Sunday, July 12, 2009

ಪತ್ರಕರ್ತರನ್ನ ಬೆಳಿಸ್ತಾ ಇದ್ದೀನಿ, ಅದಕ್ಕಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನಿ....


ರಾಜಕೀಯ ಅನ್ನೋದು ನಿಜಕ್ಕೂ ರೋಚಕ ಸಂಗತಿಗಳ ಗಣಿ ಇದ್ದ ಹಾಗೆ, ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಅಂತ ರಾಜಕೀಯದ ಬಗ್ಗೆ ಜೋಕ್ ಮಾಡೋ ಮಂದಿಗೂ ರಾಜಕೀಯದ ಬಗ್ಗೆ ಅಪಾರ ಆಸಕ್ತಿ ಇರತ್ತೆ, ಚಾನ್ಸ್ ಸಿಕ್ಕರೆ ನೋಡೇ ಬಿಡೋಣ ಅಂತ ಒಳಗೋಳಗೆ ಅಂದುಕೊಳ್ತಾ ಇರ್ತಾರೆ.
ಸಲೂನಿನಲ್ಲಿ ಕೆಲಸ ಮಾಡುವ ಕ್ಷೌರಿಕ ಕೂಡ ರಾಜಕೀಯ ವ್ಯಕ್ತಿಯೊಬ್ಬನಿಗೆ ಕ್ಷೌರ ಮಾಡುತ್ತಾ ತನ್ನ ಕುಳಿತ ಮನುಷ್ಯ ಎಂತಾ ದಡ್ಡನನ್ಮಗ ಇವನೂ ರಾಜಕಾರಣಿ ಆಗಿದ್ದಾನಲ್ಲಾ ಅಂತ ಮನಸೊಳಗೆ ಅಂದುಕೊಳ್ಳಲಿಕ್ಕೆ ಸಾಕು. ನನಗೂ ಮೂರ್ಖ ರಾಜಕಾರಣಿಗಳ ಜೊತೆ ಬೆರೆಯೋ ಅವಕಾಶ ಸಿಕ್ಕಾಗಲೆಲ್ಲ ಹಾಗೆ ಅನಿಸಿದೆ, ಯಾಕಂದರೆ ಇಂಡಿಯೂದ ಡೆಮಾಕ್ರಸಿಯಲ್ಲಿ ಎಂತೆಂತವರೋ ಪಾರ್ಲಿಮೆಂಟಿಗೆ ಬಂದು ಹೋಗಿದ್ದಾರೆ.

