Showing posts with label karnataka. Show all posts
Showing posts with label karnataka. Show all posts

Saturday, January 23, 2010

ಮನೆಗಳೂ ಮುರಿದಿವೆ, ಮನಗಳೂ ಮುರಿದಿವೆ.

‘ಲೇದನ್ನಾ ಮಾಕಿ ಚಾಲಾ ನಪ್ಪಿ ಉಂದಿ, ಮಮ್ಮಲನ್ನಿ ಈ ಆಂಧ್ರವಾಳ್ಳು ಚಾಲಾ ಚಾಂಡಲಂಗ ನಡಿಪಿಚ್ಚಿಕೊನ್ಯಾರು, ಸಿನಿಮಾಲೋ ಮಾ ತೆಲಂಗಾಣಾ ಭಾಷಾನ್ನಿ ವಿಲನ್ಸ್ ಕಿ ಇಸ್ತಾರು, ತೆಲಂಗಾಣ ಏಮನ್ನಾ ಇಸ್ತೆ ಇಪ್ಪಡೇ ಇವ್ವಾಲಿ ಲೇಕ ಪೋತೆ ಎಪ್ಪಡು ಇವ್ವರು, ಇದಿ ಪೈನಲ್ ಬ್ಯಾಟಲ್ ಅನ್ನ. ಆಂಧ್ರ ಪ್ರದೇಶದ ಎನ್.ಟಿ.ವಿ ತೆಲುಗು ಚಾನಲ್ಲಿನ ವರದಿಗಾರ ಸುರೇಶ್ ಬಾಬು ನನಗೆ ಹೇಳುತ್ತಿದ್ದ ಅವನು ಭಾವೋದ್ವೇಗಕ್ಕೆ ಒಳಗಾಗಿದ್ದನ್ನು ನಾನು ಗವನಿಸಿದೆ. ಅವನ ಮಾತಿನ ಅರ್ಥ ಏನಪ್ಪಾ ಅಂದರೆ ‘ಇಲ್ಲಾಣ್ಣಾ ನಮಗೆ ಬಾಳಾ ನೋವಿದೆ, ನಮ್ಮನ್ನಾ ಈ ಆಂಧ್ರದವರು ಬಾಳಾ ಕೆಟ್ಟದಾಗಿ ನಡೆಸಿಕೊಂಡಿದಾರೆ, ನಾವು ತೆಲಂಗಾಣದವರು ಮಾತಾಡೋ ಭಾಷೆಯನ್ನ ಸಿನಿಮಾದಲ್ಲಿ ವಿಲನ್ ಗಳ ಬಾಯಲ್ಲಿ ಹೇಳಿಸಿ ಅವಮಾನ ಮಾಡ್ತಾರೆ, ತೆಲಂಗಾಣಾ ಏನಾದ್ರೂ ಕೊಟ್ರೇ ಈಗಲೇ ಆಗಬೇಕು, ಇಲ್ಲಾಂದ್ರೆ ಮತ್ತೆ ಯಾವತ್ತೂ ಕೊಡಲ್ಲಾ. ಅಂತ.

ಇನ್ನೊಬ್ಬ ಇದಾನೆ “ಸಾಕ್ಷಿ” ತೆಲುಗು ಚಾನಲ್ಲಿನ ದೆಹಲಿ ವರದಿಗಾರ ಸುಧೀರ್, ಆತ ಹೇಳುತ್ತಿದ್ದ ‘ಡೇ ಗೌಡ ಈ ಕಾಂಗ್ರೆಸ್ ಗೌರ್ನಮೆಂಟ್ ವಾಳ್ಳನ್ನಿ ಚಪ್ಪುತೋ ಕೊಟ್ಟಾಲ್ರಾ, ತೆಲಂಗಾಣ ಇಚ್ಚೇಸ್ತಾರಂಟ. ಮಾ ರಾಜಶೇಖರ ರೆಡ್ಡಿ ಉಂಡಿ ಉಂಟೆ ವೀಳ್ಳಿನಂತಾ ದೆಂಗೇಸೇ ವಾಡು’ ಅಂದ. ಹಾಗಂದರೆ ‘ಲೋ ಗೌಡ,ಈ ಕಾಂಗ್ರೆಸ್ ಗೌರ್ನಮೆಂಟ್ ನ್ನ ಚಪ್ಪಲೀಲಿ ಹೊಡಿಬೇಕು, ತೆಲಂಗಾಣ ಕೊಡ್ತಾರಂತೆ ಅದೇ ರಾಜಶೇಖರ ರೆಡ್ಡಿ ಇದ್ದಿದ್ದರೆ ಎಲ್ಲಾರ ಬಾಯಿ ಮುಚ್ಚಿಸಿಬಿಡ್ತಾ ಇದ್ದ. ಅಂತ. ಈ ಸುರೇಶ ಮತ್ತು ಸುಧೀರ್ ಇಬ್ಬರೂ ನನಗೆ ದೆಹಲಿಯಲ್ಲಿ ನನಗೆ ತೀರಾ ತಿಳಿದ ಸ್ನೇಹಿತರು ಮತ್ತು ಆ ಇಬ್ಬರೂ ಪರಸ್ಪರ ಗೆಳಯರು. ಸಾಮಾನ್ಯವಾಗಿ ನಾನು ಅವರನ್ನು ಒಟ್ಟೊಟ್ಟಿಗೆ ಇರುತ್ತಿದ್ದನ್ನು ನೋಡುತ್ತಿದ್ದೆ. ಆದರೆ ಯಾವಾಗ ಆಂಧ್ರಪ್ರದೇಶದಲ್ಲಿ ತೆಂಲಗಾಣ ವಿಷಯ ಭುಗಿಲೆದ್ದಿತೋ ಆವಾಗಲಿಂದ ಈ ಇಬ್ಬರು ಗೆಳಯರು ಪರಸ್ಪರ ಮುಖ ತಿರುಗಿಸಿಬಿಟ್ಟಿದ್ದಾರೆ. ಮಾತನಾಡುತ್ತಾರಾದರೂ ಮೊದಲಿನ ಆತ್ಮೀಯತೇ ಇಲ್ಲ ಸಹಜತೆ ಇಲ್ಲ. ಈ ಇಬ್ಬರನ್ನು ಬಲ್ಲ ನನಗೆ ತೆಲಂಗಾಣ ವಿಷಯಕ್ಕಾಗಿ ಇಬ್ಬರು ಗೆಳೆಯರಲ್ಲಿ ಉಂಟಾಗಿದ್ದ ಬಿರುಕು ನನ್ನಲ್ಲಿ ಕಳವಳಕ್ಕೆ ಕಾರಣವಾಗಿತ್ತು.

