Monday, December 14, 2009

ಮಿಸ್ ಯು, ರಾಜಶೇಖರ ರೆಡ್ಡಿ.

ಆಂದ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ವಿಮಾನ ಅಫಘಾತದಲ್ಲಿ ತೀರಿಕೊಂಡ ಅಡ್ಡ ಪರಿಣಾಮಗಳು ಈಗ ಕಾಣಿಸಿಕೊಳ್ಳುತ್ತಿವೆ. ರಾಜಶೇಖರ ರೆಡ್ಡಿ ಇದ್ದ ಕಾಲಕ್ಕೆ ತಣ್ಣಗಿದ್ದ ತೆಲಂಗಾಣ ರಾಜ್ಯದ ವಿಭಜನೆ ವಿಚಾರ ಈಗ ಧಿಡೀರನೆ ಎದ್ದು ಕೂತಿದೆ. ಕಾಂಗ್ರೆಸ್ ಹೈಕಮಾಂಡ್ ಗೆ ತಾನು ನಾಯಕರನ್ನು ಸೃಷ್ಟಿಸಬಲ್ಲೇ ಎಂಬ ಅಹಮ್ಮು ಈಗಿನ ತೆಲಂಗಾಣ ವಿಭಜನೆ ಆದ ನಂತರ ಬುಗಿಲೆದ್ದ ಪ್ರತಿಭಟನೆಗಳು, ಹಿಂಸಾಚಾರದ ನಂತರ ಕಡಿಮೆ ಆಗಿದೆ ಎನ್ನಬೇಕು. ವಿಭಜನೆ ವಿರೋಧಿಸಿ ಕಾಂಗ್ರೆಸ್ , ಮತ್ತು ಟಿಡಿಪಿಯ ಸಾಲು ಸಾಲು ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೃಷ್ಠಿಸಿದ ನಾಯಕ ರೋಸಯ್ಯ ತಮ್ಮ ಅಗಾಧ ಅನುಭವದ ಮದ್ಯೆಯೂ ದಿಕ್ಕುತೋಚದಂತೆ ಕಂಗಾಲಾಗಿದ್ದಾರೆ.

ಈ ಪ್ರಕರಣ ನಂತರವಾದರೂ ತಿಳಿಯುವ ಸಂಗತಿ ಎಂದರೆ ನಾಯಕರನ್ನು ಕ್ರಿಯೇಟ್ ಮಾಡಲು ಸಾದ್ಯವಿಲ್ಲ ಅವರು ಹುಟ್ಟುತ್ತಾರೆ ಅಂತ. ನನ್ನ ಗ್ರಹಿಕೆಯಲ್ಲಿ ರಾಜಕಾರಣದಲ್ಲಿ ನಾಲ್ಕು ವರ್ಗದ ಜನ ಇರುತ್ತಾರೆ, ಅವರಲ್ಲಿ ಮೊದಲ ವರ್ಗ ರಾಜಕಾರಣಿಗಳು, ಎರಡನೇ ವರ್ಗ ಲೀಡರ್ ಗಳು ಮೂರನೆ ವರ್ಗ ಸ್ಟೇಟ್ಸ್ ಮನ್ ಗಳು ನಾಲ್ಕನೇ ವರ್ಗ ವಿಶನರಿಗಳು. ಇಂಡಿಯಾದ ರಾಜಕಾರಣದಲ್ಲಿ ಮುಕ್ಕಾಲು ಭಾಗ ರಾಜಕಾರಣಿಗಳೇ ಇದ್ದಾರೆ. ಅಲ್ಲಲ್ಲಿ ಮಾಯಾವತಿ,ರಾಜಶೇಖರರೆಡ್ಡಿ, ಅಂತ ನಾಯಕರು ಇದ್ದಾರೆ ಅವರನ್ನು ಸುಲಭವಾಗಿ ರೀಪ್ಲೇಸ್ ಮಾಡೋದಕ್ಕೆ ಸಾದ್ಯವಾಗೋಲ್ಲ, ರಾಜಕಾರಣದಿಂದ ಆಚೆಗೆ ಹೋಗಿ ರಾಷ್ಠ್ರದ ಆಸ್ತಿ ಯಂತೆ ಕಾಣಿಸಿಕೊಳ್ಳುವ ಕೆಲವರಿದ್ದಾರೆ ಮಾಜಿ ಪ್ರಧಾನಿ ವಾಜಪೇಯಿ,ನರಸಿಂಹ ರಾವ್ ಪ್ರಣಬ್ ಮುಖರ್ಜಿ,ಇಂತಹವರಿರಬಹುದು, ಇನ್ನು ವಿಶನರಿಗಳು ನಮ್ಮ ಮನಮೊಹನ್ ಸಿಂಗ್ ಅಂತಹವರಿಬಹುದು, ವಾಸ್ತವ ಅಂದರೆ ವಿಶನರಿಗಳು ಲೀಡರ್ ಆಗೋದಿಕ್ಕೆ ಸಾದ್ಯ ಇಲ್ಲ ಅದಕ್ಕೆ ಮನಮೋಹನ್ ಸಿಂಗ್ ಉದಾಹರಣೆ, ಅವರು ಈವರೆಗೆ ಯಾವ ಚುನಾವಣೆಯನ್ನೂ ಎದುರಿಸಲಿಕ್ಕೆ ಹೋಗಿಲ್ಲ. ಈ ನಾಲ್ಕು ವರ್ಗಗಳು ಒಂದಕ್ಕೊಂದು ಬಿನ್ನ ಎಲ್ಲರೂ ಎಲ್ಲರಿಗೂ ಪೂರಕವಾಗಿರುತ್ತಾರೆ, ಒಬ್ಬರಿಂದ ಸಾದ್ಯವಾದದ್ದು ಮತ್ತೊಬ್ಬರಿಂದ ಸಾದ್ಯವಾಗುವುದಿಲ್ಲ.


