Tuesday, June 30, 2009


ಅಮರಾವತಿಯಲ್ಲಿ ನೋಡ್ಕಂಡು ಬಂದವರು....

ಇದನ್ನ ಯಾವತ್ತೋ ಬರೆದುಬಿಡಬೇಕು ಅಂತ ಅಂದುಕೊಂಡಿದ್ದೆ ಆದರೆ ಈ ಪ್ರಕರಣ ಕೆಲವರನ್ನ ಬ್ಲಾಕ್ ಮೇಲ್ ಮಾಡಲಿಕ್ಕೆ ಆಗಾಗ ಬಳಸಿಕೊಳ್ಳುತ್ತಿದ್ದ ಕಾರಣಕ್ಕಾಗಿ ತಡವಾಗಿ ಹೇಳುಕತ್ತಿದ್ದೇನೆ, ಈ ಘಟನೆ ನಡೆದದ್ದು ನಾನು ಮಾನಸಗಂಗೊತ್ರಿಯಲ್ಲಿ ಓದುತ್ತಿದ್ದ ಕಾಲದಲ್ಲಿ, ಅಲ್ಲಿ ಎಂಎ ಒದುವ ಕಾಲಕ್ಕೆ ನಾವು ಸೀರಿಯಸ್ಸಾಗಿ ಓದಿದ್ದಕ್ಕಿಂದ ವಿಚಿತ್ರ ಪ್ರಯೋಗಗಳನ್ನ ಮಾಡಿದ್ದೇ ಹೆಚ್ಚು. ತೀರಾ ಪುಂಡು ಸ್ವಾಬಾವದ ಹುಡುಗರೇ ಒಂದೆಡೆ ಅಪೂರ್ವ ಸಂಗಮದಂತೆ ಸೇರಿಕೊಂಡಿದ್ದರಿಂದ ಹುಡುಗಾಟಿಕೆಯ ಪರಾಕಾಷ್ಠೆ ತಲುಪಿದ್ದೆವು ಅನ್ನಿ, ನಮ್ಮ ಓದು ಮುಗಿದು ವರ್ಷಗಳೇ ಕಳೆದು ಹೋದರೂ ಇನ್ನೂ ನಮ್ಮ ಬ್ಯಾಚ್ ಅನ್ನು ಅಲ್ಲಿನ ಉಪಾನ್ಯಾಸಕರೇ ನೆನೆಸಿಕೊಳ್ಳುವ ಮಟ್ಟಕ್ಕೆ ನಾವು ಪೇಮಸ್ಸಾಗಿದ್ದೆವು. ನಮ್ಮನ್ನು ನಾವೇ ಜರ್ನೋ ಬಾಯ್ಸ್ ಅಂತ ಕರೆದುಕೊಳ್ಳುತ್ತಿದ್ದ ನಾವು ಕ್ಲಾಸುಗಳು ಇರಲಿ ಬಿಡಲಿ ದಿನದ ಬಹುತೇಕ ಕಾಲವನ್ನು ಗಾಂಧಿ ಕ್ಯಾಂಟೀನಿನಲ್ಲಿ ಅಥವಾ ಅಥವಾ ಕ್ಯಾಂಪಾಸ್ಸಿನ ಒಳಗೇ ಇದ್ದ ಲೇಡೀಸ್ ಹಾಸ್ಚೆಲ್ ನ ಬೆಚ್ಚಗಿನ ವಾತಾವರಣದಲ್ಲಿ ಕಳೆಯುತ್ತಿದ್ದೆವು. ಲೇಡಿಸ್ ಹಾಸ್ಚೆಲ್ ನ ಎದರು ಇರುತ್ತಿದ್ದ ಕಾಂಪೊಂಡು ನಮ್ಮ ಸಂಜೆ ಹೊತ್ತಿನ ಅಡ್ಡಾ ಆಗಿತ್ತು...

ಮೊದಲೇ ಜರ್ನಲಿಸಂ ಓದುತ್ತಿದ್ದ ನಮ್ಮ ನ್ನು ಬೇರೆ ವಿಶಯ ಓದುತ್ತಿದ್ದ ಹುಡುಗ,ಹುಡುಗಿಯರು ವಿಶೇಷ ಗೌರವದಿಂದ ಕಾಣುತ್ತಿದ್ದರು, ಅದನ್ನೇ ಎಕ್ಸಪ್ಲಾಯ್ಟ್ ಮಾಡಿಕೊಂಡ ನಾವು, ನಾವು ಮಾಡುವುದೆಲ್ಲ ಸರಿ ನಮ್ಮಂತೆ ಎಂಜಾಯ್ ಮಾಡೋರು ಲೋಕದಲ್ಲೇ ಇಲ್ಲ ಅನ್ನೋ ಇಗೋ ದಲ್ಲೇ ಜೀವಿಸುತ್ತಿದ್ದೆವು.

ಅವತ್ತು ಶನಿವಾರ ಅಂತ ಕಾಣುತ್ತೆ, ಯಾವ ಕ್ಲಾಸು ಗಳೂ ಇರಲಿಲ್ಲ ಗಾಂಧಿ ಕ್ಯಾಂಟೀನಿನ ಮುಂದೆ ಪಂಟ್ಟಾಂಗ ಹೊಡೆಯುತ್ತಿದ್ದೆವು, ಸ್ವಲ್ಪ ತಡವಾಗಿ ಬಂದ ನಮ್ಮ ಬ್ಯಾಚಿನಲ್ಲೇ ಪ್ರಳಯಾಂತಕನಂತಿದ್ದ ಪಂಟರ್ ಅಪಾಯಕಾರಿ ಐಡಿಯಾವೂಂದನ್ನು ತಲೆಯಲ್ಲಿಟ್ಚುಕೊಂಡು ಎಕ್ಸಿಕ್ಯೂಟ್ ಮಾಡಲು ಸಿದ್ದವಾಗಿಯೇ ಬಂದಿದ್ದ... ಒಬ್ಬೊಬ್ಬರನ್ನೇ ಪಕ್ಕಕ್ಕೆ ಕರೆದು ನಾನೂರು ರೂಪಾಯಿ ಇದೆಯೇನು ಒಳ್ಳೆ ಮಜಾ ತೋರಿಸ್ತೀನಿ ಅಂತ ಕೇಳುತ್ತಿದ್ದ, ಗುಂಡು ಪಾರ್ಟಿಗಳಿಗಾಗಿ ಸಾಮಾನ್ಯವಾಗಿ ನೂರೋ, ನೂರೈವತ್ತೋ ರೂಪಾಯಿಗಳನ್ನು ಕೇಳುತ್ತಿದ್ದ ಆಸಾಮಿ ಇದ್ದಕ್ಕಿದ್ದಂತೆ ನಾನೂರು ರೂಪಾಯಿ ಕೇಳಿದರೇ ದಂಗಾದ ಗೆಳೆಯರೆಲ್ಲ ಇಲ್ಲಾ ಗುರು ಪಾಪರ್ ಆಗೋಗಿದಿವಿ ಗುರು ರೈಸ್ ಬಾತ್ ಗೂ ಕಾಸಿಲ್ಲ ಅಂತ ಹೇಳಿದರೂ ಬಿಡದ ಆಸಾಮಿ ಇಲ್ಲ ಕಣ್ರೋ ಇಂತ ಚಾನ್ಸ್ ಮತ್ತೆ ಸಿಗಲ್ಲ, ಒಳ್ಳೆ ಪಿಗರ್ ಗಳಂತೆ ನಾರ್ಥ್ ಇಂಡಿಯಾದಿಂದ ಬಂದಿದ್ದಾರಂತೆ ಮಿಸ್ಸಾಯ್ತೂ ಸಿಗೋದಿಲ್ಲ ಅಂತ ಹೇಳಿದ ಇನ್ನು ಕೆಲವರಿಗೆ ಡಗಾರ್ ಗಳ ಮನೆ ಹೆಂಗಿರುತ್ತೋ ಅಂತ ತಿಳುಕೊಳ್ರೋ ಮಕ್ಕಾಳಾ ಅಂತಾ ಕೆಲವರ ಕುತೂಹಲ ಹೆಚ್ಚಿಸಿದ, ನನಗೋ ಇದು ಡೇಂಜರ್ ಐಡಿಯೂ ಅಂತ ಗೊತ್ತಾದ ತಕ್ಷಣವೇ ಜಾಗ ಖಾಲಿ ಮಾಡಿದೆ.

ಪಂಟರ್ ತೋರಿಸಿದ ಆಮಿಶಕ್ಕೆ ಬಿದ್ದ ನಾಲ್ಕೈದು ಮಂದಿ ಯಾಗೋ ಹಣ ಹೊಂದಿಸಿ ಪ್ರಥಮ ಸಹಾಸಕ್ಕೆ ರೆಡೆಯಾಗಿದ್ದಾರೆ, ಟೆರರ್, ಪೆಂಗ, ಪಂಚು, ನೈಸು, ಐಸು ಇತ್ಯಾದಿಗಳು ಕೆಆರ್ಎಸ್ ರಸ್ತೆಯ ಅಮರಾವತಿ ಅತಿಥಿ ಗೃಹಕ್ಕೆ ಹೋಗಿಬಂದಿದ್ದಾರೆ.

ಸೋಮವಾರ ಕ್ಲಾಸಿಗೆ ಬಂದ ಅವರೆಲ್ಲ ಶನಿವಾರ ನಡೆದಿದ್ದನ್ನೆಲ್ಲಾ ನಮಗೆ ಹೇಳದೆ ಕದ್ದು ಮುಚ್ಚಿ ಓಡಾಡುತ್ತಾ ತಪ್ಪಿಸಿಕೊಂಡು ತಿರುಗುತ್ತಿದ್ದರು, ನನಗೂ ಏನಾಗಿರಬಹುದು ಅನ್ನೋ ಕುತೂಹಲ ತಡೆಯಲಾಗದೇ ಒಬ್ಬೊರನ್ನು ವಿಶ್ವಾಸಕ್ಕೆ ತೆಗೆಡುಕೊಂಡು ಬೇರೆ ಬೇರೆ ಸಮಯದಲ್ಲಿ ವಿಚಾರಿಸಿಕೊಂಡೆ..

ಅಗ ತಿಳಿದಿದ್ದೇನಪ್ಪಾ ಅಂದರೆ ಕೆಆರ್ಎಸ್ ಗೆ ಹೋಗುವ ರಸ್ತೆಯಲ್ಲಿರು ಅಮರಾವತಿ ಅತಿಥಿ ಗೃಹಕ್ಕೆ ಹೋದವರೆಲ್ಲ ಅಲ್ಲಿದ್ದ ಕಲರ್ ಕಲರ್ ಹುಡುಗಿಯರಲ್ಲಿ ತಮಗೆ ಬೇಕಾದವರನ್ನು ಅಯ್ಕೆ ಮಾಡಿಕೊಂಡ ತಕ್ಷಣವೇ ಅವರೇ ರೂಮುಗಳೊಳಗೆ ಕರೆದುಕೊಂಡು ಹೋದರಂತೆ...
ಅಮೇಲೇನಾಯಿತು ಅನ್ನೊದೆ ಕುತೂಹಲ ಅಲ್ಲವಾ, ಒಳಗೆ ಹೋದವರೆಲ್ಲಾ ಕೆಲವೇ ನಿಮಿಶಗಳಲ್ಲಿ ಹೋಟೆಲ್ ಹೊರಗೆ ಬಂದು ನಿಂತಿದ್ದರಂತೆ, ಒಬ್ಬರಿಗೊಬ್ಬರು ಕಡಿದು ಕಟ್ಟೆ ಹಾಕಿದವರಂತೆ ಹಾಗಾಯಿತು ಮಗಾ, ಹೀಗಾಯಿತು ಮಗಾ... ಸೂಪರ್ರೂ ಮಗಾ.. ಅಂತ ಹೇಳಿಕೊಳ್ಳುತ್ತಾ ಪೌರುಷದ ಪ್ರದರ್ಶನ ಮಾಡಿಕೊಳ್ಳುತ್ತಾ ವಾಪ್ಪಸ್ಸಾಗಿದ್ದಾರೆ.