ಇದೇನಪ್ಪಾ ಆಗಿದೆ ಅಂತ ನಾನು ನನಗೆ ತಿಳಿದ ಇತರ ಸ್ನೇಹಿತರಲ್ಲಿ ವಿಚಾರಿಸಿದೆ ಆಗ ಗೊತ್ತಾಗಿದ್ದೇ ಬೇರೆ. ತೆಲಂಗಾಣ ಮತ್ತು ಸಮೈಕ್ಯ ಆಂಧ್ರಪ್ರದೇಶ ಎಂಬ ಎರಡು ಪತ್ರಕರ್ತರ ಬಣಗಳೇ ದೆಹಲಿಯಲ್ಲಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಕರ್ನಾಟಕದ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ. ಆದರೆ ತಮಿಳು ಮತ್ತು ತೆಲುಗಿನವರದು ತೀರಾ ದೊಡ್ಡ ಸಂಖ್ಯೆ, ಕಡಿಮೆ ಅಂದರೂ ನೂರು ಮಂದಿ ಇದ್ದಾರೆ. ಪ್ರತಿ ತೆಲುಗು ಚಾನಲ್ಲಿಗೂ ಇಬ್ಬರಿಂದ ಮೂರು ಮಂದಿ ವರದಿಗಾರರಿದ್ದಾರೆ. ಬಹುತೇಕ ತೆಲುಗು ಪತ್ರಿಕೆಗಳ ಎಡಿಷನ್ ಗಳು ದೆಹಲಿಯಿಂದ ಪ್ರಕಟ ಆಗುತ್ತವೆ.

ಈ ಎರಡೂ ಬಣಗಳು ತಮ್ಮ ತಮ್ಮ ಆಸಕ್ತಿಗಳ ಪರವಾಗಿ ಕೆಲಸ ಮಾಡುತ್ತವೆ. ತೆಲಂಗಾಣದ ಪರ ಇದ್ದವರು ಅದರ ಪರವಾದ ರಾಜಕಾರಣಿಗಳನ್ನು ವೈಭವೀಕರಿಸುತ್ತಾರೆ ಅದು ಇನ್ನೊಂದು ಬಣವನ್ನು ಚುಚ್ಟುತ್ತದೆ. ಇನ್ನೊಂದು ಬಣದವರು ಮಾತೆತ್ತಿದರೆ ಸಮೈಕ್ಯ ಆಂಧ್ರಪ್ರದೇಶ ಅಂತ ಬೊಬ್ಬೆಹಾಕುತ್ತಾರೆ. ಒಟ್ಟಿನಲ್ಲಿ ಎರಡೂ ಒತ್ತಡ ಗುಂಪುಗಳು ಅವುಗಳಿಗೆ ಬೇಕಾದಂತೆ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕಗಳಾದ ರೆಡ್ಡಿ, ಚೌದುರಿ, ರಾವ್, ಇತ್ಯಾದಿಗಳು ಅವರಿಗೆ ಹಿಂದಿನಷ್ಠು ಈಗ ಬೇಕಾಗಿಲ್ಲ. ಈಗ ನೀವು ಆಂಧ್ರದವರ ಜೊತೆ ಮಾತಾಡುವಾಗ ಅವರು ಯಾವ ಪ್ರದೇಶಕ್ಕೆ ಸೇರಿದವರು ಎಂಬುದನ್ನು ತಿಳಿದುಕೊಂಡೇ ಮಾತಾಡಿದರೆ ತುಂಬಾ ಒಳ್ಳೆಯದು, ಇಲ್ಲಾ ಅಂದರೆ ಅಪಾಯ ಇದೆ. ನೀವೇನಾದರೂ ಅವರ ಬಾವನೆಗಳನ್ನು ನೋಯಿಸುವಂತೆ ಅವರ ವಿರುದ್ಧವಾಗಿ ಮಾತಾಡಿದರೆ ಕಷ್ಠ. ಅದೂ ಅಲ್ಲದೇ ಈ ಆಂಧ್ರ ದ ರಾಜಕಾರಣಿಗಳು ಎಷ್ಟು ಖದೀಮರಿದ್ದಾರೆ ಅಂದರೆ ತಮ್ಮ ಪರ ಮತ್ತು ವಿರುದ್ಧ ಯಾರಿದ್ದಾರೆ ಅಂತ ಗುರುತು ಮಾಡಿಕೊಂಡು ಅವರನ್ನೇ ಕರೆದು ಬೈಟ್ ಗಳು, ಸಂದರ್ಶನಗಳನ್ನು ಕೊಡುತ್ತಿದ್ದಾರೆ. ಡಿವೈಡ್ ಮಾಡಿದರೆ ತಾನೆ ಅವರಿಗೆ ಲಾಭ.

ನ್ಯೂಸ್ ರೂಂಗಳವರೆಗೆ ಹಬ್ಬಿಹೋಗಿರುವ ಈ ಜಾಡ್ಯ ಅಲ್ಲಿನ ಮನಸುಗಳನ್ನು ಮುರಿದು ಹಾಕಿರೋದಂತೂ ಸತ್ಯ.

ಆದರೆ ಬೇಸರದ ಸಂಗತಿ ಏನಪ್ಪಾ ಅಂದರೆ ವಸ್ತುನಿಷ್ಠವಾಗಿ ವಿಚಾರಗಳನ್ನು ಜನರ ಮುಂದೆ ಇಡಬೇಕಾದವರೇ ಹೀಗೆ ಕಚ್ಚಾಡಿ ಬಣಗಳಲ್ಲಿ ಕೆಲಸ ಮಾಡಿದರೆ ಆಗುವ ಗತಿ ಏನಪ್ಪಾ ಅಂತ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಅವನ ವಿಚಾರವೇ ಸರಿಯಿಲ್ಲ ಅಂತ ಯೋಚಿಸೋದು ತಪ್ಪಾಲ್ಲವಾ…?

ಇವತ್ತು ಕೇಂದ್ರದ ಸರ್ಕಾರಕ್ಕೂ ತೆಲಂಗಾಣ ಒಂದು ಬಿಡಿಸಲಾರದ ಕಗ್ಗಂಟಾಗಿದೆ. ಸೋನಿಯಾಗಾಂಧಿ ಕೊಟ್ಟ ಮಾತನ್ನು ತಪ್ಪೊಲ್ಲ, ಈವರಗೂ ಕೊಟ್ಟ ಮಾತುಗಳನ್ನು ನಡೆಸಿಕೊಂಡಿದ್ದಾರೆ ಅಂತ ತೆಲಂಗಾಣ ವಾಧಿಗಳು ಹೇಳುತ್ತಾರೆ. ಅದೇ ಸಮೈಖ್ಯ ಆಂಧ್ರದವರು ಅದು ಇನ್ನು ಮುಗಿದ ಕತೆ. ಮುಗಿದ ಅದ್ಯಾಯ, ಹಂಗೇನಾದರೂ ಕೊಟ್ಟರೆ ಏನಾಗುತ್ತೋ ನೋಡ್ತಾ ಇರಿ ಅಂತ ಹೆದರಿಸುತ್ತಾ ಇದ್ಧಾರೆ.