ಒಬ್ಬ ನಾಯಕನ ಅಗಲಿಕೆ ಏನೆಲ್ಲ ಆಗುತ್ತೆನ್ನೊದಕ್ಕೆ ಇದನ್ನ ಹೇಳಬೇಕಾಯಿತು ಒಬ್ಬ ರಾಜಶೇಕರ ರೆಡ್ಡಿ ಇದ್ದಿದ್ದರೆ ಆಂದ್ರಪ್ರದೇಶದಲ್ಲಿ ತೆಲಂಗಾಣ ಹೋರಾಟ ತೀರ್ವವಾಗುತ್ತಿರಲಿಲ್ಲ ಅದೇ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗಣಿ ರೆಡ್ಡಿಗಳು ಈಗಿನ ಸ್ಥಿತಿಗೆ ತರುತ್ತಿರಲಿಲ್ಲ ರಾಜಕಾರಣದಲ್ಲಿ ಯಾವ್ಯಾವುದಕ್ಕೊ ಯಾವುದೋ ಲಿಂಕ್ ಆಗಿರುತ್ತವೆ. ಕಾಂಗ್ರೆಸ್ ಹೈಕಮಾಂಡ್ ತೆಲಂಗಾಣ ಸೃಷ್ಠಿಸುತ್ತೇವೆ ಎಂಬ ಹೇಳಿಕೆ ನಂತರ ಆಂದ್ರದಲ್ಲಿ ಉಂಟಾದ ಸಮಸ್ಯೆಗಳಿಂದ ಗಲಿಬಿಲಿಗೊಂಡ ಸೋನಿಯಾಗಾಂದಿ ತೆಲಂಗಾಣ ಬಾಗದ 11 ಮಂದಿ ಎಂಪಿಗಳನ್ನು ಕರೆದು ಹೇಳಿದರಂತೆ ನೀವು ನನ್ನ ಮಿಸ್ ಗೈಡ್ ಮಾಡಿದ್ದೀರಿ, ರಾಜಶೇಖರ ರೆಡ್ಡಿ ನನಗೆ ಒಮ್ಮೆ ಹೇಳಿದ್ದರು ನನಗೆ ಆಂದ್ರದ ಜನತೆಯ ನಾಡಿ ಮಿಡಿತ ಗೊತ್ತು, ಸದ್ಯಕ್ಕೆ ತೆಲಂಗಾಣದ ಚರ್ಚೆ ಬೇಡ ಚುನಾವಣೆಯಲ್ಲಿ ಗೆಲ್ಲೋದು ನಾವೆ ಅಂತ.

ನಾವು ಈಗ ರಾಜಶೇಖರ ರೆಡ್ಡಿ ಅವರನ್ನು ಮಿಸ್ ಮಾಡಿಕೊಳ್ತಾ ಇದ್ದೀವಿ ಅಂತ.