ಈ ಅಮರಾವತಿ ಪ್ರಕರಣ ನಡೆದ ಬಹಳ ದಿನಗಳ ಗೊತ್ತಾಗಿದ್ದೇನಪ್ಪಾ ಅಂತರೆ ಮೊದಲೇ ಭಯದಲ್ಲಿದ್ದ ಇವರೆಲ್ಲ ಅತಿಥಿ ಗೃಹದ ಪರಿಸರ ಕಂಡು ಗಾಬರಿಯಾಗಿದ್ದರಂತೆ... ಇವರು ನೋಡು ನೋಡುತ್ತಿದ್ದಂತೆ ಬಟ್ಟೆ ಕಳಚಲು ಆರಂಭಸಿದ ಆ ಹೆಣ್ಣುಗಳನ್ನು ನೋಡಿ ಮತ್ತಷ್ಠು ಗಲಿಬಿಲಿಗೆ ಒಳಗಾಗಿ ಹೆದರಿಹೋಗಿದ್ದಾರೆ, ಕಾಸು ಕೊಟ್ಚಿದ್ದಕ್ಕೆ ಮೋಸ ಆಗಬಾರದು ಅಂತ ಅಮರಾವತಿಗಳನ್ನು ಮುಟ್ಟದೇ ಅವರ ದರ್ಷನ ಮಾಡಿಕೊಂಡು ಬಂದರಂತೆ. ಈ ಪ್ರಕರಣ ಈಗ ರಹಸ್ಯವಾಗೇನು ಉಳಿದಿಲ್ಲ ಅಮರಾವತಿಗೆ ಹೋಗಿ ಬಂದವರೆಲ್ಲ ನಾನು ಏನೂ
ಮಾಡಲಿಲ್ಲಪ್ಪಾ ಸುಮ್ಮನೇ ನೋಡಿಕೊಂಡು ಬಂದೆ ಅಷ್ಠೇ ಹೇಳುತ್ತಿದ್ದಾರೆ.

ಪತ್ರಿಕೊದ್ಯಮಕ್ಕೆ ಕಾಲಿಡುವುದಕ್ಕೂ ಮುನ್ನವೇ ಹೊಸ ಅನುಭವಕ್ಕಾಗಿ ಕಾತರಿಸುತ್ತಿದ್ದ ನನ್ನ ಗೆಳಯರೆಲ್ಲಾ ಸದ್ಯ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ, ಚಾನೆಲ್ ಗಳಲ್ಲಿ ವರದಿಗಾರರಾಗಿ ಹೆಸರು ಮಾಡಿದ್ದಾರೆ, ಅವರು ಸಿಕ್ಕಾಗಲೆಲ್ಲಾ ಎನ್ರಪ್ಪಾ ಅಮರಾವತಿಗಳೂ ಅಂತ ಕಿಚಾಯಿಸುತ್ತಾ ಇರ್ತೇನೆ... ಬಾಲ ಬಿಚ್ಚಿದಿರೋ ನಿಮ್ಮ ನಿಜವಾದ ಹೆಸರುಗಳನ್ನು ಬರೆಯಬೇಕಾಗುತ್ತದೆ ಅಂತ ಎಚ್ಚr

Monday, June 29, 2009

ರಿಪೋರ್ಟ್ ಟಿಲ್ ಡೆತ್...!!!






ಈ ಪ್ರಕರಣ ನೆನೆಸಿಕೊಂಡಾಗಲೆಲ್ಲ ನನಗೆ ಒಂತಾರ ಕಸಿವಿಸಿಯಾಗುತ್ತೆ, ತಪ್ಪು ನಂದಾ, ಮತ್ತೊಬ್ಬರದಾ, ಆತನ ಸಾವಿಗೆ ನಾನು ಹೊಣೆಯಾ ಇಲ್ಲಾ ವಿಜಯಕರ್ನಾಟಕ ಪತ್ರಿಕೆ ಹೊಣೆಯಾ ಎಂಬ ಗೋಜಲು, ಗೋಜಲು ಯೋಚನೆಗಳು ದುತ್ತನೆ ಬಂದು ನಿಲ್ಲುತ್ತವೆ, ಪತ್ರಕರ್ತ ವೃತ್ತಿಯಲ್ಲಿ ಇಂತವೆಲ್ಲ ಸಹಜ ನನಗೆ ನಾನೇ ಹೇಳಿಕೊಂಡು ಸುಮ್ಮನೇ ಇರಲು ಯತ್ನಿಸಿದರು ನನಗೆ ಈ ಪ್ರಕರಣ ಆಗಾಗ ನೆನಪಾಗುತ್ತಾ, ಸರಿ ತಪ್ಪಿನ ಗೋಜಲಿಗೆ ಮತ್ತೆ ಮತ್ತೆ ಸಿಕ್ಕಿಸುತ್ತದೆ.

ನಿಮಗೆ ನೆನಪಿರಬೇಕು ಹಾಸನ ಜಿಲ್ಲೆಯಲ್ಲಿ ಅಕ್ಕಿ ಹಗರಣ ಎಂಬ ಬೃಹತ್ ಹಗರಣವೊಂದು ಬೆಳೆಕಿಗೆ ಬಂದು ಹತ್ತಾರು ಸರ್ಕಾರಿ ಅಧಿಕಾರಿಗಳು ಜೈಲಿಗೆ ಹೋಗಿ ಮತ್ತೆ ಕೋರ್ಟಿನಿಂದ ಕುಲಾಸೆಯಾದರು, ಸಾಮಾನ್ಯವಾಗಿ ಹಾಸನ ಜಿಲ್ಲೆಯಲ್ಲಿ ನಡೆದ ಬಹುತೇಕ ಹಗರಣ ಮತ್ತು ಕೊಲೆ ಕೇಸುಗಳು ಸಾಕ್ಷಾಧಾರಗಳಿಲ್ಲದೇ ಕುಲಾಸೆಯಾಗುತ್ತವೆ, ಅದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಅಕ್ಕಿ ಹಗರಣ ನಡೆದು ಹೋಗಿ ರಾಜ್ಯದಾದ್ಯಂತ ಬಾರಿ ಸುದ್ದಿಯಾದಮೇಲೂ ಆ ಅಕ್ಕಿ ಹಗರಣ ಮುಂದುವರೆದಿತ್ತು, ಪೋಲೀಸರು, ಆಹಾರ ಇಲಾಖೆ ಅಧಿಕಾರಿಗಳು, ಎಪ್.ಸಿ.ಐ ಗೋಡೌನಿನ ಅಧಿಕಾರಿಗಳು, ವ್ಯಾಪಾರಿಗಳು, ಲಾರಿ ಮಾಲಿಕರು ಸೇರಿ ಬಡವರಿಗೆ ಸೇರಬೇಕಾದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸಿ ಗುಳುಂ ಮಾಡುವುದೇ ಅಕ್ಕಿ ಹಗರಣ, ಈ ದಂದೆ ಮತ್ತು ಅದರ ವಿಸ್ತಾರಕ್ಕೆ ಹೋದರೆ ಕಷ್ಠ ಬಿಡಿ,ಕೊಲೆ ಆಗಬಹುದು, ಹಗರಣದ ಅಕ್ಕಿಯನ್ನು ಮಂಗಳೂರು ಬಂಧರಿನ ಮೂಲಕ ವಿದೇಶಕ್ಕೂ ಸಾಗಿಸುತ್ತಾರೆ ಆದರಿಂದ ಇದೊಂದು ಬಾರಿ ಕಳ್ಶರ, ದುರುಳರ ಸಂತೆ.

ಹಳೆ ಹಗರಣ ಬೆಳಕಿಗೆ ಬಂದು ವರ್ಷ ಕಳೆದ ನಂತರ ಮತ್ತೆ ಬಡವರ ಅಕ್ಕಿಯನ್ನ ಕಳ್ಳ ಮಾರ್ಗಗಳಲ್ಲಿ ಲಪಟಾಯಿಸುತ್ತಿರುವ ಮಾಹಿತಿ ಪಡೆದ ನಾನು ದೃಶ್ಯಗಳ ಸಮೇತ ಈ ಟಿ.ವಿ.ಯಲ್ಲಿ ವರದಿ ಮಾಡಿದೆ, ನನ್ನ ತನಿಖೆಯನ್ನು ಒಂದೇ ಪ್ರಕರಣಕ್ಕೆ ಸೀಮಿತಗೊಳಿಸದೆ ಸರಿ ಸುಮಾರು ಒಂದು ತಿಂಗಳು ನಿರಂತರವಾಗಿ ಅಕ್ಕಿ ದಾಸ್ತಾನಿರುವ ಗೋಡೌನುಗಳ ಮೇಲೆ ಅಧಿಕಾರಿಗಳ ಸಮೇತ ಧಾಳಿ ಮಾಡೋದು, ಲಾರಿಗಳನ್ನ ಸಾಕ್ಷ ಸಮೇತ ಹಿಡಿದು ವರದಿ ಮಾಡುವುದು ನಾನು ಮಾಡಿದ ಕೆಲಸ....ಆರಂಭದಲ್ಲಿ ಅನಾಮಿಕ ವ್ಯಕ್ತಿಯಿಂದ ಬಂದ ಮಾಹಿತಿ ಮೇರೆಗೆ ಶುರುವಾದ ನನ್ನ ಕಾರ್ಯಾಚರಣೆಗೆ ನಂತರದ ದಿನಗಳಲ್ಲಿ ಹಗರಣದಲ್ಲಿ ಪಾಲ್ಗೊಂಡಿದ್ದ ಮಂದಿಯೇ ಅವರವರ ನಡುವಿನ ದ್ವೇಷದಿಂದಾಗಿ ಮಾದ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಹಾಸನ ಸೇರಿದಂತೆ ರಾಜ್ಯದಲ್ಲೇ ಇದು ದೊಡ್ಡ ಸುದ್ದಿಯಾಗಿತ್ತು....

ಬಾರಿ ಹಣ ತೊಡಗಿಕೊಂಡ ಹಗರಣವಾದ್ದರಿಂದ ವರದಿ ಮಾಡಲು ಹೋದ ವರದಿಗಾರರ ಮೇಲೂ ಭ್ರಷ್ಠಾಚಾರದ ಆರೋಪ ಖಂಡಿತಾ ಬರುವುದರಿಂದ ವರಿದಿಗಾರರಿಗೆ ಮಾಹಿತಿ ಸಿಕ್ಕರೂ ಅದರ ತಂಟೆಗೆ ಹೋಗದೆ ಸುಮ್ಮನೆ ಇದ್ದು ಬಿಡುತ್ತಿದ್ದರು.
ಪರಿಸ್ಥಿತಿ ವಿಶಮವಾಗಿದ್ದರು ಅನ್ಯಾಯ ಸಹಿಸಿಕೊಳ್ಳಲಾಗದ ನಾನು ನನಗಿದ್ದ ಸೀಮಿತ ಅವಕಾಶದಲ್ಲೇ ಈ ಹಗರಣಗಳನ್ನ ಮತ್ತೆ ಬೆಳಕಿಗೆ ತಂದೆ, ನನ್ನ ಇಂತಹ ಪ್ರಯತ್ನದಲ್ಲಿ ನನ್ನ ಜೊತೆಗಿದ್ದವರು ವಿಜಯಕರ್ನಾಟಕ ಪತ್ರಿಕೆಯವರು.

ಒಂದು ದಿನ ಏನಾಯಿತೆಂದರೆ ಹಾಸನದ ಸಂತೇಪೇಟೆ ಮೈದಾನದಲ್ಲಿ ವ್ಯಕ್ತಿಯೊಬ್ಬ ಅಕ್ರಮ ದಾಸ್ತಾನು ಮಾಡಿದ್ದಾನೆ ಅಂತ ಸುದ್ದಿ ಸಿಕ್ಕಿದ್ದೇ ತಡ ನಾನು, ವಿಜಯಕರ್ನಾಟಕ ಪತ್ರಿಕೆ ಪ್ರಕಾಶ್ ಸ್ಥಳಕ್ಕೆ ಭಾರಿ ಅಕ್ರಮ ದಾಸ್ತಾನನ್ನು ಹಿಡಿದು ಬಿಟ್ಟವು. ಸ್ಥಳದಲ್ಲೇ ಸಿಕ್ಕಿಕೊಂಡ ವ್ಯಕ್ತಿಯ ಮದ್ಯ ವಯಸ್ಸು ಮೀರಿತ್ತು.
ನಮ್ಮ ಕೈಯಲ್ಲಿ ಸಿಕ್ಕಿಕೊಂಡು ಗಾಬರಿಗೆ ಒಳಗಾಗಿ ನಮಗೆ ಹಣದ ಆಮಿಶ ಒಡ್ಡಿದ, ಅದೆಲ್ಲಕ್ಕೆ ತಲೆಬಾಗದ ನಾವು ವರದಿ ಮಾಡಿದೆವು.