.

ಹಾಗೆ ನೋಡಿದರೆ ಒಂದೇ ಭಾಷೆ ಮಾತಾಡೋ ಮಂದಿ ಯಾಕೆ ದೂರಾಗಬೇಕು ಅನ್ನೊದನ್ನು ಅರ್ಥಮಾಡಿಕೊಳ್ಳೊದೇ ಕಷ್ಠದ ವಿಚಾರ. ನಿನ್ನೆ ಮೊನ್ನೆವರೆಗೆ ಒಟ್ಟಿಗಿದ್ದವರು ಬೇರೆ ಆಗೋ ಕಾಲ ಬಂದಂತೆ ಕಾಣ್ತಾ ಇದೆ. ಅಲ್ಲಿ ಮನೆಗಳೂ ಮುರಿದಿವಂ ಮನಗಳೂ ಮುರಿದಿವೆ.

Thursday, July 16, 2009

ಧಿಮಾಕು... ಒಂದು ಟಿಪ್ಪಣಿ.

http://livingincourageonline.com/wp-content/uploads/2008/07/full.jpgಕೆಲವರು ಹಾಗೆ ಇರುತ್ತಾರೆ... ಜೀವನದ ಅಪ್ಸ್ ಅಂಡ್ ಡೌನ್ಸ್ ಗಳಿಗೆ ಕೇರೇ ಮಾಡುವುದಿಲ್ಲ. ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಗರ್ವ ಅನ್ನೊದು ಇರುವುದಿಲ್ಲ. "ನಾನು ನಿಮ್ಮಂತೆ ಮನುಷ್ಯ ಕಣಯ್ಯಾ" ಅನ್ನೊ ತರದವರು. ಸರಳವಾಗಿ ಎಲ್ಲರ ಜೊತೆಗೆ ಬೆರೆಯುವವರು, ನಮ್ಮ ನಿಮ್ಮಂತವರ ಕಷ್ಟ ಏನಂತ ತಿಳಿದವರು. ನನ್ನ ಅರಿವಿಗೆ ಬಂದಂತೆ ಯಾರಾದರೂ ನಿಜವಾದ ಅರ್ಥದಲ್ಲಿ ಬುದ್ದಿವಂತರೂ , ಜ್ಞಾನಿಗಳು, ಪಂಡಿತೋತ್ತಮರೂ ಆಗಿದ್ದರೆ ಅವರೆಲ್ಲರೂ ಸಿಕ್ಕಾಪಟ್ಟೆ ಸಿಂಪಲ್ಲಾಗಿರುತ್ತಾರೆ. ಸರಳವಾಗಿ ಮಾತಾಡ್ತಾರೆ. ಎಲ್ಲರೊಂದಿಗೆ ಬೆರೆಯಲು ಉತ್ಸುಕರಾಗಿರುತ್ತಾರೆ. ನಮ್ಮ ಅಬ್ದುಲ್ ಕಲಾಂ ಇದ್ದಾರಲ್ಲಾ ಹಾಗೆ..! ಮನುಷ್ಯನ ತಿಳಿವಳಿಕೆ ಹೆಚ್ಚು ಪಕ್ವವಾಗುತ್ತಿದ್ದಂತೆ ವಿನಯ ಹೆಚ್ಚಾಗುತ್ತದೆ ಅನ್ನೊಕೆ ಅವರೇ ಉದಾಹರಣೆ.
ಅದೇ ಅಲ್ಪ ಜ್ಞಾನಿಗಳು ಇಡೀ ಪ್ರಪಂಚಕ್ಕೆ ತಿಳಿಯದಿದ್ದದ್ದು ನನಗೆ ತಿಳಿದಿದೆ ಅನ್ನೋ ಗರ್ವದಿಂದ ಬೀಗ್ತಾ ಇರ್ತಾರೆ. ಯಾರಿಗೂ ಅರ್ಥವಾಗದ ಭಾಷೆಲಿ ಮಾತಾಡೋದು, ಜನರಿಂದ ದೂರ ಇರೋದು, ಮುಖ ಗಂಟಿಕ್ಕಿಕೊಂಡು ಮಾತೋಡೋದು - ಇಂಥವೇ ಹಲವು ಡಿಸ್ಆರ್ಡರ್ ಗಳು ಅಲ್ಪಮತಿಗಳಲ್ಲಿ ಕಾಣುತ್ತವೆ.
ನಮ್ಮ ರಾಜ್ಯದ ಕೆಲವು ರಾಜಕಾರಣಿಗಳು ಅಧಿಕಾರ ಇಲ್ಲದೇ ಇರೋವಾಗ ಅಣ್ಣಾ... ಅಪ್ಪಾ.. ಅಂತ ಮಾತಾಡಿಸ್ತಾ ಇರ್ತಾರೆ, ಬೆನ್ನುಬೀಳ್ತಾರೆ. ಅದೇ ಅಧಿಕಾರ ಬಂದಾಗ ಪರಿಚಯ ಇದ್ದರೂ ಗೊತ್ತಿಲ್ಲದವರಂತೆ ವರ್ತಿಸುತ್ತಾರೆ. ಅಧಿಕಾರದ ಅಮಲು ನೆತ್ತಿಗೇರಿರುತ್ತದೆ. ಅಧಿಕಾರ ಇದ್ದಾಗ ಸಿಗೋ ತಾತ್ಕಾಲಿಕ ಗೌರವ, ಸಂಪಾದಿಸಬಹುದಾದ ಹಣ ಅವರ ತಲೆಯನ್ನ ಗಿರಗಿಟ್ಲೆ ಆಡಿಸ್ತಾ ಇರತ್ತೆ. ಎಲ್ಲಾ ಪಕ್ಷಗಳಲ್ಲೂ ಇಂಥವರು ಇದ್ದಾರೆ ಬಿಡಿ.