ರಾಜಶೇಖರ ರೆಡ್ಡಿ ಸತ್ತ ಮೇಲೆ ಅವರು ಒಳ್ಳೆಯವರಾ, ಕೆಟ್ಟವರಾ, ಬ್ರಷ್ಟರಾ ಅನ್ನೋ ನೂರಾರು ಚರ್ಚೆಗಳು ನಡೆದಿವೆ ಅದು ಬೇರೆಯದೇ ವಿಶಯ ಆದರೆ ಆಂದ್ರಪ್ರದೇಶದ ಪಾಲಿಗೆ ರಾಜಶೇಖರ ರೆಡ್ಡಿ ಒಬ್ಬ ಅನಿವಾರ್ಯ ನಾಯಕನಾಗಿದ್ದ ಅನ್ನೊದನ್ನು ಅಲ್ಲಗಳೆಯಲು ಸಾದ್ಯವಿಲ್ಲ, ನನ್ನ ಆಂದ್ರದ ಪತ್ರಕರ್ತ ಗೆಳೆಯ ಸುಧೀರ್ ಹೇಳುತ್ತಿದ್ದ, ರಾಜಶೇಖರ ರೆಡ್ಡಿ ಒಳ್ಳೆಯರ ಪಾಲಿಗೆ ಒಳ್ಳೆಯವ, ಕೆಟ್ಟವರ ಪಾಲಿಗೆ ಕೆಟ್ಟವ, ವಿರೋಧಿಗಳ ಪಾಲಿಗೆ ಕ್ರೂರಿ ಆಗಿದ್ದ ಅಂತ. ಬಹುಶ ಒಬ್ಬ ನಾಯಕ ಹುಟ್ಟೋದು ಇದೇ ಪ್ರಕ್ರಿಯೆಯಲ್ಲಿ ವಿರೋಧಿಗಳನ್ನು ಪ್ರೀತಿಸುವವನು ಸಂತ ಆಗಬೇಕಾಗುತ್ತದೆ, ರಾಜ್ಯ ಕಟ್ಟುವ ದೊರೆ ಆಳದಲ್ಲಿ ಕ್ರೂರಿ ಆಗಿರುತ್ತಾನೆ ಅದು ರಾಜಶೇಖರ ರೆಡ್ಡಿಗೆ ಇತ್ತು ಅಂತ ಕಾಣುತ್ತದೆ, ಈಗ ತೆಲಂಗಾಣ ಬೇಕು ಅನ್ನುತ್ತಿರುವ ಕಾಂಗ್ರೆಸ್ ಎಂಪಿಗಳು ಅವರಿದ್ದ ಕಾಲಕ್ಕೆ ಬಾಯಿ ಬಿಡುತ್ತಿರಲಿಲ್ಲ.

ಕರ್ನಾಟಕದಿಂದ ಕೊಡಗನ್ನೋ, ಹೈದ್ರಾಬಾದ್ ಕರ್ನಾಟಕನ್ನೋ ಒಡೆದು ಇಬ್ಬಾಗ ಮಾಡುವ ಸಂಗತಿಯನ್ನು ನೆನಸಿಕೊಳ್ಳುವುದು ಎಷ್ಟು ಕಷ್ಟವೋ ಅಂತದೇ ಕಷ್ಟ ಈಗ ಆಂದ್ರ ಪ್ರದೇಶದ ಜನ ಎದುರಿಸುತ್ತಿದ್ದಾರೆ, ಒಡೆಯುವುದು ಸುಲಭ ಒಟ್ಟಿಗೆ ಕರೆದೊಯ್ಯುವುದು ಕಷ್ಟ. ಮಿಸ್ ಯು ರಾಜಶೇಖರ ರೆಡ್ಡಿ.

ದೇವೇಗೌಡ ಮತ್ತು 'ಹಾರ್ಡ್ ಟಾಕ್'.

