Showing posts with label delhi journalist. Show all posts
Showing posts with label delhi journalist. Show all posts

Saturday, January 23, 2010

ಮನೆಗಳೂ ಮುರಿದಿವೆ, ಮನಗಳೂ ಮುರಿದಿವೆ.

‘ಲೇದನ್ನಾ ಮಾಕಿ ಚಾಲಾ ನಪ್ಪಿ ಉಂದಿ, ಮಮ್ಮಲನ್ನಿ ಈ ಆಂಧ್ರವಾಳ್ಳು ಚಾಲಾ ಚಾಂಡಲಂಗ ನಡಿಪಿಚ್ಚಿಕೊನ್ಯಾರು, ಸಿನಿಮಾಲೋ ಮಾ ತೆಲಂಗಾಣಾ ಭಾಷಾನ್ನಿ ವಿಲನ್ಸ್ ಕಿ ಇಸ್ತಾರು, ತೆಲಂಗಾಣ ಏಮನ್ನಾ ಇಸ್ತೆ ಇಪ್ಪಡೇ ಇವ್ವಾಲಿ ಲೇಕ ಪೋತೆ ಎಪ್ಪಡು ಇವ್ವರು, ಇದಿ ಪೈನಲ್ ಬ್ಯಾಟಲ್ ಅನ್ನ. ಆಂಧ್ರ ಪ್ರದೇಶದ ಎನ್.ಟಿ.ವಿ ತೆಲುಗು ಚಾನಲ್ಲಿನ ವರದಿಗಾರ ಸುರೇಶ್ ಬಾಬು ನನಗೆ ಹೇಳುತ್ತಿದ್ದ ಅವನು ಭಾವೋದ್ವೇಗಕ್ಕೆ ಒಳಗಾಗಿದ್ದನ್ನು ನಾನು ಗವನಿಸಿದೆ. ಅವನ ಮಾತಿನ ಅರ್ಥ ಏನಪ್ಪಾ ಅಂದರೆ ‘ಇಲ್ಲಾಣ್ಣಾ ನಮಗೆ ಬಾಳಾ ನೋವಿದೆ, ನಮ್ಮನ್ನಾ ಈ ಆಂಧ್ರದವರು ಬಾಳಾ ಕೆಟ್ಟದಾಗಿ ನಡೆಸಿಕೊಂಡಿದಾರೆ, ನಾವು ತೆಲಂಗಾಣದವರು ಮಾತಾಡೋ ಭಾಷೆಯನ್ನ ಸಿನಿಮಾದಲ್ಲಿ ವಿಲನ್ ಗಳ ಬಾಯಲ್ಲಿ ಹೇಳಿಸಿ ಅವಮಾನ ಮಾಡ್ತಾರೆ, ತೆಲಂಗಾಣಾ ಏನಾದ್ರೂ ಕೊಟ್ರೇ ಈಗಲೇ ಆಗಬೇಕು, ಇಲ್ಲಾಂದ್ರೆ ಮತ್ತೆ ಯಾವತ್ತೂ ಕೊಡಲ್ಲಾ. ಅಂತ.

