
ದೇಶದಲ್ಲಿರೋ ಎಪ್ಪತೈದು ಪರ್ಸೆಂಟು ರೈತರು ನಾವು 6 ತಿಂಗಳೂ ಏನೂ ಬೆಳಿಯೋದಿಲ್ಲ, ವೀ ಆರ್ ಬ್ಲೀಡಿಂಗ್, ವಿ ಆರ್ ಡೈಯಿಂಗ್, ವಿ ಡೋಂಟ್ ಕಾಲಿಟ್ ಯಾಸ್ ಸ್ಟ್ರೈಕ್. ಇಟ್ ಈಸ್ ಜಸ್ಟ್ ಟು ಕಾಲ್ ದ ಅಟೆನ್ ಶನ್ ಆಪ್ ಗೌರ್ನಮೆಂಟ್ ಅಂಥ,
ವಿಶ್ವಕ್ಕೆ ಅರ್ಥ ಆಗೋ ಆಂಗ್ಲ ಭಾಷೆಯಲ್ಲಿ ಹೇಳಿದ್ರೆ ಏನಾಗಬಹುದು ಅಂತ ನಂಗೆ ಯೋಚನೆ ಬಂದಿದೆ.
ಯಾಕಂದ್ರೆ ನಿನ್ನೆ ಕಿಂಗ್ ಫಿಷರ್ ನ ವಿಜಯ್ ಮಲ್ಯ, ಜಟ್ ಏರ್ ವೇಸ್ ನ ನರೇಶ್ ಗೋಯಲ್ ಮುಂಬೈನ ಪತ್ರಿಕಾಗೋಷ್ಠಿಯಲ್ಲಿ ಅದನ್ನೇ ಹೇಳುತ್ತಿದ್ದರು.ಖಾಸಗಿ ವಿಮಾನ ಯಾನ ಸಂಕಷ್ಠದಲ್ಲಿದೆ, ನಾವು ಸಾಯ್ತಾ ಇದ್ದೇವೆ, ದಿನಾ ಕೋಟಿ,ಕೋಟಿ ನಷ್ಟ ಆಗ್ತಾ ಇದೆ .ವಿಮಾನಕ್ಕೆ ಪೆಟ್ರೋಲ್ ಹಾಕಿಸಕ್ಕೆ ಕಾಸಿಲ್ಲ, ಬ್ಯಾಂಕ್ ನಲ್ಲಿ ಸಾಲ ತಂದ್ರೆ ಮಾತ್ರ ವಿಮಾನ ಓಡಿಸೋಕೆ ಇಲ್ಲಾ ಅಂದ್ರೆ ಆಗಲ್ಲ. ಕೇಂದ್ರ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಆದ್ರೂ ಪ್ಯಾಕೇಜ್ ಕೊಡಬೇಕು ಇಲ್ಲಾ ಅಂದ್ರೆ. ಆಗಸ್ಟ್ 18 ಕ್ಕೆ ದೇಶದಾದ್ಯಂತ ವಿಮಾನಯಾನ ನಿಲ್ಲಿಸುತ್ತೇವೆ, ಅಂತ ಓಕ್ಕೊರಲಿನಿಂದ ಸರ್ಕಾರಕ್ಕೆ ಧಮಕಿ ಹಾಕಿದ್ದಾರೆ.
ಅವರೆಲ್ಲ ಧಮಕಿ ಹಾಕಿದಂತೆ ದೇಶದ ರೈತರೂ ಯಾವತ್ತಾದರೂ ಧಮಕಿ ಹಾಕಿದ್ದಾರಾ. ಹಾಕಿದ್ರೆ ಏನು ಆಗುತ್ತೆ ಅಂತ ಯೋಚನೆ ಮಾಡ್ತಾ ಇದ್ದೇನೆ.
ನಮ್ಮ ರೈತರದು ಬರೀ ಬ್ಲೀಡಿಂಗ್ ಅಲ್ಲ. ಹುಟ್ಟಿದಾಗಲಿಂದಲೇ ಡೈಯಿಂಗ್, ಸಾಲ ಮಾಡದೇ ನಮ್ಮ ರೈತರು ಎಲ್ಲಿ ಬೆಳೆಹಾಕಿದ್ದಾರೆ ಹೇಳಿ, ನಮ್ಮ ಜೀವನವೇ ಸಾಲ, ಅವ ಸತ್ತ ಮೇಲೆ ಮಕ್ಕಳ ಮೇಲೆ ಸಾಲ, ಸಾಲವೇ ನಮ್ಮ ಬದುಕು, ಸಾಲವೇ ಜೀವನ ಸಾಕ್ಷಾತ್ಕಾರ.
ಇಲ್ಲಿ ಡೆಲ್ಲಿಗೆ ಆಗಾಗ ರೈತರು ನಿಯೋಗ ಮಾಡಿಕೊಂಡು ಬರುತ್ತಾ ಇರುತ್ತಾರೆ, ನಮಗೆ ಪರಿಹಾರ ಕೊಡಿ. ಅಡಿಕೆ ಬೆಲೆ ಕುಸಿದಿದೆ ಬೇರೇ ದೇಶದಿಂದ ಆಮದು ಮಾಡಿಕೊಳ್ಳಬೇಡಿ. ಕೊಬ್ಬರಿಗೆ ಕನಿಷ್ಠ (ಧರ್ಮದ) ಬೆಲೆಕೊಡಿ, ನಮ್ಮ ಷುಗರ್ ಪ್ಯಾಕ್ಟರಿಗಳು ಸಾಯ್ತ ಇವೆ ಸಹಾಯಹಸ್ತಕೊಡಿ. ಕಾಫಿಯನ್ನ ಯಾರೂ ಕೇಳ್ತಾ ಇಲ್ಲ, ನೆರವುಕೊಡಿ ಅಂತ. ಬಂದವರು ತಮಗೆ ಗೊತ್ತಿರುವ ಮಂತ್ರಿಗಳನ್ನು ಹಿಡಿದುಕೊಂಡು, ಸಂಭಂದ ಪಟ್ಟ ಮಂತ್ರಿಗಳನ್ನ ಭೇಟಿಯಾಗಿ ಮನವಿ ಕೊಟ್ಟು ಬರುತ್ತಾರೆ.
ಮಂತ್ರಿಯನ್ನು ಭೇಟಿ ಮಾಡಿ ತಮ್ಮ ಸಂಕಷ್ಠ ಹೇಳಿಕೊಂಡಿದ್ದಕ್ಕೆ, ಆತ ಅದನ್ನು ಸಾವಾಕಾಶವಾಗಿ ಕೇಳಿದ್ದಕ್ಕೆ, ನಮ್ಮ ರೈತ ಮುಖಂಡರು ಅತೀವ ಸಂತೋಷದಿಂದ ಬೀಗುತ್ತಾರೆ. ಮಾದ್ಯಮದವರನ್ನ ಕರೆದು ಹೇಳುತ್ತಾರೆ, ನಮಗೆ ಭರವಸೆ ಸಿಕ್ಕಿದೆ, ಮಂತ್ರಿಗಳು ಇನ್ನೆರಡು ವಾರಗಳಲ್ಲಿ ಸಮಸ್ಯೆ ಪರಿಹರಿಸುತ್ತಾರಂತೆ, ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮ ಜರುಗಿಸುತ್ತಾರಂತೆ. ಅದು ಟಿ.ವಿ ಮತ್ತು ಪೇಪರಿನಲ್ಲಿ ಒಂದು ಸಣ್ಣ ಸುದ್ದಿಯಾಗಿ ಬರುತ್ತೆ.
ಕೆಲವು ತಿಂಗಳ ನಂತರ ಅದೇ ನಿಯೋಗದ ರೈತರು ಮತ್ತೆ ರೈಲು ಹತ್ತಿ ಮತ್ತೆ ಡೆಲ್ಲಿಗೆ ಬರುತ್ತಾರೆ, ಅದೇ ಸಮಸ್ಯೆ, ಅದೇ ಮಂತ್ರಿ, ಅದೇ ಭರವಸೆ, ಮತ್ತು ಅದೇ ಮಾದ್ಯಮ ಮಿತ್ರರಿಗೆ ಪೋನು ಬರುತ್ತೆ ಸಾರ್ ಕರ್ನಾಟಕ ಭವನದಲ್ಲಿ ಪ್ರೆಸ್ ಮೀಟ್ ಮಾಡ್ತೀವಿ ಅಂತ.ನಾವು ಹೋಗುತ್ತೇವೆ, ರೈತಮುಖಂಡರೂ ಹಳೇದನ್ನೇ ಹೆಳುತ್ತಾರೆ.
ಆದರೆ ಅವರು ಕೇಂದ್ರ ಮಂತ್ರಿಗೇ ಆಗಲಿ, ಸರ್ಕಾರಕ್ಕೆ ಆಗಲಿ ಧಮಕಿ ಹಾಕಿದ್ದೇವೆ ಸಾರ್ ವ್ಯವಸಾಯ ಮಾಡೋದನ್ನ ನಿಲ್ಲಿಸ್ತೇವೆ ಅಂತ ಹೇಳಲ್ಲ.
ಆದೇ ಸಂಘಟಿತವಾಗಿರುವ ಈ ವಿಮಾನ ಕಂಪನಿಗಳು, ತಮ್ಮ ತೆವಲಿಗಾಗಿ, ಲಾಭಕ್ಕಾಗಿ ಕಂಪನಿಗಳನ್ನು ತೆಗೆದಿವೆ. ಒಂದಲ್ಲಾ ಹತ್ತು ಬಿಜಿನೆಸ್ ನಲ್ಲಿ ಹಣ ತೊಡಗಿಸಿದ್ದಾರೆ. ಅಲ್ಲಿನ ನೌಕರರಿಗೆ ಲಕ್ಷಾಂತರ ರೂಪಾಯಿ ಸಂಭಳ ಕೊಡ್ತಾರೆ, ತಮ್ಮ ವಿಮಾನಗಳಲ್ಲಿ ಅತಿ ಸುಂದರಿಯರೇ ಬೇಕಂತ ಕಂಪನಿಯ ಒಡೆಯನೇ ಪರ್ಸನಲ್ ಆಗಿ ಏರ್ ಹೋಸ್ಟಸ್ ಆಯ್ಕೆ ಮಾಡಿಕೊಳ್ಳುತ್ತಾನೆ. ಕುದುರೆ ರೇಸು, ಕಾರ್ ರೇಸು, ಕ್ರಿಕೆಟ್ ಟೀಮು, ಕತ್ರೀನ ಕೈಪು, ಅಂತೆಲ್ಲ ಯಾವ್ಯಾವುದೋ ತಲೆಕೆಟ್ಟ ಐಡಿಯಾಗಳಲ್ಲೆ ಹಣ ತೊಡಗಿಸುತ್ತಾರೆ. ಲೋಕದ ಜನ ಇವರನ್ನ ಗ್ರೇಟು ಸಾರ್ ಗ್ರೇಟು ಅಂತಾರೆ, ಜೊತೆಗೆ ಇಂಟರ್ ನ್ಯಾಷನಲ್ ವಲಯದಲ್ಲಿ ಅವರ ಹೆಸರು ರಾರಾಜಿಸುತ್ತೆ.
ಅಲ್ಲಾ ರೀ, ಲಾಭ ಬಂದಾಗ ಯಾರಿಗಾದ್ರೂ ಈ ಜನ ಹಂಚಿದ್ದಾರಾ, ಅಥವಾ ದೇಶದ ಕೃಷಿ ಕ್ಷೇತ್ರ ಸಂಕಷ್ಠದಲ್ಲಿ ಇದೆಯಪ್ಪಾ ಅವರ ನೆರವಿಗೆ ದಾವಿಸೋಣ ಅಂದಿದ್ದಾರಾ...
ಆದರೆ ಈಗ ನಾವು ಕಟ್ಟಿದ ತೆರಿಗೆ ಹಣದಿಂದ ಇವರನ್ನು ರಕ್ಷಿಸಬೇಕಂತೆ, ಬ್ಲೀಡಿಂಗ್ ಆಗ್ತಾ ಇದೆಯಂತೆ, ಸರ್ಕಾರ ಅದನ್ನ ಒರೆಸಬೇಕಂತೆ, ಇದನ್ನೆಲ್ಲ ಕೇಳಿದ್ರೇನೆ ತಲೆಕೆಡುತ್ತೆ, ಲಾಸ್ ಆದ್ರೇ ಬಾಗಿಲು ಹಾಕಲಿ, ಅವರಪ್ಪನ ಹಣನಾ ಅಡ ಇಡಲಿ.
ಇಲ್ಲಾ, ನಮ್ಮ ರೈತರ ಕಡೇ ಅಸ್ತ್ರ ಇದೆಯಲ್ಲಾ 'ಆತ್ಮ ಹತ್ಯೆ' ಅದನ್ನ ಮಾಡಿಕೊಳ್ಳಲಿ ಅಲ್ವಾ...
ವ್ಯವಸಾಯದ ಹಿನ್ನೆಲೆಯಲ್ಲಿ ಬಂದ ನಮ್ಮತವರಿಗೆ ಅದೇ ವ್ಯವಸಾಯದಲ್ಲಿ ಲಾಭ ಇದ್ದಿದ್ದರೇ ಈ ಖಾಸಗೀ ಕಂಪನಿಗಳಲ್ಲಿ ಯಾಕಾಗಿ ಕೂಲಿ ಮಾಡ್ತಾ ಇದ್ದೆವು ಅಂತ ಅನ್ನಿಸುತ್ತೆ. ಯಾಕೋ ಇವರ ಹೇಳಿಕೆಗಳನ್ನೆಲ್ಲಾ ಕೇಳಿಕೆ ಮನಸು ರೋಸಿಹೊಗಿದ್ದಕ್ಕೆ ಇದನ್ನೆಲ್ಲಾ ಬರೀಬೇಕಾಯ್ತು.
ಸರ್ಕಾರ ಏನು ಮಾಡುತ್ತೋ ನೊಡೋಣ.