆ ಇಂತಹ ಜನಾವ್ದಾರಿಗಳಿರುತ್ತವೆ ಅನ್ನುತ್ತಾ ಘಟನೆ ಅಳಿಸಿಹಾಕಿದರು, ಕೊನೆಗೆ ನಾವು ಈಗಲೂ ಥರ್ಡ್ ಪ್ರಂಟ್ ನಲ್ಲೇ ಇದ್ದೇವೆ
ಅದರ ಬಗ್ಗೆ ಯಾರಿಗೂ ಅನುಮಾನ ಬೇಡವೇ ಬೇಡ ಅಂತ ತಮ್ಮ ಚಾಣಾಕ್ಯತೆ ಪ್ರದರ್ಶಿಸಿದರು.
ಆದರೆ ಕುಮಾರಸ್ವಾಮಿಗೆ ಚಾಣಾಕ್ಷತೆ ಇಲ್ಲದೇ ಹೋದರೂ ಪ್ರಾಮಾಣಿಕತೆ ಇದೆ, ಅವರನ್ನು ಹುಡುಕಿಕೊಂಡು ಮನೆಗೆ ಹೋದ ಪತ್ರಕರ್ತರಿದೆ ಆದ ಪ್ರಕರಣದ ಬಗ್ಗೆ ಒಂದು ಚೂರು ಸುಳ್ಳು ಹೇಳದೇ 'ಹಿಂಗೆ ಆಗೋಯ್ತಲ್ಲ ಸರ್ ಏನ್ ಮಾಡೋದು' ಅಂತ ಆಪ್ ದ ರೆಕಾರ್ಡ್ ಹೇಳಿಕೊಂಡಿದ್ದಾರೆ ಕುಮಾರಸ್ವಾಮಿ, ಪರಿಚಯವೇ ಇಲ್ಲದ ಕೆಲ ಪತ್ರಕರ್ತರು ಎಷ್ಠು ಒಳ್ಳೇ ಮನುಷ್ಯ ರೀ ಕುಮಾರಸ್ವಾಮಿ ಅಂತ ತಲೆದೂಗಿದ್ದಾರೆ.
ಅದೇ ದೇವೇಗೌಡರು ಒಬ್ಬರೇ ಇದ್ದಾಗ ಹೇಳೋ ಆಪ್ ದ ರೆಕಾರ್ಡ್ ವಿಷಯಗಳನ್ನು ಅರ್ಥ ಮಾಡಿಕೊಳ್ಳೊ ಜಾಣನನ್ನ ಇಲ್ಲಿವರಗೆ ನಾನು ಕಂಡಿಲ್ಲ, ನಾಂನಂತೂ ಅಲ್ಲ ಅವು ಅರ್ಥ ಅಗೂದೆ ಕಷ್ಟ.

Tuesday, May 12, 2009


ಆ ಮರ ಅಪಘಾತಕ್ಕೆ ಬಲಿಯಾಯಿತು...

ಹಾಸನದ ಬಳಿಯ ಚಿಕ್ಕಕಡಲೂರು ಬಳಿ ನಡೆದ ಬೀಕರ ರಸ್ತೆ ಅಪಗಾತದಲ್ಲಿ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಅರಳಿ ಮರ ಮುರಿದು ಬಿದ್ದಿದೆ, ಬಳ್ಳಾರಿಯಿಂದ ಅದಿರು ತುಂಬಿಕೊಂಡು ಬರುತ್ತಿದ್ದ ಲಾರಿಯ ಚಾಲಕ ಪಾನಪತ್ತನಾಗಿ ವಾಹನ ಚಾಲನೆ ಮಾಡಿ ಮರಕ್ಕೆ ಡಿಕ್ಕಿ ಹೊಡೆದಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ ಲಾರಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವ ಇಬ್ಬರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ, ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

ಈ ರೀತಿಯಲ್ಲಿ ಅಫಗಾತ ವರದಿಯನ್ನು ನಾನೇ ಬರೆದುಕೊಂಡು ನಾನೇ ಓದಿದೆ... ಯಾಕೋ ನನಗೆ ತಲೆ ಕೆಟ್ಚಿದೆ ಅನ್ನಿಸಿತು, ಬೇರೆ ಯಾರಿಗಾರೂ ತೋರಿಸಿದರೆ ನನಗೆ ತಲೆಕೆಟ್ಟಿರುವುದನ್ನು ಖಾತ್ರಿ ಮಾಡಿಬಿಡುತ್ತಾರೆ ಅಂದುಕೊಂಡು ಯಾರಿಗೂ ತೋರಿಸದೆ ನನ್ನನ್ನು ನಾನೇ ತಮಾಷೆ ಮಾಡಿಕೊಂಡು ಸುಮ್ಮನಾದೆ.
ಕೆ.ಟಿ.ಶಿವಪ್ರಾಸಾದ್ ಅವರು ಹೇಳಿದ ರೀತಿ ಏನಾದರು ಯೋಚನೆ ಮಾಡಿ ನಾನೇದರು ಸುದ್ಧಿಗಳನ್ನು ಬೇರೆ ದಿಕ್ಕಿನಿಂದ ಯೋಚನೆ ಮಾಡಿ ಬರೆದಿದ್ದರೇ ಕಷ್ಠ ಆಗುತ್ತಿತ್ತೇನೋ.... ಆದರೆ ಶಿವಪ್ರಾಸಾದ್ ಅವತ್ತು ನನ್ನ ಜೊತೆ ಮಾತನಾಡುವಾಗ ನಾವು ಗ್ರಹಿಸದೇ ಹೊಗುವ ಮತ್ತೊಂದು ಲೋಕವನ್ನೇ ನನಗೆ ಪರಿಚಯ ಮಾಡಿಸಿದ್ದರು, ನಾವು ಮನುಷ್ಯರನ್ನು ಹೊರತು ಯಾರನ್ನು ಲೆಕ್ಕಕ್ಕೆ ಇಡುವುದೇ ಇಲ್ಲ, ಭೂಮಿಯ ಮೇಲೆ ಇರುವುದೆಲ್ಲ ನಮ್ಮದೇ ಎಂಬ ಮುನುಷ್ಯ ಕೇಂದ್ರಿತ ದೃಷ್ಠಿಯಲಲ್ಲಿ ಮಾತ್ರ ನೊಡುತ್ತೇವೆ, ಮನುಷ್ಯರಾಗಿ ಮಾತ್ರ ಯೋಚಿಸದೇ ನಮ್ಮ ಸುತ್ತಲಿನ ಇತರ ಜೀವಿಗಳ ಅಂತರಂಗಕ್ಕೆ ಇಳಿದು ಅವುಗಳ ಕಣ್ಣಿಂದ ನೋಡಿದರೇ ನಮ್ಮ ತಿಳಿವೇ ಬದಲಾಗುತ್ತದೆ ಎಂಬುದು ಅವರ ಕೆ.ಟಿ.ಶಿವಪ್ರಸಾದ್ ವಾದವಾಗಿತ್ತು ಇದನ್ನು ನನಗೆ ಅರ್ಥ ಮಾಡಿಸಲು ಅವರು ನನಗೆ ಹೇಳಿದ ಕತೆ ಹೀಗಿತ್ತು,
ಅಲ್ಲಯ್ಯಾ ಅರಸೀಕೆರೆ ರಸ್ತೆಯಲ್ಲಿ ಯಾವನೋ ಒಬ್ಬ ಕುಡುಕ ಡ್ರೈವರ್ ಮರಕ್ಕೆ ಲಾರಿ ಗುದ್ದಿಸಿ ಸತ್ತುಹೊದದ್ದನ್ನು ವರದಿ ಮಾಡುತ್ತೀರಿ, ಅವನೇ ಮಾಡಿಕೊಂಡ ತಪ್ಪಿಗೆ ಜನ ಮರುಗುವಂತೆ ಬರೆಯುತ್ತೀರಿ, ಎಷ್ಠು ಜನ ಸತ್ತರು ಹೇಗೆ ಸತ್ತರು ಅಂತೆಲ್ಲ ವಿವರಿಸುತ್ತೀರಿ ಆದರೆ ಧೂರ್ತ ಮನುಷ್ಯ ಮಾಡಿದ ತಪ್ಪಿನಿಂದ ನೆಲಕ್ಕೆ ಉರುಳಿದ ಮಾಡಿದ ತಪ್ಪಾದರೂ ಏನಪ್ಪಾ,ಯಾವ ಮನುಷ್ಯನ ಹಂಗಿಲ್ಲದೆ ಬೆಳೆದ ಆ ಮರದ ನೋವು ನೋವಲ್ಲವಾ.. ಅದು ನಿಮ್ಮ ಕಣ್ಣಿಗೆ ಕಾಣೋದೆ ಇಲ್ಲವಲ್ಲ ಇದಕ್ಕೆ ಏನು ಹೇಳ್ತೀರಪ್ಪಾ ವರದಿಗಾರರು ಅಂದರು... ನಾನು ಅವರ ಮಾತನ್ನು ಒಪ್ಪಿಕೊಂಡೆ, ಅವರ ವಾದ ಕೇವಲ ಒಂದು ಘಟನೆಗೆ ಮಾತ್ರ ಸೀಮಿತವಾಗದ.. ಕಣ್ಣು ತೆರೆಸುವ ಕತೆಯಾಗಿತ್ತು.
ಬುದ್ಧನ ಬಗ್ಗೆ ಆಳವಾಗಿ ತಿಳಿದಕೊಂಡಿರುವ ಕೆ.ಟಿ. ಶಿವಪ್ರಸಾದ್ ಇಂತವೇ ಹತ್ತಾರು ವಿಷಯಗಳ ಬಗ್ಗೆ ಮಾತನಾಡಿದರು... ಅವರ ಮಾತುಗಳನ್ನು ಕೇಳುತ್ತಿದ್ದ ನನಗೆ ದೇಹದಲ್ಲಿ ಜ್ವರ ಬಂದಂತೆ ಆಗಿಬಿಡುತ್ತಿತ್ತು.