ಇನ್ನೊಬ್ಬ ಇದಾನೆ “ಸಾಕ್ಷಿ” ತೆಲುಗು ಚಾನಲ್ಲಿನ ದೆಹಲಿ ವರದಿಗಾರ ಸುಧೀರ್, ಆತ ಹೇಳುತ್ತಿದ್ದ ‘ಡೇ ಗೌಡ ಈ ಕಾಂಗ್ರೆಸ್ ಗೌರ್ನಮೆಂಟ್ ವಾಳ್ಳನ್ನಿ ಚಪ್ಪುತೋ ಕೊಟ್ಟಾಲ್ರಾ, ತೆಲಂಗಾಣ ಇಚ್ಚೇಸ್ತಾರಂಟ. ಮಾ ರಾಜಶೇಖರ ರೆಡ್ಡಿ ಉಂಡಿ ಉಂಟೆ ವೀಳ್ಳಿನಂತಾ ದೆಂಗೇಸೇ ವಾಡು’ ಅಂದ. ಹಾಗಂದರೆ ‘ಲೋ ಗೌಡ,ಈ ಕಾಂಗ್ರೆಸ್ ಗೌರ್ನಮೆಂಟ್ ನ್ನ ಚಪ್ಪಲೀಲಿ ಹೊಡಿಬೇಕು, ತೆಲಂಗಾಣ ಕೊಡ್ತಾರಂತೆ ಅದೇ ರಾಜಶೇಖರ ರೆಡ್ಡಿ ಇದ್ದಿದ್ದರೆ ಎಲ್ಲಾರ ಬಾಯಿ ಮುಚ್ಚಿಸಿಬಿಡ್ತಾ ಇದ್ದ. ಅಂತ. ಈ ಸುರೇಶ ಮತ್ತು ಸುಧೀರ್ ಇಬ್ಬರೂ ನನಗೆ ದೆಹಲಿಯಲ್ಲಿ ನನಗೆ ತೀರಾ ತಿಳಿದ ಸ್ನೇಹಿತರು ಮತ್ತು ಆ ಇಬ್ಬರೂ ಪರಸ್ಪರ ಗೆಳಯರು. ಸಾಮಾನ್ಯವಾಗಿ ನಾನು ಅವರನ್ನು ಒಟ್ಟೊಟ್ಟಿಗೆ ಇರುತ್ತಿದ್ದನ್ನು ನೋಡುತ್ತಿದ್ದೆ. ಆದರೆ ಯಾವಾಗ ಆಂಧ್ರಪ್ರದೇಶದಲ್ಲಿ ತೆಂಲಗಾಣ ವಿಷಯ ಭುಗಿಲೆದ್ದಿತೋ ಆವಾಗಲಿಂದ ಈ ಇಬ್ಬರು ಗೆಳಯರು ಪರಸ್ಪರ ಮುಖ ತಿರುಗಿಸಿಬಿಟ್ಟಿದ್ದಾರೆ. ಮಾತನಾಡುತ್ತಾರಾದರೂ ಮೊದಲಿನ ಆತ್ಮೀಯತೇ ಇಲ್ಲ ಸಹಜತೆ ಇಲ್ಲ. ಈ ಇಬ್ಬರನ್ನು ಬಲ್ಲ ನನಗೆ ತೆಲಂಗಾಣ ವಿಷಯಕ್ಕಾಗಿ ಇಬ್ಬರು ಗೆಳೆಯರಲ್ಲಿ ಉಂಟಾಗಿದ್ದ ಬಿರುಕು ನನ್ನಲ್ಲಿ ಕಳವಳಕ್ಕೆ ಕಾರಣವಾಗಿತ್ತು.

ಇದೇನಪ್ಪಾ ಆಗಿದೆ ಅಂತ ನಾನು ನನಗೆ ತಿಳಿದ ಇತರ ಸ್ನೇಹಿತರಲ್ಲಿ ವಿಚಾರಿಸಿದೆ ಆಗ ಗೊತ್ತಾಗಿದ್ದೇ ಬೇರೆ. ತೆಲಂಗಾಣ ಮತ್ತು ಸಮೈಕ್ಯ ಆಂಧ್ರಪ್ರದೇಶ ಎಂಬ ಎರಡು ಪತ್ರಕರ್ತರ ಬಣಗಳೇ ದೆಹಲಿಯಲ್ಲಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಕರ್ನಾಟಕದ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ. ಆದರೆ ತಮಿಳು ಮತ್ತು ತೆಲುಗಿನವರದು ತೀರಾ ದೊಡ್ಡ ಸಂಖ್ಯೆ, ಕಡಿಮೆ ಅಂದರೂ ನೂರು ಮಂದಿ ಇದ್ದಾರೆ. ಪ್ರತಿ ತೆಲುಗು ಚಾನಲ್ಲಿಗೂ ಇಬ್ಬರಿಂದ ಮೂರು ಮಂದಿ ವರದಿಗಾರರಿದ್ದಾರೆ. ಬಹುತೇಕ ತೆಲುಗು ಪತ್ರಿಕೆಗಳ ಎಡಿಷನ್ ಗಳು ದೆಹಲಿಯಿಂದ ಪ್ರಕಟ ಆಗುತ್ತವೆ.