ಹಾಸನದಲ್ಲೆಲ್ಲಾ ದೊಡ್ಡ ಸುದ್ದಿಯಾಯಿತು. ಹಾಸನದಲ್ಲಿ ಬಾರಿ ಶ್ರೀಮಂತರೂ ಮರ್ಯಾದಸ್ಥ ಕುಟುಂಭದವನಾಗಿದ್ದ ಆತನ ದಂದೆ ಇದಾ.... ಅಂತ ಅಲ್ಲಿನ ಜನಕ್ಕೆ ಗೊತ್ತಾಯಿತು. ನಾನು ಎಂದಿನಂತೆ ಪ್ರಕರಣವನ್ನು ವರದಿ ಮಾಡಿ ಸುಮ್ಮನೇ ಆಗಿಬಿಟ್ಟಿ.

ಆದರೆ ವಿಜಯಕರ್ನಾಟಕದವರು ಅಕ್ಕಿ ಗುಳುಂ ಅಂತ ಪ್ರೋಮೋ ಹಾಕಿಕೊಂಡು ಆತನನ್ನ ಅರೆಸ್ಟ್ ಮಾಡುವವರೆಗೆ ದಿನಾ ಸುದ್ಧಿ ಹಾಕುತ್ತಿದ್ದರು,,, ಅಕ್ಕಿ ಕಳ್ಳನನ್ನು 5 ದಿನವಾದರೂ ಬಂಧಿಸದ ಪೋಲೀಸರು....! 15 ದಿನವಾದರೂ ಬಂಧಿಸಿದ ಪೋಲೀಸರು ಅಂತ, ಕಳ್ಳ ಮತ್ತು ಪೋಲೀಸರ ಹಿಂದೆ ವಿಜಯಕರ್ನಾಟಕದವರು ಬಿದ್ದು ಬಿಟ್ಟರು.... ಪ್ರಕರಣ ನಡೆದು ಒಂದು ತಿಂಗಳ ನಂತರ ವ್ಯಕ್ತಿಯ ಬಂಧನವಾಯಿತು ಅದನ್ನೂ ವಿಜಯಕರ್ನಾಟಕದವರು ಪಲಶೃತಿ ಅಂತ ಬರೆದುಕೊಂಡರು...

ಆತ ಬೇಲ್ ಅಪ್ಲಿಕೇಶನ್ ಹಾಕಿದಾಗ... ಮತ್ತೆ ಬಿಡುಗಡೆಯಾದಾಗ ಪಾಲೋ ಅಪ್ ಸುದ್ದಿಗಳನ್ನು ಪತ್ರಿಕೆಯಲ್ಲಿ ಆತನ ದಪ್ಪ ದಪ್ಪ ಪೋಟೋ ಹಾಕಿ ಅಕ್ಕಿ ಕಳ್ಳನ ಚಡ್ಡಿ ಹರಿದರು... ಆದು ಯಾವ ಮಟ್ಟಕ್ಕೆ ಹೋಗಿತ್ತು ಅಂದರೆ ನನಗೇ ಯಾಕೋ ಇವರದು ವಿಕೃತಿ ಅನ್ನಿಸಲಿಕ್ಕೆ ಶುರುವಾಗಿತ್ತು.

ಇದೆಲ್ಲ ನಡೆದು ಎರಡು ತಿಂಗಳಾಗಿರಬೇಕು ನನ್ನ ಸ್ನೇಹಿತ ಗಣೇಶ ನನಗೆ ಬೆಳಿಗ್ಗೆ ಅಷ್ಟೊತ್ತಿಗೆ ಕರೆ ಮಾಡಿ, ಲೋ ಗೌಡ ಅಂತೂ ಇಂತೂ ಅಕ್ಕಿ ಕಳ್ಳನನ್ನೂ ಬಲಿ ತಗೊಂಡ್ರಲ್ಲೋ ಅಂದ. ನಾನು ಗಾಭರಿಯಿಂದ ಯಾಕಪ್ಪಾ ಅಂದೆ ಅದೇ ಕಣೋ ಅಕ್ಕಿ ಹಗರಣದಲ್ಲಿ ದಿನಾಲೂ ಪೇಪರಿನಲ್ಲಿ ಬರ್ತಾ ಇದ್ದನಲ್ಲಾ ಆ ಅಸಾಮಿ, ಆತ ಸತ್ತೋದ ಕಣೋ... ಹೈ ಶುಗರ್ ಇತ್ತಂತೆ.... ಬಿಪಿ ಸಿಕ್ಕಾ ಪಟ್ಟೆ ಹೆಚ್ಚು ಕಮ್ಮಿ ಆಗಿದೆ, ಜೊತೆಗೆ ಹಾರ್ಟ್ ಪೈಲೂರಾಗಿ ಹೋಗಿ ಬಿಟ್ಟಿದ್ದಾನೆ ಗುರೂ..
ನೀವು ಪೇಪರಿನೋರ ಕಾರಣದಿಂದಲೇ ಸತ್ತ ಅಂತ ಜನ ಮಾತಾಡಿಕೊಳ್ತಾ ಇದಾರೆ, ಇದಕ್ಕೆಲ್ಲಾ ಕಾರಣ ವಿಜಯಕರ್ನಾಟಕ ಹಾಸನ ಮುಖ್ಯಸ್ಥ ಮಹೇಶ್ ಚಂದ್ರನಿಗೆ ಈಗ ನೆಮ್ಮದಿ ಸಿಕ್ಕಿರಬೇಕು ಅವನಿಗೆ ಪೋನು ಮಾಡ್ರೋ ಅಂತ ಯಾರೋ ಅವರ ಮನೆ ಹತ್ರ ಮಾತಾಡಿಕೊಂಡರಂತೆ ಅಂತ ಹೇಳಿದ. ಜೊತೆಗೆ ನೀನೂ ಇವತ್ತೊಂದು ದಿನ ಹುಶಾರಾಗಿರು ಗುರು ಯಾಕಂದರೆ ಅವನನ್ನ ಮೊದಲು ಹಿಡಿದೊನೇ ನೀನಲ್ಲವಾ ಅಂದ.

ನನಗೆ ಯಾಕೋ ಬೇಜಾರಾಯಿತು ನಾನು ಆತನನ್ನು ಹಿಡಿದಿದ್ದರಿಂದಲೇ ಅಲ್ವಾ ಆತ ಸತ್ತಿದ್ದು, ಆ ವಿಜಯಕರ್ನಾಟಕದವರು ಆತನನ್ನು ಹುರಿದು ತಿಂದದ್ದು, ಆತ ತಪ್ಪು ಮಾಡಿದ್ದ ನಿಜ ಆದರೂ ಸಾಯೋವಂತಾ ತಪ್ಪಲ್ಲ ಅಂತೆಲ್ಲಾ ಅನ್ನಿಸಲಿಕ್ಕೆ ಶುರುವಾಯಿತು... ಈ ಪ್ರಕರಣದಲ್ಲಿ ನನ್ನ ಪಾತ್ರ ಸರಿನಾ ತಪ್ಪಾ ಅಂತ ಗೊತ್ತಾಗಲೇ ಇಲ್ಲ.

ಅವನ ಸುದ್ಧಿಯನ್ನ ದಿನಾ ಪಾಲೋ ಅಪ್ ಮಾಡುತ್ತಿದ್ದ ವಿಜಯಕರ್ನಾಟಕದವರು ಅವನು ಸತ್ತ ದಿನ ಒಂದೇ ಒಂದು ಶಬ್ಧ ಸುದ್ಧಿ ಬರೆಯಲಿಲ್ಲ ನೋಡಿ.....

Friday, June 26, 2009

"ಅಧಿಕಾರ ಇರೋವಾಗ ಕೆಲಸ ಮಾಡಿ ಕೆಚ್ಚಾಕಬೇಕು ಕಣಣ್ಣಾ... ಅಮೇಲೆ ಏನಾದರೂ ಆಗಲಿ"

ಯಾವ ಇಸ್ಕೂಲು ಗುರು ನೀನು ಓದಿದ್ದು ಅಂತ ಸರ್ಕಾರದ ಹಿರಿಯ ಅಧಿಕಾರಿಯನ್ನು ಕೋಪದಿಂದ ಕೇಳಿದ ಲೋಕೋಪಯೋಗಿ ಸಚಿವ ರೇವಣ್ಣ, ಇಲಾಖೆಯ ಮಂತ್ರಿಯ ಪ್ರಶ್ನೆಯಿಂದ ಆ ಕ್ಷಣಕ್ಕೆ ದಂಗಾದ ಹಿರಿಯ ಅಧಿಕಾರಿ ಮಂತ್ರಿಗಳು ಗರಂ ಆಗಿದ್ದಾರೆ ಅಂತ ಹ್ಯಾಪ ಮೋರೆ ಹಾಕಿಕೊಂಡು ಸುಮ್ಮನೇ ಇದ್ದ, ಮುಂದುವರೆದ ರೇವಣ್ಣ ಅದೇ ಗುರು ಕೇಳಿದ್ದು ಯಾವ ಇಸ್ಕೂಲು ತಾವು ಓದಿದ್ದು ಅಂದ,

"ಸೆಶನ್ ನಲ್ಲಿ ಯಾವನೋ ಪ್ರಶ್ನೆ ಕೇಳಿದ ಅಂತ ನೀನು ಹಿಂಗೆ ಉತ್ತರ ಬರೆದು ಕಳಿಸಿದರೆ ಉತ್ತರ ಕೊಡಬೇಕಾದೋನು ನಾನೋ ನೀನೋ...ನನ್ನ ಸಿಗಾಕಿಸಬೇಕು ಅಂತ ಮಾಡಿದ್ದೀಯೋ ಹೇಗೆ ಅಂತ ಕೇಳಿ , ತಗಬಾ ಇಲ್ಲಿ ಅಂತ ಆಗ ತಾನೆ ನಡೆಯುತ್ತಿದ್ದ ವಿಧಾನಸಭಾ ಕಲಾಪಗಳಲ್ಲಿ ಉತ್ತರ ಕರ್ನಾಟಕದ ಶಾಸಕನೊಬ್ಬ ರಾಜ್ಯ ಹೆದ್ದಾರಿಗಳ ಬಗ್ಗೆ ಕೇಳಿದ್ದ ಪ್ರಶ್ನೆಗೆ ಆ ಅಧಿಕಾರಿ ಬರೆದಿದ್ದ ಉತ್ತರಗಳನ್ನು ತೋರಿಸಿ ಇಂಗೆ ಉತ್ತರ ಬರೆದರೆ ವಿರೋದ ಪಕ್ಷದೋರು ಸುಮ್ಮನೆ ಬಿಡ್ತಾರೆ ಅಂತ ಅಂದುಕೊಂಡೆಯಾ ಅಂತ ಕೇಳಿದ, ಆ ಅಧಿಕಾರಿ ಆಗಲು ಸುಮ್ಮನೇ ಇದ್ದ.