ಚಿತ್ರಕಾರರಾಗಿರುವ ಕೆ.ಟಿ.ಶಿವಪ್ರಾಸಾದ್ ತಮ್ಮ ಕಲಾಕೃತಿಗಳಲ್ಲಿ ಮೂಡಿರುವುದು ಇಂತವೇ ಅಪೂರ್ವ ಯೋಚನೆಗಳು ಅನಿಸುತ್ತದೆ... ತಮಗೆ ಇಷ್ಠವಾದದನ್ನು, ತಿಳಿದಿದ್ದನ್ನು, ಅನುಭವಿಸಿದ್ದನ್ನು ಮಾತ್ರ ಮಾಡುವ ಇಂತವರು ತಮ್ಮ ಅಭಿವ್ಯಕ್ತಿಯಲ್ಲಿ ಸ್ವಾತಂತ್ರ್ಯ ಅನುಭವಿಸುತ್ತಾರೆ, ತಮಗೆ ಅನಿಸಿದ್ದನ್ನ ಹೇಳುತ್ತಾರೆ.... ಆದರೆ ಮನುಷ್ಯರ ಮದ್ಯೆ ಇರುವ ನಾವು ಹಾಗೇನಾದರೂ ಮಾಡಿದರೆ ಕಷ್ಠ, ವಯಕ್ತಿಕ ನೆಲೆಯಲ್ಲಿ ಯೋಚಿಸಬಹುದೇನೋ......
ನೀವಾದರೂ ಶಿವಪ್ರಸಾದ್ ಅವರನನ್ನು ಬೇಟಿಮಾಡಬೇಕಿದ್ದರೆ ನಿಗದಿಯಾದ ಸಮಯಕ್ಕೆ ಹೋಗಿ ಇಲ್ಲವಾದರೆ ಬೈಗುಳ ಖಚಿತ.. ಅಥವಾ ಅವರು ಬಾಗಿಲೇ ತೆರೆಯದೆ ಹೋದರೆ ಅಚ್ಚರಿ ಪಡಬೇಕಾಗಿಲ್ಲ...ಹಾಸನದಂತ ಪುಟ್ಟ ಊರಲ್ಲಿದ್ದುಕೊಂಡು ಅಂತಾರಾಷ್ಠ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು.. ಅವರ ಒಂದೊಂದ್ದು ಕಲಾಕೃತಿ ಹತ್ತಾರು ಲಕ್ಷ ಕ್ಕೆ ಕಡಿಮೆ ಇಲ್ಲ... ಆದರೆ ಅದೇ ಊರಿನ ಎಷ್ಠೋ ಜನಕ್ಕೆ ಅವರು ಗೊತ್ತೇ ಇಲ್ಲ ಅಂತ ಕಾಣುತ್ತದೆ.
ತೀರಾ ಮೂಡಿ ಸ್ವಭಾವದ ವ್ಯಕ್ತಿಯಾದರೂ ಮಾತಿಗೆ ನಿಂತರೆ ಚೆಂದ... ರಾಜ್ಯದಲ್ಲಿ ರೈತ ಸಂಘ ಆರಂಭಗಲಿಕ್ಕೆ ಮೂಲ ಪ್ರೇರಕರಲ್ಲಿ ಒಬ್ಬರು ಅವರ ಗೆಳೆಯ ಬನವಾಸೆ ರಾಜಶೇಖರ್ ಅವರೊಂದಿಗೆ ಜೊತೆಗೂಡಿ ಮಾಡಿದ್ದ ಬ್ಯಾಂಕ್ ಮರು ಜಪ್ತಿ ಚಳುವಳಿ... ರಾಜ್ಯದಾದ್ಯಂತ ಹಬ್ಬಿ ಹೆಸರುವಾಸಿಯಾಗಿತ್ತು...
ಕೆ.ಪಿ.ಪೂರ್ಣಚಂದ್ರ ತೇಜಸ್ಸಿ, ಕೆ.ರಾಮದಾಸ್, ಶಿವಪ್ರಸಾದ್ ಮೂವರೂ ಚಡ್ಡಿ ದೋಸ್ತರಂತಾರಲ್ಲಾ
ಹಾಗೆ... ಒಬ್ಬರಿಗಿಂತ ಒಬ್ಬರು ನಿಸ್ಸೀಮರು...ಕೆ.ಪಿ.ಪೂರ್ಣಚಂದ್ರ ತೇಜಸ್ಸಿ ಅವರ ಸಾಕಷ್ಠು ಕೃತಿಗಳಲ್ಲಿ ಶಿವಪ್ರಾಸಾದ್ ಚಿತ್ರಗಳಿವೆ... ಅವರ ಸ್ನೇಹದ ಬಗ್ಗೆ... ಅವರು ಜೊತೆ ಜೊತೆ ಕಳೆದ ಕ್ಷಣಗಳ ಬಗ್ಗೆ ಶಿವಪ್ರಾಸಾದ್ ಬಳಿ ಕೇಳಿದರೆ... ಅಸಕ್ತಿ ಕೆರಳಿಸುವ ವಿಷಯಗಳು ಹೊರಬರುತ್ತವೆ.
ಅವರ ಯೋಚನೆಗಳು ಅಷ್ಟೆ ಮೇಲುನೋಟಕ್ಕೆ ಹುಚ್ಚುತಂದಂತೆ ಕಂಡರು ನಿಜ ಅನಿಸುತ್ತವೆ ಅವಕಾಶ ಸಿಕ್ಕರೆ ಅವ್ರ ಕಲಾಕೃತಿಗಳನ್ನು ನೋಡಿ ಬನ್ನಿ... ಹೊಸ ಲೋಕ ಕಾಣುತ್ತೆ.....

Saturday, May 9, 2009


ತ್ರಿಬ್ಬಲ್ ಎಕ್ಸ್ ರಂ, ವಿಥ್ ರೋಸ್ಟ್ ಪಿಗ್..
ಹೋಟೆಲ್ "ನಾರ್ವೆ" ಅಂತ ಬೋರ್ಡ್ ಹಾಕಿಕೊಂಡ ಹೋಟೆಲೊಂದು ದಿನಾ ನನ್ನ ಕಣ್ಣಿಗೆ ಬೀಳ್ತಾ ಇತ್ತು, ಇದೇನಪ್ಪ ಹಾಸನ ಅನ್ನೋ ಸಣ್ಣ ನಗರದಲ್ಲಿ "ನಾರ್ವೆ" ದೇಶದ ಹೆಸರಿನಲ್ಲಿ ಹೋಟೆಲ್ ಅಂತ ನಂಗೆ ಗೊಂದಲಕ್ಕಿಟ್ಟುಕೊಂಡಿತು, ಆ ಕಡೆ ಹೋದಾಗಲೆಲ್ಲ ಹೋಟೆಲ್ ಕಡೆ ಕಣ್ಣಾಡಿಸೋದು ನಾನು ತಪ್ಪಿಸುತ್ತಿರಲಿಲ್ಲ ತೀರ ನಮ್ಮಂತೆ ಕಾಣುವ ಜನಸಾಮಾನ್ಯರೇ ಹೋಗುತ್ತಿದ್ದ ಆ ಹೋಟೆಲ್ ಬಗ್ಗೆ ನಂಗೆ ಕುತೂಹಲ ಹೆಚ್ಚಾಗೆ ಇತ್ತು ಅನ್ನಿ.
ನನ್ನ ಕುತೂಹಲಕ್ಕೆ ಪೂರಕ ಎಂಬಂತೆ ಪತ್ರಕರ್ತ ಮಿತ್ರನೊಬ್ಬ ಹಂದಿ ಬಾಡು ತಿನ್ ತಿರೇನ್ರಿ... ನಾರ್ವೆ ಹೋಟೆಲ್ಗೆ ಹೊಗೋಣ ಅಂದ... ಚಿಕ್ಕಂದಿನಿದಲೇ ಹಂದಿ ಬಾಡಿನ ರುಚಿ ಹಚ್ಚಿಕೊಂಡಿದ್ದ ನಾನು ಇಲ್ಲ ಅನ್ನಲಿಲ್ಲ ಅದರಲ್ಲೂ "ನಾರ್ವೆ" ಹೋಟೆಲ್ ಬೇರೆ ಅಂತ ಒಪ್ಪಿಕೊಂಡು ಹೋದೆ.
ನಾರ್ವೆ ಹೋಟೆಲ್ ಹೊಕ್ಕ ಮೇಲೆ ನಂಗೆ ಗೊತ್ತಾಗಿದ್ದು ಆ ಹೋಟೆಲ್ ನ ಹೆಸರು ಹಾಸನದ ಹತ್ತಿರವೇ ಇರುವ ನಾರ್ವೆ ಎಂಬ ಊರಿನ ಹೆಸರೆಂದು, ಆ ಹೋಟೆಲ್ ಒಡೆಯ ತನ್ನ ಊರಿನ ಹೆಸರೇ ಹೋಟಲ್ಲಿಗೂ ಇಟ್ಟಿದ್ದ.
ಎಕ್ಸ್ಕ್ಲೂಸಿವ್ ಹಂದಿ ಬಾಡಿನ ಆ ಹೋಟೆಲ್, ಇಂಟರ್ ನ್ಯಾಷನಲ್ ಹೆಸರಲ್ಲಿ ಹಾಸನದಲ್ಲಿ ವರ್ಲ್ಡ್ ಪೇಮಸ್ ಆಗಿತ್ತು,
ಸಂಜೆಯಾಗುತ್ತಿದಂತೆ ಅಲ್ಲಿ ಜನವೋ ಜನ.. ಹಂದಿ ಬಾಡಿನ ರುಚಿ ಅಂತದಲ್ಲ ಅದಕ್ಕೆ, ಹೋಟೆಲ್ ಒಳಗೇ ಮದ್ಯಪಾನಕ್ಕೆ ಅವಕಾಶ ಇರೋದ್ರಿಂದ ಜನ ಜಾಸ್ತಿ..
ನಾನು ಹೇಳಬೇಕೆಂದಿರೋದು ಅದಲ್ಲ ಹಾಸನ ಅನ್ನೋ ಊರು ಮಾಂಸಹಾರಿಗಳ ಸ್ವರ್ಗ, ಅಲ್ಲಿ ಮಾಂಸ ತಿನ್ನದ ಜನರೆ ಕಮ್ಮಿ ಅನ್ನಬೇಕು ಹಾಸನ ನಗರದಲ್ಲೇ ಹೆಜ್ಜೆಗೊಂದು ಮಾಂಸಹಾರಿ ಹೋಟೆಲ್ , ಹೆಜ್ಜೆಗೊಂದು ಬಾರ್ ಇವೆ,
ಎಲ್ಲರ ರುಚಿಗೂ ಒಪ್ಪುವ ಸಸ್ಯಾಹಾರಿ ಹೋಟೆಲ್ ಸಿಕ್ಕೋದೇ ಕಷ್ಟ, ಹಾಸನ ನಗರವನ್ನು ಸೀಳಿಕೊಂಡು ಹೋಗುವ ಬಿಎಂ(ಬೆಂಗಳೂರು_ಮೈಸೂರ್) ರಸ್ತೆ ಯಲ್ಲಿ ನೀವು ಹೋದರೆ ಲೆಕ್ಕ ಹಾಕಿ ನೋಡಿ ಗಾಬರಿ ಆಗುವಷ್ಟು ಬಾರ್, ತಲೆ ಕೆಡುವಷ್ಟು ಮಾಂಸಹಾರಿ ಹೋಟೆಲ್ಗಳು ಕಾಣಿಸುತ್ತವೆ.
ಬಡವರ ಊಟಿ ಎಂದು ಕರೆಯಲ್ಪಡುವ ಈ ಊರಿನ ವಾತಾವರಣ ಮದ್ಯಪಾನಿಗಳಿಗೆ, ಮಾಂಸಹಾರಿಗಳಿಗೆ ಹೇಳಿ ಮಾಡಿಸಿದ ಜಾಗ ಹೊತ್ತು ಮುಳುಗುವ ಹೊತ್ತಿಗೆ ಒಂದೆರಡು ಪೆಗ್ಗು... roosted ಪಿಗ್ಗು ಸಾಥಿಯಾದ್ರೆ ಆದ್ರೆ ಖದರ್ರೆ ಬೇರೆ...
ಹಾಸನ, ಚನ್ನರಾಯಪಟ್ಟಣ, ಆಲೂರು, ಸಕಲೇಶಪುರ ಬಾಗದ ಹಳ್ಳಿಗರ ಮನೆಗಳಲ್ಲಿ ನೆಂಟರು, ಬೇಕಾದವರು, ಬಂದರೆ ಮಾಂಸದ ಊಟ ಹಾಕದೆ ಕಳಿಸಿದರೆ ಒಂತರಾ ಅವಮಾನ ಆದಂತೆ ಸರಿ....
ಚನ್ನರಾಯಪಟ್ಟಣ ಅಂತೂ ಮದ್ಯ ಮಾರಾಟಕ್ಕೆ ರಾಜ್ಯದಲ್ಲೇ ಪೇಮಸ್ಸು ಅಲ್ಲಿನ ವ್ಯಪಾರ ರಾಜ್ಯದಲ್ಲೇ ಹೆಚ್ಚು,
ಈ ಬಾಗದ ಮನೆಗಳಲ್ಲಿ ಸತ್ತವರ ಹೆಸರಲ್ಲಿ ಮಹಾಲಯ ಅಮಾವಸ್ಸೇ ಸಮಯದಲ್ಲಿ "ಪಕ್ಷ" ಅಂತ ಮಾಡ್ತಾರೆ, ಅವತ್ತು ಸತ್ತವರ ಹೆಸರಲ್ಲಿ ಮಾಂಸದ ಊಟ ಮಾಡೋದು ಸಾಮಾನ್ಯ.
ಒಂದು ಬಾರಿ ಏನಾಯ್ತು ಎಂದರೆ ಗಾಂಧಿ ಜಯಂತಿ ಮತ್ತು ಹಿರಿಯರ ಹೆಸರಿನ "ಪಕ್ಷ" ಒಂದೇ ದಿನ ಬಂದಿತ್ತು.. ಹಾಸನ
ಜಿಲ್ಲಾಡಳಿತ ಮಾಂಸ ಮದ್ಯ ವ್ಯಾಪಾರ ನಿಷೇಧ ಮಾಡಿದ್ದರು ಅದನ್ನು ಲಿಕ್ಕಿಸದ ಅಲ್ಲಿನ ಜನ ಊರ ಹೊರಬಾಗದ ಕೋಳಿ ಪಾರಂ ಗಳಿಗೆ ನುಗ್ಗಿದರು, ಮಹಾತ್ಮ ಗಾಂಧಿಯನ್ನು ಪಕ್ಕಕ್ಕೆ ಇಟ್ಟು ತಮ್ಮ ಮನೆಗಳಲ್ಲಿ ಸತ್ತವರ ಹೆಸರಲ್ಲಿ ಜಬರದಸ್ತ್ ಆಗಿ ಪಕ್ಷ ಮಾಡಿದ್ದರು....
ಮೀಡಿಯಾದವರು ಅದನ್ನೇ ಸುದ್ದಿ ಮಾಡಿದ್ದರು, ಜಿಲ್ಲಾಡಳಿತ ಮತ್ತು ಪೊಲೀಸರ ಆದೇಶ, ಕಣ್ಗಾವಲು ಯಾವ ಲೆಕ್ಕಕ್ಕೂ ಇಡಲಿಲ್ಲ ಜನ.....