'ಇಲ್ಲಿ ಕೇಳ್ರಿ ಸ್ಪಲ್ಪ ನಾನೇಳೋದನ್ನ, ನೀವು ಕರ್ದಿದ್ದೀರಿ ನಾನು ಬಂದಿದ್ದೀನಿ, ಜನಕ್ಕೆ ಏನು ನಡೆದಿದೆ ಅನ್ನೋದನ್ನ ಜನಕ್ಕೆ ಹೇಳಬೇಕು ಬೇಡವೋ' ಅಂತ ದೇವೇಗೌಡರು ಅವರದೇ ವಿಶಿಷ್ಟ ಧಾಟಿಯಲ್ಲಿ ಎದುರು ಕುಳಿತಿದ್ದ ಸುವರ್ಣ ಚಾನಲ್ಲಿನ ಆ್ಯಂಕರ್ ಹಮೀದ್ ನ ಬಾಯಿ ಮುಚ್ಚಿಸುವ ಧಾಟಿಯಲ್ಲಿ ಹೇಳಿದರು.
ನೈಸ್ ಕಂಪನಿಯ ಬಗ್ಗೆ ರೊಚ್ಚಿಗೆದ್ದಿದ್ದ ದೇವೇಗೌಡರೊಂದಿಗೆ 'ಹಾರ್ಡ್ ಟಾಕ್' ಅನ್ನೊದು ಕಾರ್ಯರ್ಕಮದ ಹೆಸರು. ದೇವೇಗೌಡ ನೈಸ್ ಬಗ್ಗೆ ಕೇಳಿದ ಪ್ರಶ್ನೆಗೆ ತಾವು ಮುಖ್ಯಮಂತ್ರಿಯಾದ ದಿನಾಂಕದಿಂದ ಹಿಡಿದು ಮೊನ್ನೆಯ ಕೋರ್ಟ್ ಆದೇಶದವರೆಗೆ ದಿನಾಂಕಗಳನ್ನೂ ಬಿಡದೆ ವಿವರಿಸತೊಡಗಿದರು.ಕಾರ್ಯಕ್ರಮಕ್ಕೆ ಬರುವಾಗ ತಂದಿದ್ದ ಒಂದು ಕಂತೆ ದಾಖಲೆಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದರು. ಆದರೆ ಹಮೀದ್ ದೇವೇಗೌಡರನ್ನು ಮದ್ಯದಲ್ಲೇ ತಡೆದು ಬೇರೆ ಪ್ರಶ್ನೆ ಕೇಳಲು ಯತ್ನಿಸುತ್ತಾ ನೇರ ಪ್ರಶ್ನೆಗೆ ನೇರ ಉತ್ತರ ಪಡೆದು ಬಿಡುವ ಯತ್ನ ಮಾಡುತ್ತಿದ್ದರು. ಆದರೆ ದೇವೇಗೌಡರದು ಅದೇ ಧಾಟಿ ಆ್ಯಂಕರ್ ಮೇಲೆ ಸವಾರಿ ಮಾಡುತ್ತಾ 'ನಾನೇಳೋದನ್ನ ಕೇಳ್ರಿ ಇಲ್ಲಿ' ಅನ್ನುತ್ತಾ ಯ್ಯಾವ್ಯಾವುದೋ ದಾಖಲೆಗಳಲ್ಲಿ ಹುದುಗಿದ್ದ ಮಾಹಿತಿಗಳನ್ನ ಓದುತ್ತಾ, ಹಳೇ ಅಧಿಕಾರಿಗಳು ಜಡ್ಜ್ ಗಳ ಹೆಸರುಗಳನ್ನೆಲ್ಲಾ ಹೇಳುತ್ತಾ ಮುಂದುವರೆದರು.
ಹಮೀದ್ ಕೇಳಿದ ಮೊದಲ ಪ್ರಶ್ನೆಗೆ ದೇವೇಗೌಡರು ಕೊಟ್ಟ ಉತ್ತರದ ಸಮಯ ಬರೋಬ್ಬರಿ 40 ನಿಮಿಷ ಅದೂ ಒಂದೇ ಒಂದು ಬ್ರೇಕ್ ತೆಗೆದುಕೊಳ್ಳದೇ.ದೇವೇಗೌಡರ ಹಾರ್ಡ್ ಟಾಕ್ ನೇರ ಪ್ರಸಾರವಾಗುತ್ತಾ ಇತ್ತು.
ದೇವೇಗೌಡರೇ ಹಾಗೆ ಅವರು ನೆಡದದ್ದೇ ಹಾದಿ, ಬೇರೆಯವರ ಇಕ್ಕಳಕ್ಕೆ ಸಿಕ್ಕುವ ಆಸಾಮಿ ಅಲ್ಲ, ನಾನು ಬಹುವಾಗಿ ಮೆಚ್ಚಿಕೊಳ್ಳುವ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟು ಒಮ್ಮೆ ಹೇಳುತ್ತಿದ್ದರು ಪರ್ತಕರ್ತರ ಪಾಲಿಗೆ ನಿಜವಾದ ಸವಾಲು ಅಂದರೆ ದೇವೇಗೌಡ ಅಂತ.
ಹಮೀದರ ಹಾರ್ಡ್ ಟಾಕ್ ನೋಡಿದಾಗ ನೆನಪಾದ ಸಂಗತಿಗಳನ್ನು ಇಲ್ಲಿ ಹೇಳಿದ್ದೇನೆ.