ರಾಜಕೀಯಕೀಯಕ್ಕೆ ಬರೋಕೆ ಇಂತದೇ ಕ್ವಾಲಿಪಿಕೇಶನ್ನು ಅಂತ ಇಲ್ಲವಲ್ಲಾ ಯಾರ್ಯಾರೋ ಇಲ್ಲಿ ಬಂದು ಹೋಗಿದ್ದಾರೆ. ಮೊನ್ನೆ ಕನ್ನಡಿಗ, ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಬರೆದಿರುವ 'what ails Indian parliament' ಅನ್ನೋ ಪುಸ್ತಕ ಓದ್ತಾ ಇದ್ದೆ, ಅದರಲ್ಲಿ 11 ನೇ ಲೋಕಸಬೆಯಲ್ಲಿ ಇದ್ದ ಕೆಲವು ಪೆಕ್ಯುಲಿಯರ್ ಎಂಪಿಗಳ ಬಗ್ಗೆ ಬರೆದಿದ್ದರು, ಅದರಲ್ಲಿ ಉತ್ತರಪ್ರದೇಶದ ಎಂಪಿ ಒಬ್ಬ ತನ್ನ ಒಲಿಸಿಕೊಳ್ಳೋಕ್ಕೆ ಹಿಡಿದಿದ್ದ ದಾರಿಯನ್ನ ವಿವರಿಸಿದ್ದರು, ಆ ಎಂಪಿಯ ಹೆಸರು ನನಗೆ ಮರೆತುಹೋಗಿದೆ, ಆ ಮಹಾಶಯನ ಪ್ರಮುಖ ಕೆಲಸ ಏನಪ್ಪಾ ಅಂದರೆ ತನ್ನ ಕ್ಷೇತ್ರದಲ್ಲಿ ಸತ್ತವರ ಬೂದಿಯನ್ನ ಪವಿತ್ರ ಗಂಗಾ ನದಿಯಲ್ಲಿ ಬಿಟ್ಟು ಬರೋದು. ಆತ ಈ ಕೆಲಸವನ್ನ ಎಷ್ಟು ಸಿರಿಯಸ್ಸಾಗಿ ಮಾಡುತ್ತಿದ್ದ ಅಂದರೆ ನಾನು ಡೆಲ್ಲಿಯಿಂದ ವಾಪಸ್ಸು ಬಂದಿದ್ದೆನೇ ಮುಂದಿನ ವಾರ ಕಾಶಿಗೆ ಹೋಗುತ್ತಿದ್ದೇನೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಸತ್ತವರ ಮನೆಯವರು ಪಿಂಡದ ಮಡಿಕೆಯನ್ನ ಇಂತಾ ದಿನದ ಒಳಗೆ ನನಗೆ ತಲುಪಿಸಿ ಅಂತ ನ್ಯೂಸ್ ಪೇಪರಿನಲ್ಲಿ ಜಾಹಿರಾತು ಹೊರಡಿಸುತ್ತಿದ್ದನಂತೆ, ವಾಪಸ್ಸು ಬಂದಾಗ ಮತ್ತೆ ಜಾಹಿರಾತು ನೀಡಿ ಕಾಶಿಯಿಂದ ವಾಪ್ಪಸ್ಸು ಬಂದಿದ್ದೇನೆ ಗಂಗಾಜಲವನ್ನ ವಾಪಸ್ಸು ಒಯ್ಯಿರಿ ಅಂತ ಮಾಹಿತಿ ನೀಡುತ್ತಿದ್ದನಂತೆ.... ಆತನ ಈ ಪವಿತ್ರ ಕಾರ್ಯವನ್ನ ಮೆಚ್ಚಿ ಜನ ಅವನನ್ನ ಎರಡೆರಡು ಬಾರಿ ಪಾರ್ಲಿಮೆಂಟಿಗೆ ಆಯ್ಕೆ ಮಾಡಿದ್ದರಂತೆ...

ಈಗ ನೆನಪಾಯಿತು ನೋಡಿ ಕಳೆದ ವರ್ಷ ಮೂಲೂರಿನ ಶಾಸಕ ಹಾಗು ಹಾಗಿನ ಮುಜರಾಯಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ಶಿವರಾತ್ರಿಗೆಂದು ಗಂಗಾಜಲವನ್ನ ತರಿಸಿ ರಾಜ್ಯದ ಎಲ್ಲಾ ದೇವಾಲಯಗಳಿಗೂ ನೀಡಿ ರಾಜ್ಯದ ಜನತೆಯ ಕೃಪೆಗೆ ಪಾತ್ರರಾಗಿದ್ದರಲ್ಲಾ. ಇದೆ ಶೆಟ್ಟಿ ಚುನಾವಣೆಗಳಲ್ಲಿ ಗೆಲ್ಲೂದು ಹೇಗಪ್ಪಾ ಅಂದರೆ ಕ್ಷೇತ್ರದ ಹಳ್ಳಿಯವರನ್ನ ತಂಡೋಪತಂಡವಾಗಿ ಪವಿತ್ರ ಕ್ಷೇತ್ರಗಳಿಗೆ ಪ್ರವಾಸಕ್ಕೆ ಸ್ವಂತ ಖರ್ಚಿನಲ್ಲಿ ಕಳೆಸುತ್ತಾರೆ. ಮತದಾರರಿಗೆ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿಸಿದ ಪುಣ್ಯಾತ್ಮನಿಗೆ ಪುಟಗೋಸಿ ಒಂದು ಓಟು ಕೊಡೋದು ಯಾವ ಲೆಕ್ಕದ ಮಾತು ಅಲ್ಲವಾ...
ಮನೆಗೆ ಬಂದವರಿಗೆಲ್ಲಾ ತಿರುಪತಿ ಲಾಡು ತಿನ್ನಿಸೋದೇ ಅಲ್ಲ ಆತನನ್ನ ಭೇಟಿ ಮಾಡೋಕೆ ಹೋದ ಪತ್ರಕರ್ತರಿಗೂ ತಿರುಪತಿ ಲಾಡು ತಿನ್ನಿಸುವುದನ್ನ ನಾನೇ ನೋಡಿದ್ದೇನೆ.