ಈ ಎರಡೂ ಬಣಗಳು ತಮ್ಮ ತಮ್ಮ ಆಸಕ್ತಿಗಳ ಪರವಾಗಿ ಕೆಲಸ ಮಾಡುತ್ತವೆ. ತೆಲಂಗಾಣದ ಪರ ಇದ್ದವರು ಅದರ ಪರವಾದ ರಾಜಕಾರಣಿಗಳನ್ನು ವೈಭವೀಕರಿಸುತ್ತಾರೆ ಅದು ಇನ್ನೊಂದು ಬಣವನ್ನು ಚುಚ್ಟುತ್ತದೆ. ಇನ್ನೊಂದು ಬಣದವರು ಮಾತೆತ್ತಿದರೆ ಸಮೈಕ್ಯ ಆಂಧ್ರಪ್ರದೇಶ ಅಂತ ಬೊಬ್ಬೆಹಾಕುತ್ತಾರೆ. ಒಟ್ಟಿನಲ್ಲಿ ಎರಡೂ ಒತ್ತಡ ಗುಂಪುಗಳು ಅವುಗಳಿಗೆ ಬೇಕಾದಂತೆ ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕಗಳಾದ ರೆಡ್ಡಿ, ಚೌದುರಿ, ರಾವ್, ಇತ್ಯಾದಿಗಳು ಅವರಿಗೆ ಹಿಂದಿನಷ್ಠು ಈಗ ಬೇಕಾಗಿಲ್ಲ. ಈಗ ನೀವು ಆಂಧ್ರದವರ ಜೊತೆ ಮಾತಾಡುವಾಗ ಅವರು ಯಾವ ಪ್ರದೇಶಕ್ಕೆ ಸೇರಿದವರು ಎಂಬುದನ್ನು ತಿಳಿದುಕೊಂಡೇ ಮಾತಾಡಿದರೆ ತುಂಬಾ ಒಳ್ಳೆಯದು, ಇಲ್ಲಾ ಅಂದರೆ ಅಪಾಯ ಇದೆ. ನೀವೇನಾದರೂ ಅವರ ಬಾವನೆಗಳನ್ನು ನೋಯಿಸುವಂತೆ ಅವರ ವಿರುದ್ಧವಾಗಿ ಮಾತಾಡಿದರೆ ಕಷ್ಠ. ಅದೂ ಅಲ್ಲದೇ ಈ ಆಂಧ್ರ ದ ರಾಜಕಾರಣಿಗಳು ಎಷ್ಟು ಖದೀಮರಿದ್ದಾರೆ ಅಂದರೆ ತಮ್ಮ ಪರ ಮತ್ತು ವಿರುದ್ಧ ಯಾರಿದ್ದಾರೆ ಅಂತ ಗುರುತು ಮಾಡಿಕೊಂಡು ಅವರನ್ನೇ ಕರೆದು ಬೈಟ್ ಗಳು, ಸಂದರ್ಶನಗಳನ್ನು ಕೊಡುತ್ತಿದ್ದಾರೆ. ಡಿವೈಡ್ ಮಾಡಿದರೆ ತಾನೆ ಅವರಿಗೆ ಲಾಭ.

ನ್ಯೂಸ್ ರೂಂಗಳವರೆಗೆ ಹಬ್ಬಿಹೋಗಿರುವ ಈ ಜಾಡ್ಯ ಅಲ್ಲಿನ ಮನಸುಗಳನ್ನು ಮುರಿದು ಹಾಕಿರೋದಂತೂ ಸತ್ಯ.

ಆದರೆ ಬೇಸರದ ಸಂಗತಿ ಏನಪ್ಪಾ ಅಂದರೆ ವಸ್ತುನಿಷ್ಠವಾಗಿ ವಿಚಾರಗಳನ್ನು ಜನರ ಮುಂದೆ ಇಡಬೇಕಾದವರೇ ಹೀಗೆ ಕಚ್ಚಾಡಿ ಬಣಗಳಲ್ಲಿ ಕೆಲಸ ಮಾಡಿದರೆ ಆಗುವ ಗತಿ ಏನಪ್ಪಾ ಅಂತ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಅವನ ವಿಚಾರವೇ ಸರಿಯಿಲ್ಲ ಅಂತ ಯೋಚಿಸೋದು ತಪ್ಪಾಲ್ಲವಾ…?