ನಮ್ಮ ನ್ಯೂಸ್ ರೂಂ ಗಳಲ್ಲಿ ಕುಳಿತ ಮಂದಿ ದೇವೇಗೌಡರ ಬೈಟ್ ತೆಗೆದುಕೊಂಡು ಬನ್ನಿ ಅಂತ ಹೇಳಿಬಿಡುತ್ತಾರೆ ನಿಜ, ಆದರೆ ವರದಿಗಾರರಿಗೆ ತಮಗೆ ಬೇಕಾದ್ದನ್ನು ದೇವೇಗೌಡರಿಂದ ಬಾಯಿಬಿಡಿಸುವುದು ಮಾತ್ರ ತೀರಾ ತ್ರಾಸದಾಯಕ ವಿಶಯ. ದೇವೇಗೌಡರನ್ನು ಮಾತನಾಡಿಸುವ ಮೊದಲು ಅವರ ಮೂಡ್ ಹೇಗಿದೆ ಎಂಬುದನ್ನ ಅವರ ಸುತ್ತ ಇರುವವರಿಂದ ತಿಳಿದುಕೊಂಡು ಮುಂದುವರೆಯಬೇಕಾಗುತ್ತದೆ. ಇಲ್ಲಾಂದರೆ ಕಷ್ಟ.
ಒಂದು ಘಟನೆ ಹೇಳುತ್ತೇನೆ ಕೇಳಿ, ಅದು ಜೆಡಿಎಸ್ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಾ ಬೇಡವಾ ಅನ್ನೊ ವಿಶಯಕ್ಕೆ ಜಂಗಿ ಕುಸ್ತಿ ನಡೆಯುತ್ತಿದ್ದ ಕಾಲ ನಮ್ಮ ಈಟಿವಿಯ ವರದಿಗಾರ ವಿಜಯ್ ಜೆಡಿಎಸ್ ಬೀಟ್ ನೋಡಿಕೊಳ್ಳುತ್ತಿದ್ದ, ದೇವೇಗೌಡರಿಂದ ಎಂತಾ ಸಂದರ್ಭದಲ್ಲೂ ಮಾತಾಡಿಸಿಕೊಂಡು ಬಂದುಬಿಡುವ ಚಾತಿ ಆತನಿಗಿತ್ತು.
ದೇವೇಗೌಡರ ಮನೆಗೆ ನುಗ್ಗಿ ಬೈಟ್ ತರುತ್ತಾನೆ, ಈತ ದೇವೇಗೌಡರ ದತ್ತು ಪುತ್ರ ಅಂತೆಲ್ಲಾ ಪತ್ರಕರ್ತರು ರೇಗಿಸುತ್ತಿದ್ದರು, ಅದೊಂದು ದಿನ ಬೆಳ್ಳಂಬೆಳ್ಳಿಗೆ ಗೌಡರ ಹತ್ತಿರ ಬೈಟ್ ತೆಗೆದುಕೊಳ್ಳೊಕೆ ಅಂತ ವಿಜಯ ಹೋಗಿದ್ದಾನೆ, ದೇವೇಗೌಡರು ಅದ್ಯಾವ ಮೂಡಿನಲ್ಲಿದ್ದರೋ ಏನೋ, ಇವನು ಹಾಕಿದ ಪ್ರಶ್ನೆಗೆ ಕುಪಿತಕೊಂಡ ಅವರು 'ಗೆಟ್ ಔಟ್ ಪ್ರಂಮ್ ಮೈ ಹೈಸ್ ಐ ಸೇ ಅಂದಿದ್ದಾರೆ. ಪಾಪ ವಿಜಯ್ ಕಂಗಾಲಾಗಿದ್ದಾನೆ.