ಸಕಲೇಶಪುರ, ಹಾಸನ, ಆಲೂರು, ಬೇಲೂರು ಬಾಗದಲ್ಲಿ ಈಗಲೂ ಪರಿಣಿತ ಬೇಟೆಗಾರರು ಕಾಡು ಹಂದಿ ಭೇಟೆ ಆಡುತಾರೆ.. ನಂಗೆ ಪರಿಚಯವಿದ್ದ ಸ್ನೇಹಿತರಿಂದಾಗಿ ನನಗೂ ಕಾಡು ಹಂದಿ ಬಾಡಿನ ರುಚಿ ಹತ್ತಿತ್ತು... ಅದರ ಅನುಭವ ಹೇಳೋದೇ ಬೇಡ ಬಿಡಿ ಗೊತ್ತಿದ್ದವರಿಗೆ ಗೊತ್ತು ಬಿಡಿ ಅದರ ರುಚಿ... ಕಾಡಂಚಿನ ಬಾಗದಲ್ಲಿ ವಾಸಿಸುವ ಅಲ್ಲಿನ ಹಳ್ಳಿಗರ ಸೌಭಾಗ್ಯಕ್ಕೆ ನಂಗೆ ಈಗಲೂ ಹೊಟ್ಟೆ ಹುರಿಯುತ್ತೆ...

ಮದುವೇ ನಂತರ ನಡೆಯುವ ಬೀಗರ ಔತಣದಲ್ಲೂ ಹಂದಿ ಬಾಡಿನ ಬೋಜನ ಇರುತ್ತೆ...ನಾಲ್ಕೈದು ಬಾರೀ ಹಂದಿಗಳನ್ನು ಬೀಗರ ಉಟಕ್ಕೆ ಕಲಾಸ್ ಮಾಡುತ್ತಾರೆ, ಆಸಕ್ತಿಯ ವಿಷಯ ಅಂದರೆ ಹಂದಿ ಬಾಡು ಬೇಯಿಸಲು ಪರಿಣಿತ ಭಟ್ಟರೆ ಬೇಕು...ಅಂತ ಒಬ್ಬ ಭಟ್ಟ ನಂಗೆ ಹೇಳಿದ ವಿಷಯ ನನಗೆ ಈಗಲೂ ನಗು ಉಕ್ಕಿಸುತ್ತದೆ... ಹಂದಿ ಬಾಡು ತಯಾರು ಮಾಡುವಾಗ ಬೇಗ, ಬೇಗ ಬೇಯದೇ ಹೋದರೆ ಒಂದೆರಡು ಬಾಟಲ್ Rum ಅನ್ನು ಸೇರಿಸಿದರೆ ಬೇಗ ಬೇಯುತ್ತಂತೆ...ರುಚಿಯು ಹೆಚ್ಚಂತೆ...

ಕೊನೆಯಲ್ಲಿ ಒಂದು ವಿಷಯ ಹೇಳಿ ಮುಗಿಸುತ್ತೇನೆ, ತುಮಕೂರು ಕಡೆಯ ಬ್ರಾಹ್ಮಣರ ಪೈಕಿಯ ನನ್ನ ಗೆಳಯನಿಗೆ ನಾರ್ವೆ ಹೋಟೆಲ್ ಹಂದಿ ಬಾಡಿನ ರುಚಿ ತೋರಿಸಿದ್ದೆ.....! ಅವನು ನಾನು ಹಾಸನದಲ್ಲಿ ಇದ್ದಷ್ಟು ದಿನ ಅಲ್ಲಿಗೆ ಬಂದು ಹೋಗುತ್ತಿದ್ದ...
ಥ್ಯಾಂಕ್ಸ್ ಟು xxx rum with a roosted ಪಿಗ್ ಗೌಡ ಅಂತಾ ಇದ್ದ.....

Friday, May 8, 2009


ಪಿಎಂ ಮಾಡಿದ ಕಿತಾಪತಿ..

ಏನಪ್ಪಾ ಗೌಡ ದಿನಾ ಬ್ಲಾಗ್ ಬರೀತಿದ್ದೆ, ಇದ್ದಕಿದ್ದಂತೆ ನಿಲ್ಲಿಸಿಬಿಟ್ಟೆ ನಾವೇನು ಓದಿದದನ್ನೇ ಓದಬೇಕಾ ಅಂತ ಪಿ ಮಂಜುನಾಥ್ ಫೋನ್ ಮಾಡಿ ಕೇಳಿದ,ದೆಹಲಿಯಲ್ಲಿ ನಡೆದ ಮತದಾನ ಕವರ್ ಮಾಡೋದರಲ್ಲಿ ಸ್ವಲ್ಪ ಬ್ಯುಸಿ ಆಗಿದ್ದೆ ಕಣಯ್ಯ ಅಂದೆ, ಬ್ಲಾಗ್ ನಲ್ಲಿ ಏನು ಬರಿಲಿ ಅನ್ನೋ ಗೊಂದಲದಲ್ಲಿರುವಾಗಲೇ ಪಿ.ಮಂಜು ಫೋನ್ ಮಾಡಿದ್ದರಿಂದ ನಾವಿಬ್ಬರು ಹಾಸನದಲ್ಲಿ ಒಂದೇ ಕಾಲದಲ್ಲಿ ವರದಿಗಾರರಾಗಿದ್ದಗಿನ ಘಟನೆಯೊಂದು ನೆನಪಾಯಿತು ಅದನ್ನೇ ಇಲ್ಲಿ ಬರೆದಿದ್ದೇನೆ.ದೇವೇಗೌಡರ ಪುತ್ರ ಕುಮಾರಸ್ವಾಮಿ ಕಾಂಗ್ರೆಸ್ ನ ಸಖ್ಯ ಮುರಿದುಕೊಂಡು ಸಾವಿರ ರಾಜಕೀಯ ಬೆಳವಣಿಗೆ ಮಾಡಿ, ಸ್ವತ ಅಪ್ಪನ ಕೋಪಕ್ಕೆ ಗುರಿಯಾಗಿ ಸರ್ಕಾರ ಮಾಡಿದ್ದರು, ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ವಿರಾಜಮಾನರಾಗಿದ್ದ ಎಚ್ . ಡಿ. ರೇವಣ್ಣ ಅವರು ಅಪ್ಪ ಮೆಚ್ಚಿಕೊಳ್ಳದ ಸರ್ಕಾರದಲ್ಲಿ ಭಾಗಿಯಾಗದೆ ಉಳಿದಿದ್ದರು, ಅಪ್ಪ ಯಾವಾಗಾದ್ರೂ ಒಪ್ಪೇ ಒಪ್ತಾರೆ, ಎಲ್ಲಾ ಸರಿಯಾಗೇ ಆಗುತ್ತೆ, ಯಾವತ್ತಾದ್ರು ರೇವಣ್ಣ ಸರ್ಕಾರದಲ್ಲಿ ಬಂದೆ ಬರ್ತಾರೆ ಅಂತ ಲೋಕೋಪಯೋಗಿ ಮತ್ತು ಇಂಧನ ಇಲಾಖೆಯನ್ನು ಯಾರಿಗೂ ಕೊಡದೆ ಬಾಕಿ ಉಳಿಸಿದ್ದರು.

ಹಾಸನದ ಪತ್ರಕರ್ತರು ರೇವಣ್ಣ ಎದುರು ಸಿಕ್ಕಾಗಲೆಲ್ಲ ಯಾವಾಗ ಮಾತ್ರಿ ಆಗೋದು ಅಧಿಕಾರ ಸ್ವೀಕರಿಸೋದು ಅಂತ ಕೇಳಿ ರೇಗಿಸಲು ಯತ್ನಿಸುತ್ತಿದ್ದರು, ಇಂತ ಸಂದರ್ಭಗಳನ್ನೂ ಅತ್ಯಂತ ಜಾಣತನದಿಂದ ತಪ್ಪಿಸಿಕೊಳ್ಳುವ ರೇವಣ್ಣ ಬನ್ನಿ ಬ್ರದರ್ ಕಾಲ ಬಂದಾಗ ಎಲ್ಲಾ ಆಗುತ್ತೆ, ಈಗ ತಿಂಡಿ ತಿನ್ರಿ ಬ್ರದರ್ ಆಮೇಲೆ ಮಾತಾಡೋಣ ಅಂತ ತಪ್ಪಿಸಿಕೊಳ್ತಾ ಇದ್ರು.
ಈ ಮದ್ಯೆ ಮುನಿಸಿನ ಕಾಲ ಮುಗಿಸಿದ ದೇವೇಗೌಡ ಕುಮಾರಸ್ವಾಮಿ ಸರ್ಕಾರದ ಬಗ್ಗೆ ಮೆಚ್ಚುಗೆ ಮಾತನ್ನು ಆಡಲು ಶುರುಮಾಡಿದರು, ದೇವೇಗೌಡರ ಮೆಚ್ಚುಗೆಯಿಂದ ರಂಗಾದ ರೇವಣ್ಣನಿಗೆ ಪಧವಿ ಮತ್ತೆ ಸಿಕ್ಕಿತು ಆಗ ನಡೆದ ಘಟನೆ ಇದು.