ಇವತ್ತು ಕೇಂದ್ರದ ಸರ್ಕಾರಕ್ಕೂ ತೆಲಂಗಾಣ ಒಂದು ಬಿಡಿಸಲಾರದ ಕಗ್ಗಂಟಾಗಿದೆ. ಸೋನಿಯಾಗಾಂಧಿ ಕೊಟ್ಟ ಮಾತನ್ನು ತಪ್ಪೊಲ್ಲ, ಈವರಗೂ ಕೊಟ್ಟ ಮಾತುಗಳನ್ನು ನಡೆಸಿಕೊಂಡಿದ್ದಾರೆ ಅಂತ ತೆಲಂಗಾಣ ವಾಧಿಗಳು ಹೇಳುತ್ತಾರೆ. ಅದೇ ಸಮೈಖ್ಯ ಆಂಧ್ರದವರು ಅದು ಇನ್ನು ಮುಗಿದ ಕತೆ. ಮುಗಿದ ಅದ್ಯಾಯ, ಹಂಗೇನಾದರೂ ಕೊಟ್ಟರೆ ಏನಾಗುತ್ತೋ ನೋಡ್ತಾ ಇರಿ ಅಂತ ಹೆದರಿಸುತ್ತಾ ಇದ್ಧಾರೆ.

.

ಹಾಗೆ ನೋಡಿದರೆ ಒಂದೇ ಭಾಷೆ ಮಾತಾಡೋ ಮಂದಿ ಯಾಕೆ ದೂರಾಗಬೇಕು ಅನ್ನೊದನ್ನು ಅರ್ಥಮಾಡಿಕೊಳ್ಳೊದೇ ಕಷ್ಠದ ವಿಚಾರ. ನಿನ್ನೆ ಮೊನ್ನೆವರೆಗೆ ಒಟ್ಟಿಗಿದ್ದವರು ಬೇರೆ ಆಗೋ ಕಾಲ ಬಂದಂತೆ ಕಾಣ್ತಾ ಇದೆ. ಅಲ್ಲಿ ಮನೆಗಳೂ ಮುರಿದಿವಂ ಮನಗಳೂ ಮುರಿದಿವೆ.

Wednesday, August 19, 2009

ಲೆವೆಲ್ ಪ್ಲೇಯಿಂಗ್ ಫೀಲ್ಡ್ ಎಲ್ಲಿ...?

ಉತ್ತರ ಪ್ರದೇಶ ಮಂತ್ರಿ ಮಾಯಾವತಿ ಯಾವಾಗಲೂ ಏನಾದರೊಂದು ವಿವಾದ, ರಾಜಕೀಯ ನಿರ್ಣಯ, ಗಲಾಟೆ ಮಾಡಿಕೊಂಡು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತಾನೆ ಬಾಷಣವೊಂದರಲ್ಲಿ ತನ್ನನ್ನು ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಜೋಶಿ ಕೆಟ್ಟದಾಗಿ ಟೀಕಿಸಿದಳು ಅನ್ನೊ ಕಾರಣಕ್ಕೆ ಅವರ ಮೇಲೆ ಅಟ್ರಾಸಿಟಿ ಕೇಸು ಹಾಕಿ ಜೈಲಿಗೆ ಅಟ್ಟಿದ್ದರು. ಈಗ ಮತ್ತೆ ಸುದ್ದಿಯಾರುತ್ತಿರೋದು ಲಕ್ನೋದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆನೆಗಳ ಪಾರ್ಕ್ ಮಾಡುತ್ತಿರುವುದಕ್ಕಾಗಿ. ಸದ್ಯಕ್ಕೆ ಈ ಪ್ರಕರಣ ಸುಪ್ರಿಂಕೋರ್ಟ್ ನ ಕೆಂಗಣ್ಣಿಗೆ ಗುರಿಯಾಗಿದೆ ಕೂಡ.

ಈ ಮಾಯಾವತಿ ಎಂತ ಹುಚ್ಚಿನ ಹೆಣ್ಣು ಅಂದರೆ, ತಾನು ಬದುಕಿದ್ದಾಗಲೇ ಆಕೆಗೆ ತನ್ನನ್ನು ತಾನೆ ಅಜರಾಮರ ಮಾಡಿಕೊಂಡು ಬಿಡುವ ಉಮ್ಮೇದಿ. ಅದಕ್ಕಂತಲೆ ತನ್ನ ಗುರು ಕಾನ್ಕ್ಷಿರಾಮ್, ತನ್ನ ಪಕ್ಷದ ಗುರುತು ಆನೆ, ಮತ್ತು ಸ್ವತ ತನ್ನದೆ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಈಗ ಎಲ್ಲೆಡೆಯಿಂದ ಟೀಕೆ ಎದುರಿಸಬೇಕಾಗಿದೆ.