ಕೆಲವೊಮ್ಮೆ ಇದೇ ದೇವೇಗೌಡರು ಪತ್ರಕರ್ತರನ್ನು ಬಹಳ ಪ್ರಿತಿಯಿಂದ ನೋಡಿಕೊಳ್ಳುತ್ತಾರೆ, ಊಟ ಮಾಡಿ ಸಾರ್ ಅಂತ ಗಂಟಲು ತನಕ ತಿನ್ನಿಸುತ್ತಾ, ತಿನ್ನಿ ಸಾರ್ ನಾನೇ ಹೇಳಿ ಮಾಡಿಸಿದ್ದು ಅಂತ ನಮ್ಮಲ್ಲಿ ಗಾಭರಿ ಹುಟ್ಟಿಸುವಷ್ಟು ಸಿಂಪಲ್ಲಾಗಿರುತ್ತಾರೆ. ಅದೇ ಕೆಲವೊಮ್ಮೆ 'ಯಾರ್ರಿ ನಿಮ್ಮನ್ನ ಇಲ್ಲಿ ಕರೆದೋರು' ಅಂತ ಹೇಳಿ ಪತ್ರಕರ್ತರನ್ನು ಜಾಗ ಖಾಲಿ ಮಾಡಿಸಿದ್ದೂ ಇದೆ.
ನಾವು ಯಾವುದೋ ಪ್ರಶ್ನೆ ಕೇಳಿದ್ರೆ ಅವರು ಯಾವುದಕ್ಕೋ ಉತ್ತರ ಕೊಡುತ್ತಾ ಇರುತ್ತಾರೆ ಒಂದು ಗಂಟೆ ಮಾತಾಡಿದರೂ ಒಂದೇ ಒಂದು ಸುದ್ದಿ ಸಿಗದ ಹಾಗೆ ಮಾತಾಡಿರುತ್ತಾರೆ. ಕೆಲಮೊಂಮ್ಮೆ ಒಂದೇ ಸಾಲಿನಲ್ಲಿ ಸಿಕ್ಕಾಪಟ್ಟೆ ಅರ್ಥ ಬರುವಂತೆ ಮಾತಾಡುತ್ತಾರೆ. ಮೊನ್ನೆ ತಾನೆ ಜನಾರ್ಧನ ರೆಡ್ಡಿಯಿಂದಾಗಿ ಬಿಜೆಪಿ ಸರ್ಕಾರ ಇಕ್ಕಟ್ಚಿಗೆ ಸಿಕ್ಕಿದ್ದಾಗ ಮೊದಲ ದಿನವೇ ದೇವೇಗೌಡರು ಹೇಳಿದ ವಾಕ್ಯ ನೆನಪಿಗೆ ಬರುತ್ತೆ, 'ನೋಡ್ರಿ ಮೊದಲು ತಿಕ್ಕಾಟ ಆಗುತ್ತೆ, ಆಮೇಲೆ ಬೆಂಕಿ ಹೊತ್ತಿಕೊಳ್ಳುತ್ತೆ, ಆಮೇಲೆ ಎಲ್ಲಾ ಹಾವಿಯಾಗಿ ಮಳೆ ಬರುತ್ತೆ ಮಳೆ ಬಂದಮೇಲೆ ಎಲ್ಲಾ ತಂಪಾಗುತ್ತೆ. ಇವೆಲ್ಲ ರಾಜಕೀಯದಲ್ಲಿ ಸಮಾನ್ಯ ರೀ, ನಾನು ಬೇರೆ ಪಕ್ಷದ ಅಂತರಿಕ ಸಮಸ್ಯೆಗಳ ಬಗ್ಗೆ ಕಾಂಮೆಂಟ್ ಮಾಡಲ್ಲಾ' ಅಂದರು. ಪತ್ರಕರ್ತರಿಗೆ ಇದಕ್ಕಿಂತ ಕಾಮೆಂಟ್ ಬೇಕಾ ಹೇಳಿ. ಮರು ಕ್ಷಣ ಎಲ್ಲಾ ಚಾನಲ್ ಗಳಲ್ಲೂ ಅದೇ ಸುದ್ದಿ.