ಮೇಲಿನ ಟಿಪ್ಪಣಿಯೊಂದಿಗೆ ನಾನು ಹೇಳಬೇಕಾದ್ದನ್ನು ಈಗ ಹೇಳುತ್ತೆನೆ- ಈಗಿನ ಕೇಂದ್ರ ಸರ್ಕಾರದಲ್ಲಿ ತೀರಾ ಟಿಪಿಕಲ್ ಸ್ವಭಾವದ ಮಂತ್ರಿಗಳಿದ್ದಾರೆ. ಅವರನ್ನು ನೋಡಿದಾಗಲೆಲ್ಲಾ ಖುಷಿಯಾಗುತ್ತದೆ. ಇಂಥವರ ಕೈಯಲ್ಲಿ ದೇಶ ಇದ್ದರೆ, ದೇಶದ ಜನ ನಿರಾಳವಾಗಿರಬಹುದು ನೋಡಪ್ಪಾ ಅಂತ ಅನ್ನಿಸದೇ ಇರದು.
ಅಂಥವರಲ್ಲಿ ಮೊದಲಿಗ ಡಾ.ಮನಮೋಹನ್ ಸಿಂಗ್. ಹಿಂದೆ ಪ್ಲಾನಿಂಗ್ ಕಮಿಷನ್ನಿನ ಉಪಾಧ್ಯಕ್ಷರಾಗಿದ್ದಾಗ ದೇಶ ಸಂಕಷ್ಟದಲ್ಲಿದೆ ಅನ್ನೊ ಕಾರಣಕ್ಕೆ ಒಂದು ರೂಪಾಯಿ ಗೌರವಧನ ಪಡೆಯುತ್ತಿದ್ದರಂತೆ.
ನಿಜಕ್ಕೂ ವಿನಯವಂತರಾದ ಮನಮೋಹನ್ ಗಂಟಲು ಬಿಚ್ಚಿ ಮಾತಾಡಿದ್ದನ್ನು ಯಾರೂ ನೋಡಿರಲಾರರು. ಸಿಂಗ್ ರ ಇಂಟಗ್ರಿಟಿ, ದೂರದೃಷ್ಟಿಯನ್ನ ಪ್ರಶ್ನೆ ಮಾಡೋಕೆ ಸಾದ್ಯವಾಗೋಲ್ಲ. ಮನಮೋಹನ್ ಸ್ವಲ್ಪೇ ಸ್ವಲ್ಪ ಕೋಪದಿಂದ ಮಾತಾಡಿದ್ದನ್ನ ಜನ ನೋಡಿದ್ದು ಕಳೆದ ಚುನಾವಣೆಗಳ ಸಮಯದಲ್ಲಿ. ಅಡ್ವಾಣಿ ತನ್ನನ್ನ ಪದೇ ಪದೇ ವೀಕ್ ಪ್ರೈಂ ಮಿನಿಸ್ಟರ್ ಅಂತ ದೂಷಿಸುತ್ತಾ ಇದ್ದರು. ಹೋದ ಕಡೆಯಲ್ಲಾ ಅದೇ ಭಾಷಣ ಮಾಡುತ್ತಿದ್ದರು. ಆಗ ಮನಮೋಹನ್ ಹೇಳಿದ್ದು, "ನಾನು ಅಡ್ವಾಣಿ ಅವರ ರಾಜಕೀಯ ಜೀವನ ಗಮನಿಸಿದ್ದೇನೆ, ರಾಮಮಂದಿರ ಕೆಡವಿದ್ದು, ದೇಶವ್ಯಾಪಿ ರಥಯಾತ್ರೆ ಮಾಡಿದ್ದೇ ಅವರ ಸಾಧನೆ; ಬೇರೇನಾದರು ಇದೆಯಾ..? ಅವರೇ ಹೇಳಲಿ " ಅಂದಿದ್ದರು. ಬಹುಶ ಮನಮೋಹನ್ ಮಾಡಿರಬಹುದಾದ ಉಗ್ರಾತಿಉಗ್ರ ರಾಜಕೀಯ ಭಾಷಣ ಇದೇ ಇರಬಹುದೇನೋ..! ಮನಮೊಹನ್ ಪ್ರಧಾನಮಂತ್ರಿಯಾದರೂ ತನ್ನ ನೆಂಟರಿಷ್ಟರನ್ನೆಲ್ಲಾ ಮನೆಯಲ್ಲಿ ತುಂಬಿಕೊಂಡಿಲ್ಲ. ಈಗಲೂ ಅವಕಾಶ ಸಿಕ್ಕ ಕಡೆಯೆಲ್ಲಾ ತಮ್ಮ ಹೆಂಡತಿ ಕಟ್ಟಿಕೊಟ್ಟ ಬುತ್ತಿಯನ್ನ ತೆಗೆದುಕೊಂಡು ಹೋಗ್ತಾರೆ ಪ್ರಧಾನಿ...

ಇನ್ನೊಬ್ಬ ಟಿಪಿಕಲ್ ಆಸಾಮಿ ರಕ್ಷಣಾ ಸಚಿವ ಎ.ಕೆ. ಆಂಟನಿ. ಇವರ ಬಗ್ಗೆ ಇವರ ರಾಜಕೀಯ ಜೀವಮಾನದ ಉದ್ದಕ್ಕೂ ಯಾರೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಮಾಡೋದು ಕಷ್ಟ ಅಗಬಹುದೇನೋ. ಯಾಕೆಂದರೆ, ಆಂಟನಿ ರಾಜೀನಾಮೆ ಪತ್ರವನ್ನ ತನ್ನ ಕಿಸೆಯಲ್ಲೇ ಇಟ್ಟುಕೊಂಡು ತಿರುಗುತ್ತಾರಂತೆ ಅನ್ನೊ ಲಘುವಾದ ಜೋಕೊಂದು ಜಾಲ್ತಿಯಲ್ಲಿದೆ. ಇದು ನಿಜವೇ ಇರಬೇಕೇನೋ. ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೇರಳದಲ್ಲಿ ನಡೆಯುತ್ತಿದ್ದ ವಿಧಾನಸಭಾ ಚುನಾವಣೆಗಳ ಖರ್ಚಿಗೆ ಅಂತ ಅಲ್ಲಿನ ನಾಯಕ ಆಂಟನಿಯವರಿಗೆ ತಮ್ಮ ನಂಬಿಂಕಸ್ಥ ಮಂತ್ರಿಯೊಬ್ಬರ ಕೈಯಲ್ಲಿ ಸಾಕಷ್ಠು ಹಣ ಕಳಿಸಿದ್ದರಂತೆ. ಆ ಹಣವನ್ನು ಸ್ವೀಕರಿಸಲು ಆಂಟನಿ ನಿರಾಕರಿಸಿ, ನಂಗೆ ಹಣ ಬೇಡ, ನೀವೇ ಕ್ಷೇತ್ರದಲ್ಲೆಲ್ಲಾ ತಿರುಗಿ ಹಂಚಿ ಬಿಡಿ ಅಂತ ಹೇಳಿ ಕಳಿಸಿದ್ದರಂತೆ. ಇದನ್ನ ನಂಗೆ ಕಾಂಗ್ರೆಸ್ ಲೀಡರ್ ಒಬ್ಬರು ಹೇಳಿದ್ದರು.
ಕೇರಳದ ಪತ್ರಕರ್ತ ಸ್ನೇಹಿತನೊಬ್ಬ ಎ.ಕೆ. ಆಂಟನಿ ಎರಡನೇ ಬಾರಿ ರಕ್ಷಣಾ ಸಚಿವನಾದಾಗ ಹೇಳಿದ್ದು ನೆನಪಿದೆ. 'ಶ್ರೀನಿವಾಸ್, ಈ ಮನುಷ್ಯ ಅಧಿಕಾರ ಬೇಡ ಅಂತ ದೂರ ಹೋದಾಗಲೆಲ್ಲ ಈತನಿಗೆ ಅಧಿಕಾರ ಹುಡುಕಿಕೊಂಡು ಬರುತ್ತೆ ನೋಡು, ಅಂದಿದ್ದ. ಈತನ ಸರಳತೆಯೇ ಅವರ ಶಕ್ತಿ ಅಂದಿದ್ದ'.