ಅಲ್ಲಿದ್ದ ಪ್ರಶ್ನೆ ಏನಪ್ಪಾ ಅಂದರೆ ಉತ್ತರ ಕರ್ನಾಟಕದ ಇಂತಿತ್ತಾ ರಸ್ತೆ ಅಭಿವೃದ್ದಿಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ, ಅದಕ್ಕೆ ಸರ್ಕಾರಿ ಅಧಿಕಾರಿ ಸುದೀರ್ಘ ಉತ್ತರ ಬರೆದಿದ್ದ ಇದೇ ರೇವಣ್ಣ ನ ಕೋಪಕ್ಕೆ ಕಾರಣವಾಗಿತ್ತು,

ಈಗ ಬರೆದುಕೋ ಅಂತ ಹೇಳಿದ ರೇವಣ್ಣ ಉತ್ತರ ಕರ್ನಾಟಕ ರಸ್ತೆಗಳ ಅಭಿವೃದ್ದಿ ಮಾಡುವುದಕ್ಕಾಗಿಯೇ ಉತ್ತರ ಕರ್ನಾಟಕ ರಸ್ತೆ ಅಭಿವೃದ್ದಿ ಮಂಡಳಿ ಸ್ಥಾಪನೆ ಮಾಡಿದ್ದು ಅದರ ಮುಖಾಂತರ ಅಭಿವೃದ್ದಿ ಮಾಡಲಾಗುತ್ತಿದೆ ಅಂತ ಬರೆಸಿದ,

ಎರಡನೆ ಪ್ರಶ್ನೆ ಉತ್ತರ ಕರ್ನಾಟಕದಲ್ಲಿ ಬರುವ ರಾಷ್ಠ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರದ ಕ್ರಮ ಏನು ಅಂತ ಅದಕ್ಕೆ ರೇವಣ್ಮ ಬರೆಸಿದ ಉತ್ತರ ರಾಷ್ಠ್ರೀಯ ಹೆದ್ದಾರಿಗಳ ಅಭಿವೃದ್ದಿ ಕೇಂದ್ರ ಸರ್ಕಾರದ್ದಾಗಿದ್ದು ಕೇಂದ್ರ ಹಣ ಬಿಡುಗಡೆ ಮಾಡಿದರೆ ಲೋಕೋಪಯೋಗಿ ಇಲಾಕೆ ಕಾಮಗಾರಿಗಳಿಗೆ ಸಹಯೋಗ ನೀಡುತ್ತದೆ ಆದರಿಂದ ಈ ಪ್ರಶ್ನೆ ಉದ್ಬವಿಸುವುದೇ ಇಲ್ಲ ಅಂತ,

ಬರೆದುಕೊಂಡ ಅಧಿಕಾರಿಯ ಜೊತೆ ನಾನೂ ದಂಗಾಗಿ ಹೋದೆ, ಈ ಪ್ರಶ್ನೆಗಳು ಜೊತೆ ಯಾರಿಗೂ ಅರ್ಥವಾಗದ 500 ಪುಟದ ರಸ್ತೆಗೆ ಸಂಭಂದಿಸಿದ ವಿವರಗಳ ಬುಕ್ ಲೆಟ್ ಸೇರಿಸು ಅಂತ ರೇವಣ್ಣ ತಮ್ಮ ರಾಜಕೀಯ ಚಾಕಚಕ್ಯತೆ ತೋರಿದರು...

ಶಾಸಕ ಹಾಕಿದ ಪ್ರಶ್ನೆಗೆ ತಾತ್ವಿಕ ಉತ್ತರ ಸಿಕ್ಕಂತೆ ಆಗಬೇಕು ತಾನೂ ವಿರೋಧ ಪಕ್ಷದವರ ಕೈಗೆ ಸಿಗಬಾರದು ಅನ್ನೋದು ರೇವಣ್ಣನ ಐಡಿಯಾ....

ದೇವೇಗೌಡರ ಗರಡಿಯಲ್ಲಿ ಸಾಕಷ್ಠು ಪಳಗಿರುವ ಅವರ ಮಕ್ಕಳಲ್ಲಿ ರೇವಣ್ಣ ನಂಬರ್ ಒನ್ ಅಪ್ಪನ ಮಾತನ್ನು ಸತ್ತರೂ ಬಿಟ್ಟುಕೊಡದ ರೇವಣ್ಣನ ಬಗ್ಗೆ ದೇವೇಗೌಡರಿಗೂ ವಿಪರೀತ ಕಾಳಜಿ ಬೇರೆಯವರ ತರ ಸಾಕಷ್ಚು ಓದಿಲ್ಲಾ ಅನ್ನೋ ಕಾರಣಕ್ಕೆ ದೇವೇಗೌಡ ರೇವಣ್ಣನ ಪ್ರತಿ ನಡೆಗೂ ಬೆನ್ನಿಗೆ ನಿಂತಿರುತ್ತಾರೆ, ನಾನು ಹಾಸನದಲ್ಲಿ ವರದಿಗಾರ ಆಗಿದ್ದರಿಂದ ರೇವಣ್ಣನ ರಾಜಕೀಯದ ಕಾರಿಡಾರುಗಳಲ್ಲಿ ಅಡ್ಜಾಡುವ ಅವಕಾಶ ಸಿಕ್ಕಿತ್ತು, ಕುತೂಹಲದ ಗಣಿಯಾಗಿದ್ದ ರೇವಣ್ಣನ ಬಗ್ಗೆ ಜನರಿಗೆ ತಿಳಿದದ್ದು ಕಡಿಮೆ,ಆತನ ನಡೆಗಳೇ ನಿಗೂಡ... ನಾನು ಹೇಳುವುದಾದರೆ ಆತ ದೈತ್ಯ ಪ್ರತಿಭೆ ಆತನಿಗಿರುವ ಕೆಲವೇ ವೀಕ್ ಪಾಯಿಂಟ್ ಬಿಟ್ಟರೆ ಆತ ಅಭಿವೃದ್ದಿ ಕಡೆ ಯೋಚಿಸುವ ರಾಜಕಾರಣಿ,

ನಾನು ಸಾದ್ಯವಾದಾಗಲೆಲ್ಲ ಎಚ್,ಡಿ.ರೇವಣ್ಣನ ಕಾರ್ಯವೈಖರಿಯನ್ನ ಹತ್ತಿರದಿಂದ ನೋಡಿದ್ದೇನೆ,

ಯಾಕಂದರೆ ಕಳೆದ 20,20 ಸರ್ಕಾರದಲ್ಲಿ ಸೂಪರ್ ಸಿಎಂ ಆಗಿದ್ದವರು ಎಚ್.ಡಿ.ರೇವಣ್ಣ. ಆ ಕಡೆ ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ, ಅಧಿಕಾರ ಹಸ್ತಾಂತರ ಮಾಡಬೇಕಾ ಬೇಡವಾ ಅನ್ನೋ ಚರ್ಚೆಯಲ್ಲಿ ಬಿಸಿಯಾಗಿದ್ದರೆ, ರೇವಣ್ಣ ಸರ್ಕಾರದಿಂದ ಹಾಸನಕ್ಕೆ ಏನೇಲ್ಲಾ ಸಿಗುತ್ತೋ ಅದನ್ನೆಲ್ಲಾ ತಗೊಂಡು ಹೋಗೋದು ಅಂತ ಪಣ ತೊಟ್ಟಿದ್ದರು,

ದಿನಕ್ಕೆ 10 ರಿಂದ ಹದಿನೈದು ಪೈಲಿಗೆ ಕುಮಾರಸ್ವಾಮಿಯಿಂದ ಸಹಿಹಾಕಿಸಿಕೊಳ್ಳದಿದ್ದರೇ ಆತನಿಗೆ ನಿದ್ದೆ ಹತ್ತುತ್ತಿರಲಿಲ್ಲ , ಕಂಕುಳಲ್ಲಿ ಏನಾದರೊಂದು ಪೈಲು ಇರದಿದ್ದರೇ ರೇವಣ್ಣನಿಗೆ ಆಗುತ್ತಿರಲಿಲ್ಲ ಕುಮಾರಸ್ವಾಮಿ ಎಲ್ಲೇ ಇರಲಿ ನುಗ್ಗಿ ಒಂದೊಂದೆ ಪೈಲು ತಿರುಗಿಸುತ್ತಾ ಇದ್ದರೆ ಕುಮಾರಸ್ವಾಮಿ ಪೈಲು ಏನಂತ ನೋಡದೇ ಸಹಿ ಹಾಕಬೇಕಿತ್ತು ಏನಣ್ಣಾ ಇವೆಲ್ಲ ಅಂತ ಕುಮಾರಸ್ವಾಮಿ ಏನಾದರೂ ಕೇಳಿದರೆ ಮೊದಲು ಸೈನ್ ಮಾಡು ಆಮೇಲೆ ಇದನ್ನೆಲ್ಲಾ ಓದಿಕೊಳ್ಳೂವಂತೆ ಅನ್ನುತ್ತಿದ್ದ ರೇವಣ್ಣ.

ರಾಜ್ಯ ರಾಜಕೀಯದಲ್ಲಿ ಇರುವ ಕಲರ್ ಪುಲ್ ವ್ಯಕ್ತಿಗಳಲ್ಲಿ ರೇವಣ್ಣ ಒಬ್ಬರು ಅನ್ನೋದರ ಬಗ್ಗೆ ಅನುಮಾನವೇ ಬೇಡ, ಆತ ಏನಾದರೂ ಕೆಲಸ ಹಿಡಿದನೆಂದರೆ ಖಂಡವಿದುಕೋ ಮಾಂಸವಿದುಕೋ ಎಂಬ ತೀರ್ವತೆಯಲ್ಲಿ ಹಿಡಿದ ಕೆಲಸ ಮಾಡಿಮುಗಿಸುತ್ತಾನೆ.

ಆದರೆ ಆತನ ಮನಸು ಮಾತ್ರ ಹಾಸನ ಜಿಲ್ಲೆ ಒಳಗೆ ಗಿರಿಕಿ ಹೊಡೆಯುತ್ತಾ ಇರುತ್ತದೆ ಯಾವ ಯಾವ ಊರಿಗೆ ಏನು ಕೆಲಸ ಆಗಬೇಕು ಅನ್ನೋದರ ಕಡೆಗೆ ಆತನ ಗಮನ, ಕಳೆದ ಸರ್ಕಾರದಲ್ಲೂ ಅಷ್ಟೇ ಹಾಸನಕ್ಕೆ ಆಗದ ಕೆಲಸಗಳೇ ಇಲ್ಲಾ ಅನ್ನಬೇಕು, ಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜ್, ಹತ್ತಾರು ಡಿಗ್ರಿ ಕಾಲೇಜು, ಹೈಟೆಕ್ ಬಸ್ ಸ್ಟಾಂಡ್, ವಿಮಾನ ನಿಲ್ದಾಣ, ರಸ್ತೆಗಳು ಸೇರಿದಂತೆ ಆಗದ ಕೆಲಸಗಳೇ ಇಲ್ಲಾ ಅನ್ನಬೇಕು, ಇದ್ದ ಅಧಿಕಾರದ ಅವಧಿಯಲ್ಲಿ ಮಾಡಿದ ಕೆಲಸ ಲೆಕ್ಕಕ್ಕೆ ಇಡಕ್ಕೆ ಕಷ್ಟ

ತಿಂಗಳಿಗೊಮ್ಮೆ ವಿವಿಧ ಅಭಿವೃದ್ದಿ ಕೆಲಸಗಳ ಉದ್ಘಾಟನಾ ಸಮಾರಂಭ ಮಾಡದೇ ಹೋದರೆ ರೇವಣ್ಣನಿಗೆ ನಿದ್ದೇ ಹತ್ತುತ್ತಿರಲಿಲ್ಲಾ ಕಾಣುತ್ತೇ. ಯಾರಿಗಾದರು ಸಾದ್ಯವಾದರೆ ಹೊಳೆ ನರಸೀಪುರಕ್ಕೆ ಹೋಗಿ ನೋಡಬೇಕು, ಆತ ಆವಾಗ ಮಾಡಿದ ಕೆಲಸಗಳಿಂದಲೇ ಹಾಸನದಲ್ಲಿ ದೇವೇಗೌಡರಿಗೆ ಹತ್ತಿರ ಹತ್ತಿರ ಮೂರು ಲಕ್ಷ ಲೀಡ್ ಬಂದಿದೆ , ಬೇರೆಲ್ಲಾ ಕಡೆ ಜೆಡಿಎಸ್ ಸೋತರು ಹಾಸನದಿಂದ ಏನೂ ಮಾಡಕ್ಕ ಆಗಿಲ್ಲಾ.....

ಇದೆಲ್ಲಾ ಬರಯಕ್ಕೆ ಕಾರಣ ಏನಿಲ್ಲಾ ಮೊನ್ನೆ ಮೊನ್ನೆ ತಾನೆ ರೇವಣ್ಣ ದೆಹಲಿಗೆ ಬಂದಿದ್ದರು, ಮಾತಿಗೆ ಸಿಕ್ಕಿದ್ದರು ಮಾತನಾಡುತ್ತಾ ಇರುವಾಗ ಆತ ಹೇಳಿದ್ದು "ಅಧಿಕಾರ ಇರೋವಾಗ ಕೆಲಸ ಮಾಡಿ ಕೆಚ್ಚಾಕಬೇಕು ಕಣಣ್ಣಾ... ಅಮೇಲೆ ಏನಾದರೂ ಆಗಲಿ"

ರೇವಣ್ಣನ ಮಾತು ಕೇಳಿ ನನಗೆ ಹೌದು ಅನಿಸಿತು... ಅದರ ಜೊತೆಗೆ ಅಧಿಕಾರ ಇಲ್ಲದೆ ಇರುವ ರೇವಣ್ಣನನ್ನ ಅರಗಿಸಿಕೊಳ್ಳೋಕೆ ಕಷ್ಟ ಆಯಿತು...