ದೇವೇಗೌಡರದು ಒಂದು ಸಂಕೀರ್ಣ ವ್ಯಕ್ತಿತ್ವ, ಅವರನ್ನು ಅರ್ಥ ಮಾಡಿಕೊಳ್ಳಲೇಬೇಕೆಂದು ಹಠ ಹಿಡಿದು ಕೂತರೆ ಅವರು ಪತ್ರಕರ್ತನಿಗೆ ಸಹ್ಯವಾಗುತ್ತಾರೆ ಇಲ್ಲ ಅಂದರೆ ಪರ್ತಕರ್ತರು ಅವರನ್ನು ದ್ವೇಷ ಮಾಡಲು ಶುರುಮಾಡುತ್ತಾರೆ. ಇನ್ನೊಂದೆಡೆ ದೇವೇಗೌಡರನ್ನು ನಾವು ಅರ್ಥಮಾಡಿಕೊಳ್ಳುತ್ತಾ ಇರುವಂತೆ ಮತ್ತಷ್ಠು ಸಂಕೀರ್ಣವಾಗುತ್ತಾ ಇರುತ್ತಾರೆ.
ದೇವೇಗೌಡರಿಗಿವ ಅಗಾದ ನೆನಪಿನ ಶಕ್ತಿ ಅವರನ್ನು ಹಾಗೆ ಸಂಕೀರ್ಣವಾಗಿಸಿದೆ ಅಂತ ನನಗೆ ಅನ್ನಿಸಿದೆ.
ಅವರ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ದಿನಾಂಕದ ಸಮೇತ ಬಿಡಿ ಬಿಡಿಯಾಗಿ ಅವರು ನೆನಪಿಸಿಕೊಳ್ಳಬಲ್ಲರು, ಅವರ ತಲೆಯಲ್ಲಿ ನೂರಾರು ಮೊಬೈಲ್ ಮತ್ತು ಟಿಲಿಪೋನ್ ನಂಬರ್ ಗಳು ಅಚ್ಚೊತ್ತಿದಂತೆ ಇವೆ. ನಮ್ಮ ಹಾಗೆ ಕಾಂಟ್ಯಾಕ್ಟ್ ಬುಕ್ ಬಳಸದ ಅವರು ತಮ್ಮ ನೆನಪಿನಲ್ಲಿ ಬೇಕಾದರವರ ನಂಬರ್ ಗಳನ್ನೆಲ್ಲಾ ಇಟ್ಟುಕೊಂಡಿರುತ್ತಾರೆ. ಅವರ ಬಳಿ ಇರುವಷ್ಟು ದಾಖಲಾತಿಗಳು ಯಾರಹತ್ತಿರವೂ ಇರಲಿಕ್ಕೆ ಸಾದ್ಯವಿಲ್ಲ.

ಹಾಗೆ ನೋಡಿದರೆ ಕರ್ನಾಟಕಕ್ಕೆ ಅವರೇ ಪರಮನೆಂಟ್ ವಿರೋಧಿ ಪಕ್ಷದನಾಯಕ. ಸರ್ಕಾರದ ಪ್ರತಿಯೊಂದು ಆದೇಶದ ಬಗ್ಗೆಯೂ ಈಗಲೂ ತಿಳಿದುಕೊಳ್ಳುತ್ತಾರೆ ಜೀವನದಲ್ಲಿ ಎಲ್ಲಾ ಅನುಭವಿಸಿದರೂ ಇನ್ನು ಎಡೆ ಬಿಡದ ಆಸಕ್ತಿ ಅಚ್ಚರಿ ಮೂಡಿಸುವಂತದ್ದು. ಅದೇ ನೈಸ್ ವಿಶಯದಲ್ಲಿ ದೇವೇಗೌಡರ ಹಠ ನೋಡಿ. ಇಡೀ ಸರ್ಕಾರ ಖೇಣಿ ಬೆನ್ನಿಗಿದ್ದರೂ ದೇವೇಗೌಡ ಖೇಣಿ ಕಂಪನಿಗೆ ದುಸ್ವಪ್ನ ಆಗಿಬಿಟ್ಟಿದ್ದಾರೆ. ಈಗಲೂ ಸುಪ್ರಿಂ ಕೋರ್ಟ್ ನಲ್ಲಿ ನೈಸ್ ಕೇಸ್ ವಿಚಾರಣೆಗೆ ಬರುವ ಹಿಂದಿನ ದಿನ ಅವರು ದೆಹಲಿಗೆ ಬಂದೇ ಬರುತ್ತಾರೆ ಲಾಯರ್ ಗಳೊಂದಿಗೆ ಚರ್ಚೆ ಮಾಡಿ ಹೀಗೆ ವಾಧ ಮಂಡಿಸಬೇಕು ಅಂತ ತಾಕೀತು ಮಾಡುತ್ತಾರೆ.