ಈಗ ಕೇಂದ್ರದಲ್ಲಿ ರೈಲ್ವೇ ಮಂತ್ರಿ ಆಗಿರೋ ಮಮತಾ ಬ್ಯಾನರ್ಜಿ ಕೂಡಾ ಟಿಪಿಕಲ್ ಬೆಂಗಾಲಿ. ಆಕೆ ಅತಿದೊಡ್ಡ ರೈಲ್ವೇ ಇಲಾಖೆ ಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಮೇಲೂ ಆಕೆ ಹಾಕಿಕೊಳ್ಳೊದು ಹವಾಯಿ ಚಪ್ಪಲಿ.
ಮೊನ್ನೆ ರೈಲು ಬಜೆಟ್ ಮಂಡಿಸಲು ಆಕೆ ಬಂದಿದ್ದು ತನ್ನ ಹಳೇ ಮಾರುತಿ ಜೆನ್ ಕಾರಿನಲ್ಲಿ. ಸೆಕ್ಯುರಿಟಿ ಕೂಡಾ ಬಳಸೋಲ್ಲ. ಕೊಲ್ಕಾತ್ತಾದಲ್ಲಿ ಆಕೆಯದು ಈಗಲೂ ಸಿಂಗಲ್ ಬೆಡ್ ರೂಂ ಹೌಸ್. ಅದರಲ್ಲೇ ತಾನು, ತನ್ನ ತಾಯಿ, ಸಹೋದರ ಎಲ್ಲಾರು ವಾಸಮಾಡುತ್ತಾರಂತೆ.

ತಮಿಳುನಾಡಿನ ಮತ್ತೊಬ್ಬ ಟಿಪಿಕಲ್ ತಮಿಳಣ್ಣನ್ ಚಿದಂಬರಂ. ಆತ ಚುನಾವಣೆಯಲ್ಲಿ ಗೆದ್ದ ರೀತಿಯ ಬಗ್ಗೆ ಈಗಲೂ ಅನುಮಾನಗಳಿವೆ. ಆದರೂ, ಮಂತ್ರಿಯಾಗಿ ಆತನ ಕಾರ್ಯವೈಖರಿ ಮೆಚ್ಚುವಂತದ್ದು. ದೇಶದ ಗೃಹ ಸಚಿವರಾಗಿ ಕೈಗೊಂದು ಕಾಲಿಗೊಂದ್ದು ಸೇವಕರನ್ನ ಇಟ್ಟುಕೊಳ್ಳಬಹುದು. ಆದರೆ ಚಿದಂಬರಂ ಮಾತ್ರ ತನ್ನೆಲ್ಲಾ ಫೈಲುಗಳನ್ನ ತಾನೇ ಕಂಕುಳಲ್ಲಿ ಹಿಡಕೊಂಡು ತಿರುಗೊದನ್ನ ನೀವು ನೋಡಿರಬಹುದು. ಅಷ್ಟೇ ಅಲ್ಲಾ ಚಿದಂಬರಂ ಓಡಾಡೋದು ಈಗಲೂ ಅವರ ಫೆೇವರಿಟ್ ಹಳೇ ಎಸ್ಟೀಮ್ ಕಾರಿನಲ್ಲಿ..! ದೆಹಲಿಯಲ್ಲಿ ಇದ್ದಾಗ ಯಾವುದೇ ಸೆಕ್ಯುರಿಟಿಯವರನ್ನ ಹಿಂದೆ ಮುಂದೆ ಇಟ್ಟುಕೊಳ್ಳೊದಿಲ್ಲ. ಟ್ರಾಪಿಕ್ ಸಿಗ್ನಲ್ಲುಗಳಲ್ಲಿ ಕಾರನ್ನು ನಿಲ್ಲಿಸುತ್ತಾ ಅಡ್ಡಾಡುವಸ್ಟು ಸರಳತೆ ಇದೆ. ಸೌತ್ ಬ್ಲಾಕ್ ನ ತಮ್ಮ ಕಚೇರಿಯ ನೌಕರೆಲ್ಲಾ ಮನೆಗೆ ಹೋದರೂ ಆಫೀಸಿನಲ್ಲೇ ಕುಳಿತು ಕೆಲಸ ಮಾಡುತ್ತಿರುತ್ತಾನೆ ಗೃಹಮಂತ್ರಿ.

ಹೀಗೆ, ಟಿಪಿಕಲ್ ತರದ ತುಂಬಾ ಮಂದಿ ಇದ್ದಾರೆ. ಎಲ್ಲಾರ ಬಗ್ಗೆ ಇಲ್ಲಿ ಬರೆಯೋಕೆ ಆಗಲ್ಲ. ಆದರೆ, ಇಂಥದೇ ಚುರುಕಿನ ಕನ್ನಡಿಗ ಒಬ್ಬ ಇದ್ದಾರೆ. ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮಂತ್ರಿ ಜೈರಾಮ್ ರಮೇಶ್. ನೋಡಲಿಕ್ಕೆ ಒಳ್ಳೆ ಬ್ರಿಟೀಷರ ವಂಶದವನಂತೆ ಕಂಡರೂ ರಮೇಶ್ ಮೂಲತ ಚಿಕ್ಕಮಗಳೂರು ಕಡೆಯವರು. ವರ್ಕೋಹಾಲಿಕ್ ಅಂತಾರಲ್ಲ ಅಂಥವ. ತನ್ನ ಇಲಾಖೆಗೆ ಸಂಭಂದಿಸಿದ ಕೆಲಸ ಎಲ್ಲೇ ಇರಲಿ, ತಾನೇ ಖುದ್ದು ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಾರೆ. ಕೈಲೊಂದು ಚರ್ಮದ ಬ್ಯಾಗು ಹಿಡಕೊಂಡು ಕೆಲಸ ಆಗಬೇಕಾದ ಅಧಿಕಾರಿ ಹತ್ರ ತಾನೆ ತಿರುಗಿ ಸಹಿ ಹಾಕಿಸಿಕೊಂಡು ಬರುತ್ತಾರೆ. ಅರ್ಧ ವಯಸ್ಸು ಆಗಿದ್ದರು ಇಪ್ಪತ್ತರ ಯುವಕನಂತೆ ಚಂಗನೆ ಜಿಗಿಯುತ್ತಾ ಜೋಕ್ ಮಾಡುತ್ತಾ ಇರ್ತಾರೆ. ನಾನು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಅನ್ನೋ ಬಿಗುಮಾನ, ಹಮ್ಮು ಆತನಿಗೆ ಇಲ್ಲ. 'ಈಗೋ' ಅಂತಾರಲ್ಲ ಅದು ನನಗಂತೂ ಕಂಡಿಲ್ಲ. ನಿಜಕ್ಕೂ ಲವಬಲ್ ಅಂತಾರಲ್ಲಾ ಅಂಥವನು. ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಆತ ಉತ್ತರಿಸೋ ವಿಧಾನ ನೋಡಿದರಂತೂ ಎಂಥಾ ತಲೆ ಈತನದು ಅನ್ನಿಸದೇ ಇರಲಾರದು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ವಾರ್ ರೂಮಿನ ಅಧ್ಯಕ್ಷ ಆಗಿದ್ದ ಜೈರಾಮ್ ಕಾಂಗ್ರೆಸ್ ನ ಪ್ರಮುಖ ಸ್ಟ್ರಾಟಜಿಸ್ಚ್ ಕೂಡ ಹೌದು.