Thursday, June 18, 2009


ಅಸ್ಟ್ರೋ ಯೋಗಿ ಫಾರ್ ಮಕರ

ನಾವೇ ತೋಡಿಕೊಂಡ ಖೆಡ್ಡಾಕ್ಕೆ ಬೀಳುವುದೆಂದರೆ ಇದೇ ಇರಬಹುದು ನೋಡಿ ಮಾರಾಯರೆ, ಮಾಡಕ್ಕೆ ಏನೂ ಕೆಲಸ ಇಲ್ಲದಾಗ ಇಂಟರ್ ನೆಟ್ ಮುಂದೆ ಕುಳಿತು ಮಾಡವ ಸಾಮಾನ್ಯ ತಪ್ಪನ್ನ ನಾನೂ ಮಾಡಿದ್ದೇನೆ ಸುಮ್ಮ ನೇ ಇರಲಾರದೆ
ಇಂಟರ್ ನೆಟ್ ನಲ್ಲಿ ಮಕರ ರಾಶಿಯವನಾದ ನಾನು ನಿತ್ಯ ಭವಿಷ್ಯ ಏನೆಂದು ತಿಳಿದುಕೊಳ್ಳಲು ಆರಂಭ ಮಾಡಿ ಎರಡು ತಿಂಗಳಾಗುತ್ತಾ ಬರುತ್ತಿದೆ, ಸಾಮಾನ್ಯವಾಗಿ ವಾರ,ದಿನ, ತಿಥಿ, ನಕ್ಷತ್ರ, ಭವಿಷ್ಯ ದಲ್ಲಿ ನಂಬಿಕೆ ಇಡದ ನಾನು ಕಾಲಾತೀತ, ಸಮಯಾತೀತ, ದೇಶಾತೀತ
ಗಿರಲಿಕ್ಕೆ ಇಷ್ಟಪಡುತ್ತೇನೆ, ಯಾವ ಇಕ್ಕಳಕ್ಕೂ ಸಿಕ್ಕಿಕೊಳ್ಳದೆ ಸ್ವಚ್ಚಂದವಾಗಿ ಇರಲಿಕ್ಕೆ ಪ್ರಯತ್ನ ಮಾಡುತ್ತೇನೆ, ಆಗಿದ್ದೆಲ್ಲಾ ಒಳ್ಳೇದಕ್ಕೆ ಆಗಿದೆ, ಆಗಲಿರುವುದು ಒಳ್ಳೇದೆ ಆಗಲಿದೆ ಎಂಬೊ ಕೃಷ್ಣ ಪರಮಾತ್ಮನ ತತ್ವದಲ್ಲಿ ನಂಬಿಕೆ ಹೆಚ್ಚು....
ಆದರೆ ಈಗ ಆಗಿರುವುದೇ ಬೇರೆ ನೋಡಿ. ದಿನ ಭವಿಷ್ಯ ಅನ್ನೊ ವಿಚಿತ್ರ ಭ್ರಮೆಗೆ ಸಿಕ್ಕಿಕೊಂಡಿದ್ದೇನೆ. ಉಚಿತ ದಿನ ಭವಿಷ್ಯ ಹೆಸರಿನ ಅಸ್ಟ್ರೋ ಯೋಗಿ ಎಂಬ ಸೇವೆ ದಿನಾ ಬೆಳಿಗ್ಗೆ ನನ್ನ ಮೊಬೈಲಿಗೆ ಬರುತ್ತಾ ಇವೆ.... ನಿರೀಕ್ಷೆ ಮಾಡದೆ ಇದ್ದರೂ ಸಂದೇಶ ಮಾತ್ರ ಬಂದೆ ಬರುತ್ತದೆ ಮುಂಜಾನೆ ಎದ್ದರೆ ಮೊದಲು ತೆರೆದುಕೊಳ್ಳುವ ಸಂದೇಶವೇ ಅದು... ಆರಂಭದಲ್ಲಿ ಕುತೂಹಲಕ್ಕೆ ಅಂತ ತಿಳಿದುಕೊಳ್ಳಲು ಸಂದೇಶಗಳನ್ನ ಗಮನಿಸುತ್ತಿದ್ದೆ, ಅಸ್ಟ್ರೋ ಯೋಗಿಯ ಸೈಕಾಲಜಿ ಏನು ಅನ್ನೋದನ್ನು ತಿಳಕೊಳ್ಳೊದು ನನಗಿದ್ದ ಚಟ.
ಈ ದಿನ ನೀವು ನೀಲಿ ಬಣ್ಣದ ಬಟ್ಟೆ ಹಾಕಿಕೊಳ್ಳಿ ಇವತ್ತು ನಿಮ್ಮ ದಿನ ಸಂತೋಷದಿಂದ ಕೂಡಿರುತ್ತೆ, ಇವತ್ತು ಕೆಲಸ ಮಾಡುವ ದಿಕ್ಕು ಉತ್ತರಕ್ಕೆ ಇರಲಿ ಬೇರೆ ದಿಕ್ಕು ಅಶುಭ, ಇವತ್ತು ಕಚೇರಿಯಲ್ಲಿ ನಿಮ್ಮ ಬಾಸಿನ ಮನಸ್ಥಿತಿ ಸರಿಯಿಲ್ಲ ಎಚ್ಚರದಿಂದ ಇರಿ ಟ್ರೈ ಟು ಅವಾಯ್ಡ್ ಹಿಮ್...ನಿಮ್ಮ ಕುಟುಂಬದಿಂದ ಇವತ್ತು ನಿಮಗೆ ಶುಭ ಸಂದೇಶ ಬರಲಿದೆ...ಕೀಪ್ ಎ ಎಲ್ಲೋ ರೋಸ್ ಇನ್ ಯುವರ್ ಪಾಕೆಟ್....
ವ್ಯಾಪಾರದಲ್ಲಿ ಲಾಸ್ ಆಗೋ ಸಂಭವ ಇದೆ....ಈ ಧಾಟಿಯ ಸಂದೇಶಗಳು ವ್ಯಾಪಾರ, ಗೀಪಾರ ಮಾಡದ ನಾನು ಅಂತ ಸಂದೇಶಗಳನ್ನು ತಕ್ಷಣ ಡಿಲಿಟ್ ಮಾಡಿಬಿಡುತ್ತೇನೆ, ಇನ್ನು ಕೆಂಪು ಗುಲಾಬಿ ಇಟ್ಚುಕೊಂಡು ಕೆಲಸಕ್ಕೆ ಹೋಗೋಕೆ ಸಾಧ್ಯವಾಗೋ ವಿಷಯ ಅಲ್ಲ ಬಿಡಿ... ನಾನೇನು ಚಾಚಾ ನೆಹರೂನಾ..! ಆದರೆ ನಿಮ್ಮ ಬಾಸಿನ ತಲೆ ಕೆಟ್ಟಿದೆ ಹುಶಾರ್ ಅಂದರೆ ಸುಮ್ಮನೆ ಇರಕ್ಕಾಗುತ್ತಾ...ನೀವು ಇವತ್ತು ಫೇಮಸ್ ಆಗ್ತೀರಾ ಅನ್ನೋ ಸಂದೇಶಗಳನ್ ನೋಡಿದಾಗ ಒಂಥಾರ ತಲೆ ಬಿಸಿ ಆಗೋದಕ್ಕೆ ಶುರುವಾಯಿತು. ಅದೇ ದಿನ ಸಂಜೆ ನಾನು ಎಷ್ಟು ಫೇಮಸ್ ಆದೆ ಅಂತ ಯೋಚಿಸಿದೆ...ಆ ದಿನದ ಘಟನೆಗಳನ್ನ ,ಸಂದೇಶ ದೊಂದಿಗೆ ರಿಲೇಟ್ ಮಾಡಿಕೊಂಡು ತಾಳೆ ಹಾಕಿದೆ. ದರಿದ್ರದ್ದು ಕೆಲವು ಬಾರಿ ಸರಿಯಾಗೆ ಇದೆಯಲ್ಲ ಅನ್ನಿಸಲಿಕ್ಕೆ ಶುರುವಾಯಿತು...
ತಗಳಪ್ಪ ಎರಡೇ ತಿಂಗಳಲ್ಲಿ ಯಾವ ಸ್ಥಿತಿಗೆ ಬಂತು ಎಂದರೆ, ದಿನ ಭವಿಷ್ಯ ನಾನೆ ಹುಡುಕಿ ನೋಡಲು ಶುರುಮಾಡಿದ್ದೇನೆ.
ಇವತ್ತು ಬಂದ ಸಂದೇಶ ಏನಪ್ಪಾ ಅಂದರೆ ನಿಮಗೆ ಸಂಬಂಧಿಸಿದ ವಸ್ತುವೊಂದು ಕಳುವಾಗುವ ಸಾಧ್ಯತೆ ಇದೆ ನಿಮ್ಮ ವಸ್ತುಗಳ ಬಗ್ಗೆ ಕಾಳಜಿಯಿಂದಿರಿ, ಮನೆ, ಕಾರು,ಬೈಕ್ ಲಾಕ್ ಮಾಡಿದ್ದೀರಾ ಚಕ್ ಮಾಡಿಕೊಳ್ಳಿ ಬಿ ಕೇರ್ ಫುಲ್.... ಅನ್ನೋ ತರದ್ದು
ದಿನ ಏನೋ ಮುಗಿದು ಹೋಗಿದೆ. ಆದರೆ ಇಡೀ ದಿನ ಏನಾದರೂ ಕಳಕೊಳ್ಳೋ ಭಯ ಹಚ್ಚಿಕೊಂಡಿದ್ದೇ ಮಾರಾಯರೆ... ಪದೇ ಪದೆ ಎದ್ದು ಹೋಗಿ ಕಾರ್ ಲಾಕ್ ಮಾಡೋದು... ಮನೆ ಕೀ ಹಾಕಿದ್ದೇನಾ ಇಲ್ಲಾವಾ ಅಂತ ಸುಖಾಸುಮ್ಮನೆ ಕನ್ಫ್ಯೂಸ್ ಆಗ್ತಿದ್ದೆ.
ಸುಮ್ಮನೇ ಇರಕ್ಕೆ ಆಗದೆ ಕೆರಕೊಂಡು ಗಾಯ ಮಾಡಿಕೊಂಡರಂತಲ್ಲಾ ಹಾಗೆ...
ಈ "ದಿನ ಭವಿಷ್ಯ"ದ ಸುಳಿಯಿಂದ ಹೇಗಾದರೂ ತಪ್ಪಿಸಿಕೊಳ್ಳುವ ಯೋಚನೆ ಈಗ ಶುರುವಾಗಿದೆ...



Wednesday, June 17, 2009


ಟ್ರಾಫಿಕ್
ಜ್ಯಾಮ್ ನಲ್ಲಿ ಮುಗಿದು ಹೋದವರು...

ಕೋಲಾರದ ಕಡೆಯಿಂದ ಬೆಂಗಳೂರು ಕಡೆಗೆ ಬರುವ ನ್ಯಾಷನಲ್ ಹೈವೇ ನಾಲ್ಕನ್ನು ಘನ ಸರ್ಕಾರದವರು ನಾಲ್ಕು ಪಥದ ರಸ್ತೆಯನ್ನಾಗಿ ರೂಪಿಸುತ್ತಿದ್ದಾರೆ ಅಂತ ನನಗೆ ಗೊತ್ತಾಗಿದ್ದು ಮೊನ್ನೆ ನಾನು ಬೆಂಗಳೂರಿಗೆ ಬಂದಾಗ, ನನಗೆ ಯಾವಾಗಲೂ ಹೊಸ ರಸ್ತೆ ಆಗುತ್ತಿದೆ, ಇನ್ನೇನು ಆರಾಮಾಗಿ ಸಂಚರಿಸಬಹುದು ಅಂತ ಆದಾಗ ಒಂಥರಾ ಖುಷಿಯಾಗುತ್ತೆ, ಯಾವಾಗ ಸಿದ್ದ ಆಗುತ್ತೋ ಅಂತ ಕುತೂಹಲದಿಂದ ಕಾಯುತ್ತಿರುತ್ತೇನೆ, ಅದರಲ್ಲೂ ಬೆಂಗಳೂರಿಗೆ ಹೊಂದಿಕೊಂಡಂತೆ ಯಾವುದಾದರು ರಸ್ತೆ ಸಿದ್ದವಾದರೆ ಈ ಊರಿನ ಮಂದಿಗೆ ಆಗೋ ಖುಷಿನೇ ಬೇರೆ ಬಿಡಿ...