ರೇವಣ್ಣ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಅಂತ ನಂಗೆ ಸುದ್ದಿ ಸಿಕ್ಕ ತಕ್ಷಣ ನಾನೊಂದು ಸಣ್ಣ ತಪ್ಪು ಮಾಡಿಬಿಟ್ಟೆ, ನಮ್ಮ ಆಪೀಸಿಗೆ ಕರೆ ಮಾಡಿ ರೇವಣ್ಣ ನಿಗೆ ಮಂತ್ರಿ ಪದವಿ, ಹಾಸನದ್ಲ್ಲಿ ವಿಜಯೋತ್ಸವ ಅಂತ ಸುದ್ದಿ ಕೊಟ್ಟುಬಿಟ್ಟಿದ್ದೆ. ಸ್ವಲ್ಪ ಸಮಯಕ್ಕೆ ಫೋನ್ ಮಾಡಿದ ಡೆಸ್ಕ್ ನವರು ತಕ್ಷಣ ವಿಜಯೋತ್ಸವದ ವಿಶುಯಲ್ಸ್ ಕಳಿಸಿ ಎಂದು ಬಿಟ್ಟರು, ಏನೋ ಅಂದಾಜಿನ ಮೇಲೆ ಸುದ್ದಿಕೊಟ್ಟಿದ್ದ ನನಗೆ ಪೀಕಲಾಟಕ್ಕೆ ಇಟ್ಟುಕೊಂಡಿತು, ಹಾಸನದಲ್ಲಿ ಎಲ್ಲೂ ವಿಜಯೋತ್ಸವ ಇರಲಿಲ್ಲ, ಸಂಭ್ರಮ ಇರಲಿಲ್ಲ. ಈ ನಡುವೆ ಅಚಾನಕ್ ಆಗಿ ನನ್ನ ಕಣ್ಣಿಗೆ ಬಿದ್ದ ರೇವಣ್ಣನ ಪಕ್ಕಾ ಶಿಷ್ಯರಾದ, ಚನ್ನಪಟ್ಟಣ ಶಂಕರ್, ಮತ್ತು ಗಣೇಶ್ ಗೆ ಏನ್ರಪ್ಪಾ ನಿಮ್ಮ ಬಾಸ್ ಗೆ ಅಧಿಕಾರ ಬಂದಿದ್ದನ್ನು ಸಂಭ್ರಮಿಸದೆ ಹೋಟೆಲ್ ನಲ್ಲಿ ತಿನ್ನಕ್ಕೆ ಬಂದಿದ್ದಿರಿ, ರೇವಣ್ಣ ಬರಲಿ ಹೇಳ್ತೀನಿ ನಿಮ್ಮ ಬಗ್ಗೆ ಅಂತ ರೇಗಿಸಿದ್ದೆ ತಡ, ಅಪಾಯ ಅರಿತುಕೊಂಡ ಇಬ್ಬರು ತಕ್ಷಣ ಕಾರ್ಯಪ್ರವೃತ್ತರಾಗಿ ಒಂದು ಗಂಟೆಯ ಒಳಗಾಗಿ ಸ್ಲಮ್ ಒಂದರಿಂದ ೧೦೦ ಜನರನ್ನು ಕರೆದುಕೊಂಡು ಹೇಮಾವತಿ ಪ್ರತಿಮೆ ಬಳಿ, ವಿಜಯೋತ್ಸವ ಆಚರಿಸಿದರು. ಪಟಾಕಿ ಹೊಡೆದು ನಾನು ಸಿಕ್ಕಿಕೊಂಡಿದ್ದ ಸಂಕಷ್ಟದಿಂದ ನಾನು ಪಾರಾದೆ ಅವ್ರು ಸಿಕ್ಕಿಕೊಳ್ಳಬಹುದಾಗಿದ್ದ ತೊಂದರೆಯಿದ ಅವರು ಪಾರಾದರು.
ಆದರೆ ಮರುದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಟಿವಿ ವರದಿಗಾರನೊಬ್ಬನ ಪ್ರೇರಿತ ವಿಜಯೋತ್ಸವ" ಅಂತ ನಡೆದ ಘಟನೆಯ ಸವಿವರಗಳನ್ನು ಬರೆದು ಸುದ್ದಿ ಬರೆದು ಬಿಡೋದೇ ಅಸಾಮಿ ಪಿ. ಮಂಜುನಾಥ್. ಬೆಳಿಗ್ಗೆ ಸುದ್ದಿ ಓದುತ್ತಿದ್ದಂತೆ ನನಗೆ ಎಂತಾ ತೊಂದರೆಗೆ ಸಿಕ್ಕಿಕೊಂಡೆನಪ್ಪಾ ಅನ್ನೋ ಪರಿಸ್ಥಿತಿಗೆ ತಲುಪಿದೆ, ಸುದ್ದಿ ಓದಿದ ಕೆಲವರು ನನಗೆ ಫೋನ್ ಮಾಡಿ ವಿಜಯ ಕರ್ನಾಟಕ ನೋಡಿದ್ರಾ ಸರ್ ಅಂತ ಕೇಳೋಕೆ ಶುರು ಮಾಡಿದ್ರು, ನನ್ನ ಜೊತೆಗೆ ಚನ್ನಾಗೆ ಇದ್ದ ನನ್ನ ಗೆಳೆಯ ನಂಗೇ ಬತ್ತಿ ಇಟ್ಟಿದನ್ನು ತಿಳಿದು ಉರಿತಾ ಇತ್ತು, ಮಗ ಸಿಕ್ಕರೆ ಒದಿಬೇಕು ಅಂತ ಡಿಸೈಡ್ ಮಾಡಿದೆ.
ಸ್ವಲ್ಪ ಹೊತ್ತಗೆ ಅವನೇ ಫೋನ್ "ಅಪ್ಪಿ, ಆಪೀಸಿನಿಂದ್ದ ಕೆಳಗೆ ಇಳಿದು ಬಾ ಅಪ್ಪಿ, ಧಂ ಹೊಡೆಯೋಣ ಅಂತ ಕರೆಯೋದೇ...

ಅಸಾಮಿ ಏನೂ ಕಿತಾಪತಿ ಮಾಡಿಲ್ಲ ಅನ್ನೋತರ ಇದ್ದ, ನಾನು ಯಾಕೆ ಹೀಗೆ ಮಾಡಿದೆ ಅಂತ ಕೇಳಿದೆ, ಅರ್ಧ ಗಂಟೆ ಪಾಠ ಮಾಡಿದ, ಸಿಗರೇಟು ಹೊಗೆ ಬಿಡುತ್ತಾ ನನ್ನ ಸುಮ್ಮನಾಗಿಸಿಬಿಟ್ಟ, ನೋಡು ಗೌಡ
ಪತ್ರಿಕಾ ವರದಿಗಾರರು ತಮಗೆ ತಿಳಿದ ಘಟನೆ ಬಗ್ಗೆ ಬರೆಯುವಾಗ ಸತ್ಯಗಳಿಗೆ ಮೋಸ ಮಾಡಬಾರದು, ಏನು ಘಟನೆ ನಡೆದಿದೆಯೋ ಅದು ಸರಿನೇ ಇದೆ, ನೀನು ಮಾಡಿದ್ದು ಸರಿನೋ ತಪ್ಪೋ ಅನ್ನೋಕ್ಕಿಂತ ಘಟನೆ ಮುಖ್ಯ, ಅದು ಘಟಿಸಿದ ರೀತಿ ಮುಖ್ಯ, ಅಂತೆಲ್ಲ ನನ್ನ ಕನ್ ಪ್ಯೂಸ್ ಮಾಡಿಹಾಕಿದ....
ನನಗೋ ನಾನು ಮಾಡಿದ ತಪ್ಪಿನ ಅರಿವಾಯಿತು... ಪತ್ರಕರ್ತರು, ಅದರಲ್ಲೂ ಇಲೆಕ್ಟ್ರಾನಿಕ್ ಮಾದ್ಯಮದವರು ತಮಗೆ ಬೇಕಾದಂತೆ ಘಟನೆಗಳನ್ನು ಸೃಷ್ಟಿಸುತ್ತಾರೆ ಅನ್ನೋದು ಅವನಿಗೆ ಅರ್ಥ ಮಾಡಿಸಲು ನನಗೆ ಸಾದ್ಯವಾಗಲಿಲ್ಲ... ಆದರೆ ಈಗ ಪಿ. ಮಂಜುಗೆ ಅರ್ಥ ಆಗಿರಬೇಕು ಅನಿಸುತ್ತೆ ಯಾಕಂದ್ರೆ ಅವನೂ ಈಗ ಚಾನಲ್ ಒಂದರ ವರದಿಗಾರ...

Wednesday, May 6, 2009

ಗೋಲಿ ಹೊಡೆವಾ ಹುಡುಗಾ...
ದೇವೇಗೌಡ ಆ ಪತ್ರಕರ್ತನ ಪ್ರಶ್ನೆಗೆ ಅವಕ್ಕಾಗದೆ ಅವನನ್ನೇ ನೇರವಾಗಿ ದಿಟ್ಟಿಸುತ್ತಾ ತಮ್ಮ ಎಡಗೈ ತೋರುಬೆರಳನ್ನು ಮುಂದು ಮಾಡಿ ಗೋಲಿ ಹೊಡೆಯುವವರ ರೀತಿ ಎರಡು ಮೂರೂ ಬಾರಿ ಸಂಜ್ಞೆ ಮಾಡಿ "do u think I am here to play goli " ಎಂದು ಹೇಳಿದರು. ದೆಹಲಿಯ ಮಾಸಿಕವೊಂದರ ವರದಿಗಾರನಾಗಿದ್ದ ಆತ ದೇವೇಗೌಡರ ಉತ್ತರಕ್ಕೆ ತಡಬಡಾಯಿಸಿ ಮತ್ತೆ ಪ್ರಶ್ನೆ ಕೇಳಲು ಹೋಗಲಿಲ್ಲ.
ಆಗತಾನೆ ದಾಬಸ್ ಪೇಟೆಯಲ್ಲಿ ಥರ್ಡ್ ಫ್ರಂಟ್ ಸಮಾವೇಶ ಮುಗಿಸಿಕೊಂಡು ಉತ್ಸಾಹದಲ್ಲಿ ಬಂದಿದ್ದ ದೇವೇಗೌಡರಿಗೆ ಆತ ಕೇಳಿದ ಪ್ರಶ್ನೆ ಏನೆಂದರೆ " ಮಿಸ್ಟರ್ ದೇವೇಗೌಡ ವೇರ್ ಈಸ್ ಥರ್ಡ್ ಫ್ರಂಟ್, ದಟ್ ಈಸ್ ನಾಟ್ ವಿಸಿಬಲ್ ಎನಿವೇರ್, ಹೌ ಮೆನಿ ಸೀಟ್ ಯು ಆರ್ ಗೋಯಿಂಗ್ ಟು ವಿನ್" ಎಂದು ವಿಚಿತ್ರವಾಗಿ ಮುಖ ಮಾಡಿ ಕೊಂಡು ಕೇಳಿದ ಆತನಿಗೆ ದೇವೇಗೌಡ ಅನಿರೀಕ್ಷಿತವಾಗಿ ಕೊಟ್ಟ ಉತ್ತರದಿಂದ ಬೆದರಿದ, ಆತ ಮತ್ತೆ ಪ್ರಶ್ನೆ ಕೇಳಲಿಲ್ಲ.

ದೇವೇಗೌಡರ ಉತ್ತರದಿಂದ ಎಚ್ಚೆತ್ತುಕೊಂಡ ಉಳಿದ ಮಾಸಿಕಗಳ ಪತ್ರಕರ್ತರು ತಣ್ಣಗಿನ ಧಾಟಿಯಲ್ಲಿ ಪ್ರಶ್ನೆ ಕೇಳುವುದನ್ನು ಮುಂದುವರೆಸಿದರು ಎಲ್ಲಿ ನಮ್ಮ ಮೇಲೆ ಗೋಲಿ ಬಿಟ್ಟಾನು ಈ ದೇವೇಗೌಡ ಎಂಭ ಭಯ ಅವರಲ್ಲಿತ್ತು.

ಸಾಮಾನ್ಯವಾಗಿ ದೆಹಲಿಯ ಪತ್ರಕರ್ತರು ದೇವೇಗೌಡರನ್ನು ಕೆಣಕುವುದರಲ್ಲಿ ಖುಷಿ ಪಡುತ್ತಾರೆ ದೇವೇಗೌಡರಿಗೆ ಪತ್ರಕರ್ತರ ಕೆಣಕು ಅರ್ಥವಾದರೂ ಜಾಣ ಪೆದ್ದನಂತೆ ಉತ್ತರ ಕೊಡುತ್ತಿರುತ್ತಾರೆ.

ಕೆಣಕುವುದರಲ್ಲಿ ನಿಸ್ಸಿಮರೊಬ್ಬರಿದ್ದಾರೆ ದಿ ಹಿಂದೂ ಪತ್ರಿಕೆಯವರು, ಅವರು ಅಷ್ಟೆ ದೇವೇಗೌಡರನ್ನು ಕೆಣಕುತ್ತಲೇ ಇರುತ್ತಾರೆ, ಒಂದೊಮ್ಮೆ ಅವರ ಪ್ರಶ್ನೆ ಗೆ ಸಿಟ್ಟು ನೆತ್ತಿಗೇರಿ ನೀನು ಯಾವ ಪೇಪರ್ ನಲ್ಲಿ ಕೆಲಸ ಮಾಡ್ತಿಯಲ್ಲ ಅದರ ಓನರ್ ನನಗೆ ದಿನಾಲು ಫೋನ್ ಮಾತಾಡ್ತಾರೆ ಗೊತ್ತಾ ಅಂದಿದ್ದ್ರಂತೆ ದೇವೇಗೌಡ.

ಇದೆ ರೀತಿ ಆಗಿದ್ದು ಟೈಮ್ಸ್ ನೌ ಚಾನಲ್ ನವರ ಮೇಲೆ, ಥರ್ಡ್ ಫ್ರಂಟ್ ಬಗ್ಗೆ ಏನೋ ತಪ್ಪು ವರದಿ ಕೊಟ್ಟಿದ್ದಾರೆ ಎಂದು ಕೆಂಡಾಮಂಡಲವಾಗಿದ್ದ ದೇವೇಗೌಡ ಟೈಮ್ಸ್ ನೌ ನ ವರದಿಗಾರ ಅನೂಪ್ ತಮಗೆ ಚೆನ್ನಾಗಿ ಗೊತ್ತಿದ್ದರು, ನಾನು ನಿಮಗೆ ಬೈಟ್ ಕೊಡಲ್ಲ, ನೀನು ತಪ್ಪು ಮಾಡಿಲ್ಲ ಅಂತ ಗೊತ್ತು ನಿಮ್ಮಲ್ಲಿ ಯಾರು ತಪ್ಪು ಸುದ್ದಿ ಕೊಟ್ರೋ ಅವರನ್ನೇ ಕಳಿಸು ನಾನು ಮಾತಾಡ್ತೇನೆ ಅಂದಿದ್ದರು....