ಆಕೆ ಮಾಡುತ್ತಿರುವುದು ಸರಿಯೋ ತಪ್ಪೋ ಅನ್ನೊದು ಬೇರೆಯದೇ ಚರ್ಚೆ, ಈಗ ಸುಪ್ರಿಂ ಕೋರ್ಟ್ ನಲ್ಲಿ ಮಾಯಾವತಿಯ ಪರವಾಗಿ ರಕ್ಷಾಬಂಧನದಂತೆ ಕಾಯಬಹುದಾದ ಐಡಿಯಾ ಸಿಕ್ಕಿದೆ ಅಂತಹ ಸೂಪರ್ ಐಡಿಯಾದ ಜನಕ ಒಬ್ಬ ಕನ್ನಡಿಗ ಅನ್ನೊಂದು ವಿಶೇಷ. ದೆಹಲಿಯ ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರುಮಾಡಿರುವ, ಸರಿಸುಮಾರು 30 ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ, ಹಾಸನ ಜಿಲ್ಲೆಯವರಾದ, ಅರಕಲಗೂಡು ಸೂರ್ಯಪ್ರಕಾಶ್.


ಕಳೆದ ಲೋಕಸಭಾ ಚುನಾವಣೆಗಳಿಗೂ ಮುಂಚೆ ಎ.ಸೂರ್ಯಪ್ರಕಾಶ್ ಚುನಾವಣಾ ಆಯೋಗಕ್ಕೆ ದೂರು ಕೊಟ್ಟು ದೇಶದಲ್ಲಿರೋ ಕಾನೂನಿನ ಪ್ರಕಾರ ಚುನಾವಣೆ ನಡೆಸಲು ಎಲ್ಲಾ ಪಕ್ಷಗಳಿಗೂ ಲೆವೆಲ್ ಪ್ಲೆಯಿಂಗ್ ಗ್ರೌಂಡ್ ಇರಬೇಕು. ಆದರೆ ಕಾಂಗ್ರೆಸ್ ಪಕ್ಷದ ಕಾರಣದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವಪಕ್ಷಕ್ಕೂ ಆ ರೀತಿಯ ಪರಿಸ್ಥಿತಿ ಇಲ್ಲ, ಯಾಕಂದರೆ ದೇಶವನ್ನು ಬಹಳ ವರ್ಷ ಆಳಿದ ಕಾಂಗ್ರೆಸ್ ಪಕ್ಷ ತುಂಬಾ ವ್ಯವಸ್ಥಿತವಾಗಿ ಕಾಂಗ್ರೆಸ್ ಮತ್ತು ಗಾಂಧಿ ಪ್ಯಾಮಿಲಿ 'ಬ್ರಾಂಡ್' ಅನ್ನು ಜನರ ಮೇಲೆ ಹೇರಿದೆ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು, ವಿವಿಧ ರಾಜ್ಯಗಳಲ್ಲಿ ನೂರಾರು ಯೋಜನೆಗಳನ್ನು ಗಾಂಧಿ ಕುಟುಂಬದವರ ಹೆಸರಿನಲ್ಲಿ ಆರಂಭಿಸಿದ್ದಾರೆ. ಸರಿಸುಮಾರು 450 ಯೋಜನೆಗಳಿಗೆ ರಾಜೀವ್, ಇಂದಿರಾ, ಜವಹರ್ ಲಾಲ್ ನೆಹರು ಅವರ ಹೆಸರನ್ನ ಇಡಲಾಗಿದೆ. ಆ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣವನ್ನು ಈ ಯೋಜನೆಗಳ ಮೂಲಕ ವೆಚ್ಚ ಮಾಡಿ, ಕಾಂಗ್ರೆಸ್ ಮತ್ತು ಗಾಂಧಿ ಕುಟುಂಭವನ್ನು ಪ್ರಮೋಟ್ ಮಾಡಲಾಗಿದೆ ಇದೆಲ್ಲಾ ಯಾಕೆ ಅಂಥ ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು.