ಹೊಸ ರಸ್ತೆ ರೆಡಿ ಏನೋ ಆಗುತ್ತಿದೆ ಆದರೆ ಅದನ್ನು ನಿರ್ಮಿಸುತ್ತಿರರುವ ರೀತಿ ಮಾತ್ರ ರಕ್ಕಸವಾಗಿದೆ ಅಂತ ಮಾತ್ರ ಹೇಳಬಲ್ಲೆ ಕೆ.ಆರ್.ಪುರಂ ಬಿಟ್ಟ ನಂತರ ಸ್ವಲ್ಪದದರಲ್ಲೇ ಆರಂಭವಾಗಿರುವ ತುಂಡು ತುಂಡು ಕಾಮಗಾರಿಗಳು ಹಳೆ ರಸ್ತೆಯ ವಾಹನ ಸಂಚಾರವನ್ನೇ ದಿಕ್ಕೆಡಿಸಿಬಿಟ್ಟಿದೆ, ಕಾಮಗಾರಿ ನಡೆಯುವ ಒಂದು ಸ್ಥಳದಲ್ಲಿ ಚಾಲಕರಿಗೆ ಎಚ್ಚರಿಸುವ ಒಂದೇ ಒಂದು ಸೂಚನಾ ಪಲಕವಿಲ್ಲ, ಎಲ್ಲೆಂದರಲ್ಲಿ ಹಳೆ ರಸ್ತೆ ಯನ್ನ ದಿಕ್ಕು ಬದಲಾಸಲಾಗಿದೆ, ಮನುಷ್ಯರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದ ಮಂದಿ ಮಾತ್ರ ಹೀಗೆ ಮಾಡಬಹುದು ಅನಿಸುತ್ತೆ,
ನಾನೇ ಗ್ರಹಿಸಿದ ಲೆಕ್ಕದಲ್ಲಿ ಅ ರಸ್ತೆ ಕಾಮಗಾರಿ ಮುಗಿಯುವ ವರೆಗೆ ಕನಿಷ್ಠ ನೂರು ಮಂದಿ ರಸ್ತೆಯ ಹೆಸರಲ್ಲಿ ಬಲಿಯಾಗುವುದರಲ್ಲಿ ಅನುಮಾನವೇ ಬೇಡ ಅಂದುಕೊಂಡೆ.. ಇದಕ್ಕೆ ಇಂಬುಕೊಡುವಂತೆ ಅದಾಗಲೇ ಹತ್ತಕ್ಕೂ ಹೆಚ್ಚು ಜನ ಇದೇ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತಗಳಲ್ಲಿ ಸತ್ತಿದ್ದಾರಂತೆ. ಇನ್ನೂ ಜನ ಸಾಯುವುದರಲ್ಲಿ ಅನುಮಾನವೇ ಬೇಡ.

ಸರ್ಕಾರದ ಅಧಿಕಾರಿಗಳು ಇರುವ ನಿಯಮಗಳನ್ನು ಗುತ್ತಿಗೆದಾರರ ಮೇಲೆ ಯಾಕಾಗಿ ಹೇರುವುದಿಲ್ಲವೂ ನನಗೆ ಗೊತ್ತಾಗುವುದಿಲ್ಲ , ಇವರು ಮಾಡುವ ಪಾಪದಿಂದ ಮತ್ಯಾರೋ ಸಾಯುವುದನ್ನು ನೆನೆಸಿಕೊಂಡರೆ ನನಗೆ ಕಳವಳ ಆಗುತ್ತೆ ನಾನಂತೂ ಇಂತದೊಂದು ಪರಿಸ್ಥಿತಿಗೆ ಸಿಕ್ಕಿ, ಯಾರೋ ಮಾಡಿದ ತಪ್ಪಿನಿಂದ ಅನ್ಯಾಯವಾಗಿ ಸಾಯುವುದನ್ನು ಕಲ್ಪಿಸಿಕೊಳ್ಳಲಾರೆ....
ಹೀಗೆಲ್ಲ ಆಗೋದನ್ನ ನೋಡಿದಾಗ ಒಳಗೆ ಆಕ್ರೋಶ ಮೂಡುತ್ತೆ, ಹೀಗೆಲ್ಲಾ ಆಗೋಕೆ ಕಾರಣರಾದವರನ್ನ ಸಾಮೂಹಿಕವಾಗಿ ಗುಂಡಿಕ್ಕೆ ಕೊಲ್ಲ ಬೇಕು ಅನಿಸುತ್ತೆ , ಸ್ವಲ್ಪವೇ ಹೊತ್ತಿನಲ್ಲಿ ನನ್ನನ್ನು ಸೇರಿದಂತೆ ಎಲ್ಲಾರನ್ನ ಕೊಲ್ಲಬೇಕಾಗುತ್ತೆ ಅಂತಾ ಸುಮ್ಮನಾದೆ..

ಇನ್ನೂ ಒಂದು ಬೆಂಗಳೂರು ಮೆಟ್ರೋ ಹೆಸರಿನಲ್ಲಿ ಕಾಮಗಾರಿ ನಡೀತಾ ಇದೆ , ಅದಕ್ಕಾಗೇ ಬೆಂಗಳೂರನ್ನ
ಮತ್ತಷ್ಟು ನರಕ ಮಾಡಿದ್ದಾರೆ, ನಾನು ಗುರುತಿಸಿದಂತೆ ಮೆಟ್ರೋ ಕೆಲಸ ಎಲ್ಲೂ ಕೆಲಸ ವೇಗವಾಗಿ ನಡೀತಾ ಇಲ್ಲ, ಅಲ್ಚರ್ ನೇಟ್ ರಸ್ತೆಗಳು ಕೆಟ್ಟದಾಗಿವೆ. ಈ ಮೆಟ್ರೋ ಹೋಗುತ್ತಿರುವ ವೇಗ ನೋಡಿದರೆ ಇನ್ನು ಹತ್ತು ವರ್ಷಕ್ಕೂ ರೈಲು ಬಿಡುವ ಸಾದ್ಯತೆ ಇಲ್ಲ, ಬೆಂಗಳೂರಿನ ಜನ ತಮ್ಮ ಜೀವಮಾನದ ಬಹುಮುಖ್ಯ ಸಮಯವನ್ನ ಟ್ರಾಫಿಕ್ ನಲ್ಲಿ ಕಳೆಯಬೇಕಲ್ಲಾ... ಇರೋ ಐವತ್ತೋ ಚಿಲ್ಲರೆ ವರ್ಷದಲ್ಲಿ ಅರ್ದ ಬದುಕು ಟ್ರಾಪಿಕ್ ಜಾಮ್ ನಲ್ಲೇ ಕಳೆದು ಹೋಗುತ್ತಾಲ್ಲ ಅನ್ನೋದನ್ನ ನೆನೆಸಿಕೊಂಡರೆ ಎಲ್ಲಾದರೂ ಓಡಿ ಹೋಗೋಣ ಅಂತ ಅನಿಸುತ್ತದೆ.....

ಮೆಟ್ರೋ ವಿಷಯದಲ್ಲಾಗಲಿ, ರಸ್ತೆ ಸಂಚಾರದ ಬಗ್ಗೆ ಆಗಲಿ, ನಮ್ಮ ಸರ್ಕಾರ, ಮತ್ತು ನಾಗರೀಕರು
ದೆಹಲಿಯಿಂದ
ಸಾಕಷ್ಠು ಕಲಿಯಬೇಕಿದೆ ಅಂತ ಹೇಳಿ ಮುಗಿಸುತ್ತೇನೆ...
ಕಡೆ ಮಾತು...
ಗೆಳೆಯರೇ ಸದ್ಯಕ್ಕೆ ದೆಹಲಿಯಿಂದ ನನ್ನೂರು ಮಲ್ಲಸಂದ್ರಕ್ಕೆ ಬಂದಿದ್ದೇನೆ ಜುಲೈ ತಿಂಗಳ 5 ರವರೆಗೆ ಬೆಂಗಳೂರು, ಮೈಸೂರು, ಹಾಸನ, ಕೋಲಾರ, ಕೊಡಗು, ಹುಬ್ಬಳ್ಳಿ ನಗರಗಳ ನಡುವೆ ಗಿರಕಿ ಹೊಡೆಯುತ್ತಿರುತ್ತೇನೆ ಸಿಗೋಣ...


Friday, June 12, 2009



ಗೆಸ್ ವರ್ಕರ್ಸ್, ಅಲಿಯಾಸ್ ಜರ್ನಲಿಸ್ಟ್ಸ್.
ಬಹುತೇಕ ಚಾನಲ್ ಗಳು ಮಾಡಿದ ಲೋಕಸಭಾ ಚುನಾವಣಾ ಸಮೀಕ್ಷೆಗಳು ಸತ್ಯದ ಹತ್ತಿರಕ್ಕೂ ಬರದೇ ಹೋದವು ಅಲ್ವಾ, ಯಾವಾಗ ಚುನಾವಣೆ ನಡೆದರು ಅದೇ ಕತೆ, ಟಿ.ವಿ. ಚಾನಲ್ ನವರು ಏನೇನೋ ಸಮೀಕ್ಷೆ ಮಾಡಿ ರಾಜಕೀಯ ಆಸಕ್ತರ ತಲೆಕೆಡಿಸಿಬಿಡುತ್ತಾರೆ, ಈ ಭಾರಿ ಪುಣ್ಯಕ್ಕೆ ಚುನಾವಣೆ ಮತದಾನ ಮುಗಿಯುವ ಮುನ್ನ ಚುನಾವಣಾ ಸಮೀಕ್ಷೆಗಳನ್ನು ಬಿತ್ತರಿಸುವಂತೆ ಇರಲಿಲ್ಲ, ಆದರೂ ಕೆಲವು ಪತ್ರಿಕೆಗಳು, ಚಾನಲ್ಗಳು ಬೇರೆ ಬೇರೆ ಅಢ್ಡ ದಾರಿಗಳನ್ನು ಹಿಡಿದು ಯಾವ ಯಾವ ಪಕ್ಷಕ್ಕೆ ಎಷ್ಠು ಸೀಟು ಬರುತ್ತೆ ಅಂತ ಬರೆದು ತಮಗೆ ಬೇಕಾದ ಪಕ್ಷಗಳಿಗೆ ಹೆಚ್ಚಿನ ಅಂಕ ಕೊಟ್ಟುಕೊಂಡು ಬೀಗಿದರು, ಚಾನಲ್ ಗಳು ಹಾಗು ಪತ್ರಿಕೆಗಳ ನವರ ಈ ಆಟ ಏನೆಂದರೆ ತಮಗೆ ಅನಿಸಿದಂತೆ ಗೆಸ್ ವರ್ಕ್ ಮಾಡಿ ತಮ್ಮ ತಮ್ಮ ಬಾಸುಗಳನ್ನ ಮೆಚ್ಚಿಸೋದು...