ಸಂಪುಟದಲ್ಲಿ ಇರೋರೆಲ್ಲರೂ ಹಾಗೆ ಇದ್ದಾರೆ ಅನ್ನೊದು ನನ್ನ ವಾದ ಅಲ್ಲ. ಕಾಂಗ್ರೆಸ್ ನಲ್ಲಿ ಪ್ರಖಾಂಡ ಖದೀಮರೂ ಇದ್ದಾರೆ ಬಿಡಿ. ಆದರೆ ನಮ್ಮಲ್ಲಿನ ಕೆಲ ಮಂತ್ರಿಗಳು, ಎಂಎಲ್ಎ ಗಳು ಜನ ಅಧಿಕಾರ ಕೊಟ್ಟಾಗ ಐಶಾರಾಮದಿಂದ ಅಧಿಕಾರದ ಮದದಿಂದ ನಡಕೋತಾರೆ. ಅದೇ ರಾಜಕೀಯದಲ್ಲಿ ಒಳ್ಳೇ ಮಂದಿಯೂ ಇದ್ದಾರೆ. ಹೀಗಾಗಿ ಇಂಡಿಯಾದ ಡೆಮಾಕ್ರಸಿ ಬ್ಯಾಲೆನ್ಸ್ ಆಗ್ತಾ ಇರತ್ತೆ.
ಕೆಲವರು ಅಧಿಕಾರವನ್ನ ಹಣದಿಂದ, ದರ್ಪದಿಂದ ಪಡೆಯುತ್ತಾರೆ. ಕೆಲವರು ರಾಜಕೀಯ ಸಂಘರ್ಷದಿಂದ ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ಗಳಿಸುತ್ತಾರೆ ಅಲ್ಲವಾ...?



Sunday, July 12, 2009

ಪತ್ರಕರ್ತರನ್ನ ಬೆಳಿಸ್ತಾ ಇದ್ದೀನಿ, ಅದಕ್ಕಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನಿ....


ರಾಜಕೀಯ ಅನ್ನೋದು ನಿಜಕ್ಕೂ ರೋಚಕ ಸಂಗತಿಗಳ ಗಣಿ ಇದ್ದ ಹಾಗೆ, ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ ಅಂತ ರಾಜಕೀಯದ ಬಗ್ಗೆ ಜೋಕ್ ಮಾಡೋ ಮಂದಿಗೂ ರಾಜಕೀಯದ ಬಗ್ಗೆ ಅಪಾರ ಆಸಕ್ತಿ ಇರತ್ತೆ, ಚಾನ್ಸ್ ಸಿಕ್ಕರೆ ನೋಡೇ ಬಿಡೋಣ ಅಂತ ಒಳಗೋಳಗೆ ಅಂದುಕೊಳ್ತಾ ಇರ್ತಾರೆ.
ಸಲೂನಿನಲ್ಲಿ ಕೆಲಸ ಮಾಡುವ ಕ್ಷೌರಿಕ ಕೂಡ ರಾಜಕೀಯ ವ್ಯಕ್ತಿಯೊಬ್ಬನಿಗೆ ಕ್ಷೌರ ಮಾಡುತ್ತಾ ತನ್ನ ಕುಳಿತ ಮನುಷ್ಯ ಎಂತಾ ದಡ್ಡನನ್ಮಗ ಇವನೂ ರಾಜಕಾರಣಿ ಆಗಿದ್ದಾನಲ್ಲಾ ಅಂತ ಮನಸೊಳಗೆ ಅಂದುಕೊಳ್ಳಲಿಕ್ಕೆ ಸಾಕು. ನನಗೂ ಮೂರ್ಖ ರಾಜಕಾರಣಿಗಳ ಜೊತೆ ಬೆರೆಯೋ ಅವಕಾಶ ಸಿಕ್ಕಾಗಲೆಲ್ಲ ಹಾಗೆ ಅನಿಸಿದೆ, ಯಾಕಂದರೆ ಇಂಡಿಯೂದ ಡೆಮಾಕ್ರಸಿಯಲ್ಲಿ ಎಂತೆಂತವರೋ ಪಾರ್ಲಿಮೆಂಟಿಗೆ ಬಂದು ಹೋಗಿದ್ದಾರೆ.