ಮದ್ದೂರು ಕ್ಷೇತ್ರದಲ್ಲಿ ಶಾಸಕರಾಗಿ ಕಳೆದು ವರ್ಷ ತೀರಿಕೊಂಡರಲ್ಲಾ ಸಿದ್ದರಾಜು, ಅವರ ಚುನಾವಣಾ ಟ್ರೇಡ್ ಸೀಕ್ರೇಟ್ ಏನಪ್ಪಾ ಅಂದರೆ ಅವರ ಕ್ಷೇತ್ರದಲ್ಲಿ ಯಾರಾದರೂ ತೀರಿಕೊಂಡರೆ ಸಾಕು, ದಿಡೀರ್ ಅಂತ ಹೋಗಿ ಕಣ್ಣೀರಾಕಿಬಿಡೋದು ಜೊತೆಗೆ ಸತ್ತವನನ್ನ ಧಪನ್ ಮಾಡುವರೆಗೆ ಜೊತೆಗಿದ್ದು ಶವಯಾತ್ರೆಯಲ್ಲಿ ಹೆಗಲು ಕೊಟ್ಟು ಬಿಡೋದು. ಸತ್ತಮನೆಯ ನೋವಿಗೆ ಮಿಡಿವ ಶಾಸಕನಿಗಿಂತಾ ಜನಪ್ರತಿನಿದಿ ಬೇಕಾ ನೀವೆ ಹೇಳಿ.

ಅದೇ ಮೊನ್ನೆ ತಾನೆ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾದರಲ್ಲಾ ಸೋಮಣ್ಣ ಅವರು ಮಂತ್ರಿಯಾದ ತಕ್ಷಣ 20,000 ಸಾವಿರ ಜನಕ್ಕೆ ಬಾಡೂಟ ಹಾಕಿಸಿದರಂತೆ ಯಾಕ್ರಪ್ಪಾ ಅಂತ ಸೋಮಣ್ಣನ ಅನುಯಾಯಿಯೊಬ್ಬನನ್ನ ವಿಚಾರಿಸಿದೆ, ಅದಕ್ಕೆ ಅವ ಹೇಳಿದ್ದೇನು ಗೊತ್ತೇ ನೋಡಿ ಸಾರ್ ಗೋವಿಂದರಾಜನಗರದಲ್ಲಿ ಇರೋದೆ ಕುರುಬ್ರೂ, ವಕ್ಕಲಿಗ್ರೂ ಅವರಿಗೆ ಬಾಡೂಟ ಹಾಕಿಸಿದ್ರೆ ಖುಷ್ ಆಗ್ತಾರೆ ಓಟೂ ಕೊಡ್ತಾರೆ, ನಂ ಸೋಮಣ್ಣನಿಗೆ ಜನನಾ ಹೆಂಗೆ ಇಟ್ಕಬೇಕು ಅಂತ ಗೊತ್ತೂ ಸಾರ್ ಮತ್ತೆ ಗೆಲ್ಲೇ ಗೆಲ್ತಿವಿ ಸಾರ್ ಅಂದ, ನಾನು ಬೆರಗಾದೆ...
ರಾಜಕಾರಣಿಗಳ ಗಿಮ್ಮಿಕ್ಕುಗಳೇ ಇಂತವು ಯಾರು ಮದುಗೆ ಕರೆದರೂ ಹೋಗೋದು, ನಾಮಕರಣ, ಹುಟ್ಟುಹಬ್ಬ, ತಿಥಿ, ಸಾವು, ಕಡೆಗೆ ಸೀಮಂತ, ಒಸಕೆ ಗಳಿಗೆಲ್ಲಾ ಹೋದರೆ ಜನ ಓಟ್ ಹಾಕ್ತಾರಂತೆ ಇಲ್ಲಾ ಅಂದರೆ ಜನ ಕೋಪಿಸಿಕೊಳ್ತಾರಂತೆ.. ಸದ್ಯ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿರುವ ದೊಡ್ಡ ಇಲಾಖೆಯ ಮಂತ್ರಿ ಯೊಬ್ಬರು ಬೇಕಾದರೆ ಪಾರ್ಲಿಮೆಂಟ್ ಸೆಷನ್ ಬೇಕಾದರೂ ತಪ್ಪಿಸಿಕೊಂಡಾರು, ಯಾರದಾದರೂ ಮದುವೆಗೆ ಕರೆದಿದ್ದರೆ ಬಿಲ್ ಕುಲ್ ತಪ್ಪಿಸಿಕೊಳ್ಳುವುದಿಲ್ಲ ಅಸ್ಟರ ಮಟ್ಟಿಗೆ ಅವರು ಕ್ಷೇತ್ರದ ಜನತೆಯೊಂದಿಗೆ ಬೆರೆತುಹೋಗಿದ್ದಾರೆ.