ಕುಡಿಯುವ ನೀರಿಗೆ, ರಾಷ್ಟ್ರೀಯ ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಅನ್ನೊ ಹೆಸರು.
ವಿದ್ಯುತ್ ಸರಬರಾಜಿಗೆ, ರಾಜೀವ್ ಗಾಂಧಿ ವಿದ್ಯದ್ದೀಕರಣ ಯೋಜನೆ,
ಮನೆ ಕಟ್ಟಲು ಇಂದಿರಾ ಆವಾಸ್ ಯೋಜನೆ.
ಜವಹರ್ ಲಾಲ್ ರೋಜಗಾರ್ ಯೋಜನೆ.
ಇವೆ ಅಲ್ಲ . ಕಾಲೇಜು, ಪಾರ್ಕು, ಆಸ್ಪತ್ರೆ, ಮೈದಾನ, ರಸ್ತೆ, ಪದಕ, ಪಂದ್ಯಾವಳಿ, ಸ್ಕಾಲರ್ ಶಿಪ್ಪು ಸೇರಿದಂತೆ ನೂರಾರು ಕಾರ್ಯಕ್ರಮಗಳು ಇವರ ಹೆಸರಲ್ಲೇ ಏಕೆ ಇರಬೇಕು ಗಾಂಧಿ ಕುಂಟುಂಬದವರೂ ದಿನಾ ನೋಟು ಪ್ರಿಂಟು ಮಾಡಿ ಇವನ್ನೆಲ್ಲಾ ಮಾಡಿಸಿದರಾ, ರಾಷ್ಠ್ರದ ಹಣವನ್ನೇ ಅದರ ಪ್ರಜೆಗಳಿಗಾಗಿ ಕೊಟ್ಟಿದ್ದಾರೆ.
ಕೇಂದ್ರದ ಸರ್ಕಾರದ ಇಂತಹ ಯೋಜನೆಗಳಿಗೆ ನ್ಯೂಟ್ರಲ್ ಆದ ಹೆಸರುಗಳನ್ನು ಇಡಬೇಕು, ಉದಾಹಣೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಯೋಜನೆ, ರಾಷ್ಟ್ರೀಯ ಜಲ ಯೋಜನೆ, ಅನ್ನೊಥರದ ಹೆಸರುಗಳನ್ನು ಇಡಲಿ
ಅನ್ನೊದು ಸೂರ್ಯಪ್ರಕಾಶ್ ವಾಧ.

ಇದೇ ವಿಶಯವನ್ನಿಟ್ಟುಕೊಂಡು ಸೂರ್ಯಪ್ರಕಾಶ್ ಕಳೆದ ಎರಡು ಮೂರು ವರ್ಷಗಳಿಂದ ಇದನ್ನ ಇನ್ವೆಸ್ಟಿಗೇಟ್ ಮಾಡುತ್ತಿದ್ದಾರೆ, ದೇಶದ ಪ್ರತಿ ರಾಜ್ಯದಿಂದ ಮಾಹಿತಿ ಕಲೆಹಾಕಿದ್ದಾರೆ, ಎಷ್ಟು ಹಣ ಈ ಯೋಜನೆಗಳ ಹೆಸರಲ್ಲಿ ವೆಚ್ಚವಾಗಿದೆ ಅನ್ನೊ ಮಾಹಿತಿ ಪಡೆದು ಚುನಾವಣಾ ಆಯೋಗದ ಮುಂದೆ ಕಂಪ್ಲೇಂಟು ಕೊಟ್ಟು ಕಾಯುತ್ತಿದ್ದಾರೆ. ಚುನಾವಣೆ ಮುಗಿದರೂ ಚುನಾವಣಾ ಆಯೋಗದಿಂದ ಉತ್ತರ ಬಂದಿಲ್ಲ.