ಕಳೆದ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಈಟಿವಿಯಲ್ಲಿ ಸರ್ಕಾರ್ ಅನ್ನೋ ತಮಾಷೆ ಕಂ ಸಿರಿಯಸ್ ಕಾರ್ಯಕ್ರಮ ಬರ್ತಾ ಇತ್ತು, ಸಿನೆಮಾದ ಹಾಡುಗಳನ್ನು ರಾಜಕೀಯ ಸಂದರ್ಭಕ್ಕೆ ಹೋಲಿಸಿ ದೇವೇಗೌಡರನ್ನು ಗಿರಿಗಿರಿ ಸುತ್ತಿಸಿಬಿಟ್ಟಿದರು.
ಇದರಿಂದ ಸಿಟ್ಟಿಗೆದ್ದ ದೇವೇಗೌಡ ಮರುದಿನ ಅವರ ಮನೆಗೆ ಹೋಗಿದ್ದ ಈ ಟಿವಿ ವರದಿಗಾರ ವಿಜಯ್ ನನ್ನು ಮನೆ ಬಾಗಿಲಲ್ಲೇ ತಡೆದು ಗೆಟ್ ಔಟ್ ಮಿಸ್ಟರ್ ವಿಜಯ್ ......ಗೆಟ್ ಔಟ್. ಅಂತ ಹೊರಗೆ ಕಳಿಸಿಬಿಟ್ಟಿದ್ದರು,
ದೇವೇಗೌಡರಿಗೆ ತುಂಬಾ ಹತ್ತಿರದವನು ಎಂದು ಹೆಸರಾಗಿದ್ದ ಅವನು ಕಕ್ಕಾಬಿಕ್ಕಿಯಾಗಿಬಿಟ್ಟಿದ್ದ. ದೇವೇಗೌಡ ಯಾವತ್ತು ಹಾಗೆ ಇರುತ್ತಾರೆ ಹತ್ತಿರ ಇದ್ದವರಿಗೂ ಅವರನ್ನು ಅರ್ಥ ಮಾಡಿಕೊಳ್ಳೋಕೆ ಸಾದ್ಯವೇ ಇಲ್ಲದ ಮನುಷ್ಯ, ನಿಗೂಢ ಮನುಷ್ಯ, ಅವರ ಶಕ್ತಿ ಅವರ ನಿಗೂಢ ನಡೆಯಲ್ಲಿದೆ ಅಂತ ನಗೆ ಯಾವಾಗಲು ಅನ್ನಿಸುತ್ತದೆ.

ಮೇಲಿನ ವಿಷಯಗಳನ್ನು ಪಕ್ಕಕೆ ಇಟ್ಟು ನೋಡಿದರೆ ದೆಹಲಿಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಬಂದರೂ ಇಲ್ಲಿನ ಯಾವ ಪತ್ರಿಕೆಗಳು, ಚಾನಲ್ ಗಳು ತಲೆಕೆಡಿಸಿಕೊಳ್ಳುವುದಿಲ್ಲ(ಪಬ್ , ಚರ್ಚ್ ಘಟನೆಗಳ ಹೊರತಾಗಿ) ಆದರೆ ತಮಿಳುನಾಡಿನ ಜಯಲಲಿತಾ, ಕರುಣಾನಿಧಿ, ಕೇರಳದ ಅಚ್ಯುತಾನಂದನ್, ಆಂಧ್ರದ ರಾಜಶೇಖರ ರೆಡ್ಡಿ ಬಂದರೆ ಎಲ್ಲ ಮೀಡಿಯಾದವರು ಓಡಿ ಬರುತ್ತಾರೆ. ಆದರೆ ನಮ್ಮ ರಾಜಕಾರಣಿಗಳು ಯಾರು ಬಂದರೂ ಇಲ್ಲಿನವರಿಗೆ ಮುಖ್ಯವಾಗುವುದಿಲ್ಲ.

ಆದರೆ ದೇವೇಗೌಡ ಮಾತ್ರ ತಮ್ಮ ನಿಗೂಢ ನಡೆಗಳಿಂದ ಇಲ್ಲಿಯೂ ಆಗಾಗ ಸುದ್ದಿಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.
ದೇವೇಗೌಡರ ಪಕ್ಷಕ್ಕೆ ಇರೋದು ಎರಡೇ ಸೀಟು, ಒಂದು ಸ್ವತಾ ದೇವೇಗೌಡರದು, ಎರಡನೇದು ಕೇರಳದ ವೀರೇಂದ್ರ ಕುಮಾರ್, ಚಾಮರಾಜನಗರದ ಶಿವಣ್ಣ ಪಕ್ಷ ಬಿಟ್ಟು ಹೋಗಿದ್ದಾರೆ, ಕೇವಲ ಎರಡು ಸೀಟು ಇಟ್ಟುಕೊಂಡು ಇಷ್ಟು ಆಟ ಆಡುವ ರಾಜಕಾರಣಿ ದೇಶದಲ್ಲಿ ಎಲ್ಲೂ ಇರಲಿಕ್ಕೆ ಇಲ್ಲ ಅನಿಸುತ್ತೆ.

ದೆಹಲಿ ಎಂಬ ಮಾಯಾ ನಗರದ ಎ ಬಿ ಸಿ ಡಿ ಬಲ್ಲ ಏಕೈಕ ಕನ್ನಡದ ರಾಜಕಾರಣಿ ದೇವೇಗೌಡ ಸಾಂಧರ್ಬಿಕ ರಾಜಕಾರಣದಲ್ಲಿ ಅವರು ನಿಸ್ಸೀಮರು, ಯಾವ ಸಂದ್ರಭಕ್ಕೆ ಯಾರನ್ನು ಭೇಟಿ ಮಾಡಿ ಏನು ಮಾತುಕತೆ ಮಾಡಬೇಕು, ಜೆ ಡಿ ಎಸ್ ಪ್ರಣಾಳಿಕೆಯನ್ನು ದೆಹಲಿಯಲ್ಲಿ ಯಾಕೆ ಬಿಡುಗಡೆ ಮಾಡಬೇಕು, ಥರ್ಡ್ ಫ್ರಂಟ್ ಅನ್ನು ಯಾಕೆ ದಾಬಸ್ ಪೇಟೆಯಲ್ಲಿ ಆರಂಭ ಮಾಡಬೇಕು, ಜಾಪರ್ ಷರೀಫ್ ಅವರನ್ನು ಯಾವಾಗ ಮನೆಗೆ ಕರೆಸಿಕೊಳ್ಳಬೇಕು, ಕುಮಾರಸ್ವಾಮಿ ಯಾವಾಗ ಸೋನಿಯಾ ಭೇಟಿ ಮಾಡಬೇಕು, ಚಂದ್ರಬಾಬುನಾಯ್ಡು, ಎ.ಬಿ,ಬರ್ಧನ್ ಅವರನ್ನು ರಾತ್ರಿ ಹೊತ್ತು ಯಾಕೆ ಭೇಟಿ ಮಾಡಬೇಕು ಎಂಬುದು ದೇವೇಗೌಡರಿಗೆ ಮಾತ್ರ ಗೊತ್ತು.ಅದಕ್ಕಾಗಿ ದೇವೇಗೌಡ ಆಗಾಗ ಸುದ್ದಿಯಾಗುತ್ತಿರುತ್ತಾರೆ ವರದಿಗಾರರು ಅವರ ಬಗ್ಗೆ ಕುಹಕದ ಮಾತಾಡುತ್ತಲೇ, ಯಾಮಾರಿದರೆ ಕಷ್ಟ ಮಾರಾಯ, ಮುದುಕ ಏನ್ ಮಾಡ್ತಾನೋ ಅನ್ನೋದು ಕೆಲವರ ಅಭಿಪ್ರಾಯ.

ದೆಹಲಿಯ ಹಿಂದಿ ಪತ್ರಕರ್ತರಿಗೆ ಮುಲಾಯಂ ಸಿಂಗ್ ಯಾದವ್ , ಅಮರ್ ಸಿಂಗ್, ದಿಗ್ವಿಜಯ್ ಸಿಂಗ್, ಮಾಯಾವತಿ,ಪ್ರಕಾಶ್ ಕಾರಟ್. ರಾಮ್ ವಿಲಾಸ್ ಪಾಸ್ವಾನ್, ಕರಣ್ ಸಿಂಗ್, ಅಡ್ವಾಣಿ, ರಾಜನಾತ್ ಸಿಂಗ್, ಅರುಣ್ ಜೇಟ್ಲಿ. ಲಾಲು ಯಾದವ್ ಮಾತ್ರ ರಾಜಕಾರಣಿಗಳು, ರಾಷ್ಟ್ರೀಯ ನಾಯಕರು, ಅವರು ಹೇಳಿದ್ದೆಲ್ಲ ರಾಷ್ಟ್ರೀಯ ಸುದ್ದಿ ನಮ್ಮವರು ಕಾಂಜಿ.. ಪಿಂಜಿಗಳು...
ಅದೆಲ್ಲಕ್ಕೆ ಹೊರತು ಈ ಗೋಲಿ ಆಡುವ ಹುಡುಗ....

Monday, May 4, 2009

ಟ್ರೆಂಡ್ ಏನಿದೆ ಗೌಡ್ರೆ.
ಕೃಷ್ಣೆಗೌಡ ಅಂತ ಒಬ್ಬರಿದ್ದಾರೆ, ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್. ನನಗೆ ಯಾವಾಗಲು ಫೋನ್ ಮಾಡ್ತಾ ಇರ್ತಾರೆ, ಅದರಲ್ಲೂ ಚುನಾವಣೆಗಳು ಬಂದಾಗ ಫೋನ್ ಗಳು ಜಾಸ್ತಿ. ನಾನು ಮಲಗಿರಲಿ.ಆಪೀಸಿನಲ್ಲಿರಲಿ, ಸ್ನಾನ ಮಾಡ್ತಾ ಇರ್ಲಿ ತಪ್ಪದೆ ಬಂದೆ ಬರುತ್ತೆ ಅವರ ಪೋನು.
ಅವರ ಫೋನ್ ಬಂದಾಗ ನಂಗೆ ಸಿಟ್ಟು ಬಂದರು ತೋರಿಸಿಕೊಳ್ಳದೆ ಹೇಳಿ ಗೌಡ್ರೆ, ಏನ್ ಸಮಾಚಾರ ಅಂತ ಕೇಳಿದ ಒಡನೆ ಹೇಗಿದೆ ಸಾರ್ ಎಲೆಕ್ಷನ್ ಟ್ರೆಂಡು, ಅಂತ ಕೇಳ್ತಾರೆ, ನಾನೂ ಎಚ್ಚರದಿಂದ ನಿಮಗೆ ಗೊತ್ತಿಲ್ದೆ ಇರೋದು ಯಾವುದು ಗೌಡ್ರೆ,ಅಲ್ಲಿ ಟ್ರೆಂಡ್ ಏನಿದೆ ಅಂತ ನೀವೇ ಹೇಳ್ಬೇಕು ಅನ್ನುತ್ತಾ ಅವ್ರ ತಲೆಗೆನೆ ಕಟ್ಟಲು ಪ್ರಯತ್ನಿಸುತ್ತೇನೆ.
ಅಸಾಮಿ ಬಿಡೋಲ್ಲ ನೀವು ಟಿವಿಯವರಿಗೆ ಗೊತ್ತಿಲ್ದೆ ಇರೋದು ಏನು ಸರ್ ನಿಮಗೆ ಎಲ್ಲಾ ಗೊತ್ತಿರುತ್ತೆ, ಬೆಂಗಳೂರು ಸೌತ್ ನಲ್ಲಿ ಏನಾಗುತ್ತೆ ಸರ್ ಅಂತಾನೆ, ನಾನು ಅಲ್ಲಿ ಟಫ್ ಫೈಟ್ ಇದೆ ರೀ ಅಂತೇನೆ ನಂತರ ಸರ್ ನಾರ್ತ್ ಹೇಗಿದೆ ಸಾರ್ ಜಾಫರ್ ಷರೀಫ್ ಗೆಲ್ತಾರಂತೆ ಅಂತ ಕೇಳ್ತಾರೆ, ನಾನು ಇರ್ಬೋದು ಅಂತೇನೆ. ಸರ್ ರುರಲ್ಲೂ ಅಂತಾ ಕೇಳಿದ ಒಡನೆ ಕುಮಾರಸ್ವಾಮಿನೆ ಅಂತೇನೆ...