ನನಗೆ ತಿಳಿದಿರುವಂತೆ ಬಹುತೇಕ ನ್ಯಾಷನಲ್ ಚಾನಲ್ಲಿನ ಓಡೆಯರು ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿದವರಾಗಿರುತ್ತಾರೆ ಇಲ್ಲ ಯಾವುದಾದರೂ ರಾಜಕೀಯ ಸಿದ್ದಾಂತಕ್ಕೆ ಬದ್ದರಾಗಿರಾಗಿರುತ್ತಾರೆ, ಈಗಾಗಲೇ ಜಾಹಿರಾಗಿರುವ ಸಂಗತಿ ಏನೆಂದರೇ ಷೇರು ಮಾರುಕಟ್ಟೆಯಲ್ಲಿರುವ ಚಾನಲ್ ಗಳ ಸಿಂಹ ಪಾಲು ಷೇರುಗಳು ಕೆಲ ಬುಂದಿವಂತ ರಾಜಕಾರಣಿಗಳು ಖರೀದಿಸಿ ನ್ಯಾಷನಲ್ ಚಾನಲ್ ಗಳನ್ನು ಹಿಂಬಾಗಿಲಿನಿಂದ ತಮ್ಮ ಮುಷ್ಠಿಯಲ್ಲಿ ಇಟ್ಚು ಕೊಂಡಿದ್ದಾರೆ. ಅವರಿಗೆ ಬೇಕಾದ ತಾಳಕ್ಕೆ ತಕ್ಕಂತೆ ಪತ್ರಕರ್ತರ ಬಳಿ ಬಜನೆ ಮಾಡಿಸುತ್ತಾರೆ. ಮೊನ್ನೆ ನಡೆದ ಚುನಾವಣೆಗಳಲ್ಲೂ ಇಂತಹ ಸಂಗತಿಗಳ ಡಾಳು ಡಾಳಾಗಿ ಕಾಣಿಸಿಕೊಂಡವು ಆದರೆ ಸಾಮಾನ್ಯ ವೀಕ್ಷಕರಿಗೆ ಇದೆಲ್ಲ ಅರ್ಥ ಆಗೋದೆ ಇಲ್ಲ....ಆ ರೀತಿ ಎಲ್ಲವನ್ನು ಮ್ಯಾನೇಜ್ ಮಾಡಲಾಗಿರುತ್ತೆ,

ಚುನಾವಣೆ ಸಮೀಕ್ಷೆ ಅನ್ನೊದು ಎಷ್ಠು ಗೊಂದಲಕಾರಿ ಆಗಿತ್ತು ಎಂದರೆ ಚುನಾವಣಾ ಪಲಿತಾಂಶಕ್ಕೂ ಮುನ್ನ ಸ್ವತ ಕಾಂಗ್ರೆಸ್ ಪಕ್ಷ ಮಾಡಿಕೊಂಡಿದ್ದ ಅಂತರಿಕ ಸಮೀಕ್ಷೆಯಲ್ಲಿ ಅದು ಗೆಲ್ಲಬಹುದಾಗಿದ್ದ ಸೀಟುಗಳ ಸಂಖ್ಯೆ ಕೇವಲ 167 , ಅದೇ ಬಿಜೆಪಿ ಅಂತರಿಕ ಸಮೀಕ್ಷೆ ಪ್ರಕಾರ ಅದು ಗೆಲ್ಲಬಹುದಾದ ಸೀಟುಗಳ ಸಂಖ್ಯೆ 207, ಆದರೆ ಚುನಾವಣೆ ಪಲಿತಾಂಶ ಬಂದ ಮೇಲೆ ಆಗಿದ್ದೇ ಬೇರೆ ಸ್ವತ ಕಾಂಗ್ರೆಸ್ ಗೆ ನಂಬಲೂ ಆಗದಷ್ಠು ಸಂಖ್ಯೆ ೨೦೬ ಬಂದಿತ್ತು, ಅದೆ ಬಿಜೆಪಿಗೆ ಆಘಾತಕಾರಿ ೧೧೬ ಸೀಟು.
ಚುನಾವಣೆಳಲ್ಲಿ ನೇರವಾಗಿ ತೊಡಗಿ ಗುದ್ದಾಡಿದ ರಾಜಕೀಯ ಪಕ್ಷಗಳಿಗೆ ಗೆಸ್ ಮಾಡಲು ಆಗದ್ದು ಈ ಚಾನಲ್ ದೇಶವ್ಯಾಪಿ ವಿವಿಧ ನಗರಗಳಲ್ಲಿ 15000 ಜನರನ್ನು ಸಮೀಕ್ಷೆಗೆ ಒಳಪಡಿಸಿದರೆ ಆಗುತ್ತಾ ಹೇಳಿ, ಅಷ್ಠಕ್ಕೂ ಇಂಡಿಯಾದ ಮತದಾರ ತಾನು ಯಾರಿಗೆ ಓಟು ಕೊಟ್ಟೆ ಅನ್ನೋದನ್ನು ಯಾರಿಗಾದರೂ ಹೇಳುತ್ತಾನಾ...

ದೆಹಲಿಯಲ್ಲಿ ಚುನಾವಣಾ ಪಲಿತಾಂಶ ಬರುವುದಕ್ಕೂ ಹಿಂದಿನ ದಿನ ಅಂದರೆ ಮೆ 15 ರಂದು ನಾನು ಕುತೂಹಲಕ್ಕೆ ಅಂತ ಎಲ್ಲಾ ರಾಜಕೀಯ ಪಕ್ಷಗಳ ಕಚೇರಿಗೆ ,ಅಡ್ವಾಣಿ ಮತ್ತು ಸೋನಿಯಾ ಗಾಂಧಿ ಮನೆ ಹತ್ತಿರ ಹೋಗಿ ಅಲ್ಲಿನ ಮೂಡ್ ಅರ್ಥ ಮಾಡಿಕೊಳ್ಳಲು ಯತ್ನಸಿದೆ, ವಿವಿಧ ಟಿ.ವಿ. ಚಾನಲ್ ಪತ್ರಿಕೆಯ ಗೆಳೆಯರ ಹತ್ತಿರ ಚರ್ಚೆ ಮಾಡಿದೆ, ತೆಲುಗು, ತಮಿಳು, ಆಂದ್ರ , ಹಿಂದಿ , ಓಡಿಸ್ಸಾ, ಇಂಗ್ಲಿಷ್ ಬಾಷೆ ಸೇರಿದಂತೆ ಸಿಕ್ಕ ಸಿಕ್ಕ ಮಾದ್ಯಮ ಸಂಬಂದಿ ಸ್ನೇಹಿತರನ್ನು ಕೇಳಿದೆ, ಸರ್ಕಾರ ಯಾರು ಮಾಡುತ್ತಾರೆ ಅನ್ನೊ ಪ್ರಶ್ನೆಯನ್ನ ಬಹುತೇಕ ಮಂದಿ ಕೇಳಿದೆ ಅವರೆಲ್ಲ ನನಗೆ ಹೇಳಿದ್ದು ಬಿಜೆಪಿ ನೇತೃತ್ವ ಸರ್ಕಾರ ಖಂಡಿತ ಬರುತ್ತೆ ಅಂತ, ಅವರ ಲೆಕ್ಕಾಚಾರದ ಪ್ರಕಾರ ಕಾಂಗ್ರೇಸ್ ಅಧಿಕಾರಕ್ಕೆ ಬರುವ ಹೊಳಹು ಯಾರಿಗೂ ಇರಲಿಲ್ಲ.
ನನ್ನ ಕಚೇರಿಯ ಡ್ರೈವರ್ ನಿಂದ ಹಿಡಿಡು ಲೈವ್ ವ್ಯಾನ್ ಆಪರೇಟ್ ಮಾಡುವ ಟೆಕ್ನೀಷಿಯನ್ ಗಳ ಬಹುತೇಕರ ಅಭಿಪ್ರಾಯ ಕೂಡ ಅದೇ ಅಗಿತ್ತು,

ಚುನಾವಣಾ ಪಲಿತಾಂಶ ಬಂದ ದಿನ ಬೆಳಿಗ್ಗೆ ಬಹುತೇಕ ಟಿವಿ ಚಾನಲ್ ಗಳ ಓ ಬಿ (ಸ್ಥಳದಿಂದಲೇ ಲೈವ್ ಮಾಡಲು ಬಳಸುವ ವಾಹನ)ಗಳು ಅಡ್ವಾಣಿ ಮನೆ ಹತ್ತಿರ, ಬಿಜೆಪಿ ಕಚೇರಿ ಬಳಿ ನಿಂತಿದ್ದವು ಯಾವಾಗ ಕಾಂಗ್ರೆಸ್ ನ ಮಾರಿ ಕುಣಿತ ಆರಂಭವಾಯಿತೋ ಮತ್ತೆ ಓಬಿ ವ್ಯಾನ್ ಗಳನ್ನು ಕಾಂಗ್ರೆಸ್ ಕಚೇರಿಗೆ ವರ್ಗಾಯಿಸಲಾಯಿತು.

ನನ್ನ ಗ್ರಹಿಕೆಯಲ್ಲಿ ಮಾದ್ಯಮದ ಮಂದಿಯ ಲೆಕ್ಕಾಚಾರಗಳೇ ಯಾವಾಗಲೂ ಉಲ್ಟಾ ಪಲ್ಟಾ ಆಗಿರುತ್ತವೆ., ಈಗಿನ ಮಾದ್ಯಮದ ಮಂದಿ ಸತ್ಯಕ್ಕೆ ಬದಲಾಗಿ ಯಾರ ಪರವಾಗೋ ವ್ಯಾಮೋಹಿಗಳಾಗಿರುತ್ತಾರೆ, ಇಲ್ಲಾ ಯಾರ ಬಗೆಯೋ ಅಸಹನೆಯಿಂದ ಸಿಟ್ಟಾಗಿರುತ್ತಾರೆ ಇಲ್ಲ ಗೆಸ್ ವರ್ಕ್ ಮಾಡುತ್ತಾ ಇರುತ್ತಾರೆ ಅದಕ್ಕೆ ಹೇಳಿದ್ದು ಗೆಸ್ ವರ್ಕರ್ಸ್....ಅಲಿಯಾಸ್ ಜರ್ನಲಿಸ್ಟ್ಸ್.......
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರದೇ ಹೋಗಿದ್ದಕ್ಕೆ ಸಿಟ್ಟಾಗಿದ್ದ ದೆಹಲಿಯ ಚಾನಲ್ ಒಂದರ ಹಿರಿಯ ಪತ್ರಕರ್ತನೊಬ್ಬ ಅತನ ಕಚೇರಿಯ ಚೇರುಗಳನ್ನು ಒದೆಯುತ್ತಾ ಸಿಟ್ಟು ತೋರಿಸುತ್ತಾ ಇದ್ದನಂತೆ ನೋಡಿ.

Wednesday, June 10, 2009

ಕೃಷ್ಣ, ಕೃಷ್ಣ, ಕೃಷ್ಣಾ......
ಗೆಳೆಯ ಈಶಕುಮಾರ್ ನನ್ನ ಆರ್ಕುಟ್ ಪ್ರೋಪೈಲ್ ನಲ್ಲಿ ಸಂದೇಶ ಕಳಿಸಿ ಕಳ್ಳನಿಗೆ ಪಿಳ್ಳೆನೆವ ಬೇಡಮ್ಮಾ ಏನಾದರು ಬರೆಯಮ್ಮಾ ಅಂತ ಅಧಿಕಾರಯುತ ಶೈಲಿಯಲ್ಲಿ ಹಂಗಿಸಿದ್ದಾನೆ ಒಂದು ತಿಂಗಳಾದರೂ ಏನೂ ಬರೆಯದೇ ಇದ್ದದ್ದಕ್ಕೆ ನಾನು ನೂರು ಮಾತು ಕೇಳಬೇಕಾಗಿದೆ,
ಅದೆಲ್ಲ ಇರಲಿ ಈಗ ಕೇಳಿ ದೆಹಲಿಯನ್ನ ಪ್ರತ್ರಿಕೋದ್ಯಮದ ಮೆಕ್ಕಾ ಅಂತಾ ಕರೀತಾರೆ ಲೋಕಸಭಾ ಚುನಾವಣೆ ಮತ್ತು ತದನಂತರ ನಾನು ರಾಜಕೀಯದ ಮೊಗಸಾಲೆಗಳಲ್ಲಿ ಕಂಡು ಕೇಳಿದ ಸಂಗತಿ ಹೇಳುತ್ತೇನೆ ಇಂಟರಸ್ಚಿಂಗ್ ಆಗಿದೆ, ಎಸ್.ಎಂ.ಕೃಷ್ಣ ಅವರನ್ನ ತಟಕ್ಕನೆ ದೆಹಲಿಗೆ ಕರೆಸಿ ವಿದೇಶಾಂಗ ಖಾತೆ ಸಚಿವರನ್ನಾಗಿ ಮಾಡಿಬಿಟ್ಟರು ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್
ದೆಹಲಿ ಪತ್ರಕರ್ತರಿಗೆ ಎಸ್,ಕೃಷ್ಣ ಗೊತ್ತು ಬಿಟ್ಚರೆ ಅವರ ಬಗ್ಗೆ ಹೆಚ್ಚೇನು ಗೊತ್ತಿಲ್ಲ ಹಾಗಾಗಿ ಅವರ ಬಗ್ಗೆ ಒಬ್ಬೋಬ್ಬರು ಒಂದೊಂದು ಗಾಸಿಪ್ ಗಳನ್ನು ಹಬ್ಬಿಸಿಬಿಟ್ಟಿದ್ದರು ತಮಗೆ ತಿಳಿದದ್ದು ಸತ್ಯ ಅಂತ ಬೀಗಿದರು, ಗಾಸಿಪ್ ಏನೆಂದರೆ ಎಸ್.ಎಂ. ಕೃಷ್ಣ ಭಯಂಕರ ಕುಡುಕ ಅಂತೆ, ಮಟ ಮಟ ಮದ್ಯಾನವೇ ಎಣ್ಣೆ ಹಾಕ್ಕೊಂಡೆ ಇರ್ತಾರಂತೆ ಅನ್ನೋದು, ನನಗೂ ಎರಡೂ ಮೂರು ಮಂದಿ ಹೌದಾ ಗೌಡಾಜೀ, ಎಸ್.ಎಂ. ಕೃಷ್ಣ ಎಣ್ಣೆ ಗಿರಾಕಿನಾ ಅಂತ ವಿದೇಶಾಂಗ ಖಾತೆ ರಿಪೋರ್ಟಿಂಗ್ ನಲ್ಲಿರುವ ಗೆಳೆಯರು ಕೇಳಿದರು ನನಗೂ ಎಲ್ಲಿಂದ ನಗಬೇಕೋ ಗೊತ್ತಾಗಲಿಲ್ಲ, ನಾನು ಅವರನ್ನಲ್ಲ ಕನ್ವಿನ್ಸ್ ಮಾಡಬೇಕಾಯಿತು. ಕೃಷ್ಣ ಅಂದರೇ ಸುಮ್ಮನೇ ಅಲ್ಲಪ್ಪಾ ತುಂಬಾ ಹೈ ಪ್ರೋಪೈಲು, ಇಂಗ್ಲೇಂಡಿನಿಂದ ಆ ಕಾಲದಲ್ಲೇ ಪದವಿ ಪಡೆದವರು, ಬೆಂಗಳೂರನ್ನ ಐಟಿ ಸಿಟಿ ಮಾಡಿದವರು, ಹಾಗೆಲ್ಲ ಯಾವಾಗಂದರಾವಾಗ ಗುಂಡು ಹಾಕೋ ತರದವರಲ್ಲ ಅಂದೆ...