ಜಡ್ಜ್ ಗಳಿಗೇ ಸ್ವಾಮಿ ನಿಮ್ಮಿಂದ ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸ ಇಲ್ಲ, ನಮ್ಮ ಕೇಸ್ ಅನ್ನು ಬೇರೆ ಬೆಂಚ್ ಗೆ ವರ್ಗಾಯಿಸಿ ಅನ್ನುತ್ತಾರೆ. ನಿವೃತ್ತಿಗೆ ಒಂದು ವಾರ ಬಾಕಿ ಇದ್ದ ಆ ಜಡ್ಜ್ ಕಣ್ಣೀರಾಕುತ್ತಾರೆ. ನೈಸ್ ಬಗ್ಗೆ ಪುಸ್ತಕ ಬರೆದು ಜಡ್ಜ್ ಗಳಿಗೆ ಕಳಿಸುತ್ತಾರೆ, 'ಯಾಕ್ರಿ ಕಳಿಸ್ತೀರಿ ನಮಗೆ ಪುಸ್ತಕ ಅಂತ ಜರಿದು, ಬೇಕಿದ್ರೆ ಬಂದು ಸಾಕ್ಷಿ ಹೇಳಿ' ಅಂದ ಹೈಕೋರ್ಟ್ ಜಡ್ಜ್ ದಿನಕರನ್ ಜೀವಮಾನದ ಬಂಡವಾಳನ್ನೇ ಬಯಲಿಗೆ ಎಳೆದುಹಾಕುತ್ತಾರೆ. ದೇವೇಗೌಡರು ಮನಸಿಟ್ಟರೇ ಅವರಿಗೆ ದಕ್ಕದೇ ಇದ್ದದ್ದು ಇಲ್ಲ ಅನ್ನಬೇಕು. ಯಾರನ್ನು ಯಾವಾಗ ಖೆಡ್ಡಾಕ್ಕೆ ಕೆಡವಬೇಕು ಅನ್ನೊದು ಅವರಿಗೆ ತಿಳಿದಿದೆ. ಬಹುಶ ಕರ್ನಾಟಕದ ರಾಜಕಾರಣದಲ್ಲಿ ಅತೀ ದೀರ್ಘ ಕಾಲ ರಾಜಕಾರಣದಲ್ಲಿ ಮಹತ್ವ ಉಳಿಸಿಕೊಂಡು ಬಂದಿದ್ದು ಅವರೊಬ್ಬರೇ ಇರಬೇಕು.

ದೇವೇಗೌಡರ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವ ವಿಶಯವೇ ಅಲ್ಲ, ಬಿಡಿ ಕಡೆಗೆ ದೇವೇಗೌಡರ ದೆಹಲಿ ಮನೆಯಲ್ಲಿ ನಡೆದ ಸಂದರ್ಭವೊಂದನ್ನು ಹೇಳಿ ಮುಗಿಸುತ್ತೇನೆ.
ಸುವರ್ಣ ಟಿವಿಯ ಪ್ರಶಾಂತ್ ನಾಥೂ ದೇವೇಗೌಡರೊಂದಿಗೆ ಸಂಭಾಷಣೆಯಲ್ಲಿದ್ದ. ಪಕ್ಕದಲ್ಲಿದ್ದ ಡ್ಯಾನಿಶ್ ಆಲಿ ಹೇಳಿದ 'ಎನೇ ಹೇಳಿ ಸಾರ್ ಪಾಲಿಟಿಕ್ಸ್ ಅನ್ನೊದು ಕೊಚ್ಚೆ, ಇಲ್ಲಿ ಬರೀ ಕಾಂಪ್ರೋಮೈಸ್ ಮಾಡಿಕೊಳ್ಳಬೇಕು' ಅದಕ್ಕೆ ದೇವೇಗೌಡರು ಅವನನ್ನು ತಡೆದು ಹೇಳಿದ್ದು 'ಇಲ್ಲಾರಿ ಪಾಲಿಟಿಕ್ಸ್ ಅನ್ನೊದು ನಿರಂತರವಾಗಿ ಹರಿಯೋ ನದಿ ಇದ್ದಂಗೆ ಅದು ಕೊಚ್ಚೆ ಆಗೋದೆ ಇಲ್ಲ ಹರಿದು ಹರಿದು ಶುದ್ಧ ಆಗ್ತಾನೇ ಇರ್ತದೇ' ಅಂತ.