ಯಾಕಂದರೆ ಅದು ಗಾಂಧಿ ಪ್ಯಾಮಿಲಿ. ಅದೇ ಮಾಯಾವತಿ ಕೇಸು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಾಧ ವಿವಾದ ನಡೆಯುತ್ತಿದೆ, ಕೇಸು ಸುಪ್ರಿಂಕೋರ್ಟಿನಲ್ಲಿದೆ. ಆದರೆ ಮಾಯಾವತಿ ಪರ ವಾಧ ಮಾಡುತ್ತಿರುವ ಸತೀಶ್ ಮಿಶ್ರಾ, ಈಗ ಕನ್ನಡಿಗ ಸೂರ್ಯಪ್ರಕಾಶ್ ಅವರ ಅದ್ಯಯನವನ್ನು ತಮ್ಮ ಕೇಸಿನಲ್ಲಿ ಬಳಸಿಕೊಂಡಿದ್ದಾರೆ. ಮೊದಲು ಗಾಂಧಿ ಪ್ಯಾಮಿಲಿ ಕೂಡ ಸರ್ಕಾರದ ಹಣವನ್ನ ಗಾಂಧಿ ಪ್ಯಾಮಿಲಿ ಹೆಸರಿಗೆ ಬಳಸಿಕೊಂಡಿದೆ. ಮೊದಲು ಅವರ ಹೆಸರಿನ ಯೋಜನೆಗಳಿಂದ ಅವರ ಹೆಸರು ಕಿತ್ತು ಹಾಕಿ ಅಂತ ಕೇಳುತ್ತಿದ್ದಾರೆ. ಕೋರ್ಟು ಏನು ಮಾಡುತ್ತೋ ಗೊತ್ತಿಲ್ಲ.

ಅಂದ ಹಾಗೆ, ಅರಕಲಗೂಡು ಸೂರ್ಯಪ್ರಕಾಶ್ ಎಪ್ಪತ್ತರ ದಶಕದಲ್ಲಿ ಬೆಂಗಳೂರಿನ ಇಂಡಿಯನ್ ಎಕ್ಸಪ್ರೆಸ್ಸಿನಲ್ಲಿ ವರದಿಗಾರರಾಗಿದ್ದವರು. ನಂತರ ದೆಹಲಿಗೆ ಬಂದು ಇಂಡಿಯನ್ ಎಕ್ಸಪ್ರೆಸ್ಸಿನ ಬ್ಯೂರೋ ಚೀಫ್, ಈ ನಾಡು ಪತ್ರಿಕೆಯ ಪೊಲಟಿಕಲ್ ಎಡಿಟರ್, ಪಯನೀರ್ ಪತ್ರಿಕೆ ಸಂಪಾದಕ, ಪಯನೀರ್ ಜರ್ನಲಿಸಂ ಸ್ಕೂಲಿನ ಪೌಂಡರ್ ಸೇರಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದವರು. ಅಡ್ವಾಣಿಯವರ ಆತ್ಮಕಥನ ಮೈಕಂಟ್ರಿ ಮೈ ಲೈಪ್ ಪುಸ್ತಕ ಬರೆಯುವಾಗ ಅಡ್ವಾಣಿಗೆ ನೆರವಾಗಿದ್ದವರು. ಸರಿಸುಮಾರು ನಲವತ್ತು ವರ್ಷಗಳನ್ನು ಪತ್ರಿಕೊದ್ಯಮದ ಗರಡಿ ಮನೆಯಲ್ಲಿ ಸವೆಸಿದವರು.
ಮೊನ್ನೆ ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದ ಹೊಸ ತಲೆಮಾರಿನ ಪತ್ರಕರ್ತರೊಂದಿಗೆ ಅವರು ಮಾತಿಗೆ ಸಿಕ್ಕಿ ತಮ್ಮ ಕೆಲವು ಅನುಭವಗಳನ್ನು ಹಂಚಿಕೊಂಡರು. ಮಾತೆಲ್ಲ ಮುಗಿದ ಮೇಲೆ 'ಸಾರ್ ನಿಮ್ಮ ಬಗ್ಗೆ ನನ್ನ ಖಾಸಗಿ ಡೈರಿ ಬ್ಲಾಗ್ ನಲ್ಲಿ ಬರೀಲಾ, ಅಂದೆ. ಅದಕ್ಕವರು 'ಖಂಡಿತವಾಗಿಯೂ ಬರೆಯಪ್ಪ ಜೊತೆಗೆ ನನ್ನ ವೆಬ್ ಸೈಟಿನ ಲಿಂಕ್ ಕೊಡು ಆಸಕ್ತಿ ಇದ್ದವರೆಲ್ಲಾ ಓದಲಿ' ಅಂದರು.
ಲಿಂಕ್ ಇಲ್ಲಿವೆ.
http://www.asuryaprakash.com/