ಇನ್ನೊಂದು ತಮಾಶೆ ನಡೆದಿದ್ದು ನಮ್ಮ ಆಪೀಸಿನಲ್ಲೇ ನಮ್ಮ ನ್ಯೂಸ್ ಕೋ ಆರ್ಡಿನೇಟರ್ ಶ್ರೀ ಹರ್ಷ, ಕೃಷ್ಣ ಅವರ ಕೂದಲು ಒರಜಿನಲ್ ಅದು ಟೋಬನ್ ಅಲ್ಲ ಅಂತ ನಮ್ಮ ಕೆಲವು ವರದಿಗಾರರೊಂದಿಗೆ ವಾಧಿಸಿ ಬಾಜಿ ಕಟ್ಟಿಬಿಟ್ಟಿದ್ದರು ಕಡೆಗೆ ನನ್ನ ಹತ್ರ ಕೇಸು ಬಂದಾಗ ನಾನು ಕೃಷ್ಣ ಅವರದ ಒರಜಿನಲ್ ಟೋಬನ್ ಬಿಟ್ಚರೆ ಏನೂ ಇಲ್ಲ ಅಂತ ಅವರಿಗಿದ್ದ ಗೊಂದಲ ನಿವಾರಿಸಿದೆ, ಇದೇ ವಿಷಯವನ್ನ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟು ಅವರ ಹತ್ತಿರ ಪ್ರಸ್ತಾಪಿಸಿದೆ ಆಗ ಅವರು ಹೇಳಿದರು ಕೃಷ್ಣ ಅವರ ಟೋಬನ್ ಬಗ್ಗೆ ಕರ್ನಾಟಕದ ಎಲ್ಲಾರಿಗೂ ಗೊತ್ತು ಕನ್ನಡದ ಎಲ್ಲಾ ಪತ್ರಿಕೆಗಳಲ್ಲೂ ಅದರ ಬಗ್ಗೆ ಬರೆದು ಜಾಹಿರಾಗಿದೆ ಆದರೆ ರಾಷ್ಠ್ರೀಯ ಮಟ್ಟದಲ್ಲಿ ಒಂದೇ ಬಾರಿಯಾದರೂ ಈ ಬಗ್ಗೆ ಸುದ್ಧಿಯಾಗಿಲ್ಲ, ಯಾವ ಸುದ್ಧಿ ಚಾನಲ್ಲಿಗೂ ವಸ್ತುವಾಗಿಲ್ಲ, ಆ ರೀತಿ ಅವರ ಟೋಬನ್ ಅನ್ನ ಮೈನ್ ಟೈನ್ ಮಾಡಿದ್ದಾರೆ ನೋಡಿ ಅಂದರು.

ಕೃಷ್ಣ ಕ್ಯಾಬಿನೆಟ್ ಸೇರಿ ಮಂತ್ರಿಯಾದ ಕೂಡಲೇ ದೆಹಲಿಯ ನ್ಯಾಷನಲ್ ಮೀಡಿಯಾದವರಿಗೆ ಅವರನ್ನು ಪರಿಚಯಮಾಡಿಕೊಡುವ ಪಸ್ಟ್ ಇಂಟರ್ ವೀವ್ ಮಾಡುವ ಜಿದ್ದಿಗೆ ಬಿದ್ದಿದ್ದರು ಆದರೆ ಈ ಹಿಂದೆ ಈ ಟಿ.ವಿ.ಯಲ್ಲಿದ್ದು ಈಗ ಸಿಎನ್ಎನ್ ಐಬಿನ್ ವರದಿಗಾರನಾಗಿರುವ ಕನ್ನಡಿಗ ಡಿ.ಪಿ. ಸತೀಶ್ ಗೆ ಅವಕಾಶ ಸಿಕ್ಕಿತ್ತು ಕರ್ನಾಟಕ ಭವನಕ್ಕೆ ಬಂದ ಕೃಷ್ಣ ಅವರನ್ನು ಕೈ ಹಿಡಿದುಕೊಂಡೇ ಕರೆದೊಯ್ದ ಅತ ಲೈವ್ ಚೇರ್ ನಲ್ಲಿ ಕೂರಿಸಿಬಿಟ್ಟ ಆ ಕಡೆ ಇದ್ದ ರಾಜ್ ದೀಪ್ ಸರ್ದೇಸಾಯಿ ಕೃಷ್ಣ ಅವರ ಮೊದಲ ಸಂದರ್ಷನ ಮಾಡಿದ ಬೇರೆ ಚಾನಲ್ ನವರಿಗೆ ನಿರಾಷೆ ಆಯಿತು.

ಅದೆಲ್ಲಕ್ಕೂ ಮೊದಲೇ ವಿಶೇಷವಾಗಿ ಕನ್ನಡದ ಚಾನಲ್ ಗಳಿಗೆ ಕೃಷ್ಣ ಸಂದರ್ಷನ ಕೊಟ್ಟಿದ್ದರು ಅದೂ ಅಲ್ಲದೆ ಮಾರನೇ ದಿನ ದೆಹಲಿಯಲ್ಲಿ ಕೆಲಸ ಮಾಡುವ ಕನ್ನಡದ ಪತ್ರಕರ್ತರನೆಲ್ಲಾ ಕರೆಸಿ ಕೃಷ್ಣ ಮಾತನಾಡಿ ಅರ್ಧಗಂಟೆ ಜೋಕ್ ಮಾಡಿ ನಗಿಸಿದ್ದರು ಕೃಷ್ಣ ಎಂತಾ ಸ್ವಬಾವದವರು ಅನ್ನೋದಕ್ಕೆ ಅವರೇ ಹೇಳಿದ ಘಟನೆ ಹೇಳಿ ಮುಗಿಸುತ್ತೇನೆ,
ಬೆಂಗಳೂರಿನಲ್ಲೇ ಇದ್ದ ಕೃಷ್ಣ ಅವರಿಗೆ ದೆಹಲಿಗೆ ದಿಡೀರ್ ಅಂತಾ ಬುಲಾವ್ ಬರುವ ಕೆಲ ನಿಮಿಶಗಳ ಹಿಂದಷ್ಠೆ ತಮ್ಮ ಟೆನಿಸ್ ಆಟದ ಜೊತೆಗಾರ ಗೆಳಯನಿಗೆ ಕರೆ ಮಾಡಿ ಮದ್ಯಾನ ನಾಲ್ಕು ಗಂಟೆಗೆ ಬಂದೇ ಬರುತ್ತೇನೆ ಅಂತ ಪ್ರಾಮೀಸ್ ಮಾಡಿದ್ದರಂತೆ, ದೆಹಲಿಯಿಂದ ಸೋನಿಯಾ ಮತ್ತು ಮನಮೋಹನ್ ಕರೆಮಾಡಿ ಕ್ಯಾಬಿನೆಟ್ ಸೇರಿಕೊಳ್ಳಿ ಅಂತ ಕರೆದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜೆಟ್ ಲೈಟ್ ವಿಮಾನವೊಂದನ್ನು ೧ ಗಂಟೆ ತಡ ಮಾಡಿಸಿದರಂತೆ...
ಡೆಲ್ಲಿಗೆ ಬಂದವರೇ ಸೀದಾ ಸೋನಿಯಾಗಾಂಧಿ ಅವರ ಮನೆಗೆ ಹೋದ ಅವರು ತಮಾಶೆಯಾಗಿಯೇ ಸೋನಿಯಾಗೆ ನನ್ನನ್ನು ರಾಷ್ಠ್ರಪತಿ ಭವನಕ್ಕೆ ಬರಕ್ಕೆ ಹೇಳಿದಾರೆ, ಓಥ್ ತಗೋಳ್ಳಕ್ಕೆ ಹೋಗ್ತಾ ಇದೇನೆ ಅಂದರಂತೆ, ಅಷ್ಟರಲ್ಲಿ ಸೋನಿಯಾ ಗಾಂಧಿ ಕೂಡ ನನ್ನನ್ನು ಕರೆದಿದ್ದಾರೆ ನಾನೂ ಬರ್ತಿನಿ ಅಂತ ಕೃಷ್ಣ ಹೇಳಿದ ರೀತಿ ಹೇಳಿ ನಕ್ಕರಂತೆ......

Tuesday, June 9, 2009

ಅರ್ದ ರಾತ್ರಿ ಯಲ್ಲಿ ಕುಂತು......
ಈಗ ದೆಹಲಿಯಲ್ಲಿ ಅರ್ಧರಾತ್ರಿ , ರಾತ್ರಿಯೆಲ್ಲಾ ಸೆಕೆ, ನನ್ನ ಪ್ರೀತಿಸುವ ಗೆಳೆಯರಿಗೆ ಬ್ಲಾಗ್ ಬಗ್ಗೆ ಸಬೂಬು ಕೊಟ್ಟು ಕೊಟ್ಟು ನನಗೆ ಬೇಜಾರಾಗಿ ಹೋಗಿದೆ, ಈಗ ನನ್ನ ಬಳಿ ಇಂಟರ್ನೆಟ್ ಸಮೇತ ನನ್ನ ಲ್ಯಾಪ್ ಟಾಪ್ ಇದೆ, ಇನ್ನು ಮುಂದೆಯಾದರೂ ಸರಿಯಾಗಿ ಬ್ಲಾಗ್ ಅಪ್ ಡೇಟ್ ಮಾಡುತ್ತೇನೆ, ಚುನಾವಣೆ ಕವರೇಜ್ ನಲ್ಲಿ ಬಾಳ ಬ್ಯುಸಿ ಇದ್ದೆ ಅನ್ನೋ ಕಾರಣ ಮಾತ್ರ ಹೇಳುತ್ತೇನೆ, ನೀವು ನನಗೆ ಬಯ್ಯುಬೇಕಾದರೆ ಇದೇ ಪೋಸ್ಟ್ ನಲ್ಲಿ ಕಾಮೆಂಟ್ ಮಾಡಿ ಬೈಯಿರಿ, ಬೇರೆಲ್ಲೂ ಬೇಡ ಪ್ಲೀಸ್.....