ಅದು ಮುಗಿದ ಕೂಡಲೇ ಸರ್ ಬಿಜಾಪುರ ಹೇಗಿದೆ ಸಾರ್ ಅನ್ನೋದಾ, ನಂಗೆ ಗೊತ್ತಿಲ್ಲ ಸರ್ ಅಂತೀನಿ, ಸರ್ ಬಂಗಾರಪ್ಪ ಗೆಲ್ತಾರಾ ಸರ್ ಅಂತಾನೆ ನಾನು ಗೆಲ್ಲಬಹುದು ಆದ್ರೆ ಸ್ವಲ್ಪ ಕಷ್ಟ ಇದೆ ಅಂತ ಡಿಪ್ಲೋಮಾಟಿಕ್ ಆಗಿರೋಕೆ ಪ್ರಯತ್ನ ಪಡ್ತೀನಿ....

ಈ ಮದ್ಯೆ ಈ ಚಾಲಾಕು ಮನುಷ್ಯ ನನ್ನ ಹೆಸರನ್ನು ನನ್ನ ಎದುರೇ ಅಕ್ರಮವಾಗಿ ಬಳಸಿಕೊಂಡು ಅದೇ ಸಾರ್ ನೀವ್ ಹೇಳಿದಂಗೆ ಖರ್ಗೆ ಗೆಲ್ತಾರೆ, ಧರ್ಮಸಿಂಗ್, ಪುಜಾರಿ ಗೆಲ್ತಾರೆ, ರಾಥೊಡ್, ಮೊಯ್ಲಿ , ಮುನಿಯಪ್ಪ , ವಿಶ್ವನಾಥ್, ಗೆದ್ದುಬಿಟ್ಟರೆ ಬಿಜೆಪಿಗೆ ಕಷ್ಟ ಆಗುತ್ತೆ ಅಲ್ವಾ ಸಾರ್ ಅನ್ನೋದಾ....

ನೀವೇ ಹೇಳ್ದಂಗೆ, ಕಾಂಗ್ರೆಸ್ ಗೆ ೧೦ ರಿಂದ ೧೨ , ಜೆಡಿಎಸ್ ೪ ರಿಂದ ೫, ಬಿಜೆಪಿ ೧೨ ರಿಂದ ೧೩ ಸೀತ ಬರುತ್ತೆ ಅಲ್ವಾ ಸಾರ್ ಏನೋ ಮ್ಯಾಜಿಕ್ ಆಗುತ್ತೆ ಬಿಡಿ ಸಾರ್ ಚುನಾವಣಾ ಅನ್ನೋದೇ ವಿಚಿತ್ರ ಅಂದು ಕಟ್ಟಕಡೆಗೆ
ನೀವ್ ಹೇಳೋದು ಕರೆಕ್ಟ್ ಸಾರ್ ಬಿಜೆಪಿಗೆ ಕಷ್ಟ ಅಂತ ಮಾತು ಮುಗಿಸೋ ವೇಳೆಗೆ ಒಂದು ರೀತಿ ಚುನಾವಣಾ ಸಮೀಕ್ಷೆ ಆಗಿರುತ್ತೆ, ನಾನು ಹೇಳದೆ ಇದ್ದಿದ್ದನು ನೀವ್ ಹೇಳ್ದಂಗೆ ಅಂತ ಪದೇ ಪದೇ ನಂಗೆ ತಿರುಗಿಸಿ ಮಜಾ ತಗೋತಾನೆ...


ಒಂದು ಬಾರಿ ಅಲ್ಲ ಎರಡು ಬಾರಿ ಅಲ್ಲ ದಿನಾ ಫೋನ್ ಮಾಡೋದು ಕೇಳಿದ್ದನ್ನೇ ಮತ್ತೆ ಮತ್ತೆ ಕೇಳೋದು, ನಾನು ಹೇಳಿದ್ದನ್ನೇ ಹೇಳೋದು ೧೬ ನೆ ತಾರೀಕು ಎಣಿಕೆ ಮುಗಿಯೋವರೆಗೆ ನನ್ನ ಪಾಡು ಚಿತ್ರ್ರಾನ್ನ, ನನಗೆ ಸಿಕ್ಕಿರುವ ಈ ಟ್ರೆಂಡಿನ ಗಿರಾಕಿ ಯಿಂದ ನನಗೆ ಚುನಾವನೆನೆ ಬೇಡ ಅನ್ನಿಸಿಬಿಟ್ಟಿದೆ.

ನೀವ್ ಹೇಳ್ದಂಗೆ ಬಿಜೆಪಿಗೆ ಕಷ್ಟ ಅಂತ ಮಾತು ಮುಗಿಸೋಕೆ ಒಂದು ಗಂಟೆಯಾದರೂ ಬೇಕು ಗೊತ್ತಾ....

ಎಲೆಕ್ಷನ್ ಸಂದರ್ಬದಲ್ಲಿ ವರದಿಗಾರರಿಗೆ ಇಂತ ಫೋನ್ ಗಳು ಬರೋದು ಮಾಮೂಲಿ, ದೇಶದಲ್ಲಿ ನಡಿಯೋ ಎಲ್ಲಾನು ನಮಗೆ ತಿಳಿದಿರುತ್ತೆ ಅನ್ನೋದು ಕೆಲವರ ಅಭಿಪ್ರಾಯ ಅಂತ ಕಾಣುತ್ತೆ. ನಾವು ಹೇಳಿದೆವು ನೋಡಿ ಅಂತ ಎಲ್ಲರಿಗು ತಮ್ಮ ಅಭಿಪ್ರಾಯ ಹೇಳೋದು ಅವ್ರ ಚಟ.

ಇದೇ ತರದ ಇನ್ನೊಂದು ಪಾರ್ಟಿ ಆಸ್ಕರ್ ಪರ್ನಾಂಡಿಸ್ ಅವ್ರ ಮನೆಯಲ್ಲಿ ಇದಾನೆ, ಅವನು ಕಾಂಗ್ರೆಸ್ ಟಿಕೆಟ್ ಹಂಚೋ ಸಂಧರ್ಬದಲ್ಲಿ ಫೋನ್ ಮಾಡ್ತಾ ಇದ್ದ, ಸಾರ್ ಬಿಜಾಪುರಕ್ಕೆ ಯಾರಿಗೆ ಸಾರ್ ಟಿಕೆಟ್ , ರಾಯಚೂರಿಗೆ ಯಾರಿಗೆ ಸಾರ್ , ಚಿತ್ರದುರ್ಗಕ್ಕೆ ಯಾರಿಗೆ ಸಾರ್ ಅಂತಿದ್ದ. ನಾನು ನಂಗೆ ಗೊತ್ತಿರೋ ಹೆಸರು ಹೇಳಿದ್ದಕ್ಕೆ ಹೋಗಿ ಸಾರ್ ನಿಮಗೆ ರಾಜಕೀಯನೆ ಗೊತ್ತಿಲ್ಲ ನೀವು ಹೇಳೋರೆಲ್ಲ ರೇಸ್ ನಲ್ಲೆಇಲ್ಲ ಅನ್ನೋದಾ... ನಾನಾದರು ಅರೆ ನನ್ನ ಮಗನೆ ಅಂದುಕೊಂಡೆ. ಆದರೆ ನನಗೆ ಇರೋ ಮಾಹಿತಿ ತಪ್ಪು ಅಂತ ಗೊತ್ತಾದ ಮೇಲು ಯಾಕಪ್ಪಾ ಮತ್ತೆ ಫೋನ್ ಮಾಡ್ಬೇಕು, ಮತ್ತೆ ಅದೇ ಪ್ರಶ್ನೆ ಕೇಳಿದ ನಾನು ಅಷ್ಟೊತ್ತಿಗೆ ಹುಶಾರಾಗಿಬಿಟ್ಟೆ ಅವ್ನಿಗೆ ಬೇಕಾಗಿದ್ದವರು ಯಾರು ಅಂತ ತಿಳಿದುಕೊಂಡು, ಅವ್ರ ಹೆಸರೇ ರೇಸ್ ನಲ್ಲಿ ಜೋರಾಗಿ ಓಡ್ತಾ ಇದೇ ಅಂತ ಹೇಳಿದೆ.. ಅದಕ್ಕೆ ಅವನು ಅಲ್ವಾ..ಸಾರ್, ಅಲ್ವಾ ಸಾರ್ ಅಂತ ಖುಷಿ ಪಟ್ಟ.
ಕಡೆಗೆ ಅವನಿಗೆ ಬೇಕಾದವರಿಗೆ ಟಿಕೆಟ್ ಸಿಗಲಿಲ್ಲ.
ಇಂತದೇ ಇನ್ನೊಂದು ಕೇಸು ಸಿದ್ದರಾಮಯ್ಯನವರದು, ಅವ್ರಿಗೆ ಬಾರಿ ಅಭಿಮಾನಿಗಳ ಬಳಗ ಇದೇ ಸಿದ್ದರಾಮಯ್ಯ ದೆಹಲಿಗೆ ಬಂದ್ರೆ ಕನಿಷ್ಟ ೧೫ ರಿಂದ ೨೦ ಜನ ಸುತ್ತ ಮುತ್ತ ಬಂದೆ ಬರ್ತಾರೆ...ಅವರಲ್ಲಿ ಬಹುತೇಕರು ನನಗೆ ಗೊತ್ತು, ಸಿದ್ದರಾಮಯ್ಯನವರನ್ನ ವಿರೋಧ ಪಕ್ಷದ ನಾಯಕ ಮಾಡದೆ ಕಾಂಗ್ರೆಸ್ ನವರು ಆಟ ಅಡಿಸ್ತಾ ಇದಾರಲ್ಲ ಅದ್ರ ಬಗ್ಗೆ ತಲೆ ಕೆಡಿಸಿಕೊಂದಿರೋ ಅವರು ಸಾರ್ ಸಿದ್ದರಾಮಯ್ಯನವರದು ಆಯ್ತಾ ಸಾರ್, ಯಾವಾಗ ಮಾಡ್ತಾರೆ ಸಾರ್, ಅಂತ ಕೇಳ್ತಾ ಇರ್ತಾರೆ ನಾನು, ನಾಳೆ ಮಾಡಬಹುದು, ನಾಡಿದ್ದು ಮಾಡಬಹುದು ಮುಂದಿನ ವಾರ ಮಾಡಬಹುದು ಅಂತ ಹೇಳ್ತಾ ಇರ್ತೇನೆ, ಮಾಡ್ತಾರೋ ಬಿಡ್ತಾರೋ ನಂಗೇನು ಗೊತ್ತು ಅದು ಅವ್ರ ಪಕ್ಷದ ವಿಚಾರ..

ನಾನ ಮಾಡೋದು ಅಂತ ಕೆಲವರಿಗೆ ಹೇಳಿದೆ ಆದರು ಬಿಟ್ಟಿಲ್ಲಾ ಫೋನ್ ಬಂದೆ ಬರ್ತವೆ.

ಇದು ಯಾರದು ತಪ್ಪಲ್ಲ ಜನ ಕೇಳ್ತಾ ಕೇಳ್ತಾ ಇರ್ತಾರೆ ನಾವು ಹೇಳ್ತಾ ಇರಬೇಕು ಅದರಲ್ಲೂ ವರದಿಗಾರರು ಯಾವಾಗಲು ತಮ್ಮ ಇನ್ಫಾರ್ಮೆಂಟ್ ಗಳು ಯಾವಾಗಲೂ ಸಂತೋಷ ದಿಂದ ಇರುವಂತೆ ನೋಡಿಕೊಳ್ಳಬೇಕಾಗುತ್ತೆ ನಾವು ನಮಗೆ ಗೊತ್ತಿಲ್ಲ ಅಂದ್ರು ಏನೋ ಗೊತ್ತಿದೆ ಅಂತ ನಟಿಸಬೇಕು. ಅಥವಾ ಅವ್ರಿಗೆ ಏನು ಬೇಕು ಅಂತ ಗೊತ್ತು ಮಾಡಿಕೊಳ್ಳಬೇಕು.
ಪೀಲ್ ಗುಡ್ ಫ್ಯಾಕ್ಟರ್ ಅಂತಾರಲ್ಲ ಹಾಗೆ...