ರಾಜಕೀಯಕೀಯಕ್ಕೆ ಬರೋಕೆ ಇಂತದೇ ಕ್ವಾಲಿಪಿಕೇಶನ್ನು ಅಂತ ಇಲ್ಲವಲ್ಲಾ ಯಾರ್ಯಾರೋ ಇಲ್ಲಿ ಬಂದು ಹೋಗಿದ್ದಾರೆ. ಮೊನ್ನೆ ಕನ್ನಡಿಗ, ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಬರೆದಿರುವ 'what ails Indian parliament' ಅನ್ನೋ ಪುಸ್ತಕ ಓದ್ತಾ ಇದ್ದೆ, ಅದರಲ್ಲಿ 11 ನೇ ಲೋಕಸಬೆಯಲ್ಲಿ ಇದ್ದ ಕೆಲವು ಪೆಕ್ಯುಲಿಯರ್ ಎಂಪಿಗಳ ಬಗ್ಗೆ ಬರೆದಿದ್ದರು, ಅದರಲ್ಲಿ ಉತ್ತರಪ್ರದೇಶದ ಎಂಪಿ ಒಬ್ಬ ತನ್ನ ಒಲಿಸಿಕೊಳ್ಳೋಕ್ಕೆ ಹಿಡಿದಿದ್ದ ದಾರಿಯನ್ನ ವಿವರಿಸಿದ್ದರು, ಆ ಎಂಪಿಯ ಹೆಸರು ನನಗೆ ಮರೆತುಹೋಗಿದೆ, ಆ ಮಹಾಶಯನ ಪ್ರಮುಖ ಕೆಲಸ ಏನಪ್ಪಾ ಅಂದರೆ ತನ್ನ ಕ್ಷೇತ್ರದಲ್ಲಿ ಸತ್ತವರ ಬೂದಿಯನ್ನ ಪವಿತ್ರ ಗಂಗಾ ನದಿಯಲ್ಲಿ ಬಿಟ್ಟು ಬರೋದು. ಆತ ಈ ಕೆಲಸವನ್ನ ಎಷ್ಟು ಸಿರಿಯಸ್ಸಾಗಿ ಮಾಡುತ್ತಿದ್ದ ಅಂದರೆ ನಾನು ಡೆಲ್ಲಿಯಿಂದ ವಾಪಸ್ಸು ಬಂದಿದ್ದೆನೇ ಮುಂದಿನ ವಾರ ಕಾಶಿಗೆ ಹೋಗುತ್ತಿದ್ದೇನೆ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಸತ್ತವರ ಮನೆಯವರು ಪಿಂಡದ ಮಡಿಕೆಯನ್ನ ಇಂತಾ ದಿನದ ಒಳಗೆ ನನಗೆ ತಲುಪಿಸಿ ಅಂತ ನ್ಯೂಸ್ ಪೇಪರಿನಲ್ಲಿ ಜಾಹಿರಾತು ಹೊರಡಿಸುತ್ತಿದ್ದನಂತೆ, ವಾಪಸ್ಸು ಬಂದಾಗ ಮತ್ತೆ ಜಾಹಿರಾತು ನೀಡಿ ಕಾಶಿಯಿಂದ ವಾಪ್ಪಸ್ಸು ಬಂದಿದ್ದೇನೆ ಗಂಗಾಜಲವನ್ನ ವಾಪಸ್ಸು ಒಯ್ಯಿರಿ ಅಂತ ಮಾಹಿತಿ ನೀಡುತ್ತಿದ್ದನಂತೆ.... ಆತನ ಈ ಪವಿತ್ರ ಕಾರ್ಯವನ್ನ ಮೆಚ್ಚಿ ಜನ ಅವನನ್ನ ಎರಡೆರಡು ಬಾರಿ ಪಾರ್ಲಿಮೆಂಟಿಗೆ ಆಯ್ಕೆ ಮಾಡಿದ್ದರಂತೆ...

ಈಗ ನೆನಪಾಯಿತು ನೋಡಿ ಕಳೆದ ವರ್ಷ ಮೂಲೂರಿನ ಶಾಸಕ ಹಾಗು ಹಾಗಿನ ಮುಜರಾಯಿ ಮಂತ್ರಿ ಕೃಷ್ಣಯ್ಯ ಶೆಟ್ಟಿ ಶಿವರಾತ್ರಿಗೆಂದು ಗಂಗಾಜಲವನ್ನ ತರಿಸಿ ರಾಜ್ಯದ ಎಲ್ಲಾ ದೇವಾಲಯಗಳಿಗೂ ನೀಡಿ ರಾಜ್ಯದ ಜನತೆಯ ಕೃಪೆಗೆ ಪಾತ್ರರಾಗಿದ್ದರಲ್ಲಾ. ಇದೆ ಶೆಟ್ಟಿ ಚುನಾವಣೆಗಳಲ್ಲಿ ಗೆಲ್ಲೂದು ಹೇಗಪ್ಪಾ ಅಂದರೆ ಕ್ಷೇತ್ರದ ಹಳ್ಳಿಯವರನ್ನ ತಂಡೋಪತಂಡವಾಗಿ ಪವಿತ್ರ ಕ್ಷೇತ್ರಗಳಿಗೆ ಪ್ರವಾಸಕ್ಕೆ ಸ್ವಂತ ಖರ್ಚಿನಲ್ಲಿ ಕಳೆಸುತ್ತಾರೆ. ಮತದಾರರಿಗೆ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿಸಿದ ಪುಣ್ಯಾತ್ಮನಿಗೆ ಪುಟಗೋಸಿ ಒಂದು ಓಟು ಕೊಡೋದು ಯಾವ ಲೆಕ್ಕದ ಮಾತು ಅಲ್ಲವಾ...
ಮನೆಗೆ ಬಂದವರಿಗೆಲ್ಲಾ ತಿರುಪತಿ ಲಾಡು ತಿನ್ನಿಸೋದೇ ಅಲ್ಲ ಆತನನ್ನ ಭೇಟಿ ಮಾಡೋಕೆ ಹೋದ ಪತ್ರಕರ್ತರಿಗೂ ತಿರುಪತಿ ಲಾಡು ತಿನ್ನಿಸುವುದನ್ನ ನಾನೇ ನೋಡಿದ್ದೇನೆ.

ಮದ್ದೂರು ಕ್ಷೇತ್ರದಲ್ಲಿ ಶಾಸಕರಾಗಿ ಕಳೆದು ವರ್ಷ ತೀರಿಕೊಂಡರಲ್ಲಾ ಸಿದ್ದರಾಜು, ಅವರ ಚುನಾವಣಾ ಟ್ರೇಡ್ ಸೀಕ್ರೇಟ್ ಏನಪ್ಪಾ ಅಂದರೆ ಅವರ ಕ್ಷೇತ್ರದಲ್ಲಿ ಯಾರಾದರೂ ತೀರಿಕೊಂಡರೆ ಸಾಕು, ದಿಡೀರ್ ಅಂತ ಹೋಗಿ ಕಣ್ಣೀರಾಕಿಬಿಡೋದು ಜೊತೆಗೆ ಸತ್ತವನನ್ನ ಧಪನ್ ಮಾಡುವರೆಗೆ ಜೊತೆಗಿದ್ದು ಶವಯಾತ್ರೆಯಲ್ಲಿ ಹೆಗಲು ಕೊಟ್ಟು ಬಿಡೋದು. ಸತ್ತಮನೆಯ ನೋವಿಗೆ ಮಿಡಿವ ಶಾಸಕನಿಗಿಂತಾ ಜನಪ್ರತಿನಿದಿ ಬೇಕಾ ನೀವೆ ಹೇಳಿ.