ಮೊನ್ನೆ ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಿರೋ ವರ್ತೂರು ಪ್ರಕಾಶ್ ದೆಹಲಿಗೆ ಬಂದಿದ್ದರು ಆ ಮನುಷ್ಯ ವಿಚಿತ್ರ ಅಂತ ಎಲ್ಲಾರಿಗೂ ಗೊತ್ತು, ಸುಮ್ಮನೆ ಕುತೂಹಲಕ್ಕೆ ಅಂತ ಮಾತಿಗೆ ಎಳೆದೆ . ದೆಹಲಿಯ ಕರ್ನಾಟಕ ಭವನದ ಕ್ಯಾಂಟೀನಿನಲ್ಲಿ ಭರ್ಜರಿ ಕುರಿಗಳ ತಲೆ ಮಾಂಸ ತಾನೇ ಆರ್ಡರ್ ಮಾಡಿಸಿಕೊಂಡು ಸಮಾ ತಿನ್ನುತ್ತಾ ಕುಳಿತಿದ್ದ , ನಮಸ್ಕಾರ ಸಾರ್ ಅಂತ ಪರಿಚಯ ಮಾಡಿಕೊಂಡೆ, ಏನ್ ಗುರು ನೀನು ಓದಿದ್ದು ಅಂತ ಕೇಳಿದ, ನಾನು ಮಾಸ್ಟರ್ ಡಿಗ್ರಿ ಮಾಡಿದ್ದೀನಿ ಸಾರ್, ಮಾಸ್ ಕಮ್ಯುನಿಕೇಷನ್ ಜರ್ನಲಿಸಂ ಸಾರ್ ಅಂದೆ. ಆತ ಹೌದಾ... ಅಂತ ಸುಮ್ಮನಿರದೇ 'ಬಿಎ ಗಿಯೇ' ಮಾಡಿಲ್ವಾ ಅಂದ. ನಂಗೆ ನಗು ಬಂದರೂ ತೋರಿಸಿಕೊಳ್ಳದೇ ಅದನ್ನೂ ಮಾಡಿದ್ದೀನಿ ಸಾರ್ ಅಂದೆ......ಹಾಗೆ ಮುಂದುವರೆದು ಕೆಆರ್ ಪುರಂ ಕಾಲೇಜಿನಲ್ಲಿ ನಿಮ್ಮಂತಾ ಜರ್ನಲಿಸ್ಟುಗಳನ್ನೆಲ್ಲಾ ಓದಿಸ್ತಾ ಇದ್ದೀನಿ, ಅದಕ್ಕೆ ಅಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನೆ, ಮುಂದಿನ ವರ್ಷದಿಂದ ಅವರೆಲ್ಲಾ ಟಿವಿ, ಪೇಪರಿನಲ್ಲಿ ಕೆಲಸಕ್ಕೆ ಸೇರ್ತಾರೆ ನನನ್ನ ಪುಲ್ ಟಿವಿಯಲ್ಲಿ ತೋರಿಸ್ತಾರೆ ಅಂದ.
ನಾನು ಯಾರಪ್ಪಾ ಅವರು ಜರ್ನಲಿಂಸಂ ವಿದ್ಯಾರ್ಥಿಗಳು ಇವರಿಂದ ಬೆಳಿಸ್ಕೋಳ್ತಿರೋದು ಅಂದುಕೊಂಡೆ.....

ನಮ್ಮ ರಾಜಕಾರಣಿಗಳೇ ಹಾಗೆ ವಿಚಿತ್ರವಾಗಿರ್ತಾರೆ ಅವರ ಹತ್ರ ಮಾತಾಡುತ್ತಿದ್ದರೆ ಇಂತವರನ್ನೆಲ್ಲಾ ಹೇಗೆ ಆಯ್ಕೆ ಮಾಡಿದರಪ್ಪಾ ಅಂತಾ ಅನ್ನಿಸುತ್ತಿರುತ್ತೆ, ಅವರ ಎಲೆಕ್ಷನ್ ಟೆಕ್ನಿಕ್ಕುಗಳೂ ಹಾಗೆ ವಿಚಿತ್ರ ಮತ್ತು ವೈಶಿಷ್ಠ್ಯ ಪೂರ್ಣ...

9 comments:

  1. Nice thought gowda. I feel sorry about the people who elected politicians like this. Mera Bharath Mahan....

    ReplyDelete
  2. ಬರಹ ಓದಿ ಸಿಕ್ಕಾಪಟ್ಟೆ ನಗು ಬಂತು ಶ್ರೀನಿವಾಸ್. ನಿಜಕ್ಕೂ ನಿಮ್ಮಲ್ಲಿ ನಗಿಸುವ, ಚಿಂತನೆಗೆ ಹಚ್ಚುವ ಅಪೂರ್ವ ಬರಹಗಾರ ಇದ್ದಾನೆ.
    -ಹರೀಶ್ ಕೇರ

    ReplyDelete
  3. hai,
    please stop writing your imaginative realities!!!

    ReplyDelete
  4. Thank u Anonymous, for your comment.If Iam Doing So, Then I will Stop writing..

    Yours,
    Srinivasagowda

    ReplyDelete
  5. hai,
    i did not say to stop writing, but only write up about your so called encounters with politicians. you have good writing style. keep it.

    ReplyDelete
  6. ರೀ ಅನಾನಿಮಸ್, ಬರಹ ಚೆನ್ನಾಗಿದೆ ಅಂತ ಹೇಳಿದ್ದಕ್ಕೆ ಥ್ಯಾಂಕ್ಸ್, ನೀವು ಸ್ವಲ್ಪನೂ ಯೋಚನೆ ಮಾಡದೆ ನನ್ನ ಮೇಲೆ ಆರೋಪ ಮಾಡಿದಿರಿ ಅಲ್ವಾ, ಇರ್ಲಿ ಬಿಡಿ ನಂಗೂ ಕೀಟಲೆ ಮಾಡೋದು ಅಂದ್ರೆ ಇಷ್ಟ,
    ನನ್ನ ಬರಹದಲ್ಲಿ ಸುಳ್ಳು ಹೇಳಿ ಯಾರನ್ನು ಮೆಚ್ಚಿಸಬೇಕು ನೀವೇ ಹೇಳಿ.
    ಏನೀ ವೇ ಥ್ಯಾಂಕ್ಸ್

    ReplyDelete
  7. ನಮಸ್ತೆ ಶ್ರೀನಿವಾಸ್. ನಿಜಕ್ಕೂ ಮೆಚ್ಚಬೇಕು. ನಮಗೀಗ ಬರೆಯೊದು ಅಂದರೆ ಕೇವಲ ‘ಸಿಗ್ನೇಚರ್’ಗಷ್ಟೇ ಸೀಮಿತ. ಅಂಥದ್ರಲ್ಲಿ ದಿನಾ ಹೀಗೊಂದು ಹೊಸ ವಿಷಯ ಬರೀತಿರೋದು ನಿಜಕ್ಕೂ ಖುಷಿಯಾಗ್ತಿದೆ. ಯಾರೇನಂತಾರೋ ಚಿಂತೆಬೇಡ. ಹೀಗೆಯೇ ಬರೀತಾ ಇರಿ. ನಿಮ್ಮೊಳಗಿನ ಆ ಬರಹಗಾರ ಹೀಗೇ ಬರಹವಾಗುತ್ತಿರಲಿ. ಗುಡ್ ಲಕ್...

    ReplyDelete
  8. This comment has been removed by a blog administrator.

    ReplyDelete
  9. Srinivas sir odudakke thumba interesting agide.adara jothe vaasthavada arivugalu sigtive.nimma barahavanna ododikke kushiyagutte

    ReplyDelete