Sunday, May 3, 2009


ಗೆರೆ... ಗಣೇಶ.. ಗೆರೆ...


ನಾನು ಸರ್ ಕಾಮಿಡಿ ಟೈಮ್ ಗಣೇಶ ಮಾತಾಡ್ತಾ ಇದ್ದೀನಿ, ಈ ಟಿವಿ ರಿಪೋರ್ಟರ್ ಶ್ರೀನಿವಾಸಗೌಡ ಅಲ್ವಾ ಸರ್ ಮಾತಡೋದು ಅಂತ ಆ ಕಡೆ ಇದ್ದವರು ಕೇಳಿದರು, ನಾನು ಹೇಳಿ ಗಣೇಶ್ ಏನ್ ಆಗಬೇಕು ಅಂದೆ, ಸಾರ್ ನಾನು ಉದಯ ಟಿವಿ ಯಲ್ಲಿ ಕಾಮಿಡಿ ಟೈಮ್ ಪ್ರೊಗ್ರಾಮ್ ಕೋಡ್ತೀನಿ ಅಂತ ಬೇಜಾರ್ ಮಾಡ್ಬೇಡಿ ಸರ್, ನೀವು ಈ ಟಿವಿ ಯವರು ನಾನು "ಮುಂಗಾರು ಮಳೆ" ಅಂತ ಹೊಸ ಪಿಕ್ಚರ್ ನಲ್ಲಿ ಹಿರೋ ಆಗಿ ಆಕ್ಟ್ ಮಾಡ್ತಾ ಇದ್ದೀನಿ ಅದಕ್ಕೆ ಕೃಷ್ಣ ಹೋಟೆಲ್ ನಲ್ಲಿ ಪ್ರೆಸ್ ಕಾನ್ಫರೆನ್ಸ್ ಕರೆದಿದ್ದಿನಿ ತಪ್ಪದೆ ಬನ್ನಿ ಸರ್ ಅಂತ ಕರೆದ ಆಯ್ತು ಸರ್ ಬರೋಣ ಬಿಡಿ ಅಂತ ಸುಮ್ಮನಾದೆ.

ಫೋನ್ ಇಟ್ಟಮೇಲೆ ಯಾವನಪ್ಪ ಇವನು ಗಣೇಶ ತಲೆಕೆಟ್ಟು ಹಾಸನದ ಕಡೆ ಬಂದಿದ್ದಾನೆ ಅಂದುಕೊಂಡೆ, ಸಿನೆಮಾಗಳ ಬಗ್ಗೆ ಅಷ್ಟೇನೂ ಆಸಕ್ತಿ ಇರದ ನಾನು"ಮುಂಗಾರು ಮಳೆ" ಅಂತ ಹೆಸರು ಕೇಳಿದ ಒಡನೆ ಎಂತಾ ಡಬ್ಬಾ ಹೆಸರು ಅಂತ ಅಂದುಕೊಂಡು,(ಆರಂಭದಲ್ಲಿ ನನ್ನಂತೆ ಕೆಲವರಿಗೆ ಹಾಗೆ ಅನಿಸಿತ್ತಂತೆ ) ಯಾರೋ ತಲೆಕೆಟ್ಟವರು ಪಿಕ್ಚರ್ ತೆಗಿತಿರಬೇಕು ಅಂದುಕೊಂಡೆ,ಆಗ ಕನ್ನಡದಲ್ಲಿ ದಿನಕೊಂದು ಸಿನೆಮಾ ಆಡ್ ಬರ್ತಾ ಇತ್ತು, ಪ್ರೆಸ್ ಮೀಟ್ ಗೆ ಹೋಗೋದು ಬೇಡ ಅಂದುಕೊಂಡು ಸುಮ್ಮನಾದೆ.

ಹಾಸನದ ಹಲವರು ಪತ್ರಕರ್ತರು ಗಣೇಶನನ್ನು ಮೀಟ್ ಮಾಡಿ ಪತ್ರಿಕೆಗಳಲ್ಲಿ ಬರೆದರು ನಾನು ಓದಿದೆ ಅಷ್ಟೇ ಅದ್ರ ಬಗ್ಗೆ ನಾನು ಮತ್ತೆ ಯೋಚನೆ ಮಾಡಲೇ ಇಲ್ಲ.

ಈ ಘಟನೆ ನಡೆದು ಮೂರೂ ತಿಂಗಳಾಗಿರಬೇಕು ಎಲ್ಲಿ ನೋಡಿದರಲ್ಲಿ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.... ಹಾಡು ಸೂಪರ್ ಹಿಟ್ ಆಗಿತ್ತು... ಎಲ್ಲಿ ನೋಡಿದರು ಅದೇ ಹಾಡಿನ ಶಬ್ದ....ಒಂದು ಹಾಡಿಗಿಂತ ಒಂದು ಇಂಪೋ, ಇಂಪೋ...
ಹಾಸನದ ಸಿನೆಮಾ ಥಿಯೇಟರುಗಳಲ್ಲಿ... ಸಿನೆಮಾಕ್ಕೆ ಮುಗಿಬಿದ್ದ ಜನ.
ನನ್ನ ಗೆಳೆಯ ಹಾಸನದ ಇನ್ನೊಬ್ಬ ಗಣೇಶ ಪಿಕ್ಚರ್ ನೋಡಿಕೊಂಡು ಹುಚ್ಚುಹಿಡಿದವಂತೆ ಆಡ್ತ ಇದ್ದ... ಮಾಮ ಸಕಲೇಶಪುರವನ್ನ ತೋರಿಸವ್ನೆ ಅವನಮ್ಮನ್ ಚಿಂದಿ..ಅಂತ ಹೇಳಿದ.
ಪಿಕ್ಚರ್ ರಿಲಿಸ್ ಆದ ಒಂದು ವಾರಕ್ಕೆ ಮತ್ತೆ ಫೋನು ಬಂತು.. ಹಲೋ ಸಾರ್ ನಾನು ಮುಂಗಾರು ಮಳೆ ಪಿಕ್ಚರ್ ಪಬ್ಲಿಕ್ ರಿಲೇಶನ್ ಆಪಿಸರ್ ಮಾತಾಡೋದು..ಇವತ್ತು ಮದ್ಯಾನ ಹೋಟೆಲ್ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಪ್ರೆಸ್ ಮೀಟ್ ಇದೆ ಗೋಲ್ಡನ್ ಸ್ಟಾರ್ ಗಣೇಶ್ ಸಿಕ್ತಾರೆ ಕವರೇಜ್ ಮಾಡ್ಬೇಕಾದ್ರೆ ಮಾಡಿಕೊಳ್ಳಿ ಸರ್ ಅನ್ನೋದಾ. ಹಿಂದೆ ಅವ್ನೆ ಗಣೇಶ
ಕಾಲ್ ಮಾಡಿ ಕೇಳಿಕೊಂಡರು ನಾನು ಹೋಗಿರಲಿಲ್ಲ, ಇವಾಗ ಇವನಾರೋ ಕರಿತಾ ಇದಾನಲ್ಲ ಅಂದುಕೊಂಡೆ ಮತ್ತೂ ಹೋಗಲಿಲ್ಲ.

ಮುಂಗಾರು ಮಳೆ ಪಿಕ್ಚರ್ ಯಾವ ರೀತಿ ಓಡ್ತಾ ಇತ್ತು ಅಂದ್ರೆ ಎಲ್ಲ್ಲಾರ ಬಾಯಲ್ಲೂ ಅದೇ ಗುನುಗು...ನನ್ನ ಸ್ನೇಹಿತನ ಅಂಗಡಿಯೊಂದರಲ್ಲಿ ದಿನಕ್ಕೆ ೧೦೦ ಸಿಡಿ ಮಾರಾಟ ಆಗ್ತಾ ಇತ್ತು....

ನನಗೋ ತಡೆಯಲಿಕ್ಕೆ ಆಗ್ಲಿಲ್ಲ ಮತ್ತೆ ನಾನು ಸಿನೆಮಾಕ್ಕೆ ಹೋಗಿ ನೋಡಿದೆ... ಸಿನೆಮಾ ನಿಜಕ್ಕೂ ಚೆನ್ನಾಗಿತ್ತು..ಒಂದಲ್ಲ ಎರಡಲ್ಲ ಮೂರೂ ಬಾರಿ ಸಿನೆಮಾ ನೋಡಿದೆ....

ಮುಂಗಾರು ಮಳೆ ಹಾಡುಗಳಂತು ಹುಚ್ಚು ಹಿಡಿದವರಂತೆ ಹಾಕಿಕೊಂಡು ನಾನು, ಸಕಲೇಶ್ ಪುರದದ ಗೆಳೆಯ ಬನವಾಸೆ ಮಂಜು ಸೇರಿಕೊಂಡು ಸಿನೆಮಾದಲ್ಲಿರೋ ಸೀನ್ ಗಳನ್ನ ಅದೇ ಜಾಗಗಳಿಗೆ ಹೋಗಿ ಮತ್ತೆ ಮತ್ತೆ ನೋಡಿಕೊಂಡು ಬಂದೆವು..ಮುಂಗಾರು ಮಳೆ ಚಿತ್ರೀಕರಣದ ಬಗ್ಗೆ ಭಟ್ಟರು ಬರೆದ ಪುಸ್ತಕ ಓದಿದೆ...

ಗಣೇಶ ಓವರ್ ನೈಟ್ ದೊಡ್ಡ ಹಿರೋ ಆಗೋದ... ಎಲ್ಲಿ ನೋಡಿದರು ಗೋಲ್ಡನ್ ಸ್ಟಾರ್ ಗಣೇಶನ ಧ್ಯಾನ.
ಆಮೇಲೆ ಗಾಳಿಪಟ ಬಂತು ಅದು ಸಕ್ಕತ್ ಫಿಲಂ, ಅದನ್ನು ನೋಡಿದೆ,ಅರಮನೆ ನೋಡಿದೆ ನಾನೇ ಗಣೇಶನ ಫ್ಯಾನ್ ಆಗೋದೇ...

ಆದ್ರೆ ಇವತ್ತು ಕೂತು ನೆನೆಸಿಕೊಂಡರೆ ಗಣೇಶ ಕರೆದಾಗ ಹೋಗಬೇಕಾಗಿತ್ತು ಅನಿಸುತ್ತೆ...ಗಾಂಚಾಲಿ ಮಾಡಿದೆ ಅನಿಸುತ್ತೆ.
ನಮ್ಮ ಎದುರೇ ತಮಾಷೆ ಮಾಡ್ತಿದ್ದವ ನಮ್ಮ ಎದುರೇ ಬೆಳೆದು ನಿಂತು... ಆಹಾ ಅಂತ ನಕ್ಕಾಗ ಒಂತರಾ ಅಗುತಲ್ಲಾ ಹಾಗೆ.
ಅದಕ್ಕೆ ಹೇಳಿದ್ದು ಗೆರೆ.. ಗಣೇಶ.. ಗೆರೆ ಅಂತಾ...


Saturday, May 2, 2009

ಗುರಾಣಿ ಪತ್ರಕರ್ತೆ....



ಆವತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ದೆಹಲಿಯಲ್ಲಿ ಪ್ರೆಸ್ ಕಾನ್ಫರೆನ್ಸ್ ಕರೆದಿದ್ದರು, ಈಗ ನಡೆಯುತ್ತಿರುವ ಚುನಾವಣೆಗಳಿಗೂ ಮುನ್ನ ನಡೆದ ಘಟನೆ ಇದು, ಆಂಧ್ರದಲ್ಲಿ ಎಲ್ಲೆಲ್ಲಿ ಯಾರನ್ನು ಸ್ಪರ್ಧೆಗೆ ಇಳಿಸಬೇಕು ಎಂಬ ಕುರಿತಂತೆ ಸೋನಿಯಾ ಗಾಂಧಿ ಅವರನ್ನು ಕಲೆತು ಮಾತಾಡಿದ ನಂತರ ಆಂಧ್ರ ಭವನದಲ್ಲಿ ಸುದ್ದಿಘೋಷ್ಟಿ ಕರೆದಿದ್ದರು, ಆಗತಾನೆ ಸತ್ಯಂ ರಾಮಲಿಂಗರಾಜು ವಂಚನೆ ಪ್ರಕರಣ ಹೊರಗೆ ಬರುತ್ತಾ ಇತ್ತು, ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಸುದ್ದಿಘೂಷ್ಟಿಗಳನ್ನು ಕೇರ್ ಮಾಡದ ಇಲ್ಲಿನ ನ್ಯಾಷನಲ್ ಮೀಡಿಯಾದವರು ಅವತ್ತು ಸತ್ಯಂ ಕೇಸ್ ಬಗ್ಗೆ ಪ್ರಶ್ನೆ ಹಾಕಲು ಹೆಚ್ಚು ಮಂದಿ ಬಂದಿದ್ದರು. ಆದರೆ ಆದ್ರೆ ಆಂಧ್ರ ಭವನದಲ್ಲಿ ಪತ್ರಕರ್ತರನ್ನು terarist ಗಳಂತೆ ಶೋಧಿಸಿ, ತನಿಕೆ ನಡೆಸಿ ಒಳಗೆ ಬಿಡುತ್ತಿದ್ದರು, ಕ್ಯಾಮರಾಮೆನ್ಗಳನ್ನು ಸಂಪೂರ್ಣವಾಗಿ ಪರೀಕ್ಷಿಸಿ ಒಳಗೆ ಬಿಡುತ್ತಿದ್ದರು, ಅಲ್ಲಿಗೆ ಬಂದಿದ್ದ ಸೀನಿಯರ್ ಜರ್ನಲಿಸ್ಟ್ ಗಳೆಲ್ಲ ಸುದ್ದಿಯ ಮಹತ್ವ ತಿಳಿದು ಕಿರಿಕಿರಿಯಾದರು ಸುಮ್ಮನಿದ್ದರು.
ಪ್ರೆಸ್ ಕಾನ್ಫರೆನ್ಸ್ ಆರಂಭವಾದಾಗ ಕೆಲಕಾಲ ಮುಖ್ಯಮಂತ್ರಿಗಳು ಅಂದ್ರದಲ್ಲಿ ತಾವು ಮಾಡಿರುವ ಸಾಧನೆಗಳ ಬಗ್ಗೆ ಹೇಳಿದ್ರು, ಆಮೇಲೆ ಅವರ ಬದ್ದ ವೈರಿ ಚಂದ್ರಬಾಬು ಯೂಸ್ ಲೆಸ್ ಪೆಲೋ, ನಾವು ಮಾಡಿರೋ ಅಭಿವೃದ್ದಿ ಕೆಲಸಗಳಿಗೆ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತೇವೆ, ಅನುಮಾನವೇ ಬೇಡ ಅಂತೆಲ್ಲ ಹೇಳಿದ್ರು, ನಂತರ ತೆಲುಗು ಪತ್ರಕರ್ತರ ಪ್ರಶ್ನೆ ಶುರುವಾದವು ಕೆಲವು ಪ್ರಶ್ನೆಗಳ ನಂತರ ಅಂದ್ರ ಜ್ಯೋತಿ ಪತ್ರಿಕೆಯ ಕೃಷ್ಣರಾಜು ಏನೋ ಪ್ರಶ್ನೆ ಕೇಳಿದ್ದೆ ತಡ ಮುಖ್ಯಮಂತ್ರಿಗಳು ನೀವು ಯಾವ ಪತ್ರಿಕೆಯವರು ಎಂದಾಗ ನಾನು ಅಂದ್ರ ಜ್ಯೋತಿ ಪತ್ರಿಕೆ ಯವನು ಎಂದಾಗ ತಕ್ಷಣ ನಾನು ನಿಮಗೆ ಉತ್ತರ ಕೊಡಲ್ಲ ಕ್ಷಮಿಸಿ ಎಂದುಬಿಟ್ಟರು, ಇನ್ನೊಬ್ಬ ಪತ್ರಕರ್ತರಿಗೂ ಇದೆ ಉತ್ತರ ಬಂತು.
ನನಗೆ ಅದು ಮೊದಲ ಅನುಭವ ಅದ್ದರಿಂದ ಗಲಿಬಿಲಿ ಆಯಿತು.
ಆಮೇಲೆ ನ್ಯಾಷನಲ್ ಮೀಡಿಯಾದೊರು, ಸತ್ಯಂ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದರು ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ತಮ್ಮ ಟಿಪಿಕಲ್ ಶೈಲಿಯಲ್ಲಿ ಅರ್ಧ ಕಣ್ಣು ಮುಚ್ಚಿಕೊಂಡು ಪ್ರಕರಣದಲ್ಲಿ ನಮ್ಮ ಪಾಲು ಏನು ಇಲ್ಲ, ಸರ್ಕಾರದ ತಪ್ಪು ಏನು ಇಲ್ಲ ಅಂತ ಹೇಳಿ ತನಿಕೆ ಭರವಸೆ ನೀಡಿದರು. ಬರೇ ರಾಜಕೀಯ, ಸತ್ಯಂ ಹಗರಣದ ಪ್ರಶ್ನೆ ಉತ್ತರಗಳಿದ್ದ ಆ ಸುದ್ದಿಘೋಷ್ಟಿಗೆ ಬಂದಿದ್ದ ಪೈನಾಶಿಯಲ್ ಟೈಮ್ಸ್ ನ ಪತ್ರಕರ್ತೆ ಒಬ್ಬಳು ತಾನು ಯಾವುದೋ ಪ್ರಶ್ನೆಯನ್ನ ಕೇಳಬೇಕೆಂದು ಮುಖ್ಯಮಂತ್ರಿಯ ಬಳಿ ಹೋಗಲು ಯತ್ನಿಸಿದಳು, ಆದ್ರೆ ಸುತ್ತ ಮುತ್ತ ಇದ್ದ ಸೆಕ್ಯುರಿಟಿಯವರು ತಡೆದರು, ಇನ್ನೇನು ಕಾನ್ಫರೆನ್ಸ್ ಮುಗಿಯವ ಕಾಲಕ್ಕೆ ಮತ್ತೆ ಆಕೆ ಹತ್ತಿರ ಹೋಗಲು ಯತ್ನಿಸಿದ್ದೆ ತಡ ಸೆಕ್ಯುರಿಟಿ ಆಕೆಯನ್ನು ತಳ್ಳಿದ, ಬೆಂಕಿ ಉಂಡೆಯಾದ ಆಕೆ, ಇಡೀ ಕಾನ್ಫರೆನ್ಸ್ ಬೆಚ್ಚುವಂತೆ ಗುಟುರು ಹಾಕಿದಳು, ಏಕ ವಚನದಲ್ಲಿ ನಿಮ್ಮ ಮುಖ್ಯಮಂತ್ರಿನೆ ಕರೆದಿದ್ದಕ್ಕೆ ಇಲ್ಲಿಗೆ ಬಂದಿದ್ದೇವೆ ಮುಖ್ಯಮಂತ್ರಿ ನಿಮ್ಮಪ್ಪನ ಸ್ವತ್ತಲ್ಲ, ನಾವೇನು ಟೆರರಿಸ್ಟ್ ಅಲ್ಲ, ಮಗನೆ ಮಾನ್ ಹ್ಯಾಂಡಲ್ ಮಾಡಿದ್ರೆ ಚಪ್ಲಿಲಿ ಹೊಡಿತೀನಿ ಅಂತ ಸಿಕ್ಕಾಪಟ್ಟೆ ಸ್ಟ್ರಾಂಗ್ ಆದ ಇಂಗ್ಲಿಷ್ನಲ್ಲಿ ಬೈದುಬಿಟ್ಟಳು ಇದನ್ನು ಕೇಳಿದ ವೈ ಎಸ್ ಆರ್ ಕೊಡ ಬೆಚ್ಚಿದರು, ಆಕೆಯನ್ನ ಕರೆದು ಮೇಡಂ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಕೇಳಿ, ಅಂದ ಆಕೆ ಆಕೆಗೆ ಬೇಕಾಗಿದ್ದ ಪ್ರಶ್ನೆ ಕೇಳಿದ್ಲು, ಅದು ಯಾವುದೂ ಗೊಬ್ಬರ ಕಾರ್ಖಾನೆ ಸ್ಹಾಪನೆ ಕುರಿತಂತೆ ಆಗಿತ್ತು, ಅವಳ ಪತ್ರಿಕೆಗೆ ಬೇಕಾಗಿದ್ದು ಅದು ಮಾತ್ರ ಬೇರೆದ್ದು ಅಲ್ಲ.
ಈ ಮದ್ಯೆ ಮುಖ್ಯಮಂತ್ರಿಯಿಂದ ಸಾರಿ ಅನಿಸಿಕೊಂಡ ತೆಲುಗು ಪತ್ರಕರ್ತ ತನಗಾದ ಅವಮಾನ ನುಂಗಿಕೊಂಡು ಸುಮ್ಮನಾದ.
ಈ ಪ್ರಕರಣದ ನಂತರ ನನಗೆ ಗೊತ್ತಾಗಿದ್ದು ತೆಲುಗಿನಲ್ಲಿ ಎಲ್ಲೇ ಪಕ್ಷಗಳಿಗೂ ಒಂದೊಂದು ಚಾನಲ್ , ಒಂದೊಂದು ಪತ್ರಿಕೆ ಇವೆ, ಅವ್ರಿಗೆ ಬೇಡದವರ ಬಗ್ಗೆ ಪುಟಗಟ್ಟಲೆ ತಪ್ಪು ಸುದ್ದಿ ಬರೆಯುತ್ತವೆ, ಏನೇನೋ ಆರೋಪ ಮಾಡ್ತಾರೆ, ರಾಜಕೀಯ ಪಕ್ಷಗಳು ಅವ್ರಿಗೆ ಬೇಕ್ಕಾದ ಸುದ್ದಿಯನ್ನ ಅವ್ರ ಚಾನೆಲ್ ನಲ್ಲಿ ಬಿತ್ತರಿಸುತ್ತವೆ.... ತಿಂಗಳಿಗೊಂದು ಚಾನಲ್ ಅಲ್ಲಿ ಬರ್ತಾ ಇದೆ ನನಗೆ ಆಂದ್ರದಲ್ಲಿ ೧೮ ಕ್ಕೂ ಹೆಚ್ಹು ಚಾನೆಲ್ ಇವೆ, ಬಹುತೇಕ ರಾಜಕೀಯ ಚಾನೆಲ್ಗಳು, ಒಂದು ಚಾನಲ್ ನ, ಇಲ್ಲ ಪತ್ರಿಕೆಯ ವರದಿಗಾರನ ಪ್ರಶ್ನೆಗೆ ಉತ್ತರಿಸಲ್ಲ ಅನ್ನೋದು ಅಲ್ಲಿ ಸಾಮಾನ್ಯ ಅಂತೆ.
ರಾಜಕೀಯ ಪಕ್ಷಗಳು ಚಾನಲ್ ಆರಂಬಿಸಿದ್ರೆ ಹೀಗೆ ಆಗುತ್ತೆ ಅಲ್ವಾ...
ಮೊನ್ನೆ ತಾನೇ ಕನ್ನಡ ಕಸ್ತೂರಿ ಚಾನಲ್ಲಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ನಾನು ನಿಮ್ಮ ಚಾನಲ್ಲಿಗೆ ಮಾತಾಡಲ್ಲ ಅಂದ್ರಂತೆ...ಕನ್ನಡಕ್ಕೆ ಯಾವತ್ತು ಇಂತ ಪರಿಸಿತಿತಿ ಬರಬಾರದು ರಾಜಕೀಯ ಪಕ್ಷಗಳಿಗೆ ಒಂದು ಚಾನಲ್ ಇಲ್ಲ ಪತ್ರಿಕೆ ಶುರು ಮಾಡೋದು ಯಾವ ಲೆಕ್ಕದ ಪ್ರಶ್ನೆ ಅಲ್ಲ..ರಾಜಕೀಯ ಚಾನಲ್ ಗಳು ಪತ್ರಿಕೆಗಳು ಕನ್ನಡದಲ್ಲಿ ಬರದೆ ಇರ್ಲಿ, ಬಂದ್ರೆ ಆಗೋದು ಬೇರೆ ಅನ್ನೋದು ನಮ್ಮವರಿಗೆ ಬೇಗ ಗೊತ್ತಾಗಲಿ.