ಅದೇ ಮೊನ್ನೆ ತಾನೆ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾದರಲ್ಲಾ ಸೋಮಣ್ಣ ಅವರು ಮಂತ್ರಿಯಾದ ತಕ್ಷಣ 20,000 ಸಾವಿರ ಜನಕ್ಕೆ ಬಾಡೂಟ ಹಾಕಿಸಿದರಂತೆ ಯಾಕ್ರಪ್ಪಾ ಅಂತ ಸೋಮಣ್ಣನ ಅನುಯಾಯಿಯೊಬ್ಬನನ್ನ ವಿಚಾರಿಸಿದೆ, ಅದಕ್ಕೆ ಅವ ಹೇಳಿದ್ದೇನು ಗೊತ್ತೇ ನೋಡಿ ಸಾರ್ ಗೋವಿಂದರಾಜನಗರದಲ್ಲಿ ಇರೋದೆ ಕುರುಬ್ರೂ, ವಕ್ಕಲಿಗ್ರೂ ಅವರಿಗೆ ಬಾಡೂಟ ಹಾಕಿಸಿದ್ರೆ ಖುಷ್ ಆಗ್ತಾರೆ ಓಟೂ ಕೊಡ್ತಾರೆ, ನಂ ಸೋಮಣ್ಣನಿಗೆ ಜನನಾ ಹೆಂಗೆ ಇಟ್ಕಬೇಕು ಅಂತ ಗೊತ್ತೂ ಸಾರ್ ಮತ್ತೆ ಗೆಲ್ಲೇ ಗೆಲ್ತಿವಿ ಸಾರ್ ಅಂದ, ನಾನು ಬೆರಗಾದೆ...
ರಾಜಕಾರಣಿಗಳ ಗಿಮ್ಮಿಕ್ಕುಗಳೇ ಇಂತವು ಯಾರು ಮದುಗೆ ಕರೆದರೂ ಹೋಗೋದು, ನಾಮಕರಣ, ಹುಟ್ಟುಹಬ್ಬ, ತಿಥಿ, ಸಾವು, ಕಡೆಗೆ ಸೀಮಂತ, ಒಸಕೆ ಗಳಿಗೆಲ್ಲಾ ಹೋದರೆ ಜನ ಓಟ್ ಹಾಕ್ತಾರಂತೆ ಇಲ್ಲಾ ಅಂದರೆ ಜನ ಕೋಪಿಸಿಕೊಳ್ತಾರಂತೆ.. ಸದ್ಯ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿರುವ ದೊಡ್ಡ ಇಲಾಖೆಯ ಮಂತ್ರಿ ಯೊಬ್ಬರು ಬೇಕಾದರೆ ಪಾರ್ಲಿಮೆಂಟ್ ಸೆಷನ್ ಬೇಕಾದರೂ ತಪ್ಪಿಸಿಕೊಂಡಾರು, ಯಾರದಾದರೂ ಮದುವೆಗೆ ಕರೆದಿದ್ದರೆ ಬಿಲ್ ಕುಲ್ ತಪ್ಪಿಸಿಕೊಳ್ಳುವುದಿಲ್ಲ ಅಸ್ಟರ ಮಟ್ಟಿಗೆ ಅವರು ಕ್ಷೇತ್ರದ ಜನತೆಯೊಂದಿಗೆ ಬೆರೆತುಹೋಗಿದ್ದಾರೆ.

ಮೊನ್ನೆ ಕೋಲಾರ ಕ್ಷೇತ್ರದಿಂದ ಆಯ್ಕೆಯಾಗಿರೋ ವರ್ತೂರು ಪ್ರಕಾಶ್ ದೆಹಲಿಗೆ ಬಂದಿದ್ದರು ಆ ಮನುಷ್ಯ ವಿಚಿತ್ರ ಅಂತ ಎಲ್ಲಾರಿಗೂ ಗೊತ್ತು, ಸುಮ್ಮನೆ ಕುತೂಹಲಕ್ಕೆ ಅಂತ ಮಾತಿಗೆ ಎಳೆದೆ . ದೆಹಲಿಯ ಕರ್ನಾಟಕ ಭವನದ ಕ್ಯಾಂಟೀನಿನಲ್ಲಿ ಭರ್ಜರಿ ಕುರಿಗಳ ತಲೆ ಮಾಂಸ ತಾನೇ ಆರ್ಡರ್ ಮಾಡಿಸಿಕೊಂಡು ಸಮಾ ತಿನ್ನುತ್ತಾ ಕುಳಿತಿದ್ದ , ನಮಸ್ಕಾರ ಸಾರ್ ಅಂತ ಪರಿಚಯ ಮಾಡಿಕೊಂಡೆ, ಏನ್ ಗುರು ನೀನು ಓದಿದ್ದು ಅಂತ ಕೇಳಿದ, ನಾನು ಮಾಸ್ಟರ್ ಡಿಗ್ರಿ ಮಾಡಿದ್ದೀನಿ ಸಾರ್, ಮಾಸ್ ಕಮ್ಯುನಿಕೇಷನ್ ಜರ್ನಲಿಸಂ ಸಾರ್ ಅಂದೆ. ಆತ ಹೌದಾ... ಅಂತ ಸುಮ್ಮನಿರದೇ 'ಬಿಎ ಗಿಯೇ' ಮಾಡಿಲ್ವಾ ಅಂದ. ನಂಗೆ ನಗು ಬಂದರೂ ತೋರಿಸಿಕೊಳ್ಳದೇ ಅದನ್ನೂ ಮಾಡಿದ್ದೀನಿ ಸಾರ್ ಅಂದೆ......ಹಾಗೆ ಮುಂದುವರೆದು ಕೆಆರ್ ಪುರಂ ಕಾಲೇಜಿನಲ್ಲಿ ನಿಮ್ಮಂತಾ ಜರ್ನಲಿಸ್ಟುಗಳನ್ನೆಲ್ಲಾ ಓದಿಸ್ತಾ ಇದ್ದೀನಿ, ಅದಕ್ಕೆ ಅಂತ ಸಪ್ರೇಟ್ ಬಜೆಟ್ ಇಕ್ಕಿದ್ದೀನೆ, ಮುಂದಿನ ವರ್ಷದಿಂದ ಅವರೆಲ್ಲಾ ಟಿವಿ, ಪೇಪರಿನಲ್ಲಿ ಕೆಲಸಕ್ಕೆ ಸೇರ್ತಾರೆ ನನನ್ನ ಪುಲ್ ಟಿವಿಯಲ್ಲಿ ತೋರಿಸ್ತಾರೆ ಅಂದ.
ನಾನು ಯಾರಪ್ಪಾ ಅವರು ಜರ್ನಲಿಂಸಂ ವಿದ್ಯಾರ್ಥಿಗಳು ಇವರಿಂದ ಬೆಳಿಸ್ಕೋಳ್ತಿರೋದು ಅಂದುಕೊಂಡೆ.....

ನಮ್ಮ ರಾಜಕಾರಣಿಗಳೇ ಹಾಗೆ ವಿಚಿತ್ರವಾಗಿರ್ತಾರೆ ಅವರ ಹತ್ರ ಮಾತಾಡುತ್ತಿದ್ದರೆ ಇಂತವರನ್ನೆಲ್ಲಾ ಹೇಗೆ ಆಯ್ಕೆ ಮಾಡಿದರಪ್ಪಾ ಅಂತಾ ಅನ್ನಿಸುತ್ತಿರುತ್ತೆ, ಅವರ ಎಲೆಕ್ಷನ್ ಟೆಕ್ನಿಕ್ಕುಗಳೂ ಹಾಗೆ ವಿಚಿತ್ರ ಮತ್ತು ವೈಶಿಷ್ಠ್ಯ ಪೂರ್